ನರಹತ್ಯೆಯ ಅತ್ಯಂತ ಅಪಮಾನಾತ್ಮಕ ವಿಧಾನ!

ದೇಶದಲ್ಲಿ ಹೆಚ್ಚಿನೆಡೆ ಒಳಚರಂಡಿ ಶುಚೀಕರಣ ಕಾರ್ಮಿಕರು ಸಂಘಟಿತರಲ್ಲ. ಅವರಲ್ಲಿ ಹೆಚ್ಚಿನವರು ಸರಕಾರ ಅಥವಾ ಯಾವುದಾದರೂ ಖಾಸಗಿ ಸಂಸ್ಥೆಯ ಅಧಿಕೃತ ಉದ್ಯೋಗಿಗಳೂ ಅಲ್ಲ. ಅವರಲ್ಲಿ ಅಧಿಕ ಮಂದಿ ಆಯಾ ದಿನದ ಆಹಾರಕ್ಕಾಗಿ, ಮಡದಿ ಮಕ್ಕಳ ಹಸಿವು ತಣಿಸುವುದಕ್ಕಾಗಿ ಯಾವುದೇ ಕೆಲಸ, ಚಾಕರಿ ಮಾಡುವುದಕ್ಕೆ ತಯಾರಿರುವವರು. ಬೆಳಗಾದರೆ, ಇಂದು ಎಲ್ಲಿ ಯಾವ ದುಡಿಮೆಗೆ ಅವಕಾಶ ಸಿಗುತ್ತದೆ ಎಂದು ಕುತೂಹಲಿಸುವ ಕಡುದರಿದ್ರ, ಅಸ್ಥಿರ, ಅಭದ್ರ ಜೀವಿಗಳು. ಸಮಾಜದ ಮತ್ತು ಸರಕಾರದ ದೃಷ್ಟಿಯಲ್ಲಿ ಅವರ ಬದುಕೇ ಸಂಪೂರ್ಣ ಅಸಂಗತವಾಗಿರುವಾಗ ಅವರ ಮರಣ, ಮರಣದ ಸನ್ನಿವೇಶ ಇತ್ಯಾದಿಗಳು ಸಂಗತವಾಗುವುದಾದರೂ ಹೇಗೆ?
ಮನುಷ್ಯರು ಮನುಷ್ಯರನ್ನು ಕೊಲ್ಲುವುದಕ್ಕೆ ಪ್ರಾಚೀನ ಕಾಲದಿಂದಲೂ ಹಲವು ಬಗೆಯ ವಿಧಾನಗಳನ್ನು ಬಳಸುತ್ತಾ ಬಂದಿದ್ದಾರೆ. ಮರಣವೇ ಆ ಎಲ್ಲ ವಧಾವಿಧಾನಗಳ ಅಂತಿಮ ಪರಿಣಾಮವಾದರೂ ವಧೆಯ ಕೆಲವು ವಿಧಾನಗಳನ್ನು ಸಂವೇದನಾಶೀಲ, ಕಡಿಮೆ ಹಿಂಸೆ ನೀಡುವ ವಿಧಾನ ಎಂದೆಲ್ಲಾ ಗುರುತಿಸಲಾಗುತ್ತವೆ. ಕೆಲವು ವಿಧಾನಗಳು ಅಪಾರ ಹಿಂಸೆ ನೀಡುವ ಕ್ರೂರ, ಭೀಕರ ವಿಧಾನಗಳಾಗಿರುತ್ತವೆ. ಪ್ರಸ್ತುತ ವಿಧಾನಗಳ ಪೈಕಿ ಭಾರತದಲ್ಲಿ ‘ಕೆಳಜಾತಿ’ಯವರನ್ನು ಮತ್ತು ವಿಶೇಷವಾಗಿ ದಲಿತರನ್ನು ಕೊಲ್ಲುವುದಕ್ಕೆ ಬಳಸುವ ಒಂದು ನಿರ್ದಿಷ್ಟ ವಿಧಾನವು ಜಗತ್ತಿನಲ್ಲೇ ಅತ್ಯಧಿಕ ಕ್ರೂರ ಮಾತ್ರವಲ್ಲ, ಅತ್ಯಂತ ಅಪಮಾನಾತ್ಮಕವಾಗಿದೆ.
