ಬೀಫ್‌ನಲ್ಲಿ ಪೂಜಾರ್ಹ, ಭೋಜನಾರ್ಹ, ರಫ್ತಾರ್ಹ...ಹೀಗೆ ಸಾವಿರ ವಿಧಗಳು

ಭಾಗ - 2
ಮಾಹಿತಿಗಾಗಿ, ಆಳುವವರ ಬೂಟಿನಡಿಯಲ್ಲೇ ಅವಿತಿರುವ ಮಡಿಲ ಮಾಧ್ಯಮಗಳನ್ನು ಜನರು ಅವಲಂಬಿಸಿದ್ದ ಕಾಲವೊಂದಿತ್ತು. ಆಗ ಅವರಿಗೆ ಗೋಶೋಷಕರ ಮೋಸ ಅರ್ಥವಾಗುತ್ತಿರಲಿಲ್ಲ. ಗೋಶೋಷಕರು ಅವರನ್ನು ಸುಲಭವಾಗಿ ಮೋಡಿ ಮಾಡಿಬಿಡುತ್ತಿದ್ದರು. ಇದೀಗ ಸಾಮಾಜಿಕ ಮಾಧ್ಯಮಗಳ ಕಾಲದಲ್ಲಿ ಕಟುಕರಿಗಿಂತ ಕ್ರೂರವಾದ ಗೋಶೋಷಕರ ಒಂದೊಂದೇ ಮೋಸದಾಟ ಜನರ ಮುಂದೆ ಬಯಲಾಗತೊಡಗಿದೆ. ಅವರು ಗೋಶೋಷಕರೊಡನೆ ಕೆಲವು ಕಹಿ ಪ್ರಶ್ನೆಗಳನ್ನು ಕೇಳತೊಡಗಿದ್ದಾರೆ. ಹಲವು ವೇದಿಕೆಗಳಲ್ಲಿ ಮಾರ್ದನಿಸಿದ ಅವರ ತೀಕ್ಷ್ಣ ಪ್ರಶ್ನೆಗಳು ಗೋಶೋಷಕರನ್ನು ತೀವ್ರ ಮುಜುಗರಕ್ಕೆ ಸಿಲುಕಿಸಿ ಬಿಟ್ಟಿವೆ. ಈ ಸನ್ನಿವೇಶದಿಂದ ಜಾರಿಕೊಳ್ಳಲು ಗೋಶೋಷಕರು ಮುಂದಿಟ್ಟ ಹಲವು ಬಗೆಯ ಹಾಸ್ಯಾಸ್ಪದ ಸಬೂಬುಗಳು ಅವರನ್ನು ನಗೆಪಾಟಲಿಗೆ ತುತ್ತಾಗಿಸಿವೆ.
‘‘ಗೋವು ನಮ್ಮ ತಾಯಿ, ಗೋವು ನಮ್ಮ ದೇವರು, ಗೋವಿನ ರಕ್ಷಣೆ ಎಲ್ಲರ ಕರ್ತವ್ಯ, ಗೋಮಾಂಸ ಮಾರುವವರು, ತಿನ್ನುವವರೆಲ್ಲ ದೇಶದ್ರೋಹಿಗಳು, ಸಮಾಜ ವಿರೋಧಿಗಳು. ನಾವು ಗೋರಕ್ಷಕರು. ನಾವು ಗೋಹತ್ಯೆಯನ್ನು ತಡೆಯುತ್ತೇವೆ. ಯಾವ ಮಟ್ಟದ ನರಹತ್ಯೆ ನಡೆಸಬೇಕಾಗಿ ಬಂದರೂ ಗೋಹತ್ಯೆ ತಡೆಯುತ್ತೇವೆ’’ ಇವೆಲ್ಲಾ ಉತ್ತರಪ್ರದೇಶ, ಬಿಹಾರ, ಮಧ್ಯಪ್ರದೇಶ, ಗುಜರಾತ್, ಕರ್ನಾಟಕ ಮುಂತಾದೆಡೆ ಹಲವಾರು ಸಂಘಟಿತ ಗೋಶೋಷಕ ದಂಡುಗಳ ಘೋಷಿತ ಧೋರಣೆ. ನಮ್ಮ ಕರ್ನಾಟಕ ಸಹಿತ ಹಲವು ರಾಜ್ಯಗಳಲ್ಲಿ ಗೋಮಾತೆಯನ್ನು ರಕ್ಷಿಸುವ ಹೆಸರಲ್ಲಿ ಅನೇಕ ಕಠಿಣ ಕಾನೂನುಗಳನ್ನು ಜಾರಿಗೊಳಿಸಲಾಗಿದೆ. ಗೋರಕ್ಷಣೆಯ ಹೆಸರಲ್ಲಿ ಇಲ್ಲಿ ಹಲವು ಮಾನವ ಜೀವಗಳನ್ನೂ ಆಹುತಿ ಪಡೆಯಲಾಗಿದೆ. ಆದರೆ ಕರ್ನಾಟಕದ ಪಕ್ಕದಲ್ಲೇ ಇರುವ ಕೇರಳದಲ್ಲಿ ಅಥವಾ ಗೋವಾ ಎಂಬ ಇನ್ನೊಂದು ನೆರೆರಾಜ್ಯದಲ್ಲಿ ಅಥವಾ ತಮಿಳುನಾಡು ಎಂಬ ಮತ್ತೊಂದು ರಾಜ್ಯದಲ್ಲಿ ಮಾತ್ರವಲ್ಲ ಈಶಾನ್ಯ ಭಾರತದ ಹೆಚ್ಚಿನೆಲ್ಲಾ ರಾಜ್ಯಗಳಲ್ಲಿ ಗೋವಿನ ಕುರಿತಂತೆ ಧರ್ಮರಕ್ಷಕರ ಧೋರಣೆ ತೀರಾ ಭಿನ್ನ ಮಾತ್ರವಲ್ಲ, ತದ್ವಿರುದ್ಧವಾಗಿರುತ್ತದೆ. ಅಲ್ಲಿ ಬೀಫ್ ಹೆಸರಲ್ಲಿ ಯಾರದೇ ಭಾವನೆಗಳು ಕೆರಳುವುದಿಲ್ಲ. ಬಹಿರಂಗವಾಗಿ ಬೀಫ್ ಮಾರುವ ಅಂಗಡಿಗಳಿಂದ, ಬೀಫ್ ಬಿರ್ಯಾನಿ ಮಾರುವ ಹೋಟೆಲುಗಳಿಂದ ಯಾರದೇ ಸಂವೇದನಾಶೀಲತೆ ಪ್ರಭಾವಿತವಾಗುವುದಿಲ್ಲ. ಅಲ್ಲೆಲ್ಲಾ ಇಡ್ಲಿ ಸಾಂಬಾರ್ ಅಥವಾ ಖಾರಾಬಾತ್‌ನಷ್ಟೇ ಸುಲಭವಾಗಿ, ಮುಕ್ತವಾಗಿ ಮತ್ತು ಸಾರ್ವಜನಿಕವಾಗಿ ಎಲ್ಲೆಂದರಲ್ಲಿ ಬೀಫ್ ಕರಿ, ಬೀಫ್ ಸುಕ್ಕಾ, ಬೀಫ್ ಫ್ರೈ, ಬೀಫ್ ಖೀಮಾ ಇತ್ಯಾದಿಗಳೆಲ್ಲಾ ಸಿಗುತ್ತವೆ. ಅಲ್ಲಿ ಗೋಮಾತೆ, ಗೋಮಾಂಸ, ಗೋರಕ್ಷಣೆ ಇತ್ಯಾದಿ ಯಾವುದೂ ಚುನಾವಣಾ ವಿಷಯವಲ್ಲ. ಭಕ್ತಿಯ ಅಥವಾ ಭಾವಾವೇಶದ ವಿಷಯವೂ ಅಲ್ಲ. ಅಲ್ಲೆಲ್ಲ ಅದು ಜನರ ಆಹಾರಾಭ್ಯಾಸ ಮತ್ತು ಸ್ಥಳೀಯ ಸಂಸ್ಕೃತಿಗೆ ಸಂಬಂಧಿಸಿದ ವಿಷಯವಾಗಿರುತ್ತದೆ.
ಭೋಜನಾರ್ಹ ಬೀಫ್
ನಿರ್ಲಜ್ಜವಾಗಿ ಪದೇಪದೇ ಬಣ್ಣ ಬದಲಾಯಿಸುವ ಈ ಗೋಶೋಷಕರ ಪ್ರತಿಭೆಯನ್ನು ಕಂಡವರು ಯಾರಾದರೂ ದಂಗಾಗಲೇ ಬೇಕು. 2015 ಮೇ ತಿಂಗಳಲ್ಲಿ ಒಂದು ದಿನ ಅಮಿತ್ ಶಾ ಸೂರತ್‌ನಲ್ಲಿ ಬಿಜೆಪಿ ತಾನು ಅಧಿಕಾರದಲ್ಲಿರುವ ಎಲ್ಲ ಕಡೆಗಳಲ್ಲೂ ಬೀಫ್ ಅನ್ನು ಕಟ್ಟು ನಿಟ್ಟಾಗಿ ನಿಷೇಧಿಸಿದೆ ಎಂದು ಗರ್ಜಿಸಿದರು. ಆಗ ಅವರು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿದ್ದರು. ಮರುದಿನ ಅವರು ಗೋವಾದ ಪಣಜಿಯಲ್ಲಿದ್ದರು. ಅಲ್ಲಿ ಅವರೊಡನೆ ಮಾಧ್ಯಮದವರು ಈ ಕುರಿತು ಪ್ರಶ್ನಿಸಿದಾಗ ಅವರ ವರಸೆ ಬೇರೆಯೇ ಇತ್ತು. ‘‘ಗೋವಾದಲ್ಲಿ ಬೀಫ್ ವಿಷಯದಲ್ಲಿ ಏನು ಮಾಡಬೇಕೆಂದು ನಿರ್ಧರಿಸುವುದು ಗೋವಾ ರಾಜ್ಯದಲ್ಲಿರುವ ಸರಕಾರಕ್ಕೆ ಬಿಟ್ಟ ವಿಷಯ. ನಿಷೇಧಿಸಬೇಕೋ ಬೇಡವೋ ಎಂಬುದನ್ನು ಗೋವಾದ ರಾಜ್ಯ ಸರಕಾರವು ಇಲ್ಲಿನ ಜನತೆಯೊಡನೆ ಸಮಾಲೋಚಿಸಿ ನಿರ್ಧರಿಸಲಿದೆ’’ ಎಂದು ಅವರು ಜಾರಿಕೊಂಡರು. 2017 ಜುಲೈ ತಿಂಗಳಲ್ಲಿ ಮತ್ತೆ ಅವರು ಎರಡು ದಿನಗಳ ಗೋವಾ ಪ್ರವಾಸದಲ್ಲಿದ್ದರು. ಆ ವೇಳೆ ಬೀಫ್ ವಿಷಯ ಚರ್ಚೆಗೆ ಬಂದಾಗ ಅವರು ‘‘ಗೋವಾದಲ್ಲಿ ಬೀಫ್ ಮೇಲೆ ನಿಷೇಧ ಹೇರುವ ಯಾವುದೇ ಇರಾದೆ ಬಿಜೆಪಿಗೆ ಇಲ್ಲ’’ ಎಂದು ಘೋಷಿಸಿದ್ದರು. ಗೋವಾದಲ್ಲಿ ಗೋಮಾಂಸದ ವಿರುದ್ಧ ಮಾತನಾಡಿದರೆ ವೋಟು ನಷ್ಟವಾಗುತ್ತದೆಂಬ ಒಂದೇ ಲೆಕ್ಕಾಚಾರದ ಆಧಾರದಲ್ಲಿ ಅವರು ಗೋವನ್ನು ಕೈಬಿಟ್ಟು ವೋಟಿಗೆ ಪ್ರಾಶಸ್ತ್ಯ ನೀಡಿದರು. ವೋಟಿಗಾಗಿ ಗೋವನ್ನು ಅನಾಥಗೊಳಿಸುವ ಅವರ ಪಕ್ಷದ ಈ ಧೋರಣೆ ಹಲವು ಇತರ ರಾಜ್ಯಗಳಲ್ಲೂ ಸ್ಪಷ್ಟವಾಗಿ ಪ್ರಕಟವಾಗಿದೆ. ಹೀಗೆ, ಎಲ್ಲಿ ಗೋವನ್ನು ಹಿಂಡಿದರೆ ವೋಟು ಸಿಗುತ್ತದೆಂದು ಖಚಿತವಾಗಿರುತ್ತದೋ ಅಲ್ಲಿ ಮಾತ್ರ ಇವರ ದೃಷ್ಟಿಯಲ್ಲಿ ಗೋವು ಪವಿತ್ರವಾಗಿರುತ್ತದೆ. ಇತರೆಲ್ಲ ಕಡೆ ಅದೊಂದು ಅನಗತ್ಯ ಹೊರೆಯಾಗಿರುತ್ತದೆ ಎಂಬುದು ಹಲವೆಡೆ ಹಲವಾರು ಬಾರಿ ಸಾಬೀತಾಗಿದೆ.
