ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ಚಿಕ್ಕಬಳ್ಳಾಪುರ ಜಿಲ್ಲಾ ಯೂತ್ ಕಾಂಗ್ರೆಸ್ ಪ್ರತಿಭಟನೆ

ಚಿಕ್ಕಬಳ್ಳಾಪುರ : ಪ್ರಶ್ನೆಪತ್ರಿಕೆಗಳು ಸೋರಿಕೆಯಾಗುತ್ತವೆ ಎಂದರೆ ಏನರ್ಥ, ಇದರಿಂದ ವಿದ್ಯಾರ್ಥಿಗಳ ಭವಿಷ್ಯ ಹಾಳಾಗುತ್ತದೆ ಎಂಬ ಅರಿವಿಲ್ಲವೇ? ಇದನ್ನು ಪ್ರಶ್ನಿಸುವುದು ನಮ್ಮ ಹಕ್ಕು. ಕೇಂದ್ರ ಸರಕಾರ ಹಾಗೂ ನರೇಂದ್ರ ಮೋದಿ ಅವರು ಇದರ ಜವಾಬ್ದಾರಿ ಹೊರಬೇಕು ಎಂದು ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ಆಗ್ರಹಿಸಿದರು.
ಚಿಕ್ಕಬಳ್ಳಾಪುರ ಜಿಲ್ಲಾ ಪ್ರವಾಸದ ವೇಳೆ ಜಿಲ್ಲಾ ಯೂತ್ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿದ್ದ 'ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ' ಪ್ರತಿಭಟನೆಯಲ್ಲಿ ಅವರು ಭಾಗವಹಿಸಿ, ಮಾತನಾಡಿದರು.
ನಿನ್ನೆ ನವದೆಹಲಿಯಲ್ಲಿ ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದ ಲೋಕಸಭೆಯ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಸೇರಿದಂತೆ ಇತರೆ ಕಾಂಗ್ರೆಸ್ ಮುಖಂಡರನ್ನು ಬಂಧಿಸಿದ್ದರು. ವಿದ್ಯಾರ್ಥಿಗಳ ಪರವಾಗಿ ನಿಂತು ಪ್ರಶ್ನಿಸುವವರನ್ನೇ ಬಂಧಿಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ದೇಶದ ವಿದ್ಯಾಮಾನವನ್ನು ತಾವು ಗಮನಿಸಿದ್ದೀರಿ. ಈ ದೇಶದ ಯುವಕರಿಗೆ ಶಿಕ್ಷಣ ಕೊಡಬೇಕು ಎಂದು ಕಾನೂನಾತ್ಮಕವಾಗಿ ಅವಕಾಶ ಕಲ್ಪಿಸಲಾಗಿದೆ. ಪ್ರತಿಯೊಬ್ಬ ಪ್ರಜೆಯೂ ಶಿಕ್ಷಣ ಪಡೆಯಬೇಕು. ಈ ಬಗ್ಗೆ ಸರ್ಕಾರ ಜವಾಬ್ದಾರಿ ವಹಿಸಬೇಕು ಎಂದು ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ತಿಳಿಸಿದ್ದಾರೆ. ಲಕ್ಷಾಂತರ ಜನ ಯುವಕರು ಮೆಡಿಕಲ್, ಇಂಜಿನಿಯರ್ ಕೋರ್ಸ್ ಪಡೆದುಕೊಂಡು ಪ್ರಪಂಚದಾದ್ಯಂತ ಕೆಲಸ ಮಾಡುತ್ತಿದ್ದಾರೆ ಎಂದರು.
ಮೊದಲು ಸಿಇಟಿ ಪರೀಕ್ಷೆಯನ್ನು ರಾಜ್ಯ ಸರಕಾವೇ ಮಾಡುತ್ತಿತ್ತು. ಆ ಸಮಯದಲ್ಲಿ ಯಾವುದೇ ಸಮಸ್ಯೆಯಾಗದಂತೆ ಸಿಇಟಿ ನಡೆಯುತ್ತಿತ್ತು. ನಾನು ಉನ್ನತ ಶಿಕ್ಷಣ ಸಚಿವನಾಗಿದ್ದ ಸಮಯದಲ್ಲಿ ಅನೇಕ ವಿದ್ಯಾರ್ಥಿಗಳು ಬಂದು ಪರೀಕ್ಷೆ ಬರೆದಿದ್ದರು. ಆಮೇಲೆ ಸಿಇಟಿ ಬದಲಾಯಿಸಿದ ಕೇಂದ್ರ ಸರಕಾರ ನೀಟ್ ಪರೀಕ್ಷೆಯನ್ನು ಕೈಗೆತ್ತಿಕೊಂಡರು. ಅನೇಕರು ವಿರೋಧಿಸಿದರು, ವಿದ್ಯಾರ್ಥಿಗಳು ಒಪ್ಪಿಕೊಂಡರು. ಈಗ ನೋಡಿದರೆ ಪ್ರಶ್ನೆಪತ್ರಿಕೆಗಳು ಸೋರಿಕೆಯಾಗುತ್ತಿದೆ. ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಮಸ್ಯೆಯಾಗುತ್ತಿದೆ ಎಂದರು.
ದೇಶದ ಯುವಕರ ಭವಿಷ್ಯ ಮುಖ್ಯ. ಅವರಿಗೆ ಉತ್ತಮ ಶಿಕ್ಷಣ, ಉದ್ಯೋಗ ನೀಡುವುದು ನಮಗೆ ಮುಖ್ಯ. ಯುವಕರು ದೇಶವನ್ನು ಕಟ್ಟುವವರು, ಅವರ ಜೀವನ ರೂಪಿಸಬೇಕಿದೆ ಎಂದು ಹೇಳಿದರು.
ಇಂದು ಜಿಲ್ಲೆಯ ಪರಿಶೀಲನೆ ಮಾಡಲು ಬಂದಿದ್ದೇನೆ. ನಿಮ್ಮ ಜೊತೆ ದ್ವನಿಗೂಡಿಸಲು ಇಲ್ಲಿಗೆ ಬಂದಿದ್ದೇನೆ. ನಿಮ್ಮ ಭವಿಷ್ಯ ನಮಗೆ ಬಹಳ ಮುಖ್ಯ. ಕಾಂಗ್ರೆಸ್ ಪಕ್ಷ ಯಾವತ್ತೂ ಕೂಡ, ಯುವಕರ ಭವಿಷ್ಯವನ್ನು ಕಟ್ಟುವ ಕೆಲಸ ಮಾಡಿದೆ ಎಂದ ಅವರು, ನಮ್ಮ ಸರಕಾರ 72 ಸಾವಿರ ಸರಕಾರಿ ಹುದ್ದೆಗಳ ಭರ್ತಿಗೆ ಆದೇಶ ಹೊರಡಿಸಿದೆ. ಮುಂದೆ ಭವಿಷ್ಯದಲ್ಲಿ ಹೆಚ್ಚಿನ ನೇಮಕಾತಿ ಮಾಡುತ್ತೇವೆ ಎಂದು ಈ ವೇಳೆ ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಶಾಸಕರಾದ ಪ್ರದೀಪ್ ಈಶ್ವರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಕೇಶವ ರೆಡ್ಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ನಾಗಭೂಷಣ್ ಮತ್ತು ರಕ್ಷಿತ್ ರೆಡ್ಡಿ, ಜಿಲ್ಲಾ ಯೂತ್ ಕಾಂಗ್ರೆಸ್ ಅಧ್ಯಕ್ಷರಾದ ಕುಬೇರ್ ಅಚ್ಚು ಉಪಸ್ಥಿತರಿದ್ದರು.