ಕೇಂದ್ರ ಸರಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು 2023ರಲ್ಲಿ ಸಂಸತ್ತಿನಲ್ಲಿ ಒಂದು ಭಯಾನಕ ಮಾಹಿತಿ ನೀಡಿತು. ಆ ಪ್ರಕಾರ, 1993ರಿಂದೀಚೆಗೆ ದೇಶದಲ್ಲಿ ಚರಂಡಿ ಮತ್ತು ಮಲಗುಂಡಿ ಶುಚೀಕರಿಸುವ ಪ್ರಕ್ರಿಯೆಯಲ್ಲಿ ಉಸಿರುಗಟ್ಟಿ ಅಥವಾ ವಿಷಾನಿಲದಿಂದ ಪ್ರಭಾವಿತರಾಗಿ 1,035 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಈ ಅಧಿಕೃತ ಸರಕಾರಿ ಮಾಹಿತಿಯ ವಿಶ್ವಾಸಾರ್ಹತೆಯ ಬಗ್ಗೆ ಸಾವಿರ ಪ್ರಶ್ನೆಗಳಿವೆ. ಪ್ರಶ್ನೆ ಇರುವುದು ನಿಜಕ್ಕೂ ಅಷ್ಟು ಮಂದಿಯನ್ನು ಅಷ್ಟೊಂದು ಕ್ರೂರವಾಗಿ ಕೊಲ್ಲಲಾಗಿದೆಯೇ? ಎಂಬ ಬಗ್ಗೆಯಲ್ಲ. ಅಷ್ಟೊಂದು ಅಮಾನುಷ ವಿಧಾನದಿಂದ ಕೊಲ್ಲಲ್ಪಟ್ಟವರ ಸಂಖ್ಯೆ ಅಷ್ಟು ಮಾತ್ರವೇ? ಎಂಬುದು ಹಲವು ವಲಯಗಳಲ್ಲಿ ದೊಡ್ಡ ಧ್ವನಿಯಲ್ಲಿ ಮೊಳಗಿರುವ ಗಂಭೀರ ಪ್ರಶ್ನೆಯಾಗಿದೆ. ಕೆಲವು ದಶಕಗಳಿಂದ, ಒಳಚರಂಡಿ ಶುಚೀಕರಣ ಕಾರ್ಮಿಕರ ಹಿತರಕ್ಷಣೆಗಾಗಿ ಹೋರಾಡುತ್ತಿರುವ ‘ಸಫಾಯಿ ಕರ್ಮಚಾರಿ ಆಂದೋಲನ್’ (SKA) ಸಂಘಟನೆಯವರ ಪ್ರಕಾರ ಭಾರತದಲ್ಲಿ ಒಳಚರಂಡಿ ಮತ್ತು ಮಲಗುಂಡಿಗಳನ್ನು ಶುಚೀಕರಿಸುವ ಪ್ರಕ್ರಿಯೆಯಲ್ಲಿ ಉಸಿರುಗಟ್ಟಿ ಅಥವಾ ವಿಷಾನಿಲಗಳಿಂದ ಪ್ರಭಾವಿತರಾಗಿ ಪ್ರತಿವರ್ಷ ಸುಮಾರು 2,000 ಮಂದಿ ಹತರಾಗುತ್ತಾರೆ. ಇವೆಲ್ಲಾ, ಸೂಕ್ತ ರಕ್ಷಣಾ ಸಾಮಗ್ರಿಗಳನ್ನು ಮತ್ತು ಅವಶ್ಯಕ ಯಂತ್ರೋಪಕರಣಗಳನ್ನು ಬಳಸಿದ್ದರೆ ಖಂಡಿತ ನಿವಾರಿಸಬಹುದಾದ ಸಾವುಗಳು. ಹೀಗೆ ನಿವಾರಣೀಯ ಸನ್ನಿವೇಶಗಳಲ್ಲಿ ಸಾಯಿಸಲ್ಪಡುವವರಲ್ಲಿ ಶೇ. 98 ಮಂದಿ ದಲಿತರು ಮತ್ತು ಮಹಿಳೆಯರು. ಸೆಪ್ಟಿಕ್ ಟ್ಯಾಂಕ್‌ಗಳನ್ನು ಶುಚೀಕರಿಸುವಾಗ ಹತರಾಗುವವರ ಸಂಖ್ಯೆ ಬೇರೆಯೇ ಇದೆ. ಎಸ್.ಕೆ.ಎ.ಯವರ ಪ್ರಕಾರ ಒಳಚರಂಡಿ, ಮಲಗುಂಡಿ, ಸೆಪ್ಟಿಕ್ ಟ್ಯಾಂಕ್ ಇತ್ಯಾದಿಗಳ ಶುಚೀಕರಣಕ್ಕೆ ಮನುಷ್ಯರನ್ನು ಬಳಸುವ ಪದ್ಧತಿಯು ಎಷ್ಟು ಅಪಾಯಕಾರಿಯೆಂದರೆ, ಈ ರಂಗದಲ್ಲಿ ಕೆಲಸ ಮಾಡುವವರ ಜೀವಿತಾವಧಿಯು ಹೆಚ್ಚೆಂದರೆ 40ರಿಂದ 45 ವರ್ಷ ಮಾತ್ರವಿರುತ್ತದೆ. ಅವರು ಕಿರುವಯಸ್ಸಿನಲ್ಲೇ ಹಲವು ಬಗೆಯ ಮಾರಕ ರೋಗಗಳಿಗೆ ತುತ್ತಾಗುವ ಸಾಧ್ಯತೆ ಇರುತ್ತದೆ. ಹಲವು ಕಡೆ ಅವರ ವೇತನ, ವಿಶೇಷವಾಗಿ ಅವರಲ್ಲಿನ ಮಹಿಳೆಯರ ಮಾಸಿಕ (ದೈನಿಕವಲ್ಲ!) ವೇತನವು ಜುಜುಬಿ ರೂ. 180ರಿಂದ 200 ತನಕ ಮಾತ್ರವಿರುತ್ತದೆ.