2017ರಲ್ಲಿ ಕೇರಳದಲ್ಲಿ ಉಪ ಚುನಾವಣೆಗಳು ನಡೆಯುತ್ತಿದ್ದಾಗ, ಅಲ್ಲಿಯ ಒಬ್ಬ ಹಿರಿಯ ಬಿಜೆಪಿ ನಾಯಕ ಮತ್ತು ಮಲಪ್ಪುರಂ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಶ್ರೀ ಪ್ರಕಾಶ್ ಅವರು, ‘‘ನನಗೆ ವೋಟು ಕೊಡಿ. ನಾನು ನಿಮಗೆಲ್ಲಾ ಒಳ್ಳೆಯ ಗುಣಮಟ್ಟದ ಬೀಫ್ ಲಭ್ಯವಾಗುವಂತೆ ನೋಡಿಕೊಳ್ಳುತ್ತೇನೆ, ಅದಕ್ಕಾಗಿ ಅತ್ಯುತ್ತಮ ಮಟ್ಟದ ಕಸಾಯಿಖಾನೆಗಳನ್ನು ತೆರೆಸುತ್ತೇನೆ’’ ಎಂದು ಜನರಿಗೆ ಭರವಸೆ ನೀಡುವ ವೀಡಿಯೊ ತುಂಬಾ ವೈರಲ್ ಆಗಿತ್ತು. ಅವರು ಈ ಹೇಳಿಕೆಯನ್ನು ಅಧಿಕೃತ ಪ್ರೆಸ್ ಮೀಟ್‌ನಲ್ಲೇ ನೀಡಿದ್ದರಿಂದ ಎಐ ಮೇಲೆ ಗೂಬೆ ಕೂರಿಸಿ ನುಣುಚಿಕೊಳ್ಳುವುದಕ್ಕೆ ಅವಕಾಶವಿರಲಿಲ್ಲ. ದೇಶದ ಇತರ ಭಾಗಗಳಲ್ಲಿ ಬಿಜೆಪಿ ಪಕ್ಷ ಮತ್ತು ಸರಕಾರಗಳು ಬೀಫ್ ಬಗ್ಗೆ ತಳೆದಿರುವ ತದ್ವಿರುದ್ಧ ನಿಲುವಿನ ಕುರಿತು ಪತ್ರಕರ್ತರು ಪ್ರಶ್ನಿಸಿದಾಗ ಅವರು, ‘‘ಗೋಹತ್ಯೆಗೆ ಕೆಲವೆಡೆ ನಿಷೇಧ ಇರುವುದು ನಿಜ. ನಿಜವಾಗಿ ಹಲವು ಕಡೆ ಕಾಂಗ್ರೆಸ್ ಸರಕಾರಗಳೇ ಗೋಹತ್ಯೆಯ ಮೇಲೆ ನಿಷೇಧ ಹೇರಿವೆ. ಒಳ್ಳೆಯ ಬೀಫ್ ಬಳಸುವುದನ್ನು ನಮ್ಮ ಪಕ್ಷ ವಿರೋಧಿಸುವುದಿಲ್ಲ’’ ಎಂದೆಲ್ಲಾ ವಿವರಣೆ ನೀಡಿದ್ದರು.
2021 ಜುಲೈ ತಿಂಗಳಲ್ಲಿ, ಮೇಘಾಲಯದ ಜಂಟಿ ಸರಕಾರದಲ್ಲಿ ಸಚಿವರಾಗಿದ್ದ ಬಿಜೆಪಿ ನಾಯಕ ಸಾಂಬೋರ್ ಶುಲ್ಲಾಯ್ ಅವರು ‘‘ಮೀನು, ಚಿಕನ್ ಅಥವಾ ಮಟನ್‌ಗಿಂತ ಹೆಚ್ಚಾಗಿ ಬೀಫ್ ತಿನ್ನಿ’’ ಎಂದು ಜನರಿಗೆ ಕರೆನೀಡಿದ್ದರು. ‘‘ಇತರ ಮಾಂಸಾಹಾರಿ ಆಹಾರಗಳಿಗಿಂತ ಹೆಚ್ಚಾಗಿ ಬೀಫ್ ತಿನ್ನುವಂತೆ ನಾನು ಜನರನ್ನು ಪ್ರೋತ್ಸಾಹಿಸುತ್ತಿದ್ದೇನೆ. ಬಿಜೆಪಿಯು ಗೋಹತ್ಯೆಯನ್ನು ನಿಷೇಧಿಸ ಬಯಸುತ್ತದೆ ಎಂಬ ತಪ್ಪು ತಿಳುವಳಿಕೆಯನ್ನು ನಾನು ಈ ಮೂಲಕ ನಿವಾರಿಸಬಯುಸುತ್ತೇನೆ’’ ಎಂದು ಅವರು ಸ್ಪಷ್ಟೀಕರಿಸಿದ್ದರು. ‘‘ನಾನು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಜೊತೆ ಮಾತುಕತೆ ನಡೆಸಿ, ಅಸ್ಸಾಮಿನಿಂದ ಮೇಘಾಲಯಕ್ಕೆ ಜಾನುವಾರುಗಳ ಸಾಗಾಟಕ್ಕೆ ಯಾವುದೇ ರೀತಿಯ ಅಡೆತಡೆ ಉಂಟಾಗದಂತೆ ನೋಡಿಕೊಳ್ಳಬೇಕೆಂದು ಮನವಿ ಮಾಡುತ್ತೇನೆ’’ ಎಂದೂ ಅವರು ಹೇಳಿದ್ದರು. 2023 ಫೆಬ್ರವರಿಯಲ್ಲಿ ಮೇಘಾಲಯದಲ್ಲಿ ಚುನಾವಣೆಗಳು ನಡೆಯುತ್ತಿದ್ದಾಗ ಬಿಜೆಪಿಯ ಮೇಘಾಲಯ ರಾಜ್ಯ ಘಟಕದ ಅಧ್ಯಕ್ಷ ಅರ್ನೆಸ್ಟ್ ಮಾವ್ರೀ ‘‘ನಾನು ಬೀಫ್ ತಿನ್ನುತ್ತೇನೆ, ಅದು ಇಲ್ಲಿಯ ಜೀವನ ಶೈಲಿ. ಅದನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ’’ ಎಂದು ಸಾರ್ವಜನಿಕ ಹೇಳಿಕೆ ನೀಡಿದ್ದು ರಾಷ್ಟ್ರೀಯ ಮಾಧ್ಯಮದಲ್ಲಿ ಚರ್ಚೆಗೊಳಗಾಗಿತ್ತು.
ಮಾಹಿತಿಗಾಗಿ, ಆಳುವವರ ಬೂಟಿನಡಿಯಲ್ಲೇ ಅವಿತಿರುವ ಮಡಿಲ ಮಾಧ್ಯಮಗಳನ್ನು ಜನರು ಅವಲಂಬಿಸಿದ್ದ ಕಾಲವೊಂದಿತ್ತು. ಆಗ ಅವರಿಗೆ ಗೋಶೋಷಕರ ಮೋಸ ಅರ್ಥವಾಗುತ್ತಿರಲಿಲ್ಲ. ಗೋಶೋಷಕರು ಅವರನ್ನು ಸುಲಭವಾಗಿ ಮೋಡಿ ಮಾಡಿಬಿಡುತ್ತಿದ್ದರು. ಇದೀಗ ಸಾಮಾಜಿಕ ಮಾಧ್ಯಮಗಳ ಕಾಲದಲ್ಲಿ ಕಟುಕರಿಗಿಂತ ಕ್ರೂರವಾದ ಗೋಶೋಷಕರ ಒಂದೊಂದೇ ಮೋಸದಾಟ ಜನರ ಮುಂದೆ ಬಯಲಾಗತೊಡಗಿದೆ. ಅವರು ಗೋಶೋಷಕರೊಡನೆ ಕೆಲವು ಕಹಿ ಪ್ರಶ್ನೆಗಳನ್ನು ಕೇಳತೊಡಗಿದ್ದಾರೆ. ಹಲವು ವೇದಿಕೆಗಳಲ್ಲಿ ಮಾರ್ದನಿಸಿದ ಅವರ ತೀಕ್ಷ್ಣ ಪ್ರಶ್ನೆಗಳು ಗೋಶೋಷಕರನ್ನು ತೀವ್ರ ಮುಜುಗರಕ್ಕೆ ಸಿಲುಕಿಸಿ ಬಿಟ್ಟಿವೆ. ಈ ಸನ್ನಿವೇಶದಿಂದ ಜಾರಿಕೊಳ್ಳಲು ಗೋಶೋಷಕರು ಮುಂದಿಟ್ಟ ಹಲವು ಬಗೆಯ ಹಾಸ್ಯಾಸ್ಪದ ಸಬೂಬುಗಳು ಅವರನ್ನು ನಗೆಪಾಟಲಿಗೆ ತುತ್ತಾಗಿಸಿವೆ.
ರಫ್ತಾರ್ಹ ಬೀಫ್
ಜಗತ್ತಿನಲ್ಲೇ ಅತ್ಯಧಿಕ ಬೀಫ್ ರಫ್ತು ಮಾಡುವ ಮೂರು ದೇಶಗಳ ಪೈಕಿ ಒಂದು ನಮ್ಮ ಭಾರತ. ವರ್ಷ 2024-25ರಲ್ಲಿ ಭಾರತವು 125 ಕೋಟಿ ಕಿಲೋ ಬೀಫ್ ರಫ್ತು ಮಾಡಿದೆ - ಅಂದರೆ, ಒಂದು ವರ್ಷದಲ್ಲಿ ಒಬ್ಬೊಬ್ಬ ಭಾರತೀಯನ ಪರವಾಗಿ ಸುಮಾರು ಒಂದು ಕಿಲೋ ಬೀಫ್ ರಫ್ತು ಮಾಡಿದೆ! ಈ ರಫ್ತು ಉದ್ಯಮದ ಮೂಲಕ ದೇಶವು 34,000 ಕೋಟಿ ರೂಪಾಯಿಗಳಷ್ಟು ವಿದೇಶ ವಿನಿಮಯವನ್ನು ಸಂಪಾದಿಸಿದೆ. ನಿಜವಾಗಿ ಭಾರತವು ಪ್ರತಿವರ್ಷ ರಫ್ತು ಮಾಡುವ ಒಟ್ಟು ಪಶು ಉತ್ಪನ್ನಗಳ ಪೈಕಿ ಇತರ ಉತ್ಪನ್ನಗಳು ಕೇವಲ ಶೇ. 20ರಷ್ಟಿದ್ದರೆ, ಬೀಫ್ ಪಾಲು ಸುಮಾರು ಶೇ. 80ರಷ್ಟಿದೆ.
