ಕೋಲಾರ–ಚಿಕ್ಕಬಳ್ಳಾಪುರ ಶಾಸಕರ ಸಭೆ: ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಅಸಮಾಧಾನ

ಕೋಲಾರ : ರಾಜ್ಯ ಸಚಿವ ಸಂಪುಟ ವಿಸ್ತರಣೆಯಲ್ಲಿ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಸಚಿವ ಸ್ಥಾನ ನೀಡದಿರುವುದನ್ನು ಖಂಡಿಸಿ ಕಾಂಗ್ರೆಸ್‌ನ ಹಿರಿಯ ನಾಯಕರು ಹಾಗೂ ಶಾಸಕರು ಬೆಂಗಳೂರಿನಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಹೈಕಮಾಂಡ್ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ, ಮಾಜಿ ಸಚಿವ ಹಾಗೂ ಚಿಂತಾಮಣಿ ಶಾಸಕ ಎಂ.ಸಿ.ಸುಧಾಕರ್, ಮಾಲೂರು ಶಾಸಕ ಕೆ.ವೈ.ನಂಜೇಗೌಡ, ಕೋಲಾರ ಶಾಸಕ ಕೊತ್ತೂರು ಮಂಜುನಾಥ್, ವಿಧಾನ ಪರಿಷತ್ ಸದಸ್ಯ ಅನಿಲ್ ಕುಮಾರ್ ಸೇರಿದಂತೆ ಹಲವು ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.
ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಎಸ್.ಎನ್.ನಾರಾಯಣಸ್ವಾಮಿ, ಅವಿಭಜಿತ ಕೋಲಾರ ಜಿಲ್ಲೆ ಹಲವು ದಶಕಗಳಿಂದ ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದು, ಪಕ್ಷ ಸಂಕಷ್ಟದಲ್ಲಿದ್ದಾಗಲೆಲ್ಲಾ ಜಿಲ್ಲೆಯ ನಾಯಕರು ಹಾಗೂ ಕಾರ್ಯಕರ್ತರು ಪಕ್ಷವನ್ನು ಪುನರ್ ಸಂಘಟಿಸಿ ಅಧಿಕಾರಕ್ಕೆ ತರುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಕೋಲಾರ ಲೋಕಸಭಾ ಕ್ಷೇತ್ರದಲ್ಲಿಯೂ ಕಾಂಗ್ರೆಸ್ ಪುನಶ್ಚೇತನಕ್ಕೆ ಜಿಲ್ಲೆಯ ನಾಯಕತ್ವವೇ ಕಾರಣವಾಗಿದೆ. ಆದರೂ ಸಚಿವ ಸಂಪುಟದಲ್ಲಿ ಜಿಲ್ಲೆಯ ಏಳು ಕಾಂಗ್ರೆಸ್ ಶಾಸಕರಲ್ಲಿ ಒಬ್ಬರಿಗೂ ಅವಕಾಶ ನೀಡದಿರುವುದು ತೀವ್ರ ಅನ್ಯಾಯವಾಗಿದೆ ಎಂದು ಆರೋಪಿಸಿದರು.
ತಾವು 1999ರಿಂದ ಕಾಂಗ್ರೆಸ್ ಪಕ್ಷಕ್ಕಾಗಿ ನಿರಂತರವಾಗಿ ದುಡಿದಿದ್ದು, ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರೂ ಪಕ್ಷಕ್ಕೆ ಎಂದಿಗೂ ದ್ರೋಹ ಮಾಡಿಲ್ಲ. ಬಿಜೆಪಿ ಸೇರಿದಂತೆ ಇತರ ಪಕ್ಷಗಳಿಂದ ಹಲವು ಬಾರಿ ಆಹ್ವಾನ ಬಂದರೂ ಕಾಂಗ್ರೆಸ್ ತೊರೆಯಲಿಲ್ಲ. ಇಂತಹ ನಿಷ್ಠಾವಂತ ನಾಯಕರಿಗೆ ಸಚಿವ ಸ್ಥಾನ ನಿರಾಕರಿಸಿರುವುದು ಕಾರ್ಯಕರ್ತರ ಮನೋಭಾವಕ್ಕೆ ಧಕ್ಕೆ ತಂದಿದೆ ಎಂದು ಹೇಳಿದರು.
ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳ ಅಭಿವೃದ್ಧಿಗೆ ಸಚಿವ ಸ್ಥಾನ ಅತ್ಯಗತ್ಯವಾಗಿತ್ತು. ಜಿಲ್ಲೆಯ ಜನರ ಸಮಸ್ಯೆಗಳನ್ನು ಸರಕಾರದ ಮಟ್ಟದಲ್ಲಿ ಸಮರ್ಥವಾಗಿ ಪ್ರತಿನಿಧಿಸಲು ಅವಕಾಶ ಸಿಗಬೇಕಿತ್ತು. ಆದರೆ ಹೈಕಮಾಂಡ್ ಎರಡೂ ಜಿಲ್ಲೆಗಳನ್ನು ಸಂಪೂರ್ಣ ನಿರ್ಲಕ್ಷಿಸಿದೆ. ಇದರ ಪರಿಣಾಮವಾಗಿ ಕಾರ್ಯಕರ್ತರು ಹಾಗೂ ಸಾರ್ವಜನಿಕರಿಗೆ ಉತ್ತರ ನೀಡುವುದೇ ಕಷ್ಟವಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಪ್ರತಿಭಟನೆಗಳು ನಡೆಯುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಶಾಸಕರ ವಿರುದ್ಧ ಟೀಕೆಗಳು ವ್ಯಕ್ತವಾಗುತ್ತಿವೆ. ಹೀಗಾಗಿ ಕಾಂಗ್ರೆಸ್ ಹೈಕಮಾಂಡ್ ಮುಂದೆ ಮತ್ತೊಮ್ಮೆ ಜಿಲ್ಲೆಯ ಪರವಾಗಿ ನ್ಯಾಯ ಕೇಳಲು ತೀರ್ಮಾನಿಸಿದ್ದು, ರಾಜ್ಯದ ವಿವಿಧ ಜಿಲ್ಲೆಗಳ ಸಚಿವ ಸ್ಥಾನ ವಂಚಿತ ಶಾಸಕರೊಂದಿಗೆ ಸಭೆ ನಡೆಸಿ ಮುಂದಿನ ಹೋರಾಟದ ರೂಪುರೇಷೆಗಳನ್ನು ಚರ್ಚಿಸಲಾಗುವುದು ಎಂದು ಎಸ್.ಎನ್. ನಾರಾಯಣಸ್ವಾಮಿ ತಿಳಿಸಿದರು.
ಇದೇ ವೇಳೆ ಮಾತನಾಡಿದ ಮಾಜಿ ಸಚಿವ ಹಾಗೂ ಚಿಂತಾಮಣಿ ಶಾಸಕ ಎಂ.ಸಿ.ಸುಧಾಕರ್, ಸಂಪುಟದಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಸೂಕ್ತ ಪ್ರಾತಿನಿಧ್ಯ ನೀಡದಿರುವುದು ಕಾರ್ಯಕರ್ತರಿಗೆ ಮತ್ತು ನಾಯಕರಿಗೆ ತೀವ್ರ ನಿರಾಸೆ ಉಂಟುಮಾಡಿದೆ. ಆದರೆ ಈ ವಿಚಾರವಾಗಿ ಯಾವುದೇ ಶಾಸಕರು ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ. "ನಾವು ಮಂತ್ರಿಗಳಾಗಿ ಆಯ್ಕೆಯಾಗಿಲ್ಲ; ಜನರಿಂದ ಶಾಸಕರಾಗಿ ಆಯ್ಕೆಯಾಗಿದ್ದೇವೆ. ಆದ್ದರಿಂದ ಜನಸೇವೆ ಮುಂದುವರಿಸುತ್ತೇವೆ" ಎಂದು ಸ್ಪಷ್ಟಪಡಿಸಿದರು.
