Chikkaballapur | ಲಾರಿಗೆ ಬಸ್ ಢಿಕ್ಕಿ ; ಚಾಲಕ ಸಹಿತ ಇಬ್ಬರು ಮೃತ್ಯು, ಹಲವರಿಗೆ ಗಾಯ

ಚಿಕ್ಕಬಳ್ಳಾಪುರ : ಬೆಂಗಳೂರು–ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ-44ರಲ್ಲಿ ಚಿಕ್ಕಬಳ್ಳಾಪುರ ತಾಲೂಕಿನ ದೊಡ್ಡಪೈಲಗುರ್ಕಿ ಸಮೀಪ ಮಂಗಳವಾರ ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಆಂಧ್ರಪ್ರದೇಶ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಎಪಿಎಸ್‌ಆರ್‌ಟಿಸಿ) ಬಸ್ ಚಾಲಕ ಸೇರಿದಂತೆ ಇಬ್ಬರು ಮೃತಪಟ್ಟಿದ್ದಾರೆ.
ಕರ್ನೂಲಿನಿಂದ ಬೆಂಗಳೂರಿನತ್ತ ಬರುತ್ತಿದ್ದ ಬಸ್, ಹೆದ್ದಾರಿಯಲ್ಲಿ ಮುಂದೆ ಸಾಗುತ್ತಿದ್ದ ಲಾರಿಗೆ ಢಿಕ್ಕಿ ಹೊಡೆದ ಪರಿಣಾಮ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಅಪಘಾತದ ತೀವ್ರತೆಗೆ ಬಸ್‌ನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಚಾಲಕ ಸೀಟಿನಲ್ಲೇ ಸಿಲುಕಿಕೊಂಡಿದ್ದರು.
ಅಪಘಾತದಲ್ಲಿ ಬಸ್ ಚಾಲಕ ಲಕ್ಷ್ಮಣ್ (52) ಹಾಗೂ ಬೆಂಗಳೂರಿನ ನಿವಾಸಿ, ಪ್ರಯಾಣಿಕ ಉಮಾಕಾಂತ್ ರಾವ್ (77) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, ಗಾಯಾಳುಗಳನ್ನು ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆ ಸೇರಿದಂತೆ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.
ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಹಾಗೂ ರಕ್ಷಣಾ ಸಿಬ್ಬಂದಿ ಕ್ರೇನ್ ಸಹಾಯದಿಂದ ಬಸ್‌ನ ಮುಂಭಾಗವನ್ನು ತೆರವುಗೊಳಿಸಿ ಚಾಲಕನ ಮೃತದೇಹವನ್ನು ಹೊರತೆಗೆದರು.
ಪೇರೆಸಂದ್ರ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತಕ್ಕೀಡಾದ ಬಸ್ ಹಾಗೂ ಲಾರಿಯನ್ನು ತೆರವುಗೊಳಿಸಿದ ಬಳಿಕ ಹೆದ್ದಾರಿಯಲ್ಲಿ ವಾಹನಗಳ ಸಂಚಾರವನ್ನು ಪುನಃ ಸುಗಮಗೊಳಿಸಲಾಯಿತು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅಪಘಾತದ ಕಾರಣ ಕುರಿತು ತನಿಖೆ ಮುಂದುವರಿಸಿದ್ದಾರೆ.