‘‘ಬೀಫ್ ಬಳಕೆಯ ವಿರುದ್ಧ ಹಿಂಸಾತ್ಮಕ ಹೋರಾಟ ನಡೆಸುವ ನಿಮ್ಮ ಪಕ್ಷದ ಸರಕಾರವು ಅಷ್ಟು ದೊಡ್ಡ ಪ್ರಮಾಣದಲ್ಲಿ ಬೀಫ್ ರಫ್ತು ಮಾಡುವುದೇಕೆ?’’ ಎಂದು ಜನರು ಹಲವೆಡೆ ಗೋಶೋಷಕ ನಾಯಕರನ್ನು ಪ್ರಶ್ನಿಸಿದ್ದಾರೆ. ಆಗ ಅವರು ‘‘ನಾವು ರಫ್ತು ಮಾಡುವುದು ‘ಕಾರಾಭೀಫ್’ ಅಂದರೆ ಕೋಣದ ಮಾಂಸವನ್ನು - ಅದು ಗೋಮಾಂಸವಲ್ಲ, ಅದನ್ನು ಬೀಫ್ ಎಂದು ಕರೆಯುವ ಬದಲು ಬಫ್ ಎಂದು ಕರೆಯಬೇಕು’’ ಎಂದೆಲ್ಲಾ ಹೇಳಿ ಜಾರಿಕೊಳ್ಳಲು ಪ್ರಯತ್ನಿಸಿದ್ದಾರೆ. ತಮ್ಮ ಎಲ್ಲ ಅಪರಾಧಗಳನ್ನು ಸಮರ್ಥಿಸಲು ಧರ್ಮದ ಆಶ್ರಯ ಪಡೆಯುವ ಈ ಮಂದಿ ಇಲ್ಲೂ ಧರ್ಮವನ್ನು ಎಳೆದು ತಂದು, ‘‘ಕೋಣ ಯಮನ ವಾಹನ. ಅದು ಮಹಿಷಾಸುರನ ಸಂಕೇತ. ಕೋಣನನ್ನು ಕೊಂದ ದುರ್ಗಾ ಮಾತೆಯನ್ನು ನಾವು ‘ಮಹಿಷ ಮರ್ದಿನಿ’ (ಕೋಣವನ್ನು ಕೊಂದವಳು) ಎಂದು ಹೊಗಳುತ್ತೇವೆ’’ ಎಂಬ ತರ್ಕ ಮಂಡಿಸುವ ಮೂಲಕ, ಕೋಣವನ್ನು ಕೊಲ್ಲುವುದು ಪುಣ್ಯಕಾರ್ಯ ಎಂಬ ಅಭಿಪ್ರಾಯ ಮೂಡಿಸುತ್ತಾರೆ. ‘‘ಹಾಗಾದರೆ ದೇಶದೊಳಗೆ ‘ಮಹಿಷ ಮರ್ದನ’ ಎಂಬೊಂದು ಹೊಸ ಉದ್ದಿಮೆಯನ್ನು ಆರಂಭಿಸಿ ಕೋಣ ಅಥವಾ ಎಮ್ಮೆಗಳ ಮಾಂಸವನ್ನು ಮಾರುವುದಕ್ಕೆ, ಸಾಗಿಸುವುದಕ್ಕೆ ಅಥವಾ ತಿನ್ನುವುದಕ್ಕೆ ನಿಮ್ಮ ಆಕ್ಷೇಪ ಇಲ್ಲ ತಾನೇ?’’ ಎಂದು ಪ್ರಶ್ನಿಸಿದರೆ ವೇದಿಕೆ ಬಿಟ್ಟು ಓಡುತ್ತಾರೆ.
ಅದೇ ರೀತಿ, ಹಲವು ಕಡೆ ಜನರು ಗೋಶೋಷಕರೊಡನೆ ‘‘ಈಶಾನ್ಯ ಭಾರತದಲ್ಲಿ ನೀವೆಲ್ಲೂ ಗೋರಕ್ಷಣಾ ಆಂದೋಲನವನ್ನು ಯಾಕೆ ನಡೆಸುವುದಿಲ್ಲ? ಅಲ್ಲಿ ನಿಮ್ಮದೇ ಸರಕಾರ ಇರುವ ರಾಜ್ಯಗಳಲ್ಲೂ ಗೋಮಾಂಸ ಧಾರಾಳವಾಗಿ ಲಭ್ಯವಿದೆಯಲ್ಲಾ? ಬೇರೆ ಕಡೆ ಪೂಜಾರ್ಹವಾಗುವ ಗೋವು, ಗೋವಾ, ಮಣಿಪುರ, ಮೇಘಾಲಯ, ಮಿಜೋರಂ, ನಾಗಾಲ್ಯಾಂಡ್ ಮುಂತಾದ ರಾಜ್ಯಗಳಲ್ಲಿ ಭಕ್ಷ್ಯಾರ್ಹವಾಗಿ ಮತ್ತು ಭೋಜನಾರ್ಹವಾಗಿ ಬಿಡುವುದು ಹೇಗೆ?’’ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಬಿಜೆಪಿ ವಕ್ತಾರ ಸುಧಾಂಶು ತ್ರಿವೇದಿ ಥರದವರು ಒಮ್ಮೆ ‘‘ಅವರು ತಿನ್ನುವುದು ಗೋಮಾಂಸ ಅಲ್ಲ. ಅದು ಮಿಥುನ ಮಾಂಸ’’ ಎಂದುತ್ತರಿಸಿದರೆ, ಇನ್ನೊಮ್ಮೆ ‘‘ನೋಡಿ, ಪೂಜಾರ್ಹವಾಗಿರುವುದು ಭಾರತೀಯ ತಳಿಯ ಗೋವು ಮಾತ್ರ. ಅದಕ್ಕೆ ಬಾಸ್ ಇಂಡಿಕಸ್ ಅನ್ನುತ್ತಾರೆ. ಅವರು ತಿನ್ನುವ ಗೋವಿನ ತಳಿಯೇ ಬೇರೆ. ಅದಕ್ಕೆ ಬಾಸ್ ಟೌರಸ್ ಅನ್ನುತ್ತಾರೆ’’ ಎಂದು ಸಮಜಾಯಿಷಿ ನೀಡುತ್ತಾರೆ. ಅವರ ಈ ತರ್ಕ ಪ್ರಕಾರ, ಭಾರತದ ಎಲ್ಲ ಕಡೆ ಪೂಜಾರ್ಹ ಗೋವನ್ನು ಅದರ ಪಾಡಿಗೆ ಬಿಟ್ಟು ಮಿಥುನ್, ಬಾಸ್ ಟೌರಸ್, ಎಮ್ಮೆ, ಕೋಣ ಇತ್ಯಾದಿಗಳ ಉದ್ದಿಮೆ ನಡೆಸುವುದಕ್ಕೆ ಮುಕ್ತ ಅವಕಾಶ ನೀಡಬಹುದು. ಕೆಲವು ಕಡೆ ಭೋಜನಾರ್ಹ ಮತ್ತು ರಫ್ತಿಗೂ ಅರ್ಹ ಎಂದು ಸಾರಲಾಗಿರುವ ವಾದ ಬೀಫ್ ಅನ್ನು ದೇಶದ ಇತರೆಲ್ಲೆಡೆಯೂ ಭಕ್ಷ್ಯಾರ್ಹವೆಂದು ಸಾರಬಹುದು. ಅದಕ್ಕೆ ಯಾರೂ ಆಕ್ಷೇಪ ಪ್ರಕಟಿಸುವಂತಿಲ್ಲ. ಅದರಿಂದ ಯಾರದೇ ಧಾರ್ಮಿಕ ಭಾವನೆಗಳು ಘಾಸಿಗೊಳ್ಳುವ ಸಾಧ್ಯತೆ ಇಲ್ಲ. ಹೀಗೆ ಗೋವಿನ ಪಾವಿತ್ರ್ಯವೂ ಉಳಿಯುತ್ತದೆ. ಅಗ್ಗದ ಮಾಂಸ ಬೇಕೆನ್ನುವ ಬೀಫ್ ಪ್ರಿಯರ ಅಗತ್ಯವೂ ಈಡೇರಿದಂತಾಗುತ್ತದೆ. ಮಾಂಸ ಮತ್ತು ಚರ್ಮದ ಉದ್ಯಮ ಉದ್ಧಾರವಾಗುತ್ತದೆ. ಲಕ್ಷಾಂತರ ಮಂದಿಯ ಪಾಲಿಗೆ ವ್ಯಾಪಾರ ಮತ್ತು ಉದ್ಯಮದ ಬಾಗಿಲು ತೆರೆಯುತ್ತದೆ. ಹಾಗೆ ಮಾಡಿದರೆ ದೇಶದೆಲ್ಲೆಡೆ ಸಾವಿರಾರು ಮಂದಿಗೆ ಉದ್ಯಮದ ಅವಕಾಶ ಲಭ್ಯವಾದರೆ ಲಕ್ಷಾಂತರ ಮಂದಿಗೆ ಉದ್ಯೋಗಾವಕಾಶ ಸಿಗುತ್ತದೆ. ನಿರುಪಯುಕ್ತ ಜಾನುವಾರುಗಳನ್ನು ಮಾರುವುದಕ್ಕೆ ಅವಕಾಶ ಇರಬೇಕೆಂಬ, ರೈತರ ಬಹುಕಾಲೀನ ಬೇಡಿಕೆ ಈಡೇರುತ್ತದೆ. ಆದರೆ ಗೋವಿನ ಪಾವಿತ್ರ್ಯದ ಹೆಸರಲ್ಲಿ ಸಮಾಜವನ್ನು ವಿಂಗಡಿಸಿ, ಹಿಂಸೆ ಪ್ರಚೋದಿಸಿ, ವೋಟುಗಳಿಸುವವರು ಮಾತ್ರ ಅಧಿಕಾರವಿಲ್ಲದೆ ನಿರುದ್ಯೋಗಿಗಳಾಗಿರಬೇಕಾಗುತ್ತದೆ.
ಚರ್ಮೋದ್ಯಮ
ಭಾರತದಲ್ಲಿ ತೊಗಲು ಅಥವಾ ಚರ್ಮದ ಉದ್ಯಮಕ್ಕೆ ಮಹತ್ವದ ಪಾತ್ರವಿದೆ. 40 ಲಕ್ಷಕ್ಕೂ ಅಧಿಕ ಮಂದಿಯ ಬದುಕು ಈ ಉದ್ಯಮವನ್ನು ಅವಲಂಬಿಸಿದೆ. ಈ ರಂಗದಲ್ಲಿ ಪ್ರತಿವರ್ಷ ಸುಮಾರು 1,800 ಕೋಟಿ ರೂಪಾಯಿಗಳ ವ್ಯವಹಾರ ನಡೆಯುತ್ತದೆ. ದೇಶದ ಒಳಗೆ ಚಪ್ಪಲಿ, ಬೂಟು, ಕೋಟು, ಬ್ಯಾಗು, ಬೆಲ್ಟು ಇತ್ಯಾದಿಗಳ ರೂಪದಲ್ಲಿ ದೊಡ್ಡ ಪ್ರಮಾಣದಲ್ಲಿ ಚರ್ಮೋತ್ಪನ್ನಗಳನ್ನು ಬಳಸಲಾಗುತ್ತದೆ. ಜೊತೆಗೆ ರಫ್ತು ಮಾರುಕಟ್ಟೆಯಲ್ಲಿ ಭಾರತದ ಚರ್ಮೋತ್ಪನ್ನಗಳಿಗೆ ಸಾಕಷ್ಟು ಬೇಡಿಕೆ ಇದೆ. ಚರ್ಮದ ಉಡುಗೆಗಳನ್ನು ರಫ್ತು ಮಾಡುವುದರಲ್ಲಿ ಚೀನಾ ಮೊದಲ ಸ್ಥಾನದಲ್ಲಿದ್ದರೆ ಭಾರತವು ಎರಡನೆಯ ಸ್ಥಾನದಲ್ಲಿದೆ. ಒಟ್ಟು ಚರ್ಮ ಉತ್ಪನ್ನಗಳ ರಫ್ತಿನಲ್ಲಿ ಭಾರತವು ಜಗತ್ತಿನಲ್ಲೇ ನಾಲ್ಕನೇ ಸ್ಥಾನದಲ್ಲಿದೆ. ಗೋರಕ್ಷಣೆಯ ಹೆಸರಲ್ಲಿ ಕಾನೂನುಗಳನ್ನು ಮಾಡಿ ಜಾನುವಾರು ವ್ಯವಹಾರದ ಮೇಲೆ ಹೇರಲಾಗಿರುವ ಅಸಾಮಾನ್ಯ ನಿರ್ಬಂಧಗಳಿಂದಾಗಿ ಈ ರಂಗವು ತೀವ್ರ ಹಿನ್ನಡೆಯನ್ನು ಅನುಭವಿಸುತ್ತಿದೆ.
