ಆಂದೋಲನ ಆರಂಭಿಸಿದವರೇ ಅದನ್ನು ಗುರಿ ತಲುಪಿಸಲಿ

ಸದ್ಯ ಜಿರಳೆ ಪಕ್ಷದ ಯುವ ನಾಯಕರ ಪರಿಚಯ ಉಳ್ಳವರಿಗೆಲ್ಲಾ ಅವರ ಮೇಲೆ ನಂಬಿಕೆ ಇದೆ. ಯಾವುದೇ ಇತಿಹಾಸದ ಹಂಗಿಲ್ಲದ, ಯಾವುದೇ ‘ಹಿನ್ನೆಲೆ’ಯ ಹೊರೆ ಹೊತ್ತಿಲ್ಲದ, ಯಾವುದೇ ಕಡೆಗೆ ವಾಲಿಲ್ಲದ, ಯಾವುದೇ ಪೂರ್ವಾಗ್ರಹದಿಂದ ಪೀಡಿತವಲ್ಲದ ಈ ಯುವ ನಾಯಕರು ಈವರೆಗೆ ಸಾಕಷ್ಟು ಪ್ರಬುದ್ಧತೆ ಮೆರೆದಿದ್ದಾರೆ. ಈ ಅಪರಿಚಿತ ಯುವ ನಾಯಕರು ಆರಂಭಿಸಿದ ಆಂದೋಲನದಲ್ಲಿ, ಮುಂದಿನ ಹಂತಗಳಲ್ಲಿ ಬಂದು ಸೇರಿದ ಪಕ್ಷಗಳು ಮತ್ತು ರಾಜಕೀಯ ನಾಯಕರು ಎಷ್ಟೇ ದೊಡ್ಡವರಾಗಿದ್ದರೂ, ಆಂದೋಲನಕ್ಕೆ ಚಾಲನೆ ನೀಡಿ ಜನರ ವಿಶ್ವಾಸ ಗೆದ್ದ ಅಪರಿಚಿತರೇ ಆಂದೋಲನದ ನೈಜ ನಾಯಕರು. ಅವರೇ ಈ ಆಂದೋಲನವನ್ನು ಮುನ್ನಡೆಸಿ ಗುರಿ ಮುಟ್ಟಿಸಬೇಕು.
ಸಹಸ್ರಮಾನಗಳ ದೀರ್ಘ ಇತಿಹಾಸವಿರುವ ಭಾರತೀಯ ಸಮಾಜದಲ್ಲಿ ಕೇವಲ ಕೆಲವೇ ತಿಂಗಳ ಸಂಕ್ಷಿಪ್ತ ಚರಿತ್ರೆ ಇರುವ ಆಂದೋಲನವೊಂದು ಕ್ಷಿಪ್ರವಾಗಿ ಬಹಳಷ್ಟನ್ನು ಬದಲಿಸಿ ಬಿಟ್ಟಿದೆ. ಹಲವು ಹಳೆಯ ಸಂಪ್ರದಾಯಗಳು ಕುಸಿದುಬಿದ್ದಿವೆ. ಹೊಸ ಪರಂಪರೆಗಳು ಚಿಗುರುತ್ತಿವೆ. ನಿರಾಶರಾಗಿದ್ದ ಅನೇಕರಲ್ಲಿ ಆಶಾವಾದ ಮೂಡಿದೆ. ನಿಷ್ಕ್ರಿಯರಾಗಿದ್ದವರು ಸಕ್ರಿಯರಾಗತೊಡಗಿದ್ದಾರೆ. ಈಗ ಎಲ್ಲವೂ ಸಂಪೂರ್ಣವಾಗಿ ನಮ್ಮ ನಿಯಂತ್ರಣದಲ್ಲಿದೆ ಎಂಬ ಅಮಲಿನಲ್ಲಿದ್ದ ಖಳನಾಯಕರು ಚಡಪಡಿಸುತ್ತಿದ್ದಾರೆ. ದೇಶವು ನಿರಂಕುಶ ಸರ್ವಾಧಿಕಾರದ ದಿಕ್ಕಿನಲ್ಲಿ ಬಹಳ ದೂರ ಸಾಗಿ ಬಿಟ್ಟಿದೆ ಎಂಬ ಕಳವಳ ಎಲ್ಲೆಂದರಲ್ಲಿ ವ್ಯಾಪಿಸತೊಡಗಿದ್ದಾಗಲೇ ಅದರ ವಿರುದ್ಧ ದೊಡ್ಡ ಪ್ರಮಾಣದ ಪ್ರತಿರೋಧ ಪ್ರಕಟವಾಗತೊಡಗಿದೆ. ತಾವು ಪ್ರಶ್ನಾತೀತರೆಂಬಂತೆ ಮೆರೆಯುತ್ತಿದ್ದವರನ್ನು ಅಲ್ಲಲ್ಲಿ ಪ್ರಶ್ನಿಸಲಾಗುತ್ತಿದೆ. ಸರ್ವಾಧಿಕಾರಿಗಳ ಒಂದೊಂದೇ ಅಪರಾಧದ ಕುರಿತು ಸವಿಸ್ತಾರ ಚರ್ಚೆ ಆರಂಭವಾಗಿದೆ. ಎಲ್ಲರೂ ನಿದ್ದೆಯಲ್ಲಿದ್ದಾರೆಂಬ ನಂಬಿಕೆ ಮೂಡಿಸಲಾಗಿದ್ದ ಸಮಾಜದಲ್ಲಿ, ಅನೇಕರು ತಲೆ ಎತ್ತಿ ನಾವು ಜಾಗೃತರಾಗಿದ್ದೇವೆ ಎಂದು ಘೋಷಿಸುತ್ತಿದ್ದಾರೆ. ಹೊಸ ಪೀಳಿಗೆ ಸಾಮಾಜಿಕ ವಾಸ್ತವಗಳಿಂದ ಬಹಳ ದೂರ ಎಲ್ಲೋ ತಮ್ಮದೇ ಪಿಝ್ಝಾ, ಬರ್ಗರ್, ಪಾಪ್ ಸ್ಕ್ವಾಡ್, ಸ್ಕ್ರೀನ್ ಗೇಮ್ ಇತ್ಯಾದಿಗಳ ಲೋಕದಲ್ಲಿ ಕಳೆದುಹೋಗಿದ್ದಾರೆ ಎಂಬ ದೂಷಣೆ ವ್ಯಾಪಕವಾಗಿದ್ದ ಸಮಾಜದಲ್ಲಿ ಅದೇ ಹೊಸ ಪೀಳಿಗೆಯವರು ಸಮಾಜದ ಅಗತ್ಯಗಳಿಗೆ ಸ್ಪಂದಿಸುವ ಪ್ರಕ್ರಿಯೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ಆಳುವವರ ಬೂಟು ಇತ್ಯಾದಿ ನೆಕ್ಕುವ ಪ್ರಧಾನಧಾರೆಯ ಮಾಧ್ಯಮಗಳ ಏಕಸ್ವಾಮ್ಯ ಕುಸಿದು ಬಿದ್ದಿದೆ. ಮಾಹಿತಿಗಾಗಿ ಸಾಂಪ್ರದಾಯಿಕ ಮಾಧ್ಯಮಗಳನ್ನು ನಂಬಿದ್ದ ಅದೆಷ್ಟೋ ಮಂದಿ ಪರ್ಯಾಯ ಮಾಧ್ಯಮಗಳತ್ತ ಒಲವು ತೋರುತ್ತಿದ್ದಾರೆ. ಕೆಲವು ವ್ಯಕ್ತಿಗಳು ಅಥವಾ ಪುಟ್ಟ ತಂಡಗಳು ನಡೆಸುವ ಸಾಮಾಜಿಕ ಸುದ್ದಿ ಮಾಧ್ಯಮಗಳು, ಕುಖ್ಯಾತ ಕುಬೇರರು ಮತ್ತವರ ಬೃಹತ್ ಕಂಪೆನಿಗಳು ನಡೆಸುವ ಶ್ರೀಮಂತ, ಗುಲಾಮ ಮಾಧ್ಯಮಗಳಿಗೆ ಪರ್ಯಾಯವಾಗಿ ಹೊಮ್ಮುತ್ತಿವೆ.
