ಎಷ್ಟೆಲ್ಲಾ ಚಾಣಕ್ಯಾಸ್ತ್ರಗಳಿವೆ - ನಮ್ಮ ಸರಕಾರಿ ಕಚೇರಿಗಳಲ್ಲಿ?

ಪಲಾಯನ ಯಾವುದೇ ಸಮಸ್ಯೆಯ ಪರಿಹಾರವಲ್ಲ. ಆತ್ಮಹತ್ಯೆಯಂತೂ ಖಂಡಿತವಾಗಿಯೂ ಯಾವುದೇ ಅನ್ಯಾಯಕ್ಕೆ ಸೂಕ್ತ ಉತ್ತರವಲ್ಲ. ಆದರೂ ಮಾಡಬಾರದ್ದನ್ನು ಮಾಡಿಬಿಟ್ಟ ಪೂರನ್ ಕುಮಾರ್ ಅವರ ಆತ್ಮಹತ್ಯೆಗೆ ಕಾರಣವಾದ ಸನ್ನಿವೇಶವು ದೇಶದ ಸಾವಿರಾರು ಸರಕಾರಿ ಕಚೇರಿಗಳಲ್ಲಿ ನಿತ್ಯ ಕಂಡು ಬರುವ ಸನ್ನಿವೇಶವಾದ್ದರಿಂದ ಅದು ಖಂಡಿತ ಚರ್ಚಾರ್ಹವಾಗಿದೆ.
ಭಾಗ - 1
ಕಳೆದ ಅಕ್ಟೋಬರ್ 9ರಂದು ಐರ್ಲೆಂಡ್‌ನಲ್ಲಿರುವ ಭಾರತೀಯ ಮಹಿಳೆ ಸ್ವಾತಿ ವರ್ಮಾ, ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ವೀಡಿಯೊ ತುಣುಕನ್ನು ಹಾಕಿದ್ದರು. ಸ್ಥಳೀಯ ಮಹಿಳೆಯೊಬ್ಬಳು ವರ್ಮಾರನ್ನು ದಾರಿಯಲ್ಲಿ ತಡೆದು, ‘‘ನೀನು ಐರ್ಲೆಂಡ್‌ಗೆ ಬಂದಿರುವುದೇಕೆ? ಇಲ್ಲಿ ನಿನಗೇನು ಕೆಲಸ? ಮರಳಿ ಭಾರತಕ್ಕೆ ಹೋಗು’’ ಎಂದು ನಿಂದಿಸುವ ದೃಶ್ಯ ವೀಡಿಯೊದಲ್ಲಿತ್ತು. ‘‘ಈ ರೀತಿ ನಾನು ಪ್ರತೀ ದಿನ ಐರ್ಲೆಂಡ್‌ನಲ್ಲಿ ನನ್ನ ಅಸ್ತಿತ್ವವನ್ನು ಸಮರ್ಥಿಸ ಬೇಕಾದ ದುಸ್ಥಿತಿ ನನಗೆ ಬರುತ್ತದೆಂದು ನಾನೆಂದೂ ಊಹಿಸಿರಲಿಲ್ಲ’’ ಎಂಬ ವರ್ಮಾ ಅವರ ಖೇದದ ಮಾತು ಕೂಡಾ ವೀಡಿಯೊದಲ್ಲಿತ್ತು.
*****
ವಿದೇಶವೊಂದರಲ್ಲಿ ಭಾರತೀಯ ನಾರಿಯೊಬ್ಬಳಿಗಾದ ಪ್ರಸ್ತುತ ಕಹಿ ಅನುಭವವು ಅನೇಕ ಭಾರತೀಯರಲ್ಲಿ ಆಕ್ರೋಶ ಕೆರಳಿಸಿದರೆ ಮತ್ತೆ ಅನೇಕರು ಸ್ವತಃ ನಮ್ಮ ನೆಲದ ಕೆಲವು ಕಹಿಸತ್ಯಗಳ ಕಡೆಗೆ ಗಮನ ಹರಿಸುವಂತೆ ಮಾಡಿದೆ. ಈ ವೇಳೆ ಹಲವರು, ಕೆಲವು ವರ್ಷಗಳ ಹಿಂದಷ್ಟೇ ‘‘ನನ್ನ ಜನನವೇ ನನ್ನ ಪಾಲಿನ ಮಾರಕ ದುರಂತ’’ ಎಂದು ತನ್ನ ಡೆತ್ ನೋಟ್‌ನಲ್ಲಿ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದ ಹೈದರಾಬಾದ್ ವಿಶ್ವ ವಿದ್ಯಾನಿಲಯದ, 26ರ ಹರೆಯದ ಪಿಎಚ್.ಡಿ. ವಿದ್ಯಾರ್ಥಿ ರೋಹಿತ್ ವೇಮುಲಾರನ್ನು ನೆನಪಿಸಿಕೊಂಡಿದ್ದಾರೆ. ಭಾರತದಿಂದ ಕನಿಷ್ಠ 8 ಸಾವಿರ ಕಿ.ಮೀ. ದೂರವಿರುವ ಐರ್ಲೆಂಡ್‌ನಲ್ಲಿ ಸ್ವಾತಿ ವರ್ಮಾರಿಗಾದ ನೋವಿನ ಬಗ್ಗೆ ಅವರಿಗೆ ಸಹಾನುಭೂತಿ ಇದೆ. ಆದರೆ ಸ್ವತಃ ನಮ್ಮ ಭಾರತದಲ್ಲಿ, ಲಕ್ಷಾಂತರ ಮಂದಿ, ತಾವು ಜನಿಸಿ ಬೆಳೆದ ನೆಲದಲ್ಲೇ ಪ್ರತಿದಿನ ಅನುಭವಿಸುತ್ತಿರುವ ‘‘ನನ್ನ ಜನನವೇ ನನ್ನ ಪಾಲಿನ ಮಾರಕ ದುರಂತ’’ ಎಂಬ ಆಳವಾದ ವಿಷಾದ - ಇದುವೇ ಸದ್ಯ ನಮ್ಮ ತುರ್ತು ಗಮನಕ್ಕೆ ಮತ್ತು ಪ್ರಾಶಸ್ತ್ಯದೊಂದಿಗೆ ನಾವು ಚರ್ಚಿಸುವುದಕ್ಕೆ ಯೋಗ್ಯವಿಷಯ ಎಂಬುದು ಅವರ ನಿರ್ಧಾರವಾಗಿದೆ.
ಐರ್ಲೆಂಡ್‌ನಲ್ಲಿ ಪ್ರಸ್ತುತ ಘಟನೆ ನಡೆಯುವುದಕ್ಕಿಂತ ಎರಡೇ ದಿನ ಮುಂಚೆ, ಭಾರತದಲ್ಲೇ ನಡೆದ ಒಂದು ಆಘಾತಕಾರಿ ಘಟನೆ ಹಲವು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಅಕ್ಟೋಬರ್ 7ರಂದು ಚಂಡಿಗಡದಲ್ಲಿ ಇನ್‌ಸ್ಪೆಪೆಕ್ಟರ್ ಜನರಲ್ ಆಫ್ ಪೊಲೀಸ್ (ಐಜಿಪಿ) ಹುದ್ದೆಯಲ್ಲಿದ್ದ ಐಪಿಎಸ್ ಅಧಿಕಾರಿ ವೈ. ಪೂರನ್ ಕುಮಾರ್ ಅವರ ಮೃತ ಶರೀರ ಪತ್ತೆಯಾಯಿತು. ತನ್ನ ಸಹೋದ್ಯೋಗಿಗಳು ತನ್ನ ವಿರುದ್ಧ ಮಾಡಿದ ಜಾತಿ ಆಧಾರಿತ ತಾರತಮ್ಯದಿಂದ ನೊಂದು ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಪ್ರಸ್ತುತ ದಲಿತ ಅಧಿಕಾರಿ ತನ್ನ ಡೆತ್‌ನೋಟ್‌ನಲ್ಲಿ ಬರೆದಿದ್ದರು.
ಪಲಾಯನ ಯಾವುದೇ ಸಮಸ್ಯೆಯ ಪರಿಹಾರವಲ್ಲ. ಆತ್ಮಹತ್ಯೆಯಂತೂ ಖಂಡಿತವಾಗಿಯೂ ಯಾವುದೇ ಅನ್ಯಾಯಕ್ಕೆ ಸೂಕ್ತ ಉತ್ತರವಲ್ಲ. ಆದರೂ ಮಾಡಬಾರದ್ದನ್ನು ಮಾಡಿಬಿಟ್ಟ ಪೂರನ್ ಕುಮಾರ್ ಅವರ ಆತ್ಮಹತ್ಯೆಗೆ ಕಾರಣವಾದ ಸನ್ನಿವೇಶವು ದೇಶದ ಸಾವಿರಾರು ಸರಕಾರಿ ಕಚೇರಿಗಳಲ್ಲಿ ನಿತ್ಯ ಕಂಡು ಬರುವ ಸನ್ನಿವೇಶವಾದ್ದರಿಂದ ಅದು ಖಂಡಿತ ಚರ್ಚಾರ್ಹವಾಗಿದೆ.
ಪೂರನ್ ಕುಮಾರ್ ಅವರ ಪತ್ನಿ ಐಎಎಸ್ ಅಧಿಕಾರಿ ಆಮ್ನೀತ್ ಕುಮಾರ್, ಪೊಲೀಸರಿಗೆ ಸಲ್ಲಿಸಿದ ತಮ್ಮ ದೂರಿನಲ್ಲಿ ‘‘ಇದೊಂದು ಸಾಮಾನ್ಯ ಆತ್ಮಹತ್ಯೆಯ ಘಟನೆಯಲ್ಲ. ಇದು ದಲಿತ ಸಮುದಾಯಕ್ಕೆ ಸೇರಿದ ನನ್ನ ಪತಿಯ ವಿರುದ್ಧ, ಉನ್ನತ ಹುದ್ದೆಯಲ್ಲಿರುವ ಕೆಲವು ಶಕ್ತಿಶಾಲಿ ಅಧಿಕಾರಿಗಳು ನಡೆಸಿದ ವ್ಯವಸ್ಥಿತ ದೌರ್ಜನ್ಯದ ಫಲವಾಗಿದೆ. ಅವರು ತಮ್ಮ ಅಧಿಕಾರ ಸ್ಥಾನಗಳನ್ನು ಬಳಸಿ ನನ್ನ ಪತಿಗೆ ಯಾವ ಮಟ್ಟದ ಮಾನಸಿಕ ಹಿಂಸೆಯನ್ನು ನೀಡಿದ್ದಾರೆಂದರೆ, ಅವರ ಬಳಿ ಆತ್ಮಹತ್ಯೆಯ ಹೊರತು ಬೇರಾವ ದಾರಿಯೂ ಉಳಿದಿರಲಿಲ್ಲ’’ ಎಂದಿದ್ದಾರೆ.