ಅಲೆಮಾರಿ ಜಾನುವಾರುಗಳ ಸಂಕಟ
ನಮ್ಮ ಅಕ್ಕಪಕ್ಕದಲ್ಲಿ ಅದೆಷ್ಟೋ ಅಂಧಭಕ್ತರು ಅಥವಾ ಭಕ್ತರಂತೆ ನಟಿಸುವ ಪ್ರತಿಭಾವಂತರು, ದನದ ಬಗ್ಗೆ ತಮಗೆ ಭಾರೀ ಭಕ್ತಿ - ಆದರ ಇತ್ಯಾದಿ ಇದೆ ಎಂಬಂತೆ ತೋರಿಸಿಕೊಳ್ಳುತ್ತಾರೆ. ಆದರೆ ಅವರ ಭಕ್ತಿ - ಆದರಗಳೆಲ್ಲಾ ಕೇವಲ ವೇದಿಕೆಗಳಿಗೆ, ಹೇಳಿಕೆಗಳಿಗೆ ಮತ್ತು ಧ್ರುವೀಕರಣ ಕೇಂದ್ರಿತ ರಾಜಕೀಯ ಲೆಕ್ಕಾಚಾರಗಳಿಗೆ ಮಾತ್ರ ಸೀಮಿತವಾಗಿರುತ್ತವೆ. ಎಲ್ಲಿ ಕಾಣಿಸಬೇಕಿತ್ತೂ ಅಲ್ಲೆಲ್ಲೂ ಕಾಣಿಸುವುದಿಲ್ಲ. ಭಾರತದ ಬೀದಿಗಳಲ್ಲಿ, ಪೇಟೆಗಳಲ್ಲಿ ಮತ್ತು ಹೊರಗೆ ಎಲ್ಲೆಂದರಲ್ಲಿ ಕಾಣಿಸುವುದು ಅನಾಥ, ಅಸಹಾಯಕ, ಹಸಿವು ಪೀಡಿತ, ಜರ್ಜರಿತ, ರೋಗಪೀಡಿತ, ಮುಗ್ಧ ಅಲೆಮಾರಿ ದನಗಳ ಹಿಂಡುಗಳು ಮಾತ್ರ. ಭಾರತದ ಎಲ್ಲ ಭಾಗಗಳಲ್ಲಿ ಅಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಮತ್ತು ಅಷ್ಟೊಂದು ಅನಾಥ ಹಾಗೂ ಅಸಹಾಯಕ ಸ್ಥಿತಿಯಲ್ಲಿ ಅಲೆದಾಡುತ್ತಿರುವ ದನಗಳ ಹಿಂಡುಗಳನ್ನು ನೋಡಿದರೆ, ನಾವೆಲ್ಲಿದ್ದೇವೆ? ಗೋರಕ್ಷಕರೆಲ್ಲಿದ್ದಾರೆ? ಗೋಭಕ್ತರೆಲ್ಲಿದ್ದಾರೆ? ಎಂಬಿತ್ಯಾದಿ ಸಂಶಯಗಳು ಮೂಡುತ್ತವೆ. ಲಕ್ಷಾಂತರ ಮಂದಿ ಬಹಳ ಅಭಿಮಾನದಿಂದ ತಾವು ಗೋರಕ್ಷಕರೆಂದು ಹೇಳಿಕೊಳ್ಳುವ, ಆಕ್ರಮಣಕಾರಿ, ಸಶಸ್ತ್ರ ಗೋರಕ್ಷಕರ ಸಂಘಟಿತ ಪಡೆಗಳು ಗಲ್ಲಿ ಗಲ್ಲಿಗಳಲ್ಲಿ ಮೆರೆದಾಡುವ, ಪ್ರಾಣ ಕೊಟ್ಟಾದರೂ ಗೋವುಗಳನ್ನು ರಕ್ಷಿಸುತ್ತೇವೆಂದು ದೀಕ್ಷೆ ತೊಡುವ ಲಕ್ಷಾಂತರ ಭಾವುಕ ಗೋಭಕ್ತರಿರುವ, ಗೋರಕ್ಷಣೆಯ ಹೆಸರಲ್ಲಿನ ಮಾನವಹತ್ಯೆ ನಡೆಸಿ, ಆ ಹೆಸರಲ್ಲೇ ಚುನಾವಣೆ ಗೆದ್ದು ಸರಕಾರ ರಚಿಸುವ ಜಾಣರಿರುವ ಸಮಾಜ ಇದು. ಗೋವಿನ ಮಲಮೂತ್ರಗಳನ್ನು ವೈಭವೀಕರಿಸುವ ಪರಮ ಭಕ್ತರ ಬೃಹತ್ ಪಕ್ಷ, ಪರಿವಾರ, ಸರಕಾರ ಇತ್ಯಾದಿಗಳೆಲ್ಲಾ ಇರುವ ಸಮಾಜ ಇದು ಎಂದೆಲ್ಲಾ ನಂಬಲಿಕ್ಕಾಗುತ್ತದೆಯೇ?
2012ರಲ್ಲಿ ನಡೆದ 19ನೇ ಜಾನುವಾರು ಗಣತಿಯ ಪ್ರಕಾರ ದೇಶದಲ್ಲಿ 53 ಲಕ್ಷ ಅಲೆಮಾರಿ ದನ ಮತ್ತು ಹೋರಿಗಳಿದ್ದವು. ಆನಂತರದ ಸಮೀಕ್ಷೆಗಳ ಪ್ರಕಾರವೂ ಅಲೆಮಾರಿ ಜಾನುವಾರುಗಳ ಸಂಖ್ಯೆ 50 ಲಕ್ಷಕ್ಕಿಂತ ಅಧಿಕವೇ ಇದೆ. ಇವೆಲ್ಲಾ ಸ್ವಾತಂತ್ರ್ಯ ಹುಡುಕುತ್ತಾ ಅಥವಾ ವಿಹಾರಕ್ಕಾಗಿ ಅಥವಾ ಸಮಾಜದ ಯೋಗಕ್ಷೇಮ ವಿಚಾರಿಸಲಿಕ್ಕಾಗಿ ಬೀದಿಗಿಳಿದ ಜಾನುವಾರುಗಳಲ್ಲ. ನಿರಪಯುಕ್ತ ಎಂಬ ಕಾರಣಕ್ಕಾಗಿ ಬೀದಿಗೆ ಎಸೆಯಲ್ಪಟ್ಟ ಅಥವಾ ಬೀದಿಯಲ್ಲೇ ಜನ್ಮತಾಳಿದ ಜಾನುವಾರುಗಳು. ಪ್ರತಿದಿನ ಅವು ಸ್ವತಃ ತೀವ್ರ ಸ್ವರೂಪದ ಅಪಾಯಗಳನ್ನು ಎದುರಿಸುತ್ತಿರುತ್ತವೆ, ಸಮಾಜದ ಪಾಲಿಗೂ ಹಲವು ಬಗೆಯ ದುರಂತ ಮತ್ತು ನಾಶನಷ್ಟಗಳನ್ನು ತಂದೊಡ್ಡುತ್ತವೆ. ಅವು ನಗರ ಪ್ರದೇಶಗಳಲ್ಲಿ ಅನಗತ್ಯ ಟ್ರಾಫಿಕ್ ಜಾಮ್ ಗಳಿಗೆ, ಹಲವಾರು ಭೀಕರ ಅಪಘಾತಗಳಿಗೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಮಾಲಿನ್ಯ ವೃದ್ಧಿಗೆ ಕಾರಣವಾಗುತ್ತವೆ. ರೋಗಗ್ರಸ್ತ ಅಲೆಮಾರಿ ಜಾನುವಾರುಗಳು ಸಮಾಜದ ಆರೋಗ್ಯಕ್ಕೂ ಹಾನಿಕಾರಿಯಾಗಿರುತ್ತವೆ. ಅಲೆಮಾರಿ ಜಾನುವಾರುಗಳು ಆಹಾರ ಹುಡುಕುತ್ತಾ ಕಂಡಕಂಡವರ ಹೊಲ, ತೋಟಗಳಿಗೆ ನುಗ್ಗಿ ಬೆಳೆಗಳಿಗೆ ವ್ಯಾಪಕ ನಾಶನಷ್ಟ ಉಂಟು ಮಾಡುವ ಪ್ರಕರಣಗಳು ದೇಶದ ವಿವಿಧ ಭಾಗಗಳಿಂದ ವರದಿಯಾಗುತ್ತಲೇ ಇರುತ್ತವೆ. ಸಂತ್ರಸ್ತ ರೈತರು ಈ ಕುರಿತು ಪದೇ ಪದೇ ಪುಢಾರಿಗಳು ಹಾಗೂ ಅಧಿಕಾರಿಗಳಿಗೆ ದೂರು ಸಲ್ಲಿಸುತ್ತಿರುತ್ತಾರೆ. ‘‘ನಿಮ್ಮ ಹೊಲ ಹಾಗೂ ತೋಟಗಳ ಸುತ್ತ ಭದ್ರ ಗೋಡೆಗಳನ್ನು ಅಥವಾ ತಂತಿ ಬೇಲಿಗಳನ್ನು ಕಟ್ಟಿಕೊಳ್ಳಿ’’ ಎಂಬ ಉಚಿತ ಸಲಹೆ ಮಾತ್ರ ಅವರಿಗೆ ಸಿಗುತ್ತದೆ. ಆದರೆ ಅದಕ್ಕೆಲ್ಲಾ ಬೇಕಾದ ಆರ್ಥಿಕ ಸಾಮರ್ಥ್ಯ ಅವರ ಬಳಿ ಇರುವುದಿಲ್ಲ. ಸಾಮಾನ್ಯ ವ್ಯವಸಾಯ ಮತ್ತು ತೋಟಗಾರಿಕೆಯು ಈ ವೆಚ್ಚವನ್ನು ಭರಿಸಲು ಬೇಕಾಗುವಷ್ಟು ಲಾಭದಾಯಕವೂ ಆಗಿರುವುದಿಲ್ಲ. ಆದ್ದರಿಂದ ಅದೆಷ್ಟೋ ಕಡೆ ರೈತರು ಮತ್ತು ಕೃಷಿಕರು ತಮ್ಮದೇ ಆದ ಕಾವಲು ತಂಡಗಳನ್ನು ರಚಿಸಿಕೊಂಡು, ತಮ್ಮ ಹೊಲ, ತೋಟಗಳ ಸುತ್ತ ಮುತ್ತ ರಾತ್ರಿ-ಹಗಲು ಕಾವಲು ಕಾಯಬೇಕಾದ ಅನಿವಾರ್ಯತೆ ತಲೆದೋರಿದೆ. ಅಲೆಮಾರಿ ಜಾನುವಾರುಗಳು ನಾಗರಿಕರ ಮೇಲೆ, ವಿಶೇಷವಾಗಿ ಸಣ್ಣ ಮಕ್ಕಳ ಮೇಲೆ ದಾಳಿ ನಡೆಸಿ ಜೀವಹಾನಿಗೆ ಕಾರಣವಾಗುವ ದುರ್ಘಟನೆಗಳೂ ನಮ್ಮಲ್ಲಿ ನಡೆಯುತ್ತಲೇ ಇರುತ್ತವೆ. ದೇಶದ ಹೆಚ್ಚಿನ ಕಡೆಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಲಗಾಮಿಲ್ಲದೆ ತಿರುಗಾಡುವ ಅಲೆಮಾರಿ ಜಾನುವಾರುಗಳು ರಸ್ತೆ, ರೈಲು ಮಾರ್ಗ ಮತ್ತು ಸಂಚಾರ ವ್ಯವಸ್ಥೆಗೆ ಭಾರೀ ದೊಡ್ಡ ಸವಾಲಾಗಿ ಪರಿಣಮಿಸಿವೆ.
