Chikkaballapur | ಅಂಗನವಾಡಿ ಮೇಲ್ಛಾವಣಿ ಕುಸಿದು ನಾಲ್ವರು ಮಕ್ಕಳಿಗೆ ಗಾಯ

ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ದೊಡ್ಡಬೊಮ್ಮನಹಳ್ಳಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಶುಕ್ರವಾರ ಮಧ್ಯಾಹ್ನ ಮೇಲ್ಛಾವಣಿಯ ಕಾಂಕ್ರಿಟ್ ಭಾಗ ಕುಸಿದು ಬಿದ್ದ ಪರಿಣಾಮ ನಾಲ್ವರು ಮಕ್ಕಳು ಗಾಯಗೊಂಡಿರುವುದು ವರದಿಯಾಗಿದೆ.
ಅಂಗನವಾಡಿ ಶಿಕ್ಷಕಿ ಮಕ್ಕಳಿಗೆ ಪಾಠ ಮಾಡುತ್ತಿದ್ದ ವೇಳೆ ಏಕಾಏಕಿ ಮೇಲ್ಛಾವಣಿಯ ಕಾಂಕ್ರೀಟ್ ತುಂಡುಗಳು ಮಕ್ಕಳ ಮೇಲೆ ಕುಸಿದು ಬಿದ್ದವು ಎನ್ನಲಾಗಿದೆ. ಪರಿಣಾಮ ಜೀವಿಕಾ, ಋತಿಕ್ಷಾ ಸಹಿತ ನಾಲ್ವರು ಮಕ್ಕಳ ತಲೆ ಹಾಗೂ ದೇಹಕ್ಕೆ ತೀವ್ರ ಗಾಯಗಳಾಗಿವೆ. ಗಂಭೀರವಾಗಿ ಗಾಯಗೊಂಡ ಜೀವಿಕಾಳನ್ನು ತಕ್ಷಣ ಚಿಂತಾಮಣಿಯ ಪೀಪಲ್ಸ್ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಉಳಿದ ಮಕ್ಕಳಿಗೆ ಕುರುಬೂರು ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಕೂಲಿಗೆ ಹೋಗುವ ಬಡ ಕುಟುಂಬಗಳಾದ ನಮಗೆ ಮಕ್ಕಳೇ ಆಸರೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ನಮ್ಮ ಮಕ್ಕಳ ಜೀವ ಅಪಾಯದಲ್ಲಿದೆ. ಚಿಕಿತ್ಸೆಯ ವೆಚ್ಚವನ್ನು ಭರಿಸುವ ಸ್ಥಿತಿಯಲ್ಲೂ ನಾವು ಇಲ್ಲ ಎಂದು ಗಾಯಗೊಂಡ ಮಗುವಿನ ಪೋಷಕರು ಕಣ್ಣೀರಿಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಘಟನೆಗೆ ಕಾರಣವಾದ ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಗಾಯಗೊಂಡ ಮಕ್ಕಳಿಗೆ ಉಚಿತ ಉನ್ನತ ಚಿಕಿತ್ಸೆ ಹಾಗೂ ಸೂಕ್ತ ಪರಿಹಾರ ನೀಡಬೇಕು ಮತ್ತು ಜಿಲ್ಲೆಯಲ್ಲಿರುವ ಎಲ್ಲಾ ಶಿಥಿಲಗೊಂಡ ಅಂಗನವಾಡಿ ಕಟ್ಟಡಗಳನ್ನು ತಕ್ಷಣ ಪರಿಶೀಲಿಸಿ ಸುರಕ್ಷತಾ ಕ್ರಮ ಕೈಗೊಳ್ಳಬೇಕು ಎಂದು ದೊಡ್ಡಬೊಮ್ಮನಹಳ್ಳಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.