ಕಳೆದ ವರ್ಷ ಡಿಸೆಂಬರ್‌ನಲ್ಲಿ ಸಂಸತ್ತಿನಲ್ಲಿ ಕೇಳಲಾದ ಪ್ರಶ್ನೆಯೊಂದಕ್ಕೆ ಉತ್ತರವಾಗಿ, ದೇಶದ ವಿವಿಧೆಡೆ ‘ನಗರ ಪ್ರದೇಶದ ಸ್ಥಳೀಯ ಸಂಸ್ಥೆ’ಗಳಲ್ಲಿ 57,758 ಮಂದಿ ಒಳಚರಂಡಿ ಮತ್ತು ಸೆಪ್ಟಿಕ್ ಟ್ಯಾಂಕ್ ಶುಚೀಕರಣ ಚಟುವಟಿಕೆಯಲ್ಲಿ ತೊಡಗಿರುವ ಕಾರ್ಮಿಕರಿದ್ದಾರೆ ಎಂಬ ಪ್ರಮುಖ ಮಾಹಿತಿಯನ್ನು ಒದಗಿಸಲಾಗಿತ್ತು. ಈ ಚಟುವಟಿಕೆಗೂ ಜಾತಿಗೂ ಏನು ಸಂಬಂಧ ? ಎಂದು ಅಚ್ಚರಿ ಪಡುವವರ ಗಮನಕ್ಕಾಗಿ, ಈ ವೃತ್ತಿಯಲ್ಲಿರುವವರ ಕುರಿತಂತೆ ಸರಕಾರವೇ ಒದಗಿಸಿರುವ,ಜಾತಿವಾರು ಮಾಹಿತಿ ಹೀಗಿದೆ:
ಸಾಮಾನ್ಯ ವಿಭಾಗದವರು -ಶೇ. 8.05
ಒಬಿಸಿ -ಶೇ. 15.73
ಪರಿಶಿಷ್ಟ ಜಾತಿಗಳು -ಶೇ. 67.91
ಪರಿಶಿಷ್ಟ ಪಂಗಡಗಳು -ಶೇ. 8.31
ಈ ಮೂಲಕ ಸರಕಾರವು ಒಳಚರಂಡಿ, ಮಲಗುಂಡಿ, ಸೆಪ್ಟಿಕ್ ಟ್ಯಾಂಕ್ ಇತ್ಯಾದಿಗಳ ಶುಚೀಕರಣ ಚಟುವಟಿಕೆಗಳಿಗೆ ಜಾತಿಯೊಂದಿಗೆ ಅವಿಭಾಜ್ಯ ಸಂಬಂಧ ಇದೆ ಎಂಬುದನ್ನು ಸ್ವತಃ ತಾನೇ ಪರೋಕ್ಷವಾಗಿ ಒಪ್ಪಿಕೊಂಡಂತಾಗಿದೆ. ಸರಕಾರವೇ ಒದಗಿಸಿರುವ ಮೇಲಿನ ಮಾಹಿತಿ ಪ್ರಕಾರ, ಪ್ರಸ್ತುತ ಕೆಲಸಗಳಲ್ಲಿ ತೊಡಗಿಸಲಾದ ಕಾರ್ಮಿಕರ ಪೈಕಿ ಶೇ. 90ಕ್ಕಿಂತಲೂ ಹೆಚ್ಚಿನವರು ದಲಿತರು ಮತ್ತು ಶೂದ್ರರಾಗಿದ್ದಾರೆ.
ಮಲಬಾಚುವುದು, ಮಲ ಹೊರುವುದು, ಮಲಗುಂಡಿಗಳನ್ನು ಶುಚೀಕರಿಸುವುದು ಮುಂತಾದ ಕೆಲಸಗಳಿಗೆ ಕಾರ್ಮಿಕರನ್ನು ಆರಿಸುವಾಗ ವೃತ್ತಿಯ ಆಧಾರದಲ್ಲಿ ಆರಿಸಲಾಗುತ್ತದೆಯೇ ಹೊರತು ಜಾತಿ ಆಧಾರದಲ್ಲಿ ಆಯ್ಕೆ ಮಾಡಲಾಗುವುದಿಲ್ಲ ಎಂದು ಸರಕಾರಗಳು ಹಲವಾರು ಬಾರಿ ಘೋಷಿಸಿವೆ. ಕ್ರೂರ ಗಮ್ಮತ್ತೇನೆಂದರೆ ಭಾರತೀಯ ಸಮಾಜದಲ್ಲಿ ಮಲಹೊರುವುದು, ಮಲಗುಂಡಿಗಳನ್ನು ಶುಚೀಕರಿಸುವುದು ಇದೆಲ್ಲಾ ನಿರ್ದಿಷ್ಟ ಜಾತಿಯವರೇ ಮಾಡಬೇಕಾದ ವೃತ್ತಿಗಳೆಂಬ ನಿಯಮ ಸಹಸ್ರಮಾನಗಳಿಂದ ಅನುಷ್ಠಾನದಲ್ಲಿದೆ. ಈ ರೀತಿ ವೃತ್ತಿಯೇ ಜನ್ಮದ ಆಧಾರದಲ್ಲಿ ನಿರ್ಧಾರವಾಗುವ ಸಮಾಜದಲ್ಲಿ, ನಾವು ಜಾತಿಯ ಬದಲು ವೃತ್ತಿಯ ಆಧಾರದಲ್ಲಿ ಜನರನ್ನು ಆರಿಸುತ್ತೇವೆಂಬ ಹೇಳಿಕೆಗೆ ಏನರ್ಥ? ಅಥವಾ ವೃತ್ತಿಯ ಆಧಾರದಲ್ಲಿ ಮಾತ್ರ ಆಯ್ಕೆ ಮಾಡಲಾಗುವುದೆಂಬ ಅಧಿಕೃತ, ಘೋಷಿತ ಧೋರಣೆ ಇಂತಹ ಸಮಾಜದಲ್ಲಿ ಎಷ್ಟು ಪರಿಣಾಮಕಾರಿ? ಚರಂಡಿ ಸಂಬಂಧಿ ಕೆಲಸಗಳನ್ನೆಲ್ಲಾ ದಲಿತರು ಮತ್ತು ಹಿಂದುಳಿದ ವರ್ಗದವರಿಂದಲೇ ಮಾಡಿಸಬೇಕೆಂಬುದು ಸರಕಾರಗಳ ಅಘೋಷಿತ ಧೋರಣೆಯಾಗಿದೆ ಎಂಬುದಕ್ಕೆ ಸರಕಾರವು ಒದಗಿಸಿರುವ ಮಾಹಿತಿಯೇ ಪರ್ಯಾಪ್ತ ಪುರಾವೆಯಲ್ಲವೇ?