ಶಿಡ್ಲಘಟ್ಟದಲ್ಲಿ ಸುಮಾರು 200 ಕೋಟಿ ವೆಚ್ಚದ ಹೈಟೆಕ್ ಸಿಲ್ಕ್ ಮಾರ್ಕೆಟ್, ಚಿಕ್ಕಬಳ್ಳಾಪುರದ ಅಂತರರಾಷ್ಟ್ರೀಯ ಹೂವಿನ ಮಾರುಕಟ್ಟೆ, ನಂದಿ ಬೆಟ್ಟದ ರೋಪ್‌ವೇ, ಕೆ.ಸಿ. ವ್ಯಾಲಿ, ಎಚ್.ಎನ್. ವ್ಯಾಲಿ ಹಾಗೂ ಎತ್ತಿನಹೊಳೆ ಯೋಜನೆಗಳಂತಹ ಮಹತ್ವದ ಅಭಿವೃದ್ಧಿ ಯೋಜನೆಗಳನ್ನು ಸ್ಥಳೀಯ ನಾಯಕರು ಶ್ರಮಪಟ್ಟು ತಂದಿದ್ದಾರೆ. ಆದರೆ ಜಿಲ್ಲಾ ಉಸ್ತುವಾರಿ ಸಚಿವರು ಸಭೆ ಹಾಗೂ ಕಾರ್ಯಕ್ರಮಗಳಿಗೆ ಮಾತ್ರ ಸೀಮಿತರಾಗಿದ್ದು, ಸ್ಥಳೀಯ ಅಭಿವೃದ್ಧಿಗೆ ನಿರೀಕ್ಷಿತ ಮಟ್ಟದ ಕೊಡುಗೆ ನೀಡುತ್ತಿಲ್ಲ ಎಂದು ಟೀಕಿಸಿದರು.
ಕೆಲವರು ಬೇರೆ ಜಿಲ್ಲೆಗಳಿಗೆ ತೆರಳಿದ್ದರೂ ಇನ್ನೂ ಕೋಲಾರ-ಚಿಕ್ಕಬಳ್ಳಾಪುರ ರಾಜಕೀಯದಲ್ಲಿ ಹಸ್ತಕ್ಷೇಪ ಮಾಡುತ್ತಿರುವುದು ಸರಿಯಲ್ಲ. ಪಕ್ಷದಲ್ಲಿ ಎರಡೂವರೆ ವರ್ಷದ ಸಚಿವ ಸ್ಥಾನ ಬದಲಾವಣೆಯ ನಿಯಮ ಎಲ್ಲರಿಗೂ ಸಮಾನವಾಗಿ ಅನ್ವಯಿಸಿದ್ದರೆ ಯಾವುದೇ ಅಸಮಾಧಾನ ಇರಲಿಲ್ಲ. ಆದರೆ ಕೆಲವರಿಗೆ ಎರಡೆರಡು ಹಾಗೂ ಮೂರು ಬಾರಿ ಅವಕಾಶ ನೀಡಿ ನಮ್ಮ ಜಿಲ್ಲೆಯನ್ನು ಮಾತ್ರ ಕಡೆಗಣಿಸಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.
"ನಮ್ಮಿಂದ ಯಾವುದೇ ಭ್ರಷ್ಟಾಚಾರ ನಡೆದಿದೆಯೇ? ಇಲಾಖೆಯನ್ನು ಸಮರ್ಥವಾಗಿ ನಿರ್ವಹಿಸಿಲ್ಲವೇ? ಹಾಗಿದ್ದರೆ ಅದನ್ನು ಹೈಕಮಾಂಡ್ ಬಹಿರಂಗವಾಗಿ ಹೇಳಬೇಕು. ಇಲ್ಲವಾದರೆ ನಮ್ಮನ್ನು ಕಡೆಗಣಿಸಿರುವುದಕ್ಕೆ ಕಾರಣವನ್ನು ಸ್ಪಷ್ಟಪಡಿಸಬೇಕು" ಎಂದು ಸುಧಾಕರ್ ಆಗ್ರಹಿಸಿದರು.
ಕೆಲವು ಸಣ್ಣ ಜಿಲ್ಲೆಗಳಿಗೆ ಎರಡು ಮತ್ತು ಮೂರು ಸಚಿವ ಸ್ಥಾನಗಳನ್ನು ನೀಡಲಾಗಿದೆ. ಆದರೆ ಏಳು ಕಾಂಗ್ರೆಸ್ ಶಾಸಕರಿರುವ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಒಂದೇ ಒಂದು ಸ್ಥಾನವೂ ನೀಡಿಲ್ಲ. ಈ ನಿರ್ಧಾರದಿಂದ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಾಗೂ 2028ರ ವಿಧಾನಸಭಾ ಚುನಾವಣೆಯಲ್ಲಿ ಕಾರ್ಯಕರ್ತರನ್ನು ಉತ್ಸಾಹದಿಂದ ಸಂಘಟಿಸುವುದು ಕಷ್ಟವಾಗಲಿದೆ ಎಂಬ ಆತಂಕವನ್ನು ನಾಯಕರು ವ್ಯಕ್ತಪಡಿಸಿದರು.