ಅಲೆಮಾರಿ ಜಾನುವಾರುಗಳಿಂದಾಗಿ ಸಮಾಜಕ್ಕೆ ಆಗುತ್ತಿರುವ ನಷ್ಟಗಳ ಕುರಿತು ಕಳೆದ ವರ್ಷ ಮಧ್ಯಪ್ರದೇಶ ವಿಧಾನ ಸಭೆಯಲ್ಲಿ ಒಂದು ಚರ್ಚೆ ನಡೆಯಿತು. ಈ ವೇಳೆ ಪ್ರಶ್ನೆಯೊಂದಕ್ಕೆ ಉತ್ತರವಾಗಿ ಪಶುಸಂಗೋಪನಾ ಸಚಿವ ಡಾಕ್ಟರ್ ಮೋಹನ್ ಯಾದವ್, ರಾಜ್ಯದಲ್ಲಿ ಕಳೆದ ಒಂದು ವರ್ಷದ ಅವಧಿಯಲ್ಲಿ ಅಲೆಮಾರಿ ಜಾನುವಾರುಗಳನ್ನು ಒಳಗೊಂಡ 237 ರಸ್ತೆ ಅಪಘಾತ ಪ್ರಕರಣಗಳು ಸಂಭವಿಸಿದ್ದು ಪ್ರಸ್ತುತ ಅಪಘಾತಗಳಲ್ಲಿ 94 ಮಾನವ ಜೀವಗಳು ಬಲಿಯಾಗಿವೆ ಮತ್ತು 133 ಮಂದಿ ಗಂಭೀರ ಗಾಯಗೊಂಡಿದ್ದಾರೆ ಎಂಬ ಆಘಾತಕಾರಿ ಮಾಹಿತಿ ಒದಗಿಸಿದರು. ಇದು ಕೇವಲ ಮಧ್ಯಪ್ರದೇಶಕ್ಕೆ ಸೀಮಿತವಾಗಿರುವ ಸಮಸ್ಯೆಯಲ್ಲ. 2022ರಲ್ಲಿ ಹರ್ಯಾಣ ವಿಧಾನಸಭೆಯಲ್ಲಿ, ಅಲ್ಲಿನ ರಾಜ್ಯ ಪಶುಸಂಗೋಪನಾ ಇಲಾಖೆಯ ಸಚಿವ ಜೆ.ಪಿ. ದಲಾಲ್ ಅವರು ತಿಳಿಸಿದ ಪ್ರಕಾರ 2017ರಿಂದ 2022 ವರೆಗಿನ 5 ವರ್ಷಗಳ ಅವಧಿಯಲ್ಲಿ ಹರ್ಯಾಣದಲ್ಲಿ ಅಲೆಮಾರಿ ಜಾನುವಾರುಗಳನ್ನು ಒಳಗೊಂಡ 3,383 ರಸ್ತೆ ಅಪಘಾತಗಳು ಸಂಭವಿಸಿದ್ದು ಅವುಗಳಲ್ಲಿ 900ಕ್ಕೂ ಹೆಚ್ಚು ಮಂದಿ ಹತರಾಗಿದ್ದಾರೆ. 2019ರ ಒಂದು ಅಧ್ಯಯನದ ವರದಿ ಪ್ರಕಾರ ಭಾರತದಲ್ಲಿ ನಡೆಯುವ ರಸ್ತೆ ಅಪಘಾತಗಳ ಪೈಕಿ ಶೇ. 5 ಅಪಘಾತಗಳಿಗೆ, ರಸ್ತೆಯಲ್ಲಿ ದಿಕ್ಕಿಲ್ಲದೆ ಅಡ್ಡಾಡುವ ಅಲೆಮಾರಿ ಜಾನುವಾರುಗಳೇ ಕಾರಣವಾಗಿರುತ್ತವೆ.
ಅಲೆಮಾರಿ ಜಾನುವಾರುಗಳು ಆಹಾರ ಹುಡುಕುತ್ತಾ ರೈಲ್ವೆ ಹಳಿಗಳಲ್ಲಿ ಅಲೆಯುತ್ತಿರುವುದರಿಂದ, ರೈಲುಗಳ ಸಂಚಾರಕ್ಕೆ ತಡೆಯುಂಟಾಗಿ ವಿಳಂಬ ಸಂಭವಿಸುವುದು ಸಾಮಾನ್ಯವಾಗಿದೆ. ಪ್ರಸ್ತುತ ಜಾನುವಾರುಗಳು ರೈಲ್ವೆ ಪ್ರಯಾಣಿಕರ ಸುರಕ್ಷತೆಗೂ ದೊಡ್ಡ ಸವಾಲಾಗಿವೆ. ಅಧಿಕೃತ ಮಾಹಿತಿ ಪ್ರಕಾರ ವರ್ಷ 2020-21ರಲ್ಲಿ ಭಾರತದಲ್ಲಿ ಚಲಿಸುವ ರೈಲುಗಳು, ಹಳಿಗಳಲ್ಲಿ ಅಲೆಯುವ ಜಾನುವಾರುಗಳಿಗೆ ಢಿಕ್ಕಿ ಹೊಡೆದ 19,949 ದುರ್ಘಟನೆಗಳು ನಡೆದಿವೆ. ಮುಂದಿನ ವರ್ಷ, 2021-22 ರಲ್ಲಿ ಇಂತಹ ಘಟನೆಗಳ ಸಂಖ್ಯೆ ಮತ್ತಷ್ಟು ಹೆಚ್ಚಿದ್ದು 26,142 ದುರ್ಘಟನೆಗಳು ವರದಿಯಾಗಿವೆ.
ವಿಮಾನಗಳನ್ನು ಹುಡುಕಿ ಹೋಗುವ ಗೋವುಗಳು
ಇದು ನಮ್ಮ ರಸ್ತೆ ಮತ್ತು ರೈಲು ಹಳಿಗಳ ಕಥೆಯಾಯಿತು. ಅತ್ಯಧಿಕ ಭದ್ರತಾ ವ್ಯವಸ್ಥೆ ಇರುವ ನಮ್ಮ ವಿಮಾನ ನಿಲ್ದಾಣಗಳಾದರೂ ಅಲೆಮಾರಿ ಜಾನುವಾರುಗಳ ಕಿರುಕುಳದಿಂದ ಮುಕ್ತವಾಗಿವೆಯೇ? 2017 ಡಿಸೆಂಬರ್‌ನಲ್ಲಿ ನಾಗರಿಕ ವಾಯುಯಾನ ಸಚಿವ ಜಯಂತ್ ಸಿಂಹ ಅವರು ಲೋಕಸಭೆಯಲ್ಲಿ ತಿಳಿಸಿದ ಪ್ರಕಾರ, ಆ ವರ್ಷ ಭಾರತ ವಿವಿಧ ವಿಮಾನ ನಿಲ್ದಾಣಗಳ ಒಳಗೆ ರನ್‌ವೇಯಲ್ಲಿ ಅಲೆಮಾರಿ ಜಾನುವಾರುಗಳು ಕಂಡು ಬಂದ 81 ಪ್ರಕರಣಗಳು ವರದಿಯಾಗಿದ್ದವು. 2018 ಜನವರಿಯಲ್ಲಿ ‘ಇತ್ತಿಹಾದ್ ಏರ್ ವೇಸ್’ನ ಒಂದು ವಿಮಾನವು ಅಬುಧಾಬಿಯಿಂದ ಬಂದು ಅಹ್ಮದಾಬಾದ್‌ನ ಸರ್ದಾರ್ ವಲ್ಲಭಭಾಯ್ ಪಟೇಲ್ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಿತ್ತು. ಇಳಿಯುವುದಕ್ಕೆ ಇನ್ನೇನು ಕೆಲವೇ ನಿಮಿಷಗಳಿದ್ದಾಗ, ಪೈಲಟ್ ಗೆ ವಿಮಾನ ನಿಲ್ದಾಣದಲ್ಲಿ ದನಗಳು ಅಲೆದಾಡುವುದು ಕಾಣಿಸಿತು. ಆತ ಅಲ್ಲಿ ವಿಮಾನ ಇಳಿಸಲು ಒಪ್ಪದೆ ಅದನ್ನು ನೇರವಾಗಿ ಮುಂಬೈಗೆ ಒಯ್ದು ಅಲ್ಲಿ ಇಳಿಸಿದ್ದ. ಅದೇ ದಿನ ಸರ್ದಾರ್ ಪಟೇಲ್ ವಿಮಾನ ನಿಲ್ದಾಣದಲ್ಲಿ ಒಂದು ಗೂಡ್ಸ್ ವಿಮಾನಕ್ಕೂ ಇದೇ ಸಮಸ್ಯೆ ಎದುರಾಗಿತ್ತು. ಇದು ಜಗತ್ತಿನೆಲ್ಲೆಡೆ ವಾಯುಯಾನ ವಲಯಗಳಲ್ಲಿ ಭಾರತದ ವಿಮಾನ ನಿಲ್ದಾಣಗಳ ಸುರಕ್ಷತಾ ಮಟ್ಟದ ಬಗ್ಗೆ ಸಂಶಯಗಳನ್ನು ಮೂಡಿಸಿತ್ತು. ನಾಗರಿಕ ವಿಮಾನಯಾನದ ನಿರ್ದೇಶನಾಲಯವು (ಡಿಜಿಸಿಎ) ಒದಗಿಸಿದ ದತ್ತಾಂಶ ಪ್ರಕಾರ 2021ರಲ್ಲಿ ಭಾರತದ ವಿಮಾನ ನಿಲ್ದಾಣಗಳ ಒಳಗೆ ಅಲೆಮಾರಿ ಜಾನುವಾರುಗಳು ವಿಮಾನಗಳ ಚಲನೆಗೆ ತಡೆ ಒಡ್ಡಿದ ಹಲವು ಘಟನೆಗಳು ನಡೆದಿದ್ದು 29 ಪ್ರಕರಣಗಳಲ್ಲಿ ವಿಮಾನಗಳು ಇಂತಹ ಪ್ರಾಣಿಗಳಿಗೆ ಢಿಕ್ಕಿ ಹೊಡೆದಿವೆ. 2023ರ ಕೊನೆಯಲ್ಲಿ ಟಿಎಂಸಿ ಸಂಸದ ಸಂತಾನು ಸೇನ್ ಅವರ ಪ್ರಶ್ನೆಯೊಂದಕ್ಕೆ ಉತ್ತರವಾಗಿ ಆಗಿನ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜನರಲ್ ವಿ.ಕೆ. ಸಿಂಗ್ ಅವರು ರಾಜ್ಯಸಭೆಗೆ ನೀಡಿದ ಮಾಹಿತಿಯು ಇನ್ನಷ್ಟು ಆಘಾತಕಾರಿಯಾಗಿದೆ. ಅವರ ಪ್ರಕಾರ 2019ರಲ್ಲಿ ಭಾರತದ ವಿವಿಧ ವಿಮಾನ ನಿಲ್ದಾಣಗಳಲ್ಲಿ ಜಾನುವಾರುಗಳು ಮತ್ತು ವಿಮಾನಗಳ ನಡುವೆ ಢಿಕ್ಕಿ ಸಂಭವಿಸಿದ 535 ಪ್ರಕರಣಗಳು ವರದಿಯಾಗಿವೆ.
ಗೋಪೋಷಕರ ಅಸಹಾಯಕತೆ ಮತ್ತು ಗೋಶೋಷಕರ ಕ್ರೌರ್ಯ
ಸಾಮಾನ್ಯವಾಗಿ ಹಾಲು ಕೊಡುವ ಹಸುಗಳು 8 ಅಥವಾ 9 ವರ್ಷದ ಬಳಿಕ (ಕೆಲವು ತಳಿಗಳು 14 ವರ್ಷಗಳ ಬಳಿಕ) ಹಾಲು ಕೊಡುವ ಸ್ಥಿತಿಯಲ್ಲಿರುವುದಿಲ್ಲ. ಅವು ತಮ್ಮ ಉತ್ಪಾದಕ ಸ್ವರೂಪವನ್ನು ಕಳೆದುಕೊಂಡು ರೈತನ ಪಾಲಿಗೆ ಹೊರೆಯಾಗಿ ಪರಿಣಮಿಸುತ್ತವೆ. ಇಂತಹ ಒಂದೊಂದು ನಿರುಪಯುಕ್ತ ಹಸುವನ್ನು ಸಾಕುವುದಕ್ಕೆ ರೈತರು ಪ್ರತೀ ತಿಂಗಳು ಹಲವು ಸಾವಿರ ರೂಪಾಯಿ ಖರ್ಚುಮಾಡಬೇಕಾಗುತ್ತದೆ. ಗೋರಕ್ಷಣೆಯ ಕಠಿಣ ಕಾನೂನುಗಳು ಬರುವ ಮುನ್ನ ರೈತರು ಇಂತಹ ಹಸುಗಳನ್ನು ಮಾರಿ ಕೆಲವು ಸಾವಿರ ರೂಪಾಯಿಗಳನ್ನು ಸಂಪಾದಿಸುತ್ತಿದ್ದರು. ರಾಷ್ಟ್ರೀಯ ಹೈನುಗಾರಿಕೆ ಅಭಿವೃದ್ಧಿ ನಿಗಮವು ನಡೆಸಿದ ಒಂದು ಅಧ್ಯಯನದಿಂದ ತಿಳಿದು ಬಂದ ಪ್ರಕಾರ, ಹೈನುಗಾರಿಕೆಯನ್ನು ಅವಲಂಬಿಸಿರುವ ಒಬ್ಬ ಸರಾಸರಿ ರೈತನಿಗೆ ಸಿಗುವ ವಾರ್ಷಿಕ ಲಾಭದ ಶೇ. 47 ಭಾಗವು, ನಿರುಪಯುಕ್ತ ಪ್ರಾಣಿಗಳನ್ನು ಮಾರುವುದರಿಂದ ಬರುತ್ತದೆ. ಗೋರಕ್ಷಣೆಗೆ ಸಂಬಂಧಿಸಿದ ಕಾನೂನುಗಳು ಕಠಿಣವಾಗುತ್ತಾ ಹೋದಂತೆ ಹಾಗೂ ಗೋರಕ್ಷಣೆಯ ಹೆಸರಲ್ಲಿ ಬೀದಿಗಿಳಿಯುವ ಕಿಡಿಗೇಡಿ ಪುಂಡರ ದಂಡುಗಳ ಪ್ರಾಬಲ್ಯ ಹೆಚ್ಚಿದಂತೆ, ರೈತರು, ಕೃಷಿಕರು ಮತ್ತು ಗೋಪೋಷಕರ ಪಾಲಿಗೆ, ತಮ್ಮ ಬಳಿ ಇರುವ ಅನುಪಯುಕ್ತ ಜಾನುವಾರುಗಳನ್ನು ಯಾರಿಗಾದರೂ ಮಾರಿ ಮುಕ್ತಿ ಪಡೆಯುವ ಮತ್ತು ಅದರ ಜೊತೆ ಸ್ವಲ್ಪ ಆದಾಯಗಳಿಸುವ ಅವಕಾಶಗಳು ಕಡಿಮೆಯಾಗುತ್ತಾ ಹೋಗುತ್ತವೆ. ಹೀಗೆ, ಮುಸಲ್ಮಾನರಿಗೆ ಬುದ್ಧಿ ಕಲಿಸುವ ಹೆಸರಲ್ಲಿ ರೂಪಿಸಲಾದ ಗೋರಕ್ಷಾ ಕಾನೂನುಗಳು ರೈತ ಸಮುದಾಯದ ಕೈಯಿಂದ ಅವರ ಆದಾಯದ ಅವಕಾಶಗಳನ್ನು ಕಸಿದುಕೊಳ್ಳುತ್ತಿವೆ.
ಕೆಲವು ವರ್ಷಗಳ ಹಿಂದೆ ‘ಭೂಮಿ ಅಧಿಕಾರ್ ಆಂದೋಲನ್’ ಎಂಬ ಹಲವಾರು ರೈತ ಸಂಘಗಳ ರಾಷ್ಟ್ರೀಯ ಒಕ್ಕೂಟವು ಹರ್ಯಾಣ ಮತ್ತು ರಾಜಸ್ಥಾನಗಳಲ್ಲಿ ಗೋರಕ್ಷಣೆಯ ಹೆಸರಲ್ಲಿ ನಡೆಸಲಾದ ಗುಂಪು ಹತ್ಯೆಗಳ ಕುರಿತಂತೆ ಒಂದು ತನಿಖೆ ನಡೆಸಿ ‘ಡಿವೈಡ್ ಆಂಡ್ ರೂಲ್ - ಇನ್ ಡಿ ನೇಮ್ ಆಫ್ ದಿ ಕೌ’ ಎಂಬ ಒಂದು ವರದಿಯನ್ನು ಪ್ರಕಟಿಸಿತ್ತು. ಅದರಲ್ಲಿ, ಧರ್ಮರಕ್ಷಕ ಮುಖವಾಡ ಧರಿಸಿದವರು ಕೇವಲ ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಸಮಾಜವನ್ನು ವಿಂಗಡಿಸುತ್ತಿದ್ದಾರೆ. ಅವರು ಗೋವಿನ ಹೆಸರಲ್ಲಿ ನಡೆಸುತ್ತಿರುವ ಕಿಡಿಗೇಡಿ ರಾಜಕೀಯವು ದೇಶದ ಗ್ರಾಮೀಣ ಆರ್ಥಿಕತೆಯನ್ನು ಹಾಳುಗೆಡವುತ್ತಿದೆ ಮತ್ತು ರೈತರ ಜೀವನವನ್ನು ದುಸ್ತರ ಗೊಳಿಸಿದೆ ಎಂದು ವಿಮರ್ಶಿಸಲಾಗಿತ್ತು.
ರೈತರು ಮತ್ತು ಕೃಷಿಕರಿಗೆ, ಅವರು ತಮ್ಮ ಜಾನುವಾರುಗಳನ್ನು ಯಾವ ಮಟ್ಟಿಗೆ ಮತ್ತು ಯಾವ ರೀತಿ ಪ್ರೀತಿಸಬೇಕು ಎಂದು ಯಾರೂ ಪಾಠಕೇಳಬೇಕಾಗಿಲ್ಲ. ನಗರವಾಸಿ ಫುಡಾರಿಗಳು ಮತ್ತವರ ಚೇಲಾಗಳಿಗಂತೂ ಅವರಿಗೆ ಪಾಠ ಹೇಳುವ ನೈತಿಕ ಹಕ್ಕು ಕೂಡಾ ಇಲ್ಲ. ಹಾಲು ಕೊಡದ ಮತ್ತು ಕೃಷಿ ಅಥವಾ ವ್ಯವಸಾಯಕ್ಕೆ ಯೋಗ್ಯವಲ್ಲದ ದನ, ಹೋರಿ, ಎಮ್ಮೆ, ಎತ್ತು ಇತ್ಯಾದಿಗಳನ್ನು ಸಾಕುವುದು ತುಂಬಾ ದುಬಾರಿ ಕೆಲಸ. ಅಷ್ಟು ದುಬಾರಿ ವೆಚ್ಚ ಭರಿಸುವ ಸಾಮರ್ಥ್ಯ ಅವರಲ್ಲಿರುವುದಿಲ್ಲ. ಆದ್ದರಿಂದ, ಅಂತಹ ಜಾನುವಾರುಗಳನ್ನು ಅವರು ಮಾಂಸ ಅಥವಾ ಚರ್ಮದ ವ್ಯಾಪಾರಿಗಳಿಗೆ ಮಾರುವುದು, ಆಮೂಲಕ ನಿರುಪಯುಕ್ತ ಜಾನುವಾರುಗಳನ್ನು ಸಾಕುವ ಹೊರೆಯಿಂದ ಮುಕ್ತರಾಗುವುದು ಮತ್ತು ತುಸು ಆದಾಯ ಗಳಿಸುವುದು - ಇದು ಎಲ್ಲ ವ್ಯವಸಾಯ ಪ್ರಧಾನ ಸಮಾಜಗಳಲ್ಲಿ ಶತಮಾನಗಳಿಂದ ನಡೆದು ಬಂದಿರುವ ಸಾಂಪ್ರದಾಯಿಕ ವ್ಯವಸ್ಥೆ. ಗೋವನ್ನು ಓಟಿಗಾಗಿ ಬಳಸಲು ಹೊರಟ ಧರ್ಮೋದ್ಯಮಿಗಳು, ಗೋವು ಸಹಿತ ಎಲ್ಲ ಜಾನುವಾರುಗಳ ಮಾರಾಟ, ಖರೀದಿ ಮತ್ತು ಸಾಗಾಟದ ಮೇಲೆ ನಿರ್ಬಂಧಗಳನ್ನು ಹೇರುವ ಮೂಲಕ ಈ ಸಂಪ್ರದಾಯವನ್ನು ಹಂತಹಂತವಾಗಿ ಕೊನೆಗೊಳಿಸಿ ಬಿಟ್ಟರು. ನಿರ್ಬಂಧದ ಈ ಚಟುವಟಿಕೆ ಆರಂಭದಲ್ಲಿ ಸಣ್ಣ ಪ್ರಮಾಣದಲ್ಲಿ ನಡೆಯಿತು. ಸಮಾಜದಲ್ಲಿ ಧರ್ಮೋನ್ಮಾದ ಸೃಷ್ಟಿಸಿ, ಜನರನ್ನು ವಿಂಗಡಿಸಿ, ರಾಜಕೀಯ ಲಾಭ ಗಳಿಸುವುದಕ್ಕೆ ಗೋವು ಒಂದು ಪರಿಣಾಮಕಾರಿ ಭಾವನಾತ್ಮಕ ಅಸ್ತ್ರ ಎಂಬುದು ಮನವರಿಕೆಯಾದಂತೆ ಧರ್ಮೋದ್ಯಮಿಗಳು ಈ ಚಟುವಟಿಕೆಯನ್ನು ದೊಡ್ಡ ಪ್ರಮಾಣದಲ್ಲಿ ಮತ್ತು ಹೆಚ್ಚು ವ್ಯವಸ್ಥಿತವಾಗಿ ನಡೆಸತೊಡಗಿದರು. ಕಿಡಿಗೇಡಿಗಳನ್ನು ಬೀದಿಗಿಳಿಸಿ ಜಾನುವಾರುಗಳ ಮಾರಾಟ, ಸಾಗಾಟ ಇತ್ಯಾದಿ ಸಹಜ, ಸಾಂಪ್ರದಾಯಿಕ ಚಟುವಟಿಕೆಗಳ ವಿರುದ್ಧ ವ್ಯಾಪಕ ಹಿಂಸಾಚಾರ ಆರಂಭಿಸಿದರು. ಕಳೆದ ಕೆಲವು ದಶಕಗಳಲ್ಲಿ ಹೆಚ್ಚಿನೆಡೆ ಈ ಚಟುವಟಿಕೆಗೆ ಸರಕಾರೀ ಪ್ರಾಯೋಜಕತ್ವವೂ ಪ್ರಾಪ್ತವಾಯಿತು. ಜನರ ಮನೆಗಳಿಗೆ ನುಗ್ಗಿ ಫ್ರಿಜ್ಜುಗಳಲ್ಲಿ ಏನಿದೆ ಎಂದು ಪರಿಶೀಲಿಸುವ ಚಟುವಟಿಕೆಯೂ ಸಕ್ರಮವಾಗಿ ಬಿಟ್ಟಿತು.