ಸಮಾಜ ವಿರೋಧಿ ಕಿಡಿಗೇಡಿಗಳು ಬೀದಿಗಿಳಿದು ಹಿಂಸೆಯಲ್ಲಿ ತೊಡಗಿದರೆ ಪೊಲೀಸರು ಮತ್ತು ಸರಕಾರಿ ಪಡೆಗಳು ಬಂದು ಬಲಪ್ರಯೋಗಿಸಿ ಅವರನ್ನು ನಿಯಂತ್ರಿಸುತ್ತಾರೆ - ಇದು ನಮ್ಮ ಸಮಾಜದಲ್ಲಿ ಈ ವರೆಗಿನ ವಾಡಿಕೆ. ಆದರೆ ಈ ಬಾರಿ ಆ ವಾಡಿಕೆ ಕೂಡಾ ಬುಡಮೇಲಾಗಿದೆ. ವಿದ್ಯಾರ್ಥಿ, ಯುವಜನರು ಗಾಂಧಿ-ಅಂಬೇಡ್ಕರ್ರನ್ನು ಸ್ಮರಿಸುತ್ತಾ ಬಹಳ ಶಾಂತಿಯುತವಾಗಿ ಮತಪ್ರದರ್ಶನ ನಡೆಸುತ್ತಿದ್ದಾರೆ. ಕಟ್ಟು ನಿಟ್ಟಾಗಿ ಶಾಂತಿ ಪಾಲಿಸಿ ಎಂದು ಅವರೇ ಜನರಿಗೆ ಪದೇ ಪದೇ ಮನವಿ ಮಾಡುತ್ತಿದ್ದಾರೆ. ಆದರೆ ಪ್ರತಿಭಟನೆಯನ್ನೇ ಘೋರ ಅಪರಾಧವಾಗಿ ಕಾಣುತ್ತಿರುವ ಸರಕಾರವು ಅವರಿಗೆ ರಕ್ಷಣೆ ಒದಗಿಸುವ ಬದಲು ಅವರನ್ನು ಸದೆಬಡಿದು ಅವರ ಧ್ವನಿಯನ್ನೇ ಅಳಿಸಿಹಾಕಲು ಹೊರಟಿದೆ. ಅದು ಪ್ರದರ್ಶನಕಾರರ ವಿರುದ್ಧ ಸಾವಿರಾರು ಸಶಸ್ತ್ರ ಪೊಲೀಸರನ್ನು ಮತ್ತು ಶಸ್ತ್ರ ಸಜ್ಜಿತ, ಕಿಡಿಗೇಡಿ ಪಡೆಗಳನ್ನು ಬೀದಿಗಿಳಿಸುತ್ತಿದೆ. ಪ್ರಸ್ತುತ ಅಧಿಕೃತ ಮತ್ತು ಅನಧಿಕೃತ ಪಡೆಗಳು ವಿದ್ಯಾರ್ಥಿಗಳ ಮೇಲೆ ಎಲ್ಲ ಬಗೆಯ ಹಿಂಸೆ, ದೌರ್ಜನ್ಯಗಳನ್ನು ನಡೆಸುತ್ತಿವೆ. ಆದರೆ ಆ ಮೂಲಕ ಪ್ರತಿಭಟನೆಯನ್ನು ಹತ್ತಿಕ್ಕಬಹುದು ಎಂಬ ಸರಕಾರದ ಲೆಕ್ಕಾಚಾರ ಸಂಪೂರ್ಣ ತಲೆ ಕೆಳಗಾಗಿ ಬಿಟ್ಟಿದೆ. ಎಲ್ಲ ಬೆಳವಣಿಗೆಗಳನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ಹತ್ತಿರದಿಂದ ಕಂಡ ದೇಶದ ಜನತೆಯ ಒಲವುಗಳು ಹಾಗೂ ಅಭಿಮತಗಳು ಬದಲಾಗಿವೆ. ಅವರು ಕ್ರಮೇಣ ಪ್ರದರ್ಶನಕಾರರನ್ನು ತಮ್ಮ ಪ್ರತಿನಿಧಿಗಳಾಗಿ ಹಾಗೂ ಸರಕಾರವನ್ನು ಅಪರಾಧಿಯಾಗಿ ಕಾಣತೊಡಗಿದ್ದಾರೆ. ಜೀವನದಲ್ಲಿ ಪ್ರಥಮ ಬಾರಿಗೆ ಲಾಠಿ ಏಟು, ಒದೆತ ಮತ್ತಿತರ ಹಲವು ಬಗೆಯ ಕ್ರೌರ್ಯಗಳನ್ನು ಎದುರಿಸಿದ, ತೀರಾ ಅನುಚಿತ ವರ್ತನೆಯನ್ನು ಅನುಭವಿಸಿದ ಮತ್ತು ಅನಧಿಕೃತ ಬಂಧನಕ್ಕೊಳಗಾದ ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರು, ಮಹಿಳೆಯರು ಮತ್ತು ವಿಶೇಷವಾಗಿ ಹದಿಹರೆಯದ ಯುವ ವರದಿಗಾರರು ಹಾಗೂ ಪತ್ರಕರ್ತೆಯರು ಹೆದರಿ ಮನೆಯಲ್ಲಿ ಕೂರುತ್ತಿಲ್ಲ. ಒಂದು ದಿನ ಹಿಂಸೆ ಅನುಭವಿಸಿದವರು ಮರುದಿನ ಮತ್ತಷ್ಟು ಹುರುಪು, ಉತ್ಸಾಹದೊಂದಿಗೆ, ಹೊಸ ಸಂಗಾತಿಗಳೊಂದಿಗೆ ಪ್ರದರ್ಶನಕ್ಕೆ ಹಾಜರಾಗುತ್ತಿದ್ದಾರೆ. ಒಂದು ಸ್ಥಳದಲ್ಲಿ ಮತಪ್ರದರ್ಶನಕ್ಕೆ ಅನುಮತಿ ನಿರಾಕರಿಸಿದರೆ ಅವರು ಇನ್ನೊಂದು ಕಡೆ ಪ್ರತ್ಯಕ್ಷರಾಗುತ್ತಿದ್ದಾರೆ. ಹೊಸ ಹೊಸ ಪ್ರದೇಶಗಳಲ್ಲಿ ಪ್ರದರ್ಶನಗಳು ನಡೆಯುತ್ತಿವೆ. ದಿನದಿಂದ ದಿನಕ್ಕೆ ಪ್ರತಿರೋಧ ಮತ್ತು ಆಕ್ರೋಶಗಳು ಹೆಚ್ಚುತ್ತಲೇ ಇವೆ. ದೇಶದ ರಾಜಧಾನಿಯಿಂದ ಮೊಳಗಿದ ಆಕ್ರೋಶದ ಧ್ವನಿ ಇದೀಗ ದೇಶದ ಹಲವು ರಾಜ್ಯಗಳಲ್ಲಿ ಮಾರ್ದನಿಸುತ್ತಿದೆ. ಮುಂದಿನ ದಿನಗಳಲ್ಲಿ ಸರಕಾರವು ಈ ಆಂದೋಲನವನ್ನು ಸೋಲಿಸಲಿಕ್ಕಾಗಿ ಎಲ್ಲ ಬಗೆಯ ದಮನ ವಿಧಾನಗಳನ್ನು ಬಳಸಬಹುದು. ಆದರೆ ಯುವಜನರ ವರಸೆ ನೋಡಿದರೆ, ಅವರು ಎಲ್ಲವನ್ನೂ ಎದುರಿಸುವುದಕ್ಕೆ ಸಜ್ಜಾಗಿರುವಂತಿದೆ.
ಜನತೆ ಈ ರೀತಿ ಸ್ವಯಂಸ್ಫೂರ್ತಿಯಿಂದ ಬೀದಿಗೆ ಬಂದಿರುವುದು ಮತ್ತು ಎಲ್ಲೆಡೆ ಒಂದೇ ಧಾಟಿಯಲ್ಲಿ ಮಾತನಾಡುತ್ತಿರುವುದು-ಇದಾವುದೂ ಸಿಜೆಪಿ ಅಥವಾ ಬೇರಾವುದಾದರೂ ವಿರೋಧ ಪಕ್ಷದ ಸಾಧನೆ ಖಂಡಿತ ಅಲ್ಲ. ನಿಜವಾಗಿ ಇದು ಸಾಕ್ಷಾತ್ ನಮ್ಮ ಆಡಳಿತ ಪಕ್ಷದ ಸಾಧನೆ. ಅವರು ಜನರಲ್ಲಿ ತಮ್ಮ ವಿರುದ್ಧ ಅಷ್ಟು ತೀವ್ರ ಸ್ವರೂಪದ ಆಕ್ರೋಶ ಮತ್ತು ತಾತ್ಸಾರ ಬೆಳೆಸದೆ ಇದ್ದಿದ್ದರೆ ಇಂದು ಜನರು ಅಪರಿಚಿತರ ಕರೆಗೆ ಓಗೊಟ್ಟು ಇಷ್ಟು ದೊಡ್ಡ ಸಂಖ್ಯೆಯಲ್ಲಿ ಬೀದಿಗೆ ಬರುತ್ತಿರಲಿಲ್ಲ. ಪ್ರಸ್ತುತ ಆಂದೋಲನವು ದೇಶದೆಲ್ಲೆಡೆ ಒಳಗೊಳಗೇ ಬೇಯುತ್ತಿದ್ದ ಅತೃಪ್ತಿಯ ಜ್ವಾಲಾಮುಖಿಯ ಅಭಿವ್ಯಕ್ತಿಗೆ ಒಂದು ವೇದಿಕೆಯನ್ನು ಮಾತ್ರ ಒದಗಿಸಿದೆ.
ಕುಖ್ಯಾತ ರಾಜಕೀಯ ಪಕ್ಷಗಳು ಪ್ರತಿಭಟನೆ ಅಥವಾ ಮತಪ್ರದರ್ಶನಕ್ಕೆ ಕರೆ ನೀಡುವುದು ಮತ್ತು ಅದಕ್ಕುತ್ತರವಾಗಿ ಜನರು ಸೇರುವುದು-ಇದು ನಮ್ಮಲ್ಲಿನ ಹಳೆಯ ಸಂಪ್ರದಾಯವಾಗಿತ್ತು. ಆದರೆ ಈ ಬಾರಿ ಎಲ್ಲವೂ ವಾಡಿಕೆಗಳಿಗೆ ತದ್ವಿರುದ್ಧವಾಗಿ ನಡೆಯಿತು. ಕರೆಕೊಟ್ಟವರು ಎಳೆವಯಸ್ಸಿನ ಅಜ್ಞಾತ ಜನಸಾಮಾನ್ಯರಾಗಿದ್ದರು. ಅವರಲ್ಲೂ ಅಪರಿಚಿತ ವಿದ್ಯಾರ್ಥಿಗಳು ಮತ್ತು ಯುವಜನರು. ಅವರ ಕರೆಗೆ ಮೊದಲು ಓಗೊಟ್ಟವರು ಕೂಡಾ ಅಜ್ಞಾತ ಜನ ಸಾಮಾನ್ಯರು. ವಿದ್ಯಾರ್ಥಿ-ವಿದ್ಯಾರ್ಥಿನಿಯರು ಮತ್ತು ಯುವಜನರು. ಆ ಬಳಿಕ ಪರಿಚಿತ ಸಾಮಾಜಿಕ ಹೋರಾಟಗಾರರು, ಬರಹಗಾರರು, ವಕೀಲರು, ಸಾಮಾಜಿಕ ಮಾಧ್ಯಮಗಳ ಕಾರ್ಯಕರ್ತರು, ರೈತ ಚಳವಳಿ ಅಥವಾ ಕಾರ್ಮಿಕ ಚಳವಳಿಯ ಕಾರ್ಯಕರ್ತರು ಬಂದು ಅವರ ಜೊತೆ ಸೇರತೊಡಗಿದರು. ಕೊನೆಯಲ್ಲಿ ಬಂದವರು ಸೆಲೆಬ್ರಿಟಿ ರಾಜಕಾರಣಿಗಳು. ಆಂದೋಲನದ ಆರಂಭದಲ್ಲಿ, ಸಿಜೆಪಿಯ ಕೆಲವು ನಾಯಕರಿಗೆ ಆಪ್ ಪಕ್ಷದ ಜೊತೆ ಇದ್ದ ಹಳೆಯ ನಂಟು ಚರ್ಚೆಗೆ ಬಂದಿತ್ತು. ಅದೇ ವೇಳೆ ಕೆಲವು ವಿದ್ಯಾರ್ಥಿ ನಾಯಕರ ಮಾತಿನ ಧಾಟಿಯನ್ನು ಗಮನಿಸಿದವರು, ಅವರು ಎಡಪಂಥೀಯ ದಾರ್ಶನಿಕರಿಂದ ಪ್ರಭಾವಿತರಾಗಿದ್ದಾರೆಂದು ವಿಶ್ಲೇಷಿಸತೊಡಗಿದರು. ಕ್ರಮೇಣ ವಿವಿಧ ರಾಜಕೀಯ ಪಕ್ಷಗಳ ನಾಯಕರು ಆಂದೋಲನದಲ್ಲಿ ಆಸಕ್ತಿ ವಹಿಸತೊಡಗಿದರು. ನೋಡುನೋಡುತ್ತಿದ್ದಂತೆಯೇ, ಆಂದೋಲನದಲ್ಲಿ ಕಾಂಗ್ರೆಸ್ ಪಕ್ಷ ಮತ್ತು ರಾಹುಲ್ ಗಾಂಧಿಯ ಪಾತ್ರವೇ ನಿರ್ಣಾಯಕವೆನಿಸತೊಡಗಿತು. ರಾಹುಲ್ ಗಾಂಧಿ ಬಹಳ ಕ್ಷಿಪ್ರವಾಗಿ ಎಲ್ಲ ವಿದ್ಯಾರ್ಥಿ ನಾಯಕರಿಗಿಂತ ಹೆಚ್ಚು ಪ್ರಭಾವಶಾಲಿಯಾಗಿ ಮಿಂಚ ತೊಡಗಿದರು. ಹಠಾತ್ತನೆ ಅವರ ಜನಪ್ರಿಯತೆ ಬಾನಿನೆತ್ತರಕ್ಕೆ ಏರಿಬಿಟ್ಟಿತು. ಕೆಲವರಂತೂ ತುಂಬಾ ಭಾವುಕರಾಗಿ ಅವರಲ್ಲಿ ಭವಿಷ್ಯದ ಪ್ರಧಾನಮಂತ್ರಿಯನ್ನೂ ಕಾಣತೊಡಗಿದರು.
ಕಳೆದ ಜೂನ್ ತಿಂಗಳಲ್ಲಿ ಆರಂಭವಾಗಿದ್ದ ಜಿರಳೆ ಆಂದೋಲನದ ಹಿಂದೆ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಒಂದು ಸೀಮಿತ ಅಜೆಂಡಾ ಮಾತ್ರ ಇತ್ತು. ಆರಂಭದಲ್ಲಿ ಪರಿಸ್ಥಿತಿ ಎಷ್ಟು ಪ್ರತಿಕೂಲವಾಗಿತ್ತೆಂದರೆ ಶಿಕ್ಷಣ ಸಚಿವರು ರಾಜೀನಾಮೆ ನೀಡಬೇಕೆಂದು ಆಗ್ರಹಿಸುತ್ತಿದ್ದವರು ಕೂಡಾ ರಾಜೀನಾಮೆಯ ಸಾಧ್ಯತೆ ಶೂನ್ಯ ಎಂದೇ ನಂಬಿದ್ದರು. ಆದರೆ ಎಲ್ಲರ ನಿರೀಕ್ಷೆಗೆ ಮೀರಿ ಆಂದೋಲನಕ್ಕೆ ವ್ಯಾಪಕ ಜನಮನ್ನಣೆ ಸಿಕ್ಕಿತು. ಕೆಲವೇ ವಾರಗಳೊಳಗೆ, ಒಬ್ಬ ಸಚಿವನನ್ನು ರಕ್ಷಿಸಲು ಹೊರಟರೆ ಸಂಪೂರ್ಣ ಸರಕಾರವೇ ಮುಳುಗುವ ಸಾಧ್ಯತೆ ಇದೆ ಎಂಬುದು ಆಡಳಿತಗಾರರಿಗೆ ಮನವರಿಕೆಯಾಯಿತು. ಕೊನೆಗೆ ಸಚಿವರು ರಾಜೀನಾಮೆ ನೀಡಿದರು. ಜೊತೆಗೆ ಕೆಲವು ಆಶ್ವಾಸನೆಗಳೂ ದೊರೆತವು. ಆಂದೋಲನ ಮುಗಿಯಿತು. ಅಂದಿನ ಆ ಆಂದೋಲನಕ್ಕೆ ಹೋಲಿಸಿದರೆ, ಇದೀಗ ಅಕ್ಟೋಬರ್ ತಿಂಗಳಲ್ಲಿ ಆರಂಭವಾಗಿರುವ ಆಂದೋಲನದ ಸ್ವರೂಪ ಬಹಳಷ್ಟು ಭಿನ್ನವಾಗಿದೆ. ಇಂದಿನ ಆಂದೋಲನದಲ್ಲಿ ಹಲವು ಗಂಭೀರ ಸ್ವರೂಪದ ಸಂಕೀರ್ಣತೆಗಳಿವೆ. ಈಬಾರಿ ಮೊದಲ ಹಂತದಲ್ಲೇ ಜನರಲ್ಲಿ ಬಹಳಷ್ಟು ಆತ್ಮ ವಿಶ್ವಾಸ ಇದೆ. ಮೋದಿ ಮತ್ತವರ ಪಾಳಯದ ಜನಪ್ರಿಯತೆ ಪಾತಾಳದಲ್ಲಿದೆ. ಅವರ ಶಿಬಿರದಲ್ಲಿ ಬಿರುಕುಗಳು ಕಾಣಿಸಿಕೊಂಡಿವೆ. ಅಲ್ಲಿ ಹಲವರು ಮುಖ ಮುಚ್ಚಿಕೊಂಡು ಅಲೆಯುತ್ತಿದ್ದಾರೆ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಬೇಕು ಎಂಬ ಸೀಮಿತ ಆಗ್ರಹದೊಂದಿಗೆ ಆರಂಭವಾಗಿದ್ದ ಆಂದೋಲನ ಇದೀಗ ‘ರೆಜೀಮ್ ಚೇಂಜ್’ ಅಥವಾ ಸರಕಾರವನ್ನೇ ಬದಲಿಸಬೇಕು ಎಂದು ಆಗ್ರಹಿಸುವ ಮಟ್ಟಿಗೆ ವಿಕಸಿತವಾಗಿದೆ. ಆಂದೋಲನವನ್ನು ವಿರೋಧಿಸುವವರು ಕೂಡಾ ದೇಶದ್ರೋಹ, ವಿದೇಶಿ ದೇಣಿಗೆಯಂತಹ ಭಾರೀ ದೊಡ್ಡ ದೊಡ್ಡ ಆರೋಪಗಳನ್ನು ಆವಿಷ್ಕರಿಸಲು ನಿರ್ಬಂಧಿತರಾಗಿದ್ದಾರೆ. ಚರ್ಚೆ ಮತ್ತು ಸಂವಾದಗಳು ಶಿಕ್ಷಣ ಮತ್ತು ಚುನಾವಣಾ ಕ್ಷೇತ್ರವನ್ನು ಮೀರಿ ಆರ್ಥಿಕ, ಸಾಮಾಜಿಕ ಮತ್ತಿತರ ಹಲವಾರು ರಂಗಗಳಲ್ಲಿ ನಡೆಯುತ್ತಿರುವ ಜನದ್ರೋಹಿ ಹಾಗೂ ಸಂವಿಧಾನ ವಿರೋಧಿ ಅಪರಾಧಗಳ ವಿರುದ್ಧ ಬಂಡಾಯ ಪ್ರಚೋದಿಸುವ ಹಂತಕ್ಕೆ ವಿಸ್ತರಿಸಿವೆ. ಈ ಬಾರಿ ತೀರಾ ಆರಂಭಿಕ ಹಂತದಲ್ಲೇ ಕಾಂಗ್ರೆಸ್ ಪಕ್ಷ ಮತ್ತು ರಾಹುಲ್ ಗಾಂಧಿ ಆಂದೋಲನದ ಅಗ್ರಪಂಕ್ತಿಯಲ್ಲಿ ಕಾಣಿಸಿಕೊಂಡಿದ್ದಾರೆ. ಆಪ್ ಪಾರ್ಟಿ, ಎಸ್ಪಿ, ಸಿಪಿಐ(ಎಂ), ಆರ್ಜೆಡಿ, ಶಿವಸೇನೆ ಮತ್ತಿತರ ಪ್ರಮುಖ ಪಕ್ಷಗಳ ನಾಯಕರು ಕೂಡಾ ಭಾರೀ ಉತ್ಸಾಹದೊಂದಿಗೆ ಚಳವಳಿಯಲ್ಲಿ ಸಕ್ರಿಯರಾಗಿದ್ದಾರೆ. ಬೂಟುಭಕ್ತ ಮಡಿಲ ಮಾಧ್ಯಮಗಳು ಈ ಎಲ್ಲ ಪಕ್ಷಗಳ ಮತ್ತು ಸಿಜೆಪಿಯ ನಾಯಕರ ಬಾಯಿಗಳಿಗೆ ಮೈಕು ತುರುಕಿ, ಸಾವಿರ ಪ್ರಶ್ನೆಗಳನ್ನು ಕೇಳಿ, ಅವರ ಬಾಯಿಂದ ಪರಸ್ಪರರ ವಿರುದ್ಧ ಏನಾದರೊಂದು ಮಾತನ್ನು ಹೊರಡಿಸಲು ಬಹಳಷ್ಟು ಹೆಣಗಾಡಿವೆ. ಆದರೆ ಈ ತನಕ ಎಲ್ಲ ಪಕ್ಷಗಳ ನಾಯಕರು, ವಿಶೇಷವಾಗಿ ಸಿಜೆಪಿಯ ಎಳೆಯ ನಾಯಕರು ಬಹಳ ಪ್ರಬುದ್ಧವಾಗಿ ವರ್ತಿಸುತ್ತಾ ಬಂದಿದ್ದಾರೆ. ಪಕ್ಷದ ಹಿತಕ್ಕಿಂತ ಅಥವಾ ವ್ಯಕ್ತಿಗತ ಪ್ರತಿಷ್ಠೆಗಿಂತ ತಮಗೆಲ್ಲ ಹೊಸ ಚೈತನ್ಯ ನೀಡಿದ ಆಂದೋಲನದ ಗುರಿ ಮುಖ್ಯ ಎಂಬ ನಿಯಮವನ್ನು ಬಹುತೇಕ ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸಿದ್ದಾರೆ. ಆಂದೋಲನವನ್ನು ರಾಷ್ಟ್ರ ವಿರೋಧಿ, ವಿದೇಶಿ ಪ್ರೇರಿತ ಎಂದೆಲ್ಲ ನಿಂದಿಸಿದ ಮಾಧ್ಯಮಗಳು ನಗೆಪಾಟಲಿಗೀಡಾಗಿವೆ.
ಈ ಹಂತದಲ್ಲಿ, ಪ್ರಸ್ತುತ ಆಂದೋಲನದ ಕುರಿತಂತೆ ದೇಶದ ಒಂದು ದೊಡ್ಡ ಜನ ವಿಭಾಗವು ಬೆಳೆಸಿಕೊಂಡಿರುವ ಅತಿಯಾದ ಆಶಾವಾದ ಮಾತ್ರ, ಒಂದು ಕಳವಳಕಾರಿ ಬೆಳವಣಿಗೆಯಾಗಿ ಕಾಣಿಸುತ್ತಿದೆ. ಅವರು ಈ ಆಂದೋಲನದ ಮೂಲಕ ದೇಶದಲ್ಲಿ ಅಲ್ಪಾವಧಿಯಲ್ಲೇ ದೊಡ್ಡ ಮಟ್ಟದ ಕ್ರಾಂತಿಕಾರಿ ಬದಲಾವಣೆಗಳನ್ನು ನಿರೀಕ್ಷಿಸತೊಡಗಿದ್ದಾರೆ. ಇಂತಹ ಭಾವನಾತ್ಮಕ, ಉತ್ಪ್ರೇಕ್ಷಿತ ನಿರೀಕ್ಷೆಗಳು ತೀವ್ರ ನಿರಾಶೆ ಅಥವಾ ಭ್ರಮನಿರಸನಕ್ಕೆ ಕಾರಣವಾಗುತ್ತವೆ. ಇಂತಹ ಸನ್ನಿವೇಶಗಳಲ್ಲಿ ನಾಗರಿಕರು ತಮ್ಮ ಭಾವುಕ ಖಯಾಲಿಗಳಿಗೆ ಕಡಿವಾಣ ತೊಡಿಸಿ, ಪ್ರತಿಕೂಲ ವಾಸ್ತವಗಳ ಸಹಿತ ಎಲ್ಲ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಪರಿಸ್ಥಿತಿಯನ್ನು ವಸ್ತುನಿಷ್ಠವಾಗಿ ವಿಶ್ಲೇಷಿಸುವುದೊಳ್ಳೆಯದು. ಕೇವಲ ಆಕ್ರೋಶ, ಮತಪ್ರದರ್ಶನಗಳು, ಮೆರವಣಿಗೆಗಳು, ಭಾಷಣಗಳು ಅಥವಾ ಅಸಲಿ ಮತ್ತು ನಕಲಿ ಪೊಲೀಸರ ಲಾಠಿ, ಗುದ್ದು, ಒದೆತ, ಹಲ್ಲೆ, ಬಂಧನ, ಹಿಂಸೆ, ದೌರ್ಜನ್ಯಗಳು.... ಇವೆಲ್ಲಾ ಬದಲಾವಣೆಯ ಪ್ರಕ್ರಿಯೆಗೆ ಕೊಡುಗೆ ನೀಡುತ್ತವೆಯೇ ಹೊರತು ಅವು ನೇರವಾಗಿ ಬದಲಾವಣೆಯನ್ನು ತಂದು ಬಿಡುವುದಿಲ್ಲ. ಸಮಾಜವನ್ನು ತುರ್ತಾಗಿ ಬದಲಿಸಿ ಬಿಡುವ ಶಕ್ತಿ ಅವುಗಳಲ್ಲಿರುವುದಿಲ್ಲ. ಮೇಲ್ನೋಟಕ್ಕೆ ಬಹಳ ಯಶಸ್ವಿ ಎಂಬಂತೆ ಕಾಣಿಸಿದ ಅದೆಷ್ಟೋ ಆಂದೋಲನಗಳು ತಮ್ಮ ಬೇರುಗಳು ಆಳಕ್ಕೆ ತಲುಪಿಲ್ಲದ ಕಾರಣಕ್ಕೆ ಬಹುಬೇಗನೆ ಕುಸಿದು ಬಿದ್ದದ್ದಿದೆ. ಒಂದುವೇಳೆ ಇಂದಿನ ಆಂದೋಲನವು, ಕೆಲವು ಸಚಿವರ ರಾಜೀನಾಮೆ ಪಡೆಯುವಲ್ಲಿ ಅಥವಾ ಸಂಪೂರ್ಣ ಸರಕಾರವನ್ನೇ ಉರುಳಿಸುವಲ್ಲಿ ಯಶಸ್ವಿಯಾಗಿ ಬಿಟ್ಟರೂ, ಅದನ್ನು ಅಂತಿಮ ವಿಜಯ ಎನ್ನಲಾಗುವುದಿಲ್ಲ. ಒಂದು ಸರಕಾರ ಉರುಳಿದ ಮೇಲೆ, ಅದರ ಜಾಗದಲ್ಲಿ ಇನ್ನಾವ ಸರಕಾರ ಬರುತ್ತದೆ ಮತ್ತು ಅದು ಈಗಿನ ಸರಕಾರಕ್ಕಿಂತ ಯಾವ ಮಟ್ಟಿಗೆ ಭಿನ್ನವಾಗಿರುತ್ತದೆ? ಆ ಸರಕಾರ ಸಂವಿಧಾನಕ್ಕೆ ಎಷ್ಟು ನಿಷ್ಠವಾಗಿರುತ್ತದೆ? ಜನರ ಆಶೋತ್ತರಗಳ ಬಗ್ಗೆ ಎಷ್ಟು ಸಂವೇದನಾಶೀಲವಾಗಿರುತ್ತದೆ? ಇವೇ ಮುಂತಾದ ನಿರ್ಣಾಯಕ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ಸಿಗುವ ತನಕ ಭವಿಷ್ಯದ ಕುರಿತು ಜಾಗೃತ ಸಂಶಯವೇ ಸರಿಯಾದ ಧೋರಣೆ ಎನಿಸುತ್ತದೆ. ಸಮಾಜದಲ್ಲಿ ಆಶಾವಾದದ ಅಗತ್ಯ ಖಂಡಿತ ಇದೆ. ಆದರೆ ಅದು ಮಾನ್ಯವೆನಿಸುವುದು, ಭ್ರಮೆಗಳ ಬದಲು ವಾಸ್ತವಗಳ ಮೇಲೆ ನಿಂತಿದ್ದರೆ ಮಾತ್ರ.
2011ರಲ್ಲಿ ಅಣ್ಣಾ ಹಝಾರೆ ಎಂಬವರ ನೇತೃತ್ವದಲ್ಲಿ ಅಂದಿನ ಕೇಂದ್ರ ಸರಕಾರದ ಭ್ರಷ್ಟಾಚಾರ ಮತ್ತಿತರ ಹಗರಣಗಳ ವಿರುದ್ಧ ನಡೆದಿದ್ದ ಆಂದೋಲನ ಅನೇಕರಿಗೆ ನೆನಪಿರಬಹುದು. ಅಂದು ಅನೇಕ ಮುಗ್ಧ ಭಾರತೀಯರು ಹಝಾರೆಯ ಗಾಂಧಿ ಟೋಪಿ ಹಾಗೂ ಖಾದಿ ಉಡುಗೆಯನ್ನು ನೋಡಿ ಮತ್ತು ಅವರ ಬಾಯಿಂದ ಅನ್ನ ಸತ್ಯಾಗ್ರಹದಂತಹ ಮಾತುಗಳನ್ನು ಕೇಳಿ ಅವರು ಸಾಕ್ಷಾತ್ ಗಾಂಧೀಜಿಯ ಅವತಾರವೆಂದೇ ನಂಬಿದ್ದರು. ಅವರು ಕೆಲವು ಗೋಡ್ಸೆಗಳ ಕೈಗೊಂಬೆಯಾಗಿದ್ದಾರೆಂಬುದು ಹೆಚ್ಚಿನವರಿಗೆ ತಿಳಿದಿರಲಿಲ್ಲ. ಅವರ ಆಂದೋಲನ ಆರಂಭವಾದಾಗ ಹಲವರಿಗೆ ಅದೊಂದು ದೇಶಸೇವೆಯ ಕಾರ್ಯವಾಗಿ ಕಂಡಿತ್ತು. ‘ಕಳ್ಳರನ್ನು ಗದ್ದುಗೆಯಿಂದ ಇಳಿಸುವ’ ಈ ಹೋರಾಟಕ್ಕೆ ಸಕ್ರಿಯ ಬೆಂಬಲ ನೀಡಬೇಕಾದುದು ತಮ್ಮ ಧಾರ್ಮಿಕ, ರಾಷ್ಟ್ರೀಯ ಹಾಗೂ ನೈತಿಕ ಕರ್ತವ್ಯ ಎಂದೇ ಹೆಚ್ಚಿನ ನಾಗರಿಕರು ನಂಬಿದ್ದರು. ಕೊನೆಗೂ ಅಣ್ಣಾ ಹಝಾರೆ ಆಂದೋಲನ ಯಶಸ್ವಿಯಾಯಿತು. 2014ರಲ್ಲಿ ದೇಶದಲ್ಲಿ ಹೊಸ ಸರಕಾರ ಬಂತು. ಇನ್ನೇನು ಕೆಲವೇ ದಿನಗಳಲ್ಲಿ ಭಾರತವು ಸ್ವರ್ಗವಾಗಲಿದೆ, ದೇಶದೆಲ್ಲೆಡೆ ಸಂಪನ್ನತೆ ಉಕ್ಕಿಹರಿಯಲಿದೆ, ಭಾರತವು ಎಲ್ಲ ರಂಗಗಳಲ್ಲಿ ಜಗತ್ತಿಗೆಲ್ಲಾ ನಾಯಕತ್ವ ನೀಡಲಿದೆ.....ಇತ್ಯಾದಿ ನಿರೀಕ್ಷೆಗಳ ಒಂದು ಭಾರೀ ಬೃಹತ್ ಸೌಧವೇ ನಿರ್ಮಾಣವಾಯಿತು. ದಿನಗಳೆದಂತೆ ನಿರೀಕ್ಷೆಗಳ ಆ ಸೌಧ ವಾಸ್ತವಗಳ ಮುಂದೆ ಕುಸಿಯ ತೊಡಗಿತು. ಕಳ್ಳರನ್ನು ಗದ್ದುಗೆಯಿಂದ ಇಳಿಸುವ ಕನಸೇನೋ ನನಸಾಗಿತ್ತು. ಆದರೆ ಕಳ್ಳರ ಜಾಗದಲ್ಲಿ ಬಂದು ಗದ್ದುಗೆ ಹಿಡಿದವರು ನಿರ್ಲಜ್ಜ, ನಿಷ್ಕರುಣ ದರೋಡೆಕೋರರಾಗಿದ್ದರು. ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಪರಮ ಶತ್ರುಗಳಾಗಿದ್ದರು. ಪುರೋಹಿತರು ಮತ್ತು ಕುಬೇರರ ದಾಸರಾಗಿದ್ದರು. ಕೆಲವೇ ತಿಂಗಳಲ್ಲಿ ಈ ಮಂದಿಯ ನೈಜ ಬಣ್ಣವನ್ನು ಗುರುತಿಸಿದವರು, ತಮ್ಮ ತಪ್ಪನ್ನು ಅರಿತುಕೊಂಡರು. ನಾವು ಕಿತ್ತೊಗೆದ ಕಳ್ಳರು ಈ ದರೋಡೆಕೋರ ರಾಕ್ಷಸರಿಗಿಂತ ಸಾವಿರ ಪಾಲು ಉತ್ತಮರಾಗಿದ್ದರು ಎಂದು ಪರಿತಪಿಸತೊಡಗಿದರು. ಆದರೆ ಆಗಲೇ ತಡವಾಗಿತ್ತು. ನಾವೇ ನಿಮ್ಮ ವಿಮೋಚಕರು ಎಂದು ದರೋಡೆಕೋರರು ಜನಸಾಮಾನ್ಯರನ್ನು ನಂಬಿಸಿ ಬಿಟ್ಟಿದ್ದರು. ದರೋಡೆಯ ವಿರುದ್ಧ ಧ್ವನಿ ಎತ್ತುವುದೆಂದರೆ ದೇಶಕ್ಕೆ ಮತ್ತು ಧರ್ಮಕ್ಕೆ ದ್ರೋಹವೆಸಗುವುದೆಂದು ಮುಗ್ಧ ಜನತೆಗೆ ಮನವರಿಕೆ ಮಾಡಿಸಲಾಗಿತ್ತು. ಪ್ರತಿರೋಧದ ಎಲ್ಲ ಬಾಗಿಲುಗಳನ್ನು ಮುಚ್ಚಿಬಿಡಲಾಗಿತ್ತು. ಜಿರಳೆಗಳು ನುಸುಳಬಲ್ಲಷ್ಟು ಜಾಗ ಮಾತ್ರ ಎಲ್ಲೋ ತೆರೆದಿತ್ತು.
ಇಂದು ದೇಶದ ಮುಂದೆ ಮುಖ್ಯವಾಗಿ ಎರಡು ವಿಭಿನ್ನ ಶಕ್ತಿಗಳು ಮುಖಾಮುಖಿಯಾಗಿ ನಿಂತಿವೆ:
ಒಂದು ಕಡೆ ಬಿಜೆಪಿ ನೇತೃತ್ವದ ಸಂವಿಧಾನ ವಿರೋಧಿ, ಬಹುಜನ ವಿರೋಧಿ, ಮನುವಾದಿ, ಪುರೋಹಿತರು ಮತ್ತು ಕುಬೇರರ ಅಧಿಕಾರಾರೂಢ ವಿಷವೃಕ್ಷ ಇದೆ. ಅದರ ಹಿಂದೆ ಹಲವು ದಶಕಗಳ ವೈಚಾರಿಕ ವಿಷಬಿತ್ತನೆಯ ಇತಿಹಾಸ ಇದೆ. ತನ್ನ ಪ್ರಚಂಡ ಪ್ರಚಾರಬಲವನ್ನು ಬಳಸಿ ಅದು ತಾನೇ ದೇಶ ಹಾಗೂ ಧರ್ಮದ ರಕ್ಷಕ ಎಂದು ಮತ್ತು ತನ್ನ ವಿರೋಧಿಗಳೆಲ್ಲಾ ಧರ್ಮವಿರೋಧಿಗಳು ಹಾಗೂ ದೇಶದ್ರೋಹಿಗಳೆಂದು ತನ್ನ ಕೋಟ್ಯಂತರ ಬಲಿಪಶುಗಳನ್ನು ನಂಬಿಸಿದೆ. ಬೇರೆ ದೇಶಗಳಲ್ಲಿ ಸರ್ವಾಧಿಕಾರಿ ಶಕ್ತಿಗಳು ದಂಗೆ, ಮಿಲಿಟರಿ ಬಂಡಾಯ ಅಥವಾ ಯುದ್ಧದ ಮೂಲಕ ಪ್ರಜಾಸತ್ತಾತ್ಮಕ ಸರಕಾರವನ್ನು ಉರುಳಿಸಿ, ಜನಪರ ಸಂವಿಧಾನವನ್ನು ರದ್ದುಗೊಳಿಸಿ ತಮ್ಮ ಸರ್ವಾಧಿಕಾರವನ್ನು ಜನತೆಯ ಮೇಲೆ ಹೇರುತ್ತವೆ. ಆದರೆ ನಮ್ಮಲ್ಲಿ ಜನವಿರೋಧಿ ಕೇಸರಿ ಪಾಳಯವು ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ನಾಜೂಕಾಗಿ ತನ್ನ ಏಣಿಯಾಗಿಸಿಕೊಂಡು, ಆ ಮೂಲಕವೇ ವ್ಯವಸ್ಥೆಯ ತಲೆಯ ಮೇಲೆ ಹತ್ತಿ ಅದನ್ನು ತನ್ನ ಮುಷ್ಟಿಯೊಳಗೆ ಬಂಧಿಸಿಟ್ಟಿದೆ. ಹಿಂದೆ ನಮ್ಮ ವ್ಯವಸ್ಥೆಯಲ್ಲಿ, ಸರಕಾರ ದಾರಿ ತಪ್ಪಿದರೆ ಅದರ ಕಿವಿ ಹಿಡಿದು ಅದನ್ನು ಮತ್ತೆ ಸರಿದಾರಿಗೆ ಎಳೆದು ತರುವುದಕ್ಕೆ ವ್ಯವಸ್ಥೆಯೊಳಗೆಯೇ ಹಲವು ಸ್ವತಂತ್ರ ಹಾಗೂ ಸ್ವಾಯತ್ತ ಸಂಸ್ಥೆಗಳಿದ್ದವು. ಆದರೆ ವಿಷವೃಕ್ಷವು ಅಂತಹ ಎಲ್ಲ ಸಂಸ್ಥೆಗಳನ್ನು ನುಂಗಿ ನೀರು ಕುಡಿದಿದೆ. ಅದರ ಬಳಿ ಅಕ್ರಮವಾಗಿ ಸಂಪಾದಿಸಿದ ಅಪಾರ ಧನಬಲ ಇದೆ. ಪುರೋಹಿತರು ಮತ್ತು ಕುಬೇರರ ಬೆಂಬಲ ಇದೆ. ದೇಶದೆಲ್ಲೆಡೆ ಅದರ ಬಳಿ ತನ್ನದೇ ಆದ ಶಸ್ತ್ರಸಜ್ಜಿತ ಕಿಡಿಗೇಡಿ ಪಡೆಗಳಿವೆ. ನ್ಯಾಯಾಂಗ ಸಹಿತ ಎಲ್ಲ ಪ್ರಮುಖ ಸಂಸ್ಥೆಗಳಲ್ಲಿ ಅದು ಗಳಿಸಿಕೊಂಡಿರುವ ವಿಪರೀತ ಪ್ರಾತಿನಿಧ್ಯ ಮತ್ತು ಅಕ್ರಮ ಪ್ರಭಾವ ಬೇರೆ ಇದೆ.
ಇನ್ನೊಂದು ಕಡೆ ತಮ್ಮನ್ನು ಪ್ರಜಾಸತ್ತಾತ್ಮಕ, ಸಮಾಜವಾದಿ, ಸೆಕ್ಯುಲರ್, ಗಾಂಧಿವಾದಿ, ಭೀಮವಾದಿ, ಜನಪರ, ಬಹುಜನವಾದಿ ಎಂದೆಲ್ಲಾ ಪರಿಚಯಿಸಿಕೊಳ್ಳುವ ಹಲವಾರು ಪಕ್ಷಗಳ ಒಂದು ವಿಚ್ಛಿದ್ರ ಪಡೆ ಇದೆ. ಈಪಡೆಯಲ್ಲಿರುವ ಹತ್ತಾರು ಪಕ್ಷಗಳ ನಡುವೆ, ಆಡಳಿತ ಪಕ್ಷವನ್ನು ಸೋಲಿಸಿ ಗದ್ದುಗೆಯನ್ನು ನಮ್ಮದಾಗಿಸಿಕೊಳ್ಳಬೇಕು ಎಂಬೊಂದು ಅಂಶ ಬಿಟ್ಟರೆ ಬೇರೆ ಯಾವುದೇ ವಿಷಯದಲ್ಲಿ ಸಹಮತ ಇಲ್ಲ. ಈ ಪೈಕಿ ಯಾವುದೇ ಪಕ್ಷಕ್ಕೆ ತನ್ನ ತತ್ವ ಸಿದ್ಧಾಂತ ಏನು ಅಥವಾ ತನ್ನ ವೈಚಾರಿಕ ದಿಕ್ಕು ಯಾವುದು ಎಂಬ ಕುರಿತು ಯಾವುದೇ ಸ್ಪಷ್ಟತೆ ಇಲ್ಲ. ನಿಜವಾಗಿ ಈ ಪಕ್ಷಗಳ ನಡುವೆಯೇ ಅಧಿಕಾರಕ್ಕಾಗಿ ತೀವ್ರ ಸ್ವರೂಪದ ಪೈಪೋಟಿ ಇದೆ. ಕೆಲವು ರಾಜ್ಯಗಳಲ್ಲಂತೂ ಈ ಪಕ್ಷಗಳು ಬಿಜೆಪಿ ಮತ್ತದರ ಮಿತ್ರ ಪಕ್ಷಗಳಿಗಿಂತ ಯಾವುದಾದರೂ ಸೆಕ್ಯುಲರ್ ಪಕ್ಷವನ್ನು ಹೆಚ್ಚು ದ್ವೇಷಿಸುತ್ತವೆ. ಕೇಜ್ರಿವಾಲ್ ಅವರ ಆಪ್ ಪಕ್ಷವನ್ನೇ ನೋಡಿ. ಮನಮೋಹನ್ ಸಿಂಗ್ ಸರಕಾರವನ್ನು ಕೆಳಗಿಳಿಸುವ ಹೋರಾಟದಲ್ಲಿ ಬಿಜೆಪಿ ಜೊತೆ ಕೇಜ್ರಿವಾಲ್ ಕೂಡಾ ಮುಂಚೂಣಿಯಲ್ಲಿದ್ದರು. ಬಿಜೆಪಿ ಮತ್ತು ಕೇಜ್ರಿವಾಲ್ ನಡುವೆ ಯಾವುದೇ ಗಂಭೀರ ಸೈದ್ಧಾಂತಿಕ ಭಿನ್ನಾಭಿಪ್ರಾಯ ಇರುವುದು ಈ ತನಕ ಎಲ್ಲೂ ಸಾಬೀತಾಗಿಲ್ಲ. ಮಮತಾ ಬ್ಯಾನರ್ಜಿಯವರ ಟಿಎಂಸಿ ಪಕ್ಷ ಕಾಂಗ್ರೆಸ್ನೊಳಗಿಂದಲೇ ಬಂಡೆದ್ದು ಹೊರಹೋಗಿ ಆ ಬಳಿಕ ಕಾಂಗ್ರೆಸ್ ಅನ್ನೇ ತನ್ನ ಶತ್ರು ಎಂದು ಪರಿಗಣಿಸಿದ ಪಕ್ಷ. ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಎಡಪಕ್ಷಗಳು ಮಾಡಿದ್ದಕ್ಕಿಂತ ಹೆಚ್ಚು ಹಾನಿಯನ್ನು ಟಿಎಂಸಿ ಮಾಡಿದೆ. ಇತ್ತೀಚೆಗೆ ಬಿಜೆಪಿಯವರು ಟಿಎಂಸಿಯನ್ನು ಸಂಪೂರ್ಣ ದಿವಾಳಿಯಾಗಿಸಿದ ಬಳಿಕವಷ್ಟೇ ಮಮತಾ ಬ್ಯಾನರ್ಜಿ ಕಾಂಗ್ರೆಸ್ ಕಡೆಗೆ ಸ್ನೇಹ ಹಸ್ತ ಚಾಚಿದರು. ಅತ್ತ ಕೇರಳಂನಲ್ಲಿ ಕಾಂಗ್ರೆಸ್ ಮತ್ತು ಎಡಪಕ್ಷಗಳ ನಡುವಣ ಪೈಪೋಟಿ ಎಷ್ಟು ತೀವ್ರವಾಗಿದೆಯೆಂದರೆ ಅಲ್ಲಿ ಎರಡೂ ಕಡೆಯವರಿಗೆ ಬಿಜೆಪಿಯ ಅಸ್ತಿತ್ವವೇ ನೆನಪಾಗುವುದಿಲ್ಲ. ತಮಿಳುನಾಡಿನಲ್ಲಿ ಸದ್ಯ ಪ್ರಧಾನ ಪ್ರತಿಪಕ್ಷವಾಗಿರುವ ಡಿಎಂಕೆ ಒಂದು ಕಾಲದಲ್ಲಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟದ ಭಾಗವಾಗಿತ್ತು. ಆದರೆ ಈಗ ತಮಿಳುನಾಡಿನ ಮುಖ್ಯಮಂತ್ರಿ ಜೋಸೆಫ್ ವಿಜಯ್ ಮತ್ತವರ ಪಕ್ಷವೇ ಡಿಎಂಕೆ ದೃಷ್ಟಿಯಲ್ಲಿ ನಂಬರ್ ವನ್ ಶತ್ರುವಾಗಿಬಿಟ್ಟಿದೆ. ಅಷ್ಟೇ ಅಲ್ಲ, ವಿಜಯ್ ಜೊತೆ ಸ್ನೇಹ ಬೆಳೆಸಿಕೊಂಡದ್ದಕ್ಕಾಗಿ ಡಿಎಂಕೆ ಪಕ್ಷದ ದೃಷ್ಟಿಯಲ್ಲೀಗ ರಾಹುಲ್ ಗಾಂಧಿ ಮತ್ತವರ ಪಕ್ಷ ಕೂಡಾ ಪರಮ ಶತ್ರುವಾಗಿ ಬಿಟ್ಟಿದೆ. ಶಿವಸೇನೆಯ ಒಂದು ಬಣ ಇಂದು ಇಂಡಿಯಾ ಒಕ್ಕೂಟದ ಜೊತೆಗಿದೆ. ಆದರೆ ಸೆಕ್ಯುಲರ್ ಪಾಳಯದ ಮೈತ್ರಿಗಳಲ್ಲಿ ತತ್ವ ಸಿದ್ಧಾಂತಗಳಿಗೆ ಯಾವ ಪಾತ್ರವೂ ಇಲ್ಲ. ಎಲ್ಲವೂ ಕೇವಲ ತಕ್ಷಣದ ಅನಿವಾರ್ಯತೆ ಮತ್ತು ಹಿತಾಸಕ್ತಿಗಳಿಂದ ಪ್ರೇರಿತ ಮೈತ್ರಿಗಳು.
ಇದು ಎಷ್ಟೊಂದು ಮುಜುಗರದ ವಿಷಯ! ಇಂದು ಆಡಳಿತ ಪಕ್ಷದಲ್ಲಿ ಮಂತ್ರಿ, ಮುಖ್ಯಮಂತ್ರಿ, ಸಂಸದ ಮತ್ತಿತರ ಹುದ್ದೆಗಳಲ್ಲಿ ಮಿಂಚುತ್ತಿರುವ ಅದೆಷ್ಟೋ ನಾಯಕರು ಇದೇ ಸೆಕ್ಯುಲರ್ ಪಾಳಯದಿಂದ ಆ ಕಡೆಗೆ ವಲಸೆ ಹೋದವರು. ಆ ಕಡೆಯಿಂದ ಒಳ್ಳೆಯ ಆಫರ್ ಏನಾದರೂ ಬಂದರೆ ಆಚೆಗೆ ಹಾರಿಹೋಗಲು ತವಕಿಸುತ್ತಿರುವ ಎಷ್ಟೋ ಅತೃಪ್ತ ಚೇತನಗಳು ಸೆಕ್ಯುಲರ್ ಶಿಬಿರದಲ್ಲಿ ಇಂದು ಕೂಡಾ ಎದ್ದು ಕಾಣುತ್ತಿವೆ. ಈ ರೀತಿ ಯಾವುದೇ ವೈಚಾರಿಕ ಸ್ಪಷ್ಟತೆ ಇಲ್ಲದ, ಯಾವುದೇ ಬದ್ಧತೆ ಇಲ್ಲದ ಹಲವು ಪಕ್ಷಗಳ ಒಕ್ಕೂಟದಿಂದ ದೇಶವು ಏನನ್ನು ತಾನೇ ನಿರೀಕ್ಷಿಸಲು ಸಾಧ್ಯ? ಇಂತಹ ಸಂದರ್ಭ ಸಾಧಕರ ಪಕ್ಷಗಳು ಸೇರಿ ಒಂದು ಸರಕಾರವನ್ನು ಬೀಳಿಸಿದರೂ, ಒಂದು ಪರ್ಯಾಯ ಸರಕಾರವನ್ನು ರಚಿಸಲು ಅವುಗಳಿಗೆ ಸಾಧ್ಯವೇ? ಒಂದು ವೇಳೆ ಪರ್ಯಾಯ ಸರಕಾರವನ್ನು ರಚಿಸಿದರೂ ಅದು ಎಷ್ಟು ದಿನ ಬಾಳೀತು? ಇವೆಲ್ಲಾ ಸದ್ಯ ಆಶಾವಾದದ ಉನ್ಮಾದದಲ್ಲಿರುವ ನಮ್ಮ ಮುಗ್ಧ ನಾಗರಿಕರು ತಮ್ಮನ್ನೇ ಕೇಳಿಕೊಳ್ಳಬೇಕಾದ ಕೆಲವು ಕಹಿ ಪ್ರಶ್ನೆಗಳು.
ಜಿರಳೆ ಪಕ್ಷದ ಈವರೆಗಿನ ಸಾಧನೆಗಳಿಗಾಗಿ ನಮ್ಮ ಹೃದಯಾಂತರಾಳದ ಅಭಿನಂದನೆಗಳು. ಆದರೆ ಆ ಪಕ್ಷ ಮತ್ತದರ ನಾಯಕರ ವಿಚಾರಧಾರೆ ಏನು? ಅದರ ದೀರ್ಘಾವಧಿ ಅಜೆಂಡಾ ಏನು? ನೀಟ್ ಮತ್ತು ಎಸ್ಐಆರ್ ಕುರಿತು ಜಿರಳೆ ಪಕ್ಷದ ಧೋರಣೆಯನ್ನು ಎಲ್ಲರೂ ಒಪ್ಪಿದ್ದಾರೆ, ಹೊಗಳಿದ್ದಾರೆ. ಆದರೆ ತುಂಬಾ ಸಂಕೀರ್ಣ ಸ್ವರೂಪದ ಭಾರತೀಯ ಸಮಾಜಕ್ಕೆ ಹಾಗೂ ಅದರ ವರ್ತಮಾನ ಮತ್ತು ಭವಿಷ್ಯಗಳಿಗೆ ಮುಖ್ಯವಾಗಿರುವ ಇತರ ನೂರಾರು ವಿಷಯಗಳಲ್ಲಿ ಅದರ ನಿಲುವೇನು? ಜಿರಳೆ ಪಕ್ಷದ ನಾಯಕರು ಸಾಮಾಜಿಕ ಸಮಾನತೆ, ಆರ್ಥಿಕ ನ್ಯಾಯ, ಅಸ್ಪಶ್ಯತೆ, ಜಾತಿ ತಾರತಮ್ಯ, ಮೀಸಲಾತಿ, ಆರ್ಥಿಕ ಧೋರಣೆಗಳು ಇತ್ಯಾದಿಗಳ ಕುರಿತು ಏನನ್ನುತ್ತಾರೆ? ದುರ್ಬಲ ವರ್ಗಗಳ ಸಬಲೀಕರಣದ ಬಗ್ಗೆ, ನಿರ್ಣಾಯಕ ಕ್ಷೇತ್ರಗಳಲ್ಲಿ ಎಲ್ಲ ವರ್ಗಗಳಿಗೆ ನ್ಯಾಯೋಚಿತ ಹಾಗೂ ಆನುಪಾತಿಕ ಪ್ರಾತಿನಿಧ್ಯ ಒದಗಿಸುವ ಬಗ್ಗೆ, ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸುವ ಬಗ್ಗೆ, ಕೃಷಿ, ವ್ಯವಸಾಯ, ಕ್ರೀಡೆ, ಕಲೆ, ಸಾಹಿತ್ಯ, ರಕ್ಷಣೆ ಇತ್ಯಾದಿಗಳ ಬಗ್ಗೆ ಅವರ ದೃಷ್ಟಿಕೋನವೇನು? ಮಹಿಳೆಯರು, ಮಕ್ಕಳು, ವೃದ್ಧರು ವಿದ್ಯಾರ್ಥಿಗಳು, ರೈತರು, ಕಾರ್ಮಿಕರು, ಪರಿಸರ, ನಗರೀಕರಣ, ವಿಜ್ಞಾನ, ತಂತ್ರಜ್ಞಾನ, ಸ್ವಾವಲಂಬನೆ ಇತ್ಯಾದಿ ವಿಷಯಗಳಲ್ಲಿ ಅವರ ಬಳಿ ಇರುವ ಪರ್ಯಾಯ ಯೋಜನೆಗಳೇನು? ಕೆಲವು ದಶಕಗಳಲ್ಲಿ ಅವರು ಕಾಣಬಯಸುವ ದೊಡ್ಡ ಬದಲಾವಣೆಗಳೇನು ಮತ್ತು ಅದಕ್ಕಾಗಿ ಅವರು ಮಾಡಬಯಸುವ ಸಿದ್ಧತೆಗಳೇನು? ಇವೇ ಮುಂತಾದ ವಿಷಯಗಳ ಬಗ್ಗೆ ಈ ವರೆಗೆ ಜನರಿಗೆ ಯಾವುದೇ ಅಧಿಕೃತ ಮಾಹಿತಿ ದೊರೆತಿಲ್ಲ. ಜಿರಳೆ ಪಡೆಯು ಆರಂಭಿಸಿರುವ ಆಂದೋಲನವು ನಿಜಾರ್ಥದಲ್ಲಿ ದೊಡ್ಡ ಬದಲಾವಣೆಗೆ ಕಾರಣವಾಗುವಷ್ಟು ಮಟ್ಟಿಗೆ ಬೆಳೆಯಬೇಕಿದ್ದರೆ ಪ್ರಸ್ತುತ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ಸಿಗಬೇಕು. ನಮ್ಮ ಪ್ರಧಾನ ಧಾರೆಯ ರಾಜಕೀಯ ಪಕ್ಷಗಳ ಬಳಿ ಎಲ್ಲ ವಿಷಯಗಳಲ್ಲೂ ತಮ್ಮದೇ ಆದ ಒಂದು ಔಪಚಾರಿಕ ನಿಲುವಿರುತ್ತದೆ. ಆದರೆ ಆ ಪಕ್ಷಗಳು ಸ್ವತಃ ತಮ್ಮ ಔಪಚಾರಿಕ ನಿಲುವುಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಜಿರಳೆ ಪಡೆಯಿಂದ ದೇಶದ ಜನತೆ ಪ್ರಾಮಾಣಿಕ ಹಾಗೂ ನಿಷ್ಠುರ ನಿಲುವು ಮತ್ತು ಬದ್ಧತೆಯನ್ನು ನಿರೀಕ್ಷಿಸುತ್ತದೆ.
ಅಣ್ಣಾ ಹಝಾರೆ ನೇತೃತ್ವದ ಆಂದೋಲನವು ಕೇವಲ ಆಳುವ ಕೈಗಳನ್ನು ಬದಲಾಯಿಸಿತು. ಬದಲಾವಣೆ ಕೂಡಾ ಹಿತಕ್ಕಿಂತ ಹೆಚ್ಚು ಅಹಿತಕ್ಕೆ ಕಾರಣವಾಯಿತು. ಕಳ್ಳರನ್ನು ಹೊರಗಟ್ಟಿ ಅವರ ಸ್ಥಾನದಲ್ಲಿ ದರೋಡೆಕೋರರನ್ನು ಕೂರಿಸಿತು. ಅಂತಹ ತಪ್ಪನ್ನು ಮತ್ತೊಮ್ಮೆ ಮಾಡಲು ಭಾರತ ಖಂಡಿತ ತಯಾರಿಲ್ಲ. ಸದ್ಯ ಜಿರಳೆ ಪಕ್ಷದ ಯುವ ನಾಯಕರ ಪರಿಚಯ ಉಳ್ಳವರಿಗೆಲ್ಲಾ ಅವರ ಮೇಲೆ ನಂಬಿಕೆ ಇದೆ. ಯಾವುದೇ ಇತಿಹಾಸದ ಹಂಗಿಲ್ಲದ, ಯಾವುದೇ ‘ಹಿನ್ನೆಲೆ’ಯ ಹೊರೆ ಹೊತ್ತಿಲ್ಲದ, ಯಾವುದೇ ಕಡೆಗೆ ವಾಲಿಲ್ಲದ, ಯಾವುದೇ ಪೂರ್ವಾಗ್ರಹದಿಂದ ಪೀಡಿತವಲ್ಲದ ಈ ಯುವ ನಾಯಕರು ಈವರೆಗೆ ಸಾಕಷ್ಟು ಪ್ರಬುದ್ಧತೆ ಮೆರೆದಿದ್ದಾರೆ. ಈ ಅಪರಿಚಿತ ಯುವ ನಾಯಕರು ಆರಂಭಿಸಿದ ಆಂದೋಲನದಲ್ಲಿ, ಮುಂದಿನ ಹಂತಗಳಲ್ಲಿ ಬಂದು ಸೇರಿದ ಪಕ್ಷಗಳು ಮತ್ತು ರಾಜಕೀಯ ನಾಯಕರು ಎಷ್ಟೇ ದೊಡ್ಡವರಾಗಿದ್ದರೂ, ಆಂದೋಲನಕ್ಕೆ ಚಾಲನೆ ನೀಡಿ ಜನರ ವಿಶ್ವಾಸ ಗೆದ್ದ ಅಪರಿಚಿತರೇ ಆಂದೋಲನದ ನೈಜ ನಾಯಕರು. ಅವರೇ ಈ ಆಂದೋಲನವನ್ನು ಮುನ್ನಡೆಸಿ ಗುರಿ ಮುಟ್ಟಿಸಬೇಕು. ವಿವಿಧ ಕ್ಷೇತ್ರದಲ್ಲಿ ತಮ್ಮ ಗುರಿಯನ್ನು ಘೋಷಿಸಬೇಕು. ಆ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿ ಅವರು, ರಾಷ್ಟ್ರೀಯ ಮಹತ್ವದ ಎಲ್ಲ ನಿರ್ಣಾಯಕ ವಿಷಯಗಳಲ್ಲಿ ತಮ್ಮ ವೈಚಾರಿಕ ನಿಲುವು ಏನು ಎಂಬುದನ್ನು ನಿರ್ಧರಿಸಬೇಕು. ವಿವಿಧ ಪಕ್ಷಗಳು ತಮ್ಮೆಲ್ಲಾ ಭಿನ್ನಮತಗಳ ಹೊರತಾಗಿಯೂ ದೇಶದ ಹಿತಕ್ಕಾಗಿ ಒಂದು ಕನಿಷ್ಠ ಪ್ರಣಾಳಿಕೆಗೆ ಬದ್ಧರಾಗುವಂತೆ ಅವರ ಮನವೊಲಿಸಬೇಕು. ಜನತೆಯ ಮರ್ಜಿಯನ್ನು ಸ್ವೀಕರಿಸುವಂತೆ ರಾಜಕೀಯ ಪಕ್ಷಗಳನ್ನು ನಿರ್ಬಂಧಿಸಬೇಕು. ಇಂದು ಜನರು ಜಿರಳೆ ಪಡೆಯನ್ನು ಒಂದು ಪಕ್ಷವಾಗಿ ಕಾಣುವ ಬದಲು ಒಂದು ಆಂದೋಲನವಾಗಿ ಕಾಣುತ್ತಿದ್ದಾರೆ. ಈ ಇಮೇಜನ್ನು ಉಳಿಸಿಕೊಂಡರೆ ನಮ್ಮ ದೇಶದಲ್ಲಿರುವ, ಯಾವುದೇ ತಾತ್ವಿಕ ಬದ್ಧತೆ ಇಲ್ಲದ ಎಲ್ಲ ದಿಕ್ಕೆಟ್ಟ ಸೆಕ್ಯುಲರ್ ಪಕ್ಷಗಳನ್ನು ಜೊತೆಯಾಗಿಟ್ಟು ವ್ಯವಸ್ಥೆಯನ್ನು ಜನಹಿತದ ಹಾದಿಯಲ್ಲಿ ಮುನ್ನಡೆಸಲು ಜಿರಳೆ ಪಡೆಗೆ ಖಂಡಿತ ಸಾಧ್ಯವಾದೀತು.






