ಶಾಸಕಿ ನಯನಾ ಮೋಟಮ್ಮ ಉಚ್ಚಾಟನೆಗೆ ಆಗ್ರಹ; ದಲಿತ, ಪ್ರಗತಿಪರ ಸಂಘಟನೆಗಳಿಂದ ‘ಪ್ರಾಯಶ್ಚಿತ್ತ’ ಧರಣಿ

ಚಿಕ್ಕಮಗಳೂರು : ಇತ್ತೀಚೆಗೆ ಮೂಡಿಗೆರೆ ಪಟ್ಟಣದಲ್ಲಿ ಶ್ರೀರಾಮಸೇನೆ ಮುಖಂಡ ಪ್ರಮೋದ್ ಮುತಾಲಿಕ್‌ನೊಂದಿಗೆ ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಅವರು ವೇದಿಕೆ ಹಂಚಿಕೊಂಡಿದ್ದನ್ನು ಖಂಡಿಸಿ ಹಾಗೂ ಕ್ಷಮೆಯಾಚನೆಗೆ ಆಗ್ರಹಿಸಿ ನಗರದ ಗಾಂಧಿ ಪಾರ್ಕ್ ಆವರಣದಲ್ಲಿ ವಿವಿಧ ದಲಿತ, ಪ್ರಗತಿಪರ ಸಂಘಟನೆಗಳ ವತಿಯಿಂದ ಬುಧವಾರ ‘ಪ್ರಾಯಶ್ಚಿತ್ತ’ ಧರಣಿಯನ್ನು ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ಮಾತನಾಡಿದ ಕೆಪಿಸಿಸಿ ವಕ್ತಾರ ಎಚ್.ಎಚ್.ದೇವರಾಜ್, ನಯನಾ ಮೋಟಮ್ಮ ಅವರು ಹಿಂದೂ ಮಹಾಸಭಾದ ಗಣಪತಿ ಸೇವಾ ಸಮಿತಿಯ ಲಾಂಛನ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕೆ ನಮ್ಮ ತಕರಾರಿಲ್ಲ. ಆದರೆ, ಆ ಕಾರ್ಯಕ್ರಮದಲ್ಲಿ ಸಮಾಜಕ್ಕೆ ಕಂಟಕವಾಗಿರುವ, ದಲಿತರು, ಅಲ್ಪಸಂಖ್ಯಾತರ ವಿರುದ್ಧ ಸದಾ ವಿಷ ಕಾರುತ್ತಾ ದ್ವೇಷ ಬಿತ್ತುತ್ತಿರುವ ಶ್ರೀರಾಮಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಜೊತೆ ವೇದಿಕೆ ಹಂಚಿಕೊಂಡಿರುವುದನ್ನು ಸಹಿಸಲು ಸಾಧ್ಯವಿಲ್ಲ. ಕಾರ್ಯಕ್ರಮದಲ್ಲಿ ಕೋಮುವಾದಿಯೊಂದಿಗೆ ವೇದಿಕೆ ಹಂಚಿಕೊಂಡಿರುವುದಲ್ಲದೆ ಪಕ್ಷಾಂತರದ ಬಗ್ಗೆಯೂ ಬಹಿರಂಗವಾಗಿ ಮಾತನಾಡಿರುವುದು ಪಕ್ಷದ ನಾಯಕರಿಗೆ ಮಾಡಿದ ಅಪಮಾನವಾಗಿದೆ ಎಂದ ಆಕ್ರೋಶ ವ್ಯಕ್ತಪಡಿಸಿದರು.
ನಯನಾ ಅವರು ಆರೆಸ್ಸೆಸ್ ಹಾಗೂ ಬಿಜೆಪಿಯವರೊಂದಿಗೆ ಒಳ ಒಪ್ಪಂದ, ಸಂಬಂಧ ಹೊಂದಿರುವ ಶಂಕೆ ವ್ಯಕ್ತವಾಗಿದೆ. ಅವರ ನಡವಳಿಕೆ, ಮಾತಿನಿಂದ ಇದು ಸ್ಪಷ್ಟವಾಗುತ್ತಿದೆ. ನಯನಾ ನಡವಳಿಕೆಯಿಂದಾಗಿ ಕ್ಷೇತ್ರದಲ್ಲಿ ಅವರನ್ನು ಗೆಲ್ಲಿಸಿರುವ ದಲಿತರು, ಪ್ರಗತಿಪರರು, ಅಲ್ಪಸಂಖ್ಯಾತರು, ಹಿಂದುಳಿದ ಸಮುದಾಯದವರಿಗೆ ನೋವಾಗಿದ್ದು, ಕೂಡಲೇ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಬೇಕು. ತಪ್ಪಿದ್ದಲ್ಲಿ ಮೂಡಿಗೆರೆ ಕ್ಷೇತ್ರ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ಕೈ ತಪ್ಪುವ ಸಾಧ್ಯತೆ ಹೆಚ್ಚಾಗಿದೆ ಎಂದು ದೇವರಾಜ್ ಹೇಳಿದರು.
