Chikkaballapur | ವಿಧ್ವಂಸಕ ಕೃತ್ಯಕ್ಕೆ ಸಂಚು ಆರೋಪ; ಯುವಕನ ಬಂಧನ

ಸಾಂದರ್ಭಿಕ ಚಿತ್ರ | PC : AI
ಚಿಕ್ಕಬಳ್ಳಾಪುರ : ವಿಧ್ವಂಸಕ ಕೃತ್ಯಗಳನ್ನು ನಡೆಸಲು ಸಂಚು ರೂಪಿಸುತ್ತಿದ್ದ ಆರೋಪದ ಮೇಲೆ ಚಿಕ್ಕಬಳ್ಳಾಪುರ ನಗರದಲ್ಲಿ ಶಬ್ಬೀರ್ ಎಂಬ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಟೆಲಿಗ್ರಾಂ ಆ್ಯಪ್ನಲ್ಲಿ ಭಯೋತ್ಪಾದನೆಗೆ ಸಂಬಂಧಿಸಿದ ಗ್ರೂಪ್ವೊಂದನ್ನು ರಚಿಸಿಕೊಂಡು, ವಿವಿಧ ಭಾಗಗಳಲ್ಲಿರುವ ಕೆಲವರೊಂದಿಗೆ ವಿಧ್ವಂಸಕ ಕೃತ್ಯಗಳ ಕುರಿತು ಚರ್ಚೆ ನಡೆಸುತ್ತಿದ್ದ ಎನ್ನಲಾಗಿದೆ.
ಈ ಸಂಬಂಧ ಚಿಕ್ಕಬಳ್ಳಾಪುರ ನಗರ ಪೊಲೀಸರು (BNS) ಸೆಕ್ಷನ್ 113ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಏನಾಯಿತು ಎಂಬುದೇ ನಮಗೆ ಗೊತ್ತಿಲ್ಲ : ತಾಯಿ
ʼಶಬ್ಬೀರ್ ಅಮಾಯಕನಾಗಿದ್ದು, ಆತನಿಗೆ ಯಾವುದೇ ವಿಧ್ವಂಸಕ ಕೃತ್ಯದ ಬಗ್ಗೆ ತಿಳಿದಿಲ್ಲʼ ಎಂದು ಶಬ್ಬೀರ್ ಅವರ ತಾಯಿ ಹಾಗೂ ಸಹೋದರ ಸುದ್ದಿಗಾರರೊಂದಿಗೆ ತಿಳಿಸಿದ್ದಾರೆ.
ʼಶಬ್ಬೀರ್ ಮನೆಯಲ್ಲಿ ಇರುತ್ತಿದ್ದ. ಯಾರೊಂದಿಗೂ ಹೆಚ್ಚು ಬೆರೆಯುತ್ತಿರಲಿಲ್ಲ. ಏನಾಯಿತು ಎಂಬುದೇ ನಮಗೆ ಗೊತ್ತಿಲ್ಲ. ಪೊಲೀಸರು ಆತನನ್ನು ಬಂಧಿಸಿರುವುದರಿಂದ ನಮಗೆ ಭಯ, ಆತಂಕ ಉಂಟಾಗಿದೆʼ ಎಂದು ಹೇಳಿದ್ದಾರೆ.
ʼಶಬ್ಬೀರ್ ಯಾವುದೇ ತಪ್ಪು ಮಾಡಿಲ್ಲ. ಆತ ಯಾರ ಜೊತೆ ಸಂಪರ್ಕದಲ್ಲಿದ್ದ ಎಂಬುದರ ಬಗ್ಗೆಯೂ ನಮಗೆ ಮಾಹಿತಿ ಇಲ್ಲ. ಪೊಲೀಸರು ಆತನನ್ನು ಏಕೆ ಬಂಧಿಸಿದ್ದಾರೆ ಎಂಬುದು ನಮಗೆ ಅರ್ಥವಾಗುತ್ತಿಲ್ಲʼ ಎಂದು ಅವರು ತಿಳಿಸಿದ್ದಾರೆ.
ಕುಟುಂಬದ ಆರ್ಥಿಕ ಪರಿಸ್ಥಿತಿಯ ಬಗ್ಗೆ ಮಾತನಾಡಿದ ಶಬ್ಬೀರ್ ಅವರ ತಾಯಿ, ಪತಿ ಕೆಲಸಕ್ಕೆ ಹೋಗುತ್ತಿಲ್ಲ. ತಾವು ಚಿಕ್ಕ ಅಂಗಡಿಯಲ್ಲಿ ವ್ಯಾಪಾರ ಮಾಡಿಕೊಂಡು ಕುಟುಂಬದ ಜೀವನ ಸಾಗಿಸುತ್ತಿದ್ದೇನೆ. ಇಂತಹ ಸಂದರ್ಭದಲ್ಲಿ ಮಗನ ಬಂಧನದಿಂದ ಕುಟುಂಬ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದೆ ಎಂದು ಹೇಳಿದ್ದಾರೆ.