ಎಸ್.ಕೆ.ಎ. ಆಂದೋಲನದವರು ವಾದಿಸುವಂತೆ, ಚರಂಡಿ ಕಾರ್ಮಿಕರ ಸಂಖ್ಯೆಯ ಕುರಿತಂತೆ ಸರಕಾರ ನೀಡುವ ಅಂಕಿ ಅಂಶಗಳು ಕೂಡಾ ನಂಬಲರ್ಹವಲ್ಲ. ಅವರ ಪ್ರಕಾರ ಭಾರತದಲ್ಲಿ ಹೆಚ್ಚಿನೆಡೆ ಶೌಚಾಲಯಗಳೇ ಇಲ್ಲ. ಇರುವಲ್ಲೂ ಆಧುನಿಕ ಶೈಲಿಯ, ಜಲಸಂಪರ್ಕ ಇರುವ ಶೌಚಾಲಯಗಳ ಸಂಖ್ಯೆ ತೀರಾ ಸೀಮಿತ. ಯಾವುದೇ ಜಲಸಂಪರ್ಕ ಇಲ್ಲದ ಒಣ ಶೌಚಾಲಯ (ಡ್ರೈ ಲ್ಯಾಟ್ರಿನ್)ಗಳ ಸಂಖ್ಯೆ 26 ಲಕ್ಷದಷ್ಟಿದೆ ಮತ್ತು ಈ ಲ್ಯಾಟ್ರಿನ್‌ಗಳ ಶುಚೀಕರಣದಲ್ಲಿ ಬಳಸಲಾಗುವ ಕಾರ್ಮಿಕರ ಸಂಖ್ಯೆ 7.7 ಲಕ್ಷದಷ್ಟಿದೆ. ರೈಲ್ವೆ ಇಲಾಖೆಯಲ್ಲಿ ಇದೇ ಕೆಲಸ ಮಾಡುವ 36 ಸಾವಿರಕ್ಕಿಂತ ಹೆಚ್ಚಿನ ಕಾರ್ಮಿಕರು ಬೇರೆ ಇದ್ದಾರೆ.
ಸರಕಾರಿ ಮತ್ತು ಖಾಸಗಿ ಮಾಹಿತಿಗಳ ನಡುವೆ ಇಷ್ಟು ದೊಡ್ಡ ಅಂತರವಿರುವುದಕ್ಕೆ ಕಾರಣವಿದೆ. ದೇಶದಲ್ಲಿ ಹೆಚ್ಚಿನೆಡೆ ಒಳಚರಂಡಿ ಶುಚೀಕರಣ ಕಾರ್ಮಿಕರು ಸಂಘಟಿತರಲ್ಲ. ಅವರಲ್ಲಿ ಹೆಚ್ಚಿನವರು ಸರಕಾರ ಅಥವಾ ಯಾವುದಾದರೂ ಖಾಸಗಿ ಸಂಸ್ಥೆಯ ಅಧಿಕೃತ ಉದ್ಯೋಗಿಗಳೂ ಅಲ್ಲ. ಅವರಲ್ಲಿ ಅಧಿಕ ಮಂದಿ ಆಯಾ ದಿನದ ಆಹಾರಕ್ಕಾಗಿ, ಮಡದಿ ಮಕ್ಕಳ ಹಸಿವು ತಣಿಸುವುದಕ್ಕಾಗಿ ಯಾವುದೇ ಕೆಲಸ, ಚಾಕರಿ ಮಾಡುವುದಕ್ಕೆ ತಯಾರಿರುವವರು. ಬೆಳಗಾದರೆ, ಇಂದು ಎಲ್ಲಿ ಯಾವ ದುಡಿಮೆಗೆ ಅವಕಾಶ ಸಿಗುತ್ತದೆ ಎಂದು ಕುತೂಹಲಿಸುವ ಕಡುದರಿದ್ರ, ಅಸ್ಥಿರ, ಅಭದ್ರ ಜೀವಿಗಳು. ಸಮಾಜದ ಮತ್ತು ಸರಕಾರದ ದೃಷ್ಟಿಯಲ್ಲಿ ಅವರ ಬದುಕೇ ಸಂಪೂರ್ಣ ಅಸಂಗತವಾಗಿರುವಾಗ ಅವರ ಮರಣ, ಮರಣದ ಸನ್ನಿವೇಶ ಇತ್ಯಾದಿಗಳು ಸಂಗತವಾಗುವುದಾದರೂ ಹೇಗೆ? ಸಾಮಾನ್ಯವಾಗಿ ಮಲಗುಂಡಿ ಅಥವಾ ಸೆಪ್ಟಿಕ್ ಟ್ಯಾಂಕ್‌ಗಳಲ್ಲಾಗುವ ಕಾರ್ಮಿಕರ ಸಾವು ಗಣನೆಗೆ ಬರುವುದು ಅವರು ಸರಕಾರಿ ನೌಕರರಾಗಿದ್ದಾಗ ಅಥವಾ ಯಾವುದಾದರೂ ಬಲಿಷ್ಠ ಸಂಘಟನೆಯ ಜೊತೆ ಅವರಿಗೆ ಸಂಪರ್ಕವಿದ್ದಾಗ ಮಾತ್ರ. ಅವರು ಕೇವಲ ಸ್ವತಂತ್ರ ದಿನಗೂಲಿಯವರಾಗಿದ್ದಾಗ ಅಥವಾ ಯಾವುದಾದರೂ ಅನಧಿಕೃತ ಖಾಸಗಿ ಗುತ್ತಿಗೆದಾರರ ಅನಧಿಕೃತ ನೌಕರರಾಗಿದ್ದಾಗ ಅವರ ಸಾವು ಚರ್ಚೆಗೇ ಬರುವುದಿಲ್ಲ. ಅದು ಒಬ್ಬ ಅಜ್ಞಾತ ವ್ಯಕ್ತಿಯ ಆಕಸ್ಮಿಕ, ಅಸಂಗತ ಸಾವು ಮಾತ್ರ ಆಗಿರುತ್ತದೆ. ಜನಜಾಗೃತಿ ಇಲ್ಲದಲ್ಲಿ ಸರಕಾರ ಹೇಳಿದ್ದೇ ಪರಮಸತ್ಯವಾಗಿ ಬಿಡುತ್ತದೆ - ಅದೆಷ್ಟೇ ದೊಡ್ಡ ಬುರುಡೆಯಾಗಿದ್ದರೂ ಸರಿ.
ಉತ್ತರ ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಸಾಮೂಹಿಕ ನೈರ್ಮಲ್ಯ ಕ್ಷೇತ್ರದಲ್ಲಿ ಸಕ್ರಿಯವಾಗಿರುವ ಸ್ವಯಂಸೇವಾಸಂಸ್ಥೆ ಹೀಲ್ಸ್ (HEEALS) ಪ್ರಕಾರ, ಭಾರತದಲ್ಲಿ ಶೌಚಾಲಯ ವ್ಯವಸ್ಥೆಯ ಕೊರತೆಯು ಕಳವಳಕಾರಿ ಮಟ್ಟದಲ್ಲಿದೆ. ಇಲ್ಲಿ ಮಹಿಳೆಯರ ಸಹಿತ ಸುಮಾರು 60 ಕೋಟಿ ಮಂದಿ ಪ್ರತಿದಿನ ಅನಿವಾರ್ಯವಾಗಿ ಬಯಲು ಶೌಚಕ್ಕೆ ಶರಣಾಗುತ್ತಾರೆ. ಭಾರತದಲ್ಲಿ ಜನಸಾಮಾನ್ಯರಿಗೆ ಶೌಚಾಲಯಕ್ಕಿಂತ ಸುಲಭವಾಗಿ ಮೊಬೈಲ್ ಫೋನ್ ಲಭ್ಯವಾಗುತ್ತದೆ. ಹಾನಿಕಾರಕ ಮಲಿನ ತ್ಯಾಜ್ಯಗಳ ವಿಲೇವಾರಿಗೆ ಸಮರ್ಪಕ ಏರ್ಪಾಡು ಇಲ್ಲದಿರುವುದು ಜಲ ಮತ್ತು ವಾಯು ಮಾಲಿನ್ಯಕ್ಕೆ ಮತ್ತು ಹಲವು ಬಗೆಯ ರೋಗಗಳು ಹರಡುವುದಕ್ಕೆ ಕಾರಣವಾಗುತ್ತದೆ. ಪ್ರಸ್ತುತ ಮಾಲಿನ್ಯಗಳ ನೇರ ಪರಿಣಾಮವಾಗಿ, ಭಾರತದಲ್ಲಿ ಪ್ರತಿದಿನ ಸುಮಾರು 1,600 ಮಕ್ಕಳು ಅತಿಸಾರಕ್ಕೆ ತುತ್ತಾಗಿ ಸಾವನ್ನಪ್ಪುತ್ತಾರೆ. ಪ್ರತಿವರ್ಷ ಏಡ್ಸ್, ಮಲೇರಿಯಾ ಮತ್ತು ದಡಾರಗಳಿಗೆ ಬಲಿಯಾಗುವ ಭಾರತೀಯ ಮಕ್ಕಳ ಒಟ್ಟು ಸಂಖ್ಯೆಗೆ ಹೋಲಿಸಿದರೂ ಇಲ್ಲಿ, ಅತಿಸಾರದಿಂದ ಸಾಯುವ ಮಕ್ಕಳ ಸಂಖ್ಯೆ ಅಧಿಕವಾಗಿದೆ. ಶಾಲೆಗಳಲ್ಲಿ ಶೌಚಾಲಯಗಳ ಕೊರತೆಯು ಮಕ್ಕಳು ಶಾಲೆ ಬಿಡುವುದಕ್ಕೆ ಕಾರಣವಾಗುತ್ತಿದೆ. ಹೆಣ್ಣುಮಕ್ಕಳಿಗಾಗಿರುವ ಶಾಲೆಗಳ ಪೈಕಿ ಶೇ. 66 ಶಾಲೆಗಳಲ್ಲಿ ಶೌಚಾಲಯದ ಸೌಲಭ್ಯವಿಲ್ಲ. ಶೇ. 40ಕ್ಕಿಂತ ಹೆಚ್ಚು ಹೆಣ್ಣುಮಕ್ಕಳು ಕೇವಲ ಈ ಕಾರಣಕ್ಕಾಗಿ 5ನೇ ತರಗತಿಯ ಬಳಿಕ ಶಾಲೆ ತೊರೆಯುತ್ತಿದ್ದಾರೆ.
‘ಸಫಾಯಿ ಕರ್ಮಚಾರಿ ಆಂದೋಲನ’ದ ಪ್ರಭಾವವೋ ಎಂಬಂತೆ, ಸರಕಾರವು ಒಳ ಚರಂಡಿ ಶುಚೀಕರಿಸುವ ಕಾರ್ಮಿಕರಿಗೆ ‘ಸಫಾಯಿ ಕರ್ಮಚಾರಿ’ ಎಂಬ ಗೌರವಾನ್ವಿತ ಬಿರುದನ್ನೂ ನೀಡಿದೆ. ಅವರ ಉದ್ದಾರಕ್ಕಾಗಿ 2023 ರಲ್ಲಿ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಮತ್ತು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯಗಳು ಜಂಟಿಯಾಗಿ National Action for Mechanized Sanitation Ecosystem (NAMASTE) (ಯಾಂತ್ರಿಕೃತ ನೈರ್ಮಲ್ಯ ಪರಿಸರ ವ್ಯವಸ್ಥೆಗಾಗಿ ರಾಷ್ಟ್ರೀಯ ಕ್ರಿಯೆ) ಎಂಬೊಂದು ಘನ ಯೋಜನೆಯನ್ನು ಜಾರಿಗೊಳಿಸಿದೆ. ದೇಶದ 4,800ಕ್ಕೂ ಹೆಚ್ಚಿನ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಒಳಚರಂಡಿ ಮತ್ತು ಸೆಪ್ಟಿಕ್ ಟ್ಯಾಂಕ್‌ಗಳನ್ನು ಶುಚಿಗೊಳಿಸುವ ಕೆಲಸದಲ್ಲಿ ತೊಡಗಿರುವ ನೈರ್ಮಲ್ಯ ಕಾರ್ಮಿಕರ ಸುರಕ್ಷತೆ, ಘನತೆ ಮತ್ತು ಸುಸ್ಥಿರ ಜೀವನೋಪಾಯವನ್ನು ಖಾತರಿಪಡಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ದೇಶದ 729 ಜಿಲ್ಲೆಗಳು ಮನುಷ್ಯರನ್ನು ಬಳಸಿ ಮಲಗುಂಡಿಗಳನ್ನು ಶುಚಿಗೊಳಿಸುವ ಅನಿಷ್ಟ ಪದ್ಧತಿಯಿಂದ ಮುಕ್ತವಾಗಿವೆ ಎಂದು ಸರಕಾರ ಕಳೆದ ವರ್ಷ ಘೋಷಿಸಿತ್ತು. ಸರಕಾರದ ಪ್ರಾಮಾಣಿಕತೆಯ ಇತಿಮಿತಿಗಳ ಅರಿವು ಉಳ್ಳವರು ಯಾರೂ ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ. ನೆಲಮಟ್ಟದ ಸ್ಥಿತಿಗತಿಗಳೂ ಆ ಘೋಷಣೆಯನ್ನು ದೃಢೀಕರಿಸುವುದಿಲ್ಲ.
ಸರಿ, ಹೊಂಡ, ಚರಂಡಿಗಳನ್ನು ಶುಚೀಕರಿಸುವ ಅಗತ್ಯ ಎಲ್ಲ ಕಾಲಗಳಲ್ಲೂ ಇತ್ತು. ಹಿಂದಿನ ಕಾಲಗಳಲ್ಲಿ ಅದಕ್ಕಾಗಿ ತೀರಾ ಒರಟಾದ ಕ್ರೂರ ವಿಧಾನಗಳನ್ನು ಬಳಸಲಾಗುತ್ತಿತ್ತು. ಜಗತ್ತಿನ ಹಲವೆಡೆಗಳಲ್ಲಿ ಆ ಕೆಲಸವನ್ನು ಗುಲಾಮರಿಂದ ಮಾಡಿಸಲಾಗುತ್ತಿತ್ತು. ಭಾರತದಲ್ಲಿ ಅಂಬೇಡ್ಕರ್, ಸಂವಿಧಾನ, ಪ್ರಜಾಪ್ರಭುತ್ವ ಇತ್ಯಾದಿಗಳ ಉದಯಕ್ಕೆ ಮುನ್ನ ‘ಕೆಳಜಾತಿಯವರು’ ಎಂದು ನಾವೇ ಗುರುತಿಸಿದ್ದವರನ್ನು ಈ ಕಾಯಕಕ್ಕಾಗಿ ಮೀಸಲಿಡಲಾಗಿತ್ತು. ಆ ಕೆಲಸವನ್ನು ಮಾಡುವುದೇ ನಿಮ್ಮ ಧರ್ಮ, ನಿಮ್ಮ ಕರ್ಮ ಮತ್ತು ಅದುವೇ ನಿಮ್ಮ ಮೋಕ್ಷಕ್ಕಿರುವ ಏಕಮಾತ್ರ ಮಾರ್ಗ ಎಂದು ಆ ಜಾತಿಗಳ ಜನರನ್ನು ನಂಬಿಸಲಾಗಿತ್ತು. ಆದ್ದರಿಂದಲೇ ಎಷ್ಟೇ ಕಷ್ಟವಾದರೂ ಎಷ್ಟೇ ಅಪಾಯವಿದ್ದರೂ ಆ ಜಾತಿಗಳ ಜನರು ಆ ಕೆಲಸವನ್ನು ಮಾಡುತ್ತಿದ್ದರು, ಮಾತ್ರವಲ್ಲ, ಶ್ರದ್ಧೆಯಿಂದ ಮಾಡುತ್ತಿದ್ದರು. ಮಾಡುವುದಿಲ್ಲ ಎಂದು ನಿರಾಕರಿಸುವ ಆಯ್ಕೆ ಕೂಡಾ ಅವರಿಗಿರಲಿಲ್ಲ. ಮಾಡುವುದು ಅನಿವಾರ್ಯವಾಗಿತ್ತು. ಬಲವಂತವಾಗಿ ಮಾಡಿಸಲಾಗುತ್ತಿತ್ತು. ಆದರೆ ನಮ್ಮ ಯುಗದಲ್ಲಿ ಮಲಹೊರುವುದಕ್ಕೆ ಮಾತ್ರವಲ್ಲ ಯಾವುದೇ ಬಗೆಯ ಅಪಮಾನಕಾರಿ ಅಥವಾ ಅಪಾಯಕಾರಿ ತ್ಯಾಜ್ಯ ವಿಲೇವಾರಿ ಚಟುವಟಿಕೆಗೆ ಮನುಷ್ಯರನ್ನು ಬಳಸುವುದು ಖಂಡಿತ ಅನಿವಾರ್ಯವಲ್ಲ. ನಮ್ಮ ಯುಗದಲ್ಲಿ, ಈ ಅಗತ್ಯದ ಈಡೇರಿಕೆಗೆ ಅತಿದುಬಾರಿಯೇನೂ ಅಲ್ಲದ ಹಲವು ಸವಲತ್ತುಗಳು ಮತ್ತು ಸಲಕರಣೆಗಳು ಲಭ್ಯ. ಜಗತ್ತಿನ ಹೆಚ್ಚಿನೆಲ್ಲಾ ಕಡೆ ಜನರು ತಮ್ಮ ಬೇರೆಲ್ಲ ಅಗತ್ಯಗಳನ್ನು ಈಡೇರಿಸುವುದಕ್ಕೆ ಹಳೆಯ ಕ್ರೂರ ವಿಧಾನಗಳನ್ನು ಬಿಟ್ಟು, ಆಧುನಿಕ ತಂತ್ರಜ್ಞಾನವನ್ನು, ಸರಳವಾದ ಹೊಸ ನಿರ್ಮಲ ವಿಧಾನಗಳನ್ನು ಬಳಸಿದಂತೆ, ತ್ಯಾಜ್ಯ ವಿಲೇವಾರಿಗೂ ಯಶಸ್ವಿಯಾಗಿ ಬಳಸಿದ್ದಾರೆ. ನಾವು ಮನಸ್ಸು ಮಾಡಿದರೆ ಸಾಕು. ನಾವೂ ಈ ಸಮಸ್ಯೆಯನ್ನು ಕೆಲವೇ ದಿನಗಳಲ್ಲಿ ಸಂಪೂರ್ಣವಾಗಿ ಬಗೆಹರಿಸಬಹುದು. ಆದರೆ ನಮ್ಮ ಮನಸ್ಸೆಲ್ಲಿದೆ?