‘ಹ್ಯೂಮನ್ ರೈಟ್ಸ್ ವಾಚ್’ ಸಂಸ್ಥೆಯು 2019ರಲ್ಲಿ ಪ್ರಕಟಿಸಿದ ವರದಿ ಪ್ರಕಾರ ಭಾರತದಲ್ಲಿ 2015 ಮತ್ತು 2018ರ ನಡುವೆ ಗೋರಕ್ಷಕ ಗೂಂಡಾ ಪಡೆಗಳ ಹಿಂಸೆಯಲ್ಲಿ 44 ಮಂದಿ ಹತರಾಗಿದ್ದರು. ಹತರಾದವರೆಲ್ಲಾ ಮುಸ್ಲಿಮರು ಎಂದು ಬಿಂಬಿಸಿ ಈ ಅಮಾನುಷ ಕ್ರೌರ್ಯಕ್ಕೆ ಧಾರ್ಮಿಕ ಸಮರ್ಥನೆ ಒದಗಿಸುವ ಶ್ರಮವೂ ನಡೆದಿತ್ತು. ನಿಜವಾಗಿ ಪ್ರಸ್ತುತ ಹಿಂಸೆಯಲ್ಲಿ ಹತರಾದ ಅನೇಕರು ಮುಸ್ಲಿಮರಾಗಿರಲಿಲ್ಲ. ಅಕ್ರಮವಾಗಿ ದನ ಸಾಗಿಸುವ ಮುಸ್ಲಿಮರನ್ನು ಬೇಟೆಯಾಡುವ ಹೆಸರಲ್ಲಿ, ಪಾನಮತ್ತರಾಗಿ ಬೀದಿಗಿಳಿಯುವ ಗೂಂಡಾ ಪಡೆಗಳ ಪಾಲಿಗೆ ಹಿಂಸೆ ಮತ್ತು ರಕ್ತಪಾತ ಮತ್ತು ಅದರಿಂದ ಬೆಳೆಯುವ, ರಾಜಕೀಯವಾಗಿ ಲಾಭದಾಯಕವಾಗುವ ಉದ್ವಿಗ್ನತೆ ಮತ್ತು ಧ್ರುವೀಕರಣ ಮುಖ್ಯವಾಗಿರುತ್ತದೆಯೇ ಹೊರತು ಯಾರದೇ ಧರ್ಮ ಅವರಿಗೆ ಮುಖ್ಯವಾಗಿರುವುದಿಲ್ಲ. ತಮ್ಮ ಕುರುಡು ಹುಚ್ಚಿನಲ್ಲಿ ಅವರು ಹಿಂದೂಗಳನ್ನೇ ಬೇಟೆಯಾಡಿದ ಸಾಕಷ್ಟು ಉದಾಹರಣೆಗಳಿವೆ. 2016ರಲ್ಲಿ ಉಡುಪಿ ಸಮೀಪ, ಹಿಂದೂ ಜಾಗರಣ ವೇದಿಕೆಯ ಕಿಡಿಗೇಡಿ ಗುಂಪು, ದನ ಸಾಗಿಸುತ್ತಿದ್ದ ಪ್ರವೀಣ್ ಪೂಜಾರಿ ಎಂಬ ಒಬ್ಬ ಬಿಜೆಪಿ ಕಾರ್ಯಕರ್ತನನ್ನೇ ಕೊಂದು ಹಾಕಿತ್ತು. 2002ರಲ್ಲಿ ಹರ್ಯಾಣದಲ್ಲಿ ಗೋರಕ್ಷಣೆಯ ಹೆಸರಲ್ಲಿ ಕಿಡಿಗೇಡಿ ಪಡೆಗಳು ದನ ಸಾಗಿಸುತ್ತಿದ್ದ 5 ಮಂದಿ ದಲಿತ ಯುವಕರನ್ನು ಬರ್ಬರವಾಗಿ ಕೊಂದು ಹಾಕಿದ್ದವು. 2024ರಲ್ಲಿ ಉತ್ತರ ಪ್ರದೇಶದ ಫರೀದಾಬಾದ್‌ನಲ್ಲಿ ಇಂತಹ ದಂಡುಗಳು ಮುಸಲ್ಮಾನನೆಂದು ಭಾವಿಸಿ 19ರ ಹರೆಯದ ಒಬ್ಬ ಹಿಂದೂ ಯುವಕನನ್ನು ಕೊಂದಿದ್ದವು. ಇಂತಹ ಗೂಂಡಾ ಪಡೆಗಳು ರಸ್ತೆಗಳಲ್ಲಿ ವಾಹನಗಳನ್ನು ತಡೆದು ದರೋಡೆ ಮಾಡಿದ, ಪಶು ಮಾರುಕಟ್ಟೆಯಲ್ಲಿ ವ್ಯಾಪಾರಿಗಳಿಂದ ದೀರ್ಘಕಾಲ ಹಫ್ತಾ ವಸೂಲಿ ಮಾಡಿದ, ರೈತರನ್ನು ಥಳಿಸಿ ದೋಚಿದ ಎಷ್ಟೋ ಪ್ರಕರಣಗಳು ದೇಶದಲ್ಲಿ ನಡೆದಿವೆ. ನಡೆಯುತ್ತಲೇ ಇವೆ. ಅನೇಕ ಮಂದಿ ಇದನ್ನೇ ತಮ್ಮ ನಿತ್ಯದ ದಂಧೆ ಅಥವಾ ಜೀವನೋಪಾಯವಾಗಿ ಮಾಡಿಕೊಂಡದ್ದೂ ಇದೆ. ಇಂತಹ ವಾತಾವರಣದಲ್ಲಿ ಸಹಜವಾಗಿಯೇ, ರೈತರ ಪಾಲಿಗೆ, ತಮ್ಮ ಬಳಿ ಇರುವ ನಿರುಪಯುಕ್ತ ಜಾನುವಾರುಗಳನ್ನು ಮಾರುವ ಆಯ್ಕೆ ಇಲ್ಲವಾಗಿಬಿಟ್ಟಿತು. ದನದ ವ್ಯಾಪಾರಿಗಳ ಪಾಲಿಗೆ ಅವುಗಳನ್ನು ಖರೀದಿಸುವ ಅಥವಾ ಸಾಗಿಸುವ ಆಯ್ಕೆಯೂ ಇಲ್ಲವಾಯಿತು. ನಿರುಪಯುಕ್ತ ದನ ಮತ್ತಿತರ ಜಾನುವಾರುಗಳು ಅವುಗಳ ಮಾಲಕರ ಪಾಲಿಗೆ ಹೊರಲಾಗದ ಹೊರೆಗಳಾಗಿ ಬಿಟ್ಟವು. ಅವರು ಆ ತಮ್ಮ ಜಾನುವಾರುಗಳನ್ನು ಬೀದಿಗೆಸೆಯಲು ನಿರ್ಬಂಧಿತರಾದರು. ಈ ರೀತಿ, ಮುಸ್ಲಿಮರನ್ನು ದಂಡಿಸುವ ಹೆಸರಲ್ಲಿ ಆರಂಭವಾದ ರಾಜಕೀಯ ಪ್ರೇರಿತ ಅಪರಾಧಿ ಕಾರ್ಯಾಚರಣೆಯು ರೈತರನ್ನು, ಜಾನುವಾರು ವ್ಯಾಪಾರವನ್ನು ಮತ್ತು ಸ್ವತಃ ಜಾನುವಾರುಗಳನ್ನು ದಂಡಿಸುವ ಕಾರ್ಯಾಚರಣೆಯಾಗಿ ಪರಿಣಮಿಸಿತು.
ಜೀವಕೊಡಬಲ್ಲವರು ಆಹಾರ ಕೊಡುವುದಿಲ್ಲ.
ಜಾನುವಾರುಗಳು ನಾಳೆಗಾಗಿ ಆಹಾರ ಸಂಗ್ರಹಿಸಿಡುವುದಿಲ್ಲ. ಹಸಿವಾದಾಗ ಅವು ಆಹಾರ ಹುಡುಕಲು ಹೊರಡುತ್ತವೆ. ನಗರೀಕರಣ ಮತ್ತು ಕೈಗಾರಿಕೀಕರಣವು ಹೆಚ್ಚಿದಂತೆಲ್ಲಾ, ಜಾನುವಾರುಗಳಿಗೆ ಪರಂಪರಾಗತವಾಗಿ ಲಭ್ಯವಿದ್ದ ಹೆಚ್ಚಿನ, ಸ್ವಾಭಾವಿಕ ಮೇಯುವ ಪ್ರದೇಶಗಳು ಕಣ್ಮರೆಯಾಗಿವೆ. ಆದ್ದರಿಂದ ತಮ್ಮ ಹೊಟ್ಟೆ ತುಂಬಲಿಕ್ಕಾಗಿ ಅವು, ಜನರು ಬೇಡವೆಂದು ಎಸೆದ ತ್ಯಾಜ್ಯ ಪದಾರ್ಥಗಳನ್ನು ಅರಸಿ ಹೋಗಬೇಕಾಗುತ್ತದೆ. ಅದೆಷ್ಟೋ ಬಾರಿ ಅವುಗಳು ಆಹಾರ ಸಿಗದೆ ಖಾಲಿ ಹೊಟ್ಟೆಯಲ್ಲೇ ಮಲಗಬೇಕಾಗುತ್ತದೆ. ಹಲವೊಮ್ಮೆ ಅವು ಅನಿವಾರ್ಯವಾಗಿ ಪ್ಲಾಸ್ಟಿಕ್ ಮುಂತಾದ ವಿವಿಧ ಹಾನಿಕಾರಕ ತ್ಯಾಜ್ಯಗಳನ್ನು ತಿಂದು ರೋಗಗ್ರಸ್ತವಾಗುತ್ತವೆ. ಹೆಚ್ಚಿನ ಪ್ರಾಣಿಗಳಿಗೆ ರೋಗ ಬಂದಾಗ ಚಿಕಿತ್ಸೆ ಸಿಗದೆ ರಸ್ತೆಯಲ್ಲೇ ಸತ್ತು ಬೀಳುತ್ತವೆ. ಶಸ್ತ್ರ ಚಿಕಿತ್ಸೆಗೆ ಒಳಗಾದ ಅದೆಷ್ಟೋ ರೋಗಗ್ರಸ್ತ ದನಗಳ ಹೊಟ್ಟೆಯಲ್ಲಿ ಸುಮಾರು 25ರಿಂದ 100 ಕೆಜಿಯಷ್ಟು ಅಪಾಯಕಾರಿ ಪ್ಲಾಸ್ಟಿಕ್ ತ್ಯಾಜ್ಯ ಸಿಕ್ಕಿದ್ದೂ ಇದೆ.
ನಿಜವಾಗಿ ತಾವು ಗೋರಕ್ಷಕರೆಂದು ಹೇಳಿಕೊಳ್ಳುವವರ ಪೈಕಿ ಕೆಲವು ಮಂದಿಯಾದರೂ ಪ್ರಾಮಾಣಿಕರಾಗಿದ್ದರೆ ಗೋವುಗಳಿಗೆ ಈ ಗತಿ ಖಂಡಿತ ಒದಗುತ್ತಿರಲಿಲ್ಲ. ಅವರು ಗೋವುಗಳ ಮತ್ತು ಇತರ ಜಾನುವಾರುಗಳ ಹಾಗೂ ರೈತರು ಮತ್ತು ಕೃಷಿಕರ ಹಿತೈಷಿಗಳಾಗಿದ್ದರೆ ಇಂತಹ ಜಾನುವಾರುಗಳನ್ನು ಅವುಗಳ ಮಾಲಕರಿಂದ ತಾವೇ ಖರೀದಿಸಿ, ಸುರಕ್ಷಿತ, ಸುಭದ್ರ ಸ್ಥಳಗಳಲ್ಲಿ ಅವುಗಳಿಗೆ ಪುನರ್ವಸತಿ ಕಲ್ಪಿಸುವ ಸೇವೆ ಸಲ್ಲಿಸಬಹುದಾಗಿತ್ತು. ಅದಕ್ಕಾಗಿ ದೇಶದೆಲ್ಲೆಡೆ ಸುಸಜ್ಜಿತ ಗೋಶಾಲೆಗಳನ್ನು ಹಾಗೂ ಪಶು ಆಶ್ರಯಧಾಮಗಳನ್ನು ನಿರ್ಮಿಸಬಹುದಿತ್ತು. ಅವರು ಮನಸ್ಸು ಮಾಡಿದ್ದರೆ ಅದಕ್ಕೆ ಬೇಕಾದ ಎಲ್ಲ ಸಂಪನ್ಮೂಲಗಳನ್ನು ಸಂಘಟಿಸಲು ಅವರಿಗೆ ಖಂಡಿತ ಸಾಧ್ಯವಿತ್ತು. ಅವರಿಗೆ ನೆರವಾಗಲು ಸಮಾಜದ ಎಲ್ಲ ವರ್ಗಗಳೂ ಮುಂದಾಗುತ್ತಿದ್ದರು. ಆದರೆ ಗೋಶೋಷಕರು ಈ ನಿಟ್ಟಿನಲ್ಲಿ ಸಲ್ಲಿಸಿದ ಸೇವೆ ತೀರಾ ಸೀಮಿತ. ಮೋಸ ಮಾತ್ರ ಧಾರಾಳ. ‘‘ನಾವು ದೇಶದ ಗಲ್ಲಿಗಲ್ಲಿಯಲ್ಲಿ ಗೋಶಾಲೆಗಳನ್ನು ನಿರ್ಮಿಸಿ ಗೋವುಗಳಿಗೆ ಸುಸಜ್ಜಿತ ಆಶ್ರಯ ಒದಗಿಸುತ್ತೇವೆ’’ ಎಂದು ಅವರು ದೇಶದೆಲ್ಲೆಡೆ ಡಂಗುರ ಸಾರುತ್ತಿರುತ್ತಾರೆ. ಆ ಹೆಸರಲ್ಲಿ ಜನರನ್ನು ನಂಬಿಸಿ ಅಥವಾ ಬೆದರಿಸಿ, ಧಾರಾಳ ದೇಣಿಗೆಯನ್ನು ಮಾತ್ರ ಸಂಗ್ರಹಿಸುತ್ತಿರುತ್ತಾರೆ.
ಹಲವು ರಾಜ್ಯ ಸರಕಾರಗಳು ಗೋವನ್ನು ರಕ್ಷಿಸುವ ಹೆಸರಲ್ಲಿ ‘ಗವ್ ಕಲ್ಯಾಣ್ ಸೆಸ್’ ಎಂಬ ಹೆಚ್ಚುವರಿ ಮೇಲ್ತೆರಿಗೆಯನ್ನು ಜನರಿಂದ ಸಂಗ್ರಹಿಸುತ್ತಿವೆ. ಉತ್ತರಪ್ರದೇಶ, ರಾಜಸ್ಥಾನ ಮತ್ತು ಪಂಜಾಬ್‌ಗಳಲ್ಲಿ ಗೋಶಾಲೆಗಳ ಪರಿಪಾಲನೆ, ಅಲೆಮಾರಿ ಜಾನುವಾರುಗಳ ರಕ್ಷಣೆ ಮತ್ತು ಜಾನುವಾರುಗಳ ಅರೋಗ್ಯ ಪಾಲನೆಯ ನೆಪ ಒಡ್ಡಿ ಪ್ರಸ್ತುತ ಮೇಲ್ತೆರಿಗೆಯ ವಸೂಲಿ ನಡೆಯುತ್ತಿದೆ. ಇಂತಹ ಮೇಲ್ತೆರಿಗೆಯ ಸಂಗ್ರಹದ ಉಪಾಯ ಮತ್ತು ವಿಧಾನಗಳು ವಿವಿಧ ರಾಜ್ಯಗಳಲ್ಲಿ ಭಿನ್ನವಾಗಿವೆ. ಉದಾ: ಉತ್ತರ ಪ್ರದೇಶದಲ್ಲಿ ಅಬಕಾರಿ ಸರಕುಗಳು, ಹೈವೇ ಟೋಲ್ ಇತ್ಯಾದಿಗಳ ಮೇಲೆ ಶೇ. 0.5 ಸೆಸ್, ರಾಜಸ್ಥಾನದಲ್ಲಿ ಮದ್ಯದ ಮೇಲಿನ ಗಿಂಖಿ ಮೇಲೆ ಶೇ. 20 ಸರ್ಚಾರ್ಜ್, ಚಂಡೀಗಢದಲ್ಲಿ ಹೊಸ ಕಾರುಗಳ ಖರೀದಿ, ವಿದ್ಯುತ್ ಬಿಲ್ ಮತ್ತು ಮದ್ಯದ ಬಾಟಲಿಗಳ ಮೇಲೆ ನಿರ್ದಿಷ್ಟ ನೇರ ಸೆಸ್. ಈ ರೀತಿ ಸಂಗ್ರಹಿಸಿದ ತೆರಿಗೆಯನ್ನು ಸರಕಾರಗಳು ತಮ್ಮ ಘೋಷಿತ ಉದ್ದೇಶಕ್ಕಾಗಿ ಬಳಸುತ್ತಿಲ್ಲ, ಅಲೆಮಾರಿ ಜಾನುವಾರುಗಳ ಕಿರುಕುಳ ಕಡಿಮೆಯಾಗಿಲ್ಲ, ಅವೆಲ್ಲಾ ಹಿಂದಿನಂತೆ ಈಗಲೂ ದೊಡ್ಡ ಸಂಖ್ಯೆಯಲ್ಲಿ ಲಗಾಮಿಲ್ಲದೆ ಅಲೆಯುತ್ತಿವೆ, ಅವುಗಳ ಯೋಗಕ್ಷೇಮ ನೋಡಿಕೊಳ್ಳುವುದಕ್ಕೆ ಯಾವುದೇ ಏರ್ಪಾಡು ಆಗಿಲ್ಲ ಎಂದು ಜನತೆ ತಮ್ಮ ಅಸಮಾಧಾನ ಪ್ರಕಟಿಸುತ್ತಿದ್ದಾರೆ.
ಭಾರತದಲ್ಲಿ 5,000ಕ್ಕೂ ಹೆಚ್ಚು ಗೋಶಾಲೆಗಳಿವೆ. ಆ ಪೈಕಿ ಹೆಚ್ಚೆಂದರೆ 2,000 ಗೋಶಾಲೆಗಳು ಮಾತ್ರ ಅಧಿಕೃತ ಸರಕಾರೀ ಮನ್ನಣೆ ಪಡೆದಿವೆ. ಹೆಚ್ಚಿನ ಗೋಶಾಲೆಗಳನ್ನು ವಿವಿಧ ಮಠ, ಮಂದಿರಗಳು ತಮ್ಮ ವೆಚ್ಚದಿಂದ ನಡೆಸುತ್ತಿವೆ. ಆದರೆ ಅಂತಹ ಗೋಶಾಲೆಗಳಿಗೆ ಸ್ಥಳ, ಸಂಪನ್ಮೂಲ ಇತ್ಯಾದಿಗಳ ಇತಿಮಿತಿಗಳಿರುತ್ತವೆ. ಅಲೆಮಾರಿ ಜಾನುವಾರುಗಳ ಸಂಖ್ಯೆಗೆ ಹೋಲಿಸಿದರೆ ಪ್ರಸ್ತುತ ಎಲ್ಲ ಗೋಶಾಲೆಗಳ ಆಶ್ರಯ ಸಾಮರ್ಥ್ಯ ಶೇ. 15ಕ್ಕಿಂತ ಕಡಿಮೆ. ಆದ್ದರಿಂದಲೇ ಇಂದು ಹೆಚ್ಚೆಂದರೆ ಸುಮಾರು 10 ಲಕ್ಷ ಜಾನುವಾರುಗಳು ವಿವಿಧ ಗೋಶಾಲೆ ಅಥವಾ ಪಶು ಆಶ್ರಯಧಾಮಗಳಲ್ಲಿದ್ದರೆ 50 ಲಕ್ಷಕ್ಕೂ ಅಧಿಕ ಜಾನುವಾರುಗಳು ಬೀದಿಯಲ್ಲಿವೆ. ಯಾರಾದರೂ ಅಲೆಮಾರಿ ಜಾನುವಾರುಗಳನ್ನು ಈಗೋಶಾಲೆಗಳ ಬಳಿಗೆ ತಂದರೂ ಅವುಗಳನ್ನು ಸೇರಿಸಿ ಕೊಳ್ಳುವ ಸಾಮರ್ಥ್ಯ ಆ ಗೋಶಾಲೆಗಳ ಬಳಿ ಇರುವುದಿಲ್ಲ. ಹಲವು ರಾಜ್ಯ ಸರಕಾರಗಳು ತಮ್ಮ ಬಜೆಟ್ ಮತ್ತು ಖರ್ಚುವೆಚ್ಚ ವರದಿಗಳಲ್ಲಿ ಗೋಪರಿಪಾಲನೆಗಾಗಿ ಮತ್ತು ಗೋಶಾಲೆಗಳಿಗಾಗಿ ನೂರಾರು ಮಾತ್ರವಲ್ಲ ಕೆಲವೊಮ್ಮೆ ಸಾವಿರಾರು ಕೋಟಿ ರೂಪಾಯಿಗಳನ್ನು ಅನುದಾನ ರೂಪದಲ್ಲಿ ನೀಡಿರುವುದಾಗಿ ಘೋಷಿಸುತ್ತವೆ. ಉದಾ: ಹರ್ಯಾಣ ಸರಕಾರವು 11 ವರ್ಷಗಳಲ್ಲಿ ಗೋಶಾಲೆಗಳಿಗೆ 526 ಕೋಟಿ ರೂಪಾಯಿ ನೀಡಿದೆ. ಉತ್ತರ ಪ್ರದೇಶ ಸರಕಾರವು ತನ್ನ 2025-26ರ ಬಜೆಟ್‌ನಲ್ಲಿ ಅಲೆಮಾರಿ ಜಾನುವಾರಗಳ ಯೋಗಕ್ಷೇಮಕ್ಕೆಂದು 2 ಸಾವಿರ ಕೋಟಿ ರೂಪಾಯಿಗೂ ಮಿಕ್ಕಿದ ಮೊತ್ತವನ್ನು ಮೀಸಲಿಟ್ಟಿದೆ. ರಾಜಸ್ಥಾನ ಸರಕಾರವು 2023 ಮತ್ತು 2025ರ ನಡುವೆ ಎರಡೇ ವರ್ಷಗಳ ಅವಧಿಯಲ್ಲಿ ಗೋಶಾಲೆಗಳಿಗಾಗಿ 2,340 ಕೋಟಿ ರೂಪಾಯಿಗಳನ್ನು ನೀಡಿದೆ. ಆದರೆ ಈ ಅನುದಾನಗಳ ಒಂದು ದೊಡ್ಡ ಪಾಲು ಜಾನುವಾರುಗಳ ಬದಲು ಪುಢಾರಿಗಳು, ಅಧಿಕಾರಿಗಳು, ಮಧ್ಯವರ್ತಿಗಳು ಮತ್ತು ನಕಲಿ ಸಂಸ್ಥೆಗಳ ಹೊಟ್ಟೆಗೆ ಸೇರುತ್ತವೆ.
ಗೋರಕ್ಷಕರೆಂಬ ಮುಖವಾಡ ಧರಿಸಿರುವವರೇ ಆಳುತ್ತಿರುವ ದೇಶಗಳಲ್ಲಿ ಗೋವುಗಳು ಇಷ್ಟೊಂದು ಅನಾಥವಾಗಿ ಬಿಟ್ಟದ್ದು ಹೇಗೆ? ಇಲ್ಲಿರುವ ನೈಜ ಸಮಸ್ಯೆ ಏನೆಂದರೆ ಗೋಶೋಷಕರ ದೃಷ್ಟಿಯಲ್ಲಿ ಗೋವು ‘ಪವಿತ್ರ’ವಾಗುವುದು ಹಿಂದೂ-ಮುಸ್ಲಿಮ್ ಧ್ರುವೀಕರಣಕ್ಕೆ ಅವಕಾಶ ಇದ್ದಲ್ಲಿ ಮಾತ್ರ. ಅನ್ಯತಃ ಬೇರೆಲ್ಲೆಡೆ ಅದು ತಮ್ಮ ಹತ್ತಿರವೂ ಸುಳಿಯಬಾರದ, ಎಲ್ಲ ಬಗೆಯ ನರಳಿಕೆ ಅನುಭವಿಸಲು ಅರ್ಹವಾದ ಒಂದು ಅನಪೇಕ್ಷಿತ ಸರಕು ಮಾತ್ರವಾಗಿರುತ್ತದೆ.