ಪೂರನ್ ಕುಮಾರ್ ತಮ್ಮ ಮರಣಪತ್ರದಲ್ಲಿ ಹಲವು ಮಂದಿ ಹಿರಿಯ ಹಾಗೂ ನಿವೃತ್ತ ಅಧಿಕಾರಿಗಳನ್ನು ಹೆಸರಿಸಿ, ಅವರು ತನ್ನ ವಿರುದ್ಧ ಘೋರವಾದ ಜಾತಿ ಆಧಾರಿತ ತಾರತಮ್ಯ ಮಾಡಿದ್ದಾರೆ, ಉದ್ದೇಶಪೂರ್ವಕ ಮಾನಸಿಕ ಕಿರುಕುಳ ನೀಡಿದ್ದಾರೆ ಮತ್ತು ಸಾರ್ವಜನಿಕವಾಗಿ ತನ್ನನ್ನು ಅಪಮಾನಿಸಿ ಹಿಂಸಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಪೂರನ್ ಕುಮಾರ್ ಅವರ ಮೇಲಧಿಕಾರಿಗಳಲ್ಲಿ ಅನೇಕರು ‘ಜಾಟ್’ ಸಮುದಾಯಕ್ಕೆ ಸೇರಿದವರು. ದೇಶದಲ್ಲಿ ಸುಮಾರು ಶೇ. 2ರಷ್ಟಿರುವ ಜಾಟ್ ಸಮುದಾಯದ ಜನಸಂಖ್ಯೆ ಹರ್ಯಾಣದಲ್ಲಿ ಸುಮಾರು ಶೇ. 30ರಷ್ಟಿದೆ. ಆ ರಾಜ್ಯದಲ್ಲಿ ಎಲ್ಲೆಲ್ಲೂ ಅವರದೇ ಏಕಸ್ವಾಮ್ಯ ಎದ್ದುಕಾಣುತ್ತದೆ. ಅವರ ಒಂದು ವರ್ಗವು ರಾಜ್ಯದಲ್ಲಿ ಅತ್ಯಂತ ನೀಚ ಸ್ವರೂಪದ ಜಾತಿವಾದವನ್ನು ಮೆರೆಯುತ್ತಾ ಬಂದಿದೆ. ದಲಿತರ ವಿರುದ್ಧ ದೌರ್ಜನ್ಯ ಭಾರತದ ಬಹುತೇಕ ಎಲ್ಲ ಪ್ರದೇಶಗಳಲ್ಲೂ ನಡೆಯುತ್ತದೆ ಮತ್ತು ಉತ್ತರ ಭಾರತದಲ್ಲಿ ಅತ್ಯಧಿಕವಾಗಿ ನಡೆಯುತ್ತದೆ. ಹರ್ಯಾಣದ ವಿಶೇಷತೆಯೇನೆಂದರೆ ಇದನ್ನು ಮೇಲ್ಜಾತಿಯವರ ‘ಏಕಸ್ವಾಮ್ಯದ ಪ್ರಯೋಗಾಲಯ’ ಎಂದು ಪರಿಗಣಿಸಲಾಗುತ್ತದೆ. ಇಲ್ಲಿ ದಲಿತರ ಮೇಲೆ ದೌರ್ಜನ್ಯ ನಡೆದಾಗ ಆ ಕುರಿತಾದ ವರದಿ ಅಥವಾ ದೂರುಗಳು ಪೊಲೀಸ್ ಠಾಣೆಯನ್ನೇ ತಲುಪುವುದಿಲ್ಲ. ಠಾಣೆಗೆ ತಲುಪಿದರೂ ಅಲ್ಲಿ ಅವು ದಾಖಲಾಗುವುದಿಲ್ಲ. ಎಷ್ಟೋ ಪ್ರಕರಣಗಳಲ್ಲಿ ದೂರಿನ ವಿಲೇವಾರಿಯನ್ನು ನ್ಯಾಯಾಲಯಕ್ಕೆ ವಹಿಸುವ ಬದಲು ದೂರುದಾರರನ್ನೇ ‘ವಿಲೇವಾರಿ’ ಮಾಡಿ ಬಿಡಲಾಗುತ್ತದೆ. ರಾಜಕಾರಣಿಗಳು, ಅಧಿಕಾರಿಗಳು ಮತ್ತು ಪುಂಡರ ಪಡೆಗಳು ತಮ್ಮ ಭ್ರಷ್ಟಾಚಾರ ಮತ್ತು ಅಪರಾಧಗಳನ್ನು ಅಡಗಿಸಲು ‘ಜಾಟ್’ ಎಂಬ ಜಾತಿ ಬ್ರಾಂಡ್ ಅನ್ನು ರಕ್ಷಾಕವಚವಾಗಿ ಬಳಸಿಕೊಳ್ಳುತ್ತಾರೆ. ಬ್ಯುರೋಕ್ರಸಿಯಲ್ಲಿ ಜಾಟ್ ಜಾತಿಯವರ ಸಂಖ್ಯೆ ಮತ್ತು ಅವರ ಪ್ರಾಬಲ್ಯ ಬಹಳ ಗಟ್ಟಿಯಾಗಿದೆ. ಹರ್ಯಾಣದಲ್ಲಿ ದಲಿತ ಮತ್ತಿತರ ದುರ್ಬಲ ವರ್ಗಗಳಿಗೆ ಸೇರಿದ ಜನಸಾಮಾನ್ಯರು ಮಾತ್ರವಲ್ಲ, ಸರಕಾರಿ ನೌಕರರು ಮತ್ತು ದೊಡ್ಡದೊಡ್ಡ ಹುದ್ದೆಗಳಲ್ಲಿರುವ ಅಧಿಕಾರಿಗಳು ಕೂಡಾ ಈ ವಾತಾವರಣದ ನೇರ ಬಲಿಪಶುಗಳಾಗಿದ್ದಾರೆ. ಪೂರನ್ ಕುಮಾರ್‌ರ ದಾರುಣ ಅಂತ್ಯಕ್ಕೆ ಹರ್ಯಾಣದಲ್ಲಿನ ಈ ಸನ್ನಿವೇಶದೊಂದಿಗೆ ಸಂಬಂಧವಿದೆ. ಅಲ್ಲಿನ ಸಾಕ್ಷಾತ್ ಪೊಲೀಸ್ ಇಲಾಖೆಯಲ್ಲೇ ಜಾತೀಯತೆ ಯಾವ ಮಟ್ಟದಲ್ಲಿದೆ ಎಂಬುದರ ಕಡೆಗೆ ಪೂರನ್ ಕುಮಾರ್ ಗಮನ ಸೆಳೆದಿದ್ದಾರೆ.
2010ರಲ್ಲಿ ಹರ್ಯಾಣದ ಮಿರ್ಚ್ ಪುರ್ ಗ್ರಾಮದಲ್ಲಿ ಕೆಲವು ಜಾಟ್ ಯುವಕರು ದಲಿತರ ಕೇರಿಯ ಮುಂದಿಂದ ಹಾದುಹೋಗುತ್ತಿದ್ದಾಗ, ದಲಿತರಿಗೆ ಸೇರಿದ ನಾಯಿಯೊಂದು ಅವರನ್ನು ಕಂಡು ಬೊಗಳಿತು ಎಂಬುದೇ ದಲಿತರ ವಿರುದ್ಧ ಘೋರ ಹಿಂಸಾಕೃತ್ಯಗಳ ಸರಮಾಲೆಯೊಂದಕ್ಕೆ ಚಾಲನೆ ನೀಡಿತು. ಪ್ರಸ್ತುತ ಜಾಟ್ ಯುವಕರು ಆ ನಾಯಿಯ ಮೇಲೆ ಮಾತ್ರವಲ್ಲ, ಅದರ ಮಾಲಕ ಹಾಗೂ ಆತನ ಜೊತೆಗಿದ್ದವರ ಮೇಲೂ ಹಲ್ಲೆ ನಡೆಸಿದರು ಮತ್ತು ಕೇರಿಯ ಎಲ್ಲ ದಲಿತರಿಗೆ ಬೆದರಿಕೆ ಒಡ್ಡಿ ಅಲ್ಲಿಂದ ಹೊರಟುಹೋದರು. ಮರುದಿನ, ಪ್ರಸ್ತುತ ನಾಯಿಯ ಮಾಲಕ ಮತ್ತು ಅವನ ಬಂಧುಗಳು ಜಾಟ್ ನಾಯಕರ ಬಳಿಗೆ ಹೋಗಿ ಕ್ಷಮೆಯಾಚಿಸಬೇಕು ಎಂಬ ಬೇಡಿಕೆ ಬಂತು. ಆ ಪ್ರಕಾರ ನಾಯಿಯ ಮಾಲಕ ಕ್ಷಮೆಯಾಚಿಸಲಿಕ್ಕಾಗಿ ತನ್ನೊಬ್ಬ ಬಂಧುವಿನ ಜೊತೆ, ಜಾಟ್ ನಾಯಕರ ಬಳಿಗೆ ಹೋದಾಗ ಅವರಿಬ್ಬರನ್ನೂ ಕ್ರೂರವಾಗಿ ಥಳಿಸಿ ಗಂಭೀರವಾಗಿ ಗಾಯಗೊಳಿಸಲಾಗಿತ್ತು. ಮುಂದಿನ ದಿನ ಜಾಟ್ ಜಾತಿಗೆ ಸೇರಿದ ಸುಮಾರು 400 ಮಂದಿ ಪುಂಡರ ಪಡೆಯೊಂದು ಗ್ರಾಮದ ‘ಬಾಲ್ಮೀಕಿ ದಲಿತ’ ಸಮಾಜದವರ ಕೇರಿಯ ಮೇಲೆ ದಾಳಿ ನಡೆಸಿ ಸಿಕ್ಕ ಸಿಕ್ಕವರನ್ನು ಥಳಿಸಿ, ಅಲ್ಲಿದ್ದ ಗುಡಿಸಲುಗಳಿಗೆ ಬೆಂಕಿ ಹಚ್ಚತೊಡಗಿತು. ಈ ವೇಳೆ 18 ಮನೆಗಳು ಸಂಪೂರ್ಣ ಸುಟ್ಟು ಭಸ್ಮವಾದವು. ಆ ಪೈಕಿ ಒಂದು ಮನೆಯಲ್ಲಿದ್ದ 70ರ ಹರೆಯದ ವೃದ್ಧ ಮತ್ತು 17 ವರ್ಷ ವಯಸ್ಸಿನ ಆತನ ಪೋಲಿಯೋ ಪೀಡಿತ ಮಗಳು ಕೂಡಾ ಜೀವಂತ ದಹನಗೊಂಡರು. ದಾಳಿಯ ಬೆನ್ನಿಗೇ ದಲಿತರ ವಿರುದ್ಧ ಬಹಿಷ್ಕಾರವನ್ನೂ ಹೇರಲಾಯಿತು. ಪ್ರಸ್ತುತ ದಾಳಿಯಿಂದಾಗಿ ಗ್ರಾಮದ ದಲಿತರಲ್ಲಿ ಎಂತಹ ಭಯದ ವಾತಾವರಣ ಮೂಡಿತೆಂದರೆ ಅವರಲ್ಲಿ ಅನೇಕರು ಆ ಗ್ರಾಮವನ್ನೇ ತೊರೆದು ಬೇರೆ ಕಡೆಗಳಿಗೆ ವಲಸೆ ಹೋಗತೊಡಗಿದರು. ಇವೆಲ್ಲವೂ ಪೊಲೀಸರ ಸಮಕ್ಷಮವೇ ನಡೆಯಿತು. ಈ ಉದ್ವಿಗ್ನತೆ ಬಹುಕಾಲ ಉಳಿಯಿತು. ಮುಂದಿನ 8 ವರ್ಷಗಳ ಅವಧಿಯಲ್ಲಿ 258 ದಲಿತ ಕುಟುಂಬಗಳು ಆ ಗ್ರಾಮವನ್ನು ತೊರೆದು ಹೋದವು. ಸಂವಿಧಾನ, ಕಾನೂನು ಇತ್ಯಾದಿಗಳೆಲ್ಲಾ ರಜೆಯ ಮೇಲೆ ಹೋಗಿವೆಯೇ? ಎಂದು ಸಂಶಯಿಸುವ ವಾತಾವರಣ ಆಗ್ರಾಮದಲ್ಲಿತ್ತು. ಬೇರೆ ಹಲವೆಡೆಗಳಲ್ಲೂ ಇತ್ತು. ಈಗಲೂ ಇದೆ.
2016ರಲ್ಲಿ ಆರಂಭವಾದ, ಜಾಟ್ ಸಮುದಾಯಕ್ಕೆ ಮೀಸಲಾತಿ ನೀಡಬೇಕೆಂದು ಆಗ್ರಹಿಸುವ ಚಳವಳಿ ಬಹುಬೇಗನೆ ಹಿಂಸೆಗೆ ತಿರುಗಿತು. ಹರ್ಯಾಣ ರಾಜ್ಯದಾದ್ಯಂತ ವ್ಯಾಪಕ ಹಿಂಸಾಚಾರ ಮತ್ತು ವಿಧ್ವಂಸಕ ಚಟುವಟಿಕೆಗಳು ನಡೆದವು. ಸಂಪೂರ್ಣ ರಾಜ್ಯವು ನಿಶ್ಚಲ ಸ್ಥಿತಿಯಲ್ಲಿತ್ತು. ಸುಮಾರು ನೂರು ಕೋಟಿ ರೂಪಾಯಿಗೂ ಹೆಚ್ಚಿನ ಸೊತ್ತುವಿತ್ತಗಳು ನಾಶವಾದವು. ಈ ವೇಳೆ ರಾಜ್ಯದ ಪೊಲೀಸರು ಗರಿಷ್ಠ ಸಂಯಮ ಪ್ರದರ್ಶಿಸಿದರು. ಗೋಲಿಬಾರ್ ಮಾಡಬೇಕಾದ ಸನ್ನಿವೇಶಗಳಲ್ಲಿ ಲಾಠಿ ಚಾರ್ಜ್ ಮಾಡುವುದಕ್ಕೂ ಹಿಂಜರಿದರು. ಔಪಚಾರಿಕವಾಗಿ ಕೆಲವು ಜಾಟ್ ನಾಯಕರ ವಿರುದ್ಧ ಕೇಸುಗಳು ದಾಖಲಾದವು. ಅಲ್ಪಾವಧಿಯಲ್ಲೇ ಆ ಕೇಸುಗಳನ್ನು ಕೈಬಿಡಲಾಯಿತು. ಆಡಳಿತ ಜಾತಿಯದ್ದೇ ಹೊರತು ಕಾನೂನಿನದ್ದಲ್ಲ ಎಂಬುದು ಸಾಬೀತಾಯಿತು. ಆಡಳಿತದ ‘ದಕ್ಷತೆ’ ಮತ್ತು ಪೊಲೀಸರ ಲಾಠಿ, ಬೂಟುಗಳ ಬಲ ನೋಡಬೇಕಿದ್ದರೆ ಜನರು ದಲಿತರ ಯಾವುದಾದರೂ ಮುಷ್ಕರ ಅಥವಾ ಮತಪ್ರದರ್ಶನಕ್ಕಾಗಿ ಕಾಯಬೇಕು ಎಂಬ ಸಂದೇಶ ಎಲ್ಲೆಡೆಗೆ ತಲುಪಿತು. 2017ರಲ್ಲಿ ಅದೇ ಗ್ರಾಮದಲ್ಲಿ ‘ಸೈಕಲ್ ಸ್ಟಂಟ್’ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದ ದಲಿತ ಯುವಕರ ಮೇಲೆ ಜಾಟ್ ಪುಂಡರ ಗುಂಪೊಂದು ನಡೆಸಿದ ಹಲ್ಲೆಯಲ್ಲಿ ಹಲವು ದಲಿತ ಯುವಕರು ತೀವ್ರವಾಗಿ ಗಾಯಗೊಂಡರು. ಮರುದಿನವೇ ಕನಿಷ್ಠ 40 ದಲಿತ ಕುಟುಂಬಗಳು ಆ ಗ್ರಾಮವನ್ನು ಬಿಟ್ಟು ವಲಸೆ ಹೋದವು ಹೀಗೆ ಒಂದು ಬಲಿಷ್ಠ ಜಾತಿಯವರ ಅಪಾರ ಪ್ರಾಬಲ್ಯ ಇರುವ ರಾಜ್ಯದಲ್ಲಿ ಒಬ್ಬ ದಲಿತ ವ್ಯಕ್ತಿ ಎಷ್ಟೇ ಶಿಕ್ಷಿತನಾಗಿದ್ದರೂ, ಅಧಿಕಾರದ ಎಷ್ಟೇ ದೊಡ್ಡ ಹುದ್ದೆಯಲ್ಲಿದ್ದರೂ ಅವನು ಸಂಪೂರ್ಣ ಸುರಕ್ಷಿತನಾಗಿರುವುದಿಲ್ಲ. ಅವನ ಘನತೆ, ಗೌರವ, ಸ್ವಾಭಿಮಾನ ಇತ್ಯಾದಿಗಳು ಕೂಡಾ ಸುರಕ್ಷಿತವಾಗಿರುವುದಿಲ್ಲ. ಅವನಿಗಿಂತ ಮೇಲಿನ ಸ್ಥಾನಗಳಲ್ಲೂ ಕೆಳಗಿನ ಸ್ಥಾನಗಳಲ್ಲೂ, ಅವನ ಸುತ್ತಮುತ್ತಲಲ್ಲೂ ಅವನನ್ನು ತಾತ್ಸಾರದಿಂದ ಕಾಣುವವರು ಮತ್ತು ಹಂಗಿಸುವವರೇ ಅಧಿಕ ಸಂಖ್ಯೆಯಲ್ಲಿರುತ್ತಾರೆ. ಪೂರನ್ ಕುಮಾರ್‌ರಂತಹ ಅದೆಷ್ಟೋ ಅಧಿಕಾರಿಗಳು ಇಂದು ಹರ್ಯಾಣದಲ್ಲಿ ಮಾತ್ರವಲ್ಲ ಇತರೆಡೆಗಳಲ್ಲೂ ಇಂತಹ ಸನ್ನಿವೇಶವನ್ನು ಎದುರಿಸುತ್ತಿದ್ದಾರೆ. ಪೂರನ್ ಕುಮಾರ್ ಆತ್ಮಹತ್ಯೆಯ ಹಿನ್ನೆಲೆಯಲ್ಲಿ ಎದ್ದಿರುವ ಪ್ರಶ್ನೆಗಳನ್ನು ಹತ್ತಿಕ್ಕಲಿಕ್ಕಾಗಿ ಇದೀಗ ಅವರ ಮೇಲೆ ಭ್ರಷ್ಟಾಚಾರದ ಆರೋಪಗಳನ್ನು ಹೊರಿಸಲಾಗುತ್ತಿದೆ. ಅದಕ್ಕಾಗಿ ಅವರಿಗಿಂತ ಕಿರಿಯ ಸ್ಥಾನದಲ್ಲಿದ್ದ ಅಧಿಕಾರಿಗಳನ್ನು ಸಾಕ್ಷಿಗಳಾಗಿ ಬಳಸಲಾಗುತ್ತಿದೆ. ನಮ್ಮ ದೇಶದಲ್ಲಿ ನಿಜಕ್ಕೂ ಭ್ರಷ್ಟಾಚಾರಿಗಳೆಲ್ಲಾ ಆತ್ಮಹತ್ಯೆ ಮಾಡಿಕೊಳ್ಳುವುದಾಗಿದ್ದರೆ ದೇಶದ ಸರಕಾರಿ ಕಚೇರಿಗಳಲ್ಲಿ ಅಧಿಕಾರಿಗಳು ಕೂರುವ ಹೆಚ್ಚಿನೆಲ್ಲಾ ಕುರ್ಚಿಗಳು ಖಾಲಿಯಾಗಿರುತ್ತಿದ್ದವು.
ಪೂರನ್ ಕುಮಾರ್ ಥರದ ಅಧಿಕಾರಿಗಳ ಪಾಲಿಗೆ ವ್ಯವಸ್ಥೆಯು ಎಷ್ಟು ಪ್ರತಿಕೂಲವಾಗಿದೆ ಎಂಬುದಕ್ಕೆ ಸಾಕ್ಷಿಯಾಗಿ, ಪರಿಶಿಷ್ಟ ಜಾತಿಗಳ ಹಕ್ಕು ಹಾಗೂ ಹಿತಾಸಕ್ತಿಗಳ ರಕ್ಷಣೆಗೆಂದೇ ಇರುವ ‘ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗ’ವು (ಓಅSಅ) ಪೂರನ್ ಕುಮಾರ್ ಪ್ರಕರಣದಲ್ಲಿ ನಿಗೂಢ ಮೌನ ಪಾಲಿಸಿತು. ನಿಜವಾಗಿ ಓಅSಅ ಮನಸ್ಸು ಮಾಡಿದರೆ ಈ ಪ್ರಕರಣದಲ್ಲಿ ಬಹಳಷ್ಟನ್ನು ಮಾಡಲು ಅದಕ್ಕೆ ಸಂವಿಧಾನದತ್ತ ಅಧಿಕಾರವಿದೆ. ಆದರೆ ಪ್ರಸ್ತುತ ಆಯೋಗದ ಪದಾಧಿಕಾರಿಗಳು ಮತ್ತು ಅಧಿಕಾರಿಗಳು ತಮ್ಮೆಲ್ಲಾ ಕರ್ತವ್ಯಗಳನ್ನು ಮರೆತು ಮೇಲ್ಜಾತಿಯ ಪಕ್ಷಗಳನ್ನು, ನಾಯಕರನ್ನು ಮತ್ತು ಅವರ ಆಪ್ತರನ್ನು ಮೆಚ್ಚಿಸುವ ಕಾಯಕದಲ್ಲೇ ಸದಾ ತಲ್ಲೀನರಾಗಿರುತ್ತಾರೆ. ಅದೇ ರೀತಿ, ದೇಶದಲ್ಲಿ ಯಾವುದೇ ಐಪಿಎಸ್ ಅಧಿಕಾರಿಗೆ ಅನ್ಯಾಯವಾದಾಗ, ಅವರ ವಿರುದ್ಧ ಜಾತಿ ಆಧಾರಿತ ತಾರತಮ್ಯ ನಡೆದಾಗ, ಅವರ ಭಡ್ತಿ ತಡೆಯಲಾದಾಗ ಅಥವಾ ಅಕ್ರಮವಾಗಿ ಅವರ ವರ್ಗಾವಣೆ ನಡೆದಾಗ ತಕ್ಷಣವೇ ಆತನ ನೆರವಿಗೆ ಧಾವಿಸುವ ‘ಐಪಿಎಸ್ ಅಧಿಕಾರಿಗಳ ಸಂಘ’ ಕೂಡಾ ಪೂರನ್ ಕುಮಾರ್ ಪ್ರಕರಣದಲ್ಲಿ ವಿಶೇಷ ಆಸಕ್ತಿ ತೋರಲಿಲ್ಲ. ಈ ಮೂಲಕ ಅದು ಪರೋಕ್ಷವಾಗಿ, ತನ್ನ ಸೇವೆ ಕೂಡಾ ನಿರ್ದಿಷ್ಟ ಜಾತಿಯ ಅಧಿಕಾರಿಗಳಿಗೆ ಮಾತ್ರ ಮೀಸಲು ಎಂಬ ಸಂದೇಶ ನೀಡಿತು.
ಪೂರನ್ ಕುಮಾರ್ ಅವರ ಪ್ರಕಾರ 2020ರಲ್ಲಿ ಅವರು ಅಂಬಾಲಾದ ಮಂದಿರವೊಂದಕ್ಕೆ ಭೇಟಿ ನೀಡಿದಾಗಿನಿಂದ ಅವರ ವಿರುದ್ಧ ಜಾತಿ ಆಧಾರಿತ ಪಕ್ಷಪಾತ, ಸಾರ್ವಜನಿಕರ ನಿಂದನೆ ಮತ್ತು ಮಾನಸಿಕ ಕಿರುಕುಳದ ಪ್ರಕ್ರಿಯೆ ಆರಂಭವಾಗಿತ್ತು. ಆಗ ಡಿಜಿಪಿಯಾಗಿದ್ದ ಮನೋಜ್ ಯಾದವ್ ಮತ್ತು ಇತರ ಹಿರಿಯ ಅಧಿಕಾರಿಗಳು ಅವರನ್ನು ಗುರಿಯಾಗಿಸತೊಡಗಿದ್ದರು. ಮೇಲಧಿಕಾರಿಗಳು ಅವರಿಗೆ ರಜೆ ನಿರಾಕರಿಸಿದ್ದರಿಂದ, ಅವರಿಗೆ ತನ್ನ ತಂದೆ ಬದುಕಿನ ತೀರಾ ಕೊನೆಯ ಹಂತದಲ್ಲಿ ಆಸ್ಪತ್ರೆಯಲ್ಲಿದ್ದಾಗ ಅವರ ಭೇಟಿಗೆ ಹೋಗಲು ಸಾಧ್ಯವಾಗಲಿಲ್ಲ. ಅವರಿಗೆ ಸರಕಾರಿ ವಾಹನ ಹಾಗೂ ನಿವೇಶನ ಒದಗಿಸುವ ವಿಷಯದಲ್ಲೂ ಅಡೆತಡೆಗಳನ್ನು ಒಡ್ಡಲಾಗಿತ್ತು ಮತ್ತು ಮೇಲಧಿಕಾರಿಗಳಿಂದ ಅವರಿಗೆ ಹಾಗೂ ಅವರ ಕುಟುಂಬದ ಭದ್ರತೆಗೆ ಅಪಾಯವಿತ್ತು. ಇಂತಹ ಕಿರುಕುಳಗಳ ಕುರಿತು ರಾಜ್ಯದ ಮುಖ್ಯಕಾರ್ಯದರ್ಶಿ ಮತ್ತಿತರ ಅಧಿಕಾರಿಗಳಿಗೆ ಅವರು ಲಿಖಿತ ದೂರು ಸಲ್ಲಿಸಿದ್ದರೂ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ. ಸಾಲದ್ದಕ್ಕೆ, ಕುಮಾರ್ ವಿರುದ್ಧ ಪ್ರತೀಕಾರದ ಕ್ರಮಗಳು ಆರಂಭವಾದವು.
‘‘ಶಿಕ್ಷಣವೇ ವಂಚಿತ ವರ್ಗಗಳ ಸಬಲೀಕರಣಕ್ಕಿರುವ ದಾರಿ’’ ಅಥವಾ ‘‘ಪರಂಪರಾಗತ ಅಸಮಾನತೆಗೆ ಮೀಸಲಾತಿಯೇ ಪರಿಹಾರ’’ ಇವೆಲ್ಲಾ ಒಂದು ಕಾಲದಲ್ಲಿ ಕೇವಲ ಘೋಷಣೆಗಳಾಗಿದ್ದವು. ಇತ್ತೀಚಿನ ದಶಕಗಳಲ್ಲಿ ಹಲವರು ಅವುಗಳನ್ನು ತಮ್ಮ ನಂಬಿಕೆಗಳಾಗಿಸಿಕೊಂಡಿದ್ದರು. ಆದರೆ ಇದೀಗ ನಿಜಜೀವನದಲ್ಲಿ ಅವೆಲ್ಲಾ ಹುಸಿಯಾಗಿ ಬಿಟ್ಟಿವೆ. ದುರ್ಬಲ ವರ್ಗಗಳ ಹೊಸ ಪೀಳಿಗೆ, ಶಿಕ್ಷಣದ ಮೂಲಕ ಸಬಲವಾಗುವ ಬದಲು ಹತಾಶ ನಿರುದ್ಯೋಗಿಯಾಗುತ್ತಿದೆ. ಕೇವಲ ಕೆಲವು ಶಿಕ್ಷಣ ಸಂಸ್ಥೆಗಳಿಗೆ ಮತ್ತು ಸರಕಾರಿ ಉದ್ಯೋಗಗಳ ಒಂದು ಭಾಗಕ್ಕೆ ಸೀಮಿತವಾಗಿರುವ ಮತ್ತು ಆ ಮೂಲಕ ತೀರಾ ಪರಿಮಿತ ಪ್ರಮಾಣದ ರಕ್ಷಣೆ ಮತ್ತು ಪರಿಹಾರ ಒದಗಿಸುವ ‘ಮೀಸಲಾತಿ’ ಎಂಬ ಸವಲತ್ತು ಕೂಡಾ ಪರಂಪರಾಗತ ಪ್ರಭುಗಳ ಕೈಯಲ್ಲಿ ಇನ್ನೊಂದು ಆಟಿಕೆಯಾಗಿ ಬಿಟ್ಟಿದೆ. ಮೀಸಲಾತಿಯ ಕುರಿತು ಅದು ಸ್ವಂತ ಅರ್ಹತೆಯಿಂದ ಏನನ್ನೂ ಗಳಿಸಲಾಗದವರಿಗೆ ಸರಕಾರದಿಂದ ಸಿಕ್ಕ ಔದಾರ್ಯ ಎಂಬ ಮಾರಕ ನಂಬಿಕೆ ಹಲವಾರು ವಲಯಗಳಲ್ಲಿ ಜನಪ್ರಿಯವಾಗಿದೆ. ವಿಶೇಷವಾಗಿ, ಮೀಸಲಾತಿ ಮೂಲಕ ಉದ್ಯೋಗ ಪಡೆದವರು ಇರುವ ಸರಕಾರಿ ಕಚೇರಿ ಮತ್ತು ಸಂಸ್ಥೆಗಳಲ್ಲಿ ಈ ಮಾರಕ ನಂಬಿಕೆಯು ವ್ಯಾಪಕವಾಗಿ ಕಂಡು ಬರುತ್ತದೆ. ತಾತ್ಸಾರ, ಕುಹಕ, ವ್ಯಂಗ್ಯ, ದೂಷಣೆ, ಮೂದಲಿಕೆ ಇತ್ಯಾದಿ ವಿಭಿನ್ನ ರೂಪಗಳಲ್ಲಿ ಈ ನಂಬಿಕೆ ಅಲ್ಲಲ್ಲಿ ಆಗಾಗ ಪ್ರಕಟವಾಗುತ್ತಲೂ ಇರುತ್ತದೆ. ಅದರ ಪರಿಣಾಮ ಕೂಡಾ ಭೀಕರ ದುರಂತಗಳ ರೂಪದಲ್ಲಿ ಪ್ರತ್ಯಕ್ಷವಾಗುತ್ತಿರುತ್ತದೆ.