ಸದ್ಯ ನಮ್ಮ ಮನಸ್ಸು ಧರ್ಮ, ಅಧ್ಯಾತ್ಮ, ಪರಮಾರ್ಥ, ಕ್ರಿಕೆಟ್, ಸಿನೆಮಾ, ರಾಜಕೀಯ ಇತ್ಯಾದಿಗಳ ಕುರಿತಾದ ಚರ್ಚೆ, ಚಿಂತನೆ, ಘರ್ಷಣೆಗಳಲ್ಲಿ ಮಗ್ನವಾಗಿದೆ. ಇದೀಗ ನಾವು ಅಸ್ತಿತ್ವ, ನೈರ್ಮಲ್ಯ ಮತ್ತು ಮಾನವೀಯ ಘನತೆಗೆ ಸಂಬಂಧಿಸಿದ ಶೌಚ, ಶೌಚಾಲಯ, ಮಾಲಿನ್ಯ, ಮಾರಕ ತ್ಯಾಜ್ಯಗಳ ವಿಲೇವಾರಿ, ಒಳಚರಂಡಿ ವ್ಯವಸ್ಥೆ ಇತ್ಯಾದಿ ವಿಷಯಗಳ ಕುರಿತು ಚರ್ಚಿಸುವುದಕ್ಕೂ ಸ್ವಲ್ಪ ಪುರುಸೊತ್ತು ಮಾಡಿಕೊಳ್ಳಬೇಕು. ಆಹಾರದಷ್ಟೇ ಮೂಲಭೂತ ಹಾಗೂ ಪ್ರಾಥಮಿಕ ಸ್ವರೂಪದ ಶೌಚಾಲಯದಂತಹ ಸವಲತ್ತು ನಮ್ಮ ಸಮಾಜದಲ್ಲಿ ಶ್ರೀಮಂತರಿಗೆ ಸೀಮಿತವಾಗಿ ಉಳಿಯಬಾರದು. ಆ ಸವಲತ್ತು ಪ್ರತಿಯೊಬ್ಬ ನಾಗರಿಕನ ಹಕ್ಕು. ಪ್ರತಿಯೊಬ್ಬನಿಗೆ ಅದನ್ನು ಒದಗಿಸುವುದು ಸಮಾಜ ಮತ್ತು ಸರಕಾರದ ಕರ್ತವ್ಯ. ಈ ಪ್ರಜ್ಞೆ ನಮ್ಮ ಸಮಾಜದಲ್ಲಿ ಸಾಮೂಹಿಕವಾಗಿ, ವ್ಯಾಪಕವಾಗಿ, ಬಲವಾಗಿ ಬೆಳೆಯಬೇಕು. ಹೊಲಸು ತ್ಯಾಜ್ಯವನ್ನು ಸ್ವತಃ ನಮ್ಮ ತಲೆಮೇಲೆ ಹೊತ್ತು ನಡೆಯುವುದು ನಮ್ಮ ಘನತೆಗೆ ಎಷ್ಟು ದೊಡ್ಡ ಕಳಂಕವೋ, ನಾವು ಅದೇ ಕೆಲಸವನ್ನು ನಮ್ಮಂತಹ ಇತರ ಮಾನವರಿಂದ ಮಾಡಿಸುವುದು ಕೂಡಾ ಅಷ್ಟೇ ದೊಡ್ಡ ಸಾಮೂಹಿಕ ಕಳಂಕ. ವಿಶೇಷವಾಗಿ ಪರ್ಯಾಯ ವ್ಯವಸ್ಥೆಯು ನಮ್ಮ ಕೈ ಎಟುಕಿನಲ್ಲಿರುವಾಗ, ಆ ಪರ್ಯಾಯಗಳನ್ನೆಲ್ಲ ದೂರವಿಟ್ಟು ಮಾನವ ಜೀವಕ್ಕೆ ಮತ್ತು ಮಾನವ ಘನತೆಗೆ ಘಾತಕವಾದ ವಿಧಾನಗಳನ್ನೇ ಅವಲಂಬಿಸಿಕೊಂಡಿರುತ್ತೇವೆ ಎಂಬ ನಮ್ಮ ಅಸ್ವಸ್ಥ ಸಂಕಲ್ಪ ಖಂಡಿತ ಲಜ್ಜಾರ್ಹ.
ಈ ಹಿನ್ನೆಲೆಯಲ್ಲಿ ವ್ಯವಸ್ಥೆಯ ಪ್ರಭುವಾಗಿರುವ ಪ್ರತಿಯೊಬ್ಬ ನಾಗರಿಕನಿಗೆ ಶುದ್ಧ ಶೌಚಾಲಯವನ್ನು ಲಭ್ಯಗೊಳಿಸುವಂತೆ, ಎಲ್ಲ ಬಗೆಯ ತ್ಯಾಜ್ಯಗಳ ನಿರ್ವಹಣೆಗೆ ಸೂಕ್ತ ಏರ್ಪಾಡು ಮಾಡುವಂತೆ, ಅದಕ್ಕೆ ಬೇಕಾದ ಸಮರ್ಥ ಯೋಜನೆ ರೂಪಿಸಿ, ಪರ್ಯಾಪ್ತ ಬಜೆಟ್ ಮಂಜೂರು ಮಾಡಿ, ದಕ್ಷವಾಗಿ ಯೋಜನೆಯನ್ನು ಅನುಷ್ಠಾನಿಸುವಂತೆ ಸರಕಾರವನ್ನು ನಿರ್ಬಂಧಿಸುವುದು ನಾಗರಿಕರ ಕರ್ತವ್ಯ. ಜನಹಿತ ಬಯಸುವ ಎಲ್ಲರೂ ತುರ್ತಾಗಿ ದೊಡ್ಡ ಪ್ರಮಾಣದ ಸಾಮೂಹಿಕ ಆಂದೋಲನ ರೂಪಿಸಬೇಕಾದ ವಿಷಯ ಇದು.