ರೈತಸಂಘದ ಗೌರವ ಜಿಲ್ಲಾಧ್ಯಕ್ಷ ಕೆ.ಗುರುಶಾಂತಪ್ಪ ಮಾತನಾಡಿ, ರಾಜ್ಯದಲ್ಲಿ ಈ ಹಿಂದೆ ಬಿಜೆಪಿ ಸರಕಾರದ ಅವದಿಯಲ್ಲಿ ಕೋಮುವಾದ ವ್ಯಾಪಕವಾಗಿ ಹರಡಿತ್ತು. ಎಲ್ಲೆಡೆ ಜಾತಿ, ಧರ್ಮಗಳ ನಡುವೆ ಸಂಘರ್ಷ ಏರ್ಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಕೋಮುವಾದಿ ಪಕ್ಷವನ್ನು ಅಧಿಕಾರದಿಂದ ತೊಲಗಿಸುವ ಉದ್ದೇಶದಿಂದ ಕಳೆದ ವಿಧಾನಸಭೆ ಚುನಾವಣೆಯಲ್ಲಿ ರೈತ ಸಂಘ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದೆ. ಸಂಘಟನೆಯ ಪ್ರಯತ್ನದ ಫಲವಾಗಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ ಎಂದರು.
ಆದರೆ, ನಯನಾ ಅವರು ಹಲವಾರು ಕ್ರಿಮಿನಲ್ ಪ್ರಕರಣಗಳಲ್ಲಿ ಅಪರಾಧಿಯಾಗಿರುವ ಅಪ್ಪಟ ಕೋಮುವಾದಿ ಪ್ರಮೋದ್ ಮುತಾಲಿಕ್‌ನೊಂದಿಗೆ ವೇದಿಕೆ ಹಂಚಿಕೊಂಡಿದ್ದಾರೆ. ಆತನನ್ನು ಹೊಗಳಿರುವುದನ್ನು ಸಂಘಟನೆ ಸಹಿಸುವುದಿಲ್ಲ. ಈ ಕಾರಣಕ್ಕೆ ಅವರನ್ನು ಗೆಲ್ಲಿಸಿರುವ ತಪ್ಪಿಗೆ ಪ್ರಾಯಶ್ಚಿತಕ್ಕಾಗಿ ಗಾಂಧಿ ಪ್ರತಿಮೆ ಎದುರು ಧರಣಿ ಮಾಡಲಾಗುತ್ತಿದೆ. ನಯನಾ ಮೋಟಮ್ಮ ತಮ್ಮ ಹೇಳಿಕೆ, ನಡವಳಿಕೆಗೆ ಕ್ಷಮೆಯಾಚನೆ ಮಾಡುವುದಲ್ಲದೆ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಕಾಂಗ್ರೆಸ್ ನಾಯಕರು ಪಕ್ಷದಿಂದ ಉಚ್ಚಾಟನೆ ಮಾಡಬೇಕೆಂದು ಗುರುಶಾಂತಪ್ಪ ಆಗ್ರಹಿಸಿದರು.
ಸಿಪಿಐಎಂಎಲ್ ರಾಜ್ಯ ಕಾರ್ಯದರ್ಶಿ ಬಿ.ರುದ್ರಯ್ಯ, ಎಸ್‌ಡಿಪಿಐ ಮುಖಂಡ ಅಂಗಡಿ ಚಂದ್ರು, ಕಾಂಗ್ರೆಸ್ ಮುಖಂಡ ಕೆ.ಭರತ್, ಮೂಡಿಗೆರೆ ಬ್ಲಾಕ್ ಕಾಂಗ್ರೆಸ್‌ನ ಮರಗುಂದ ಪ್ರಸನ್ನ, ದಸಂಸ ಮುಖಂಡ ಯಲಗುಡಿಗೆ ಹೊನ್ನಪ್ಪ, ರೈತಸಂಘದ ಜಿಲ್ಲಾಧ್ಯಕ್ಷ ಮಹೇಶ್ ಮತ್ತಿತರರು ಮಾತನಾಡಿ, ಶಾಸಕಿಯನ್ನು ಪಕ್ಷದಿಂದ ಉಚ್ಛಾಟಿಸಬೇಕೆಂದು ಆಗ್ರಹಿಸಿದರು.
ಧರಣಿಯಲ್ಲಿ ರೈತಸಂಘ, ದಸಂಸ ಸೇರಿ ವಿವಿಧ ದಲಿತ, ಪ್ರಗತಿಪರ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.
‘ಶೋಷಿತರಿಗೆ ಅವಮಾನ’
ಮೂಡಿಗೆರೆ ಕ್ಷೇತ್ರ ಅತೀ ಹೆಚ್ಚು ಪರಿಶಿಷ್ಟ ಹಾಗೂ ಅಲ್ಪಸಂಖ್ಯಾತ ಸಮುದಾಯದ ಮತದಾರರನ್ನು ಹೊಂದಿರುವ ಕ್ಷೇತ್ರವಾಗಿದೆ. ಈ ಸಮುದಾಯದ ಬಹುತೇಕ ಮತದಾರರು ಕಾಂಗ್ರೆಸ್ ಅನ್ನು ಬೆಂಬಲಿಸುತ್ತಾ ಬಂದಿದ್ದಾರೆ. ನಯನಾ ಮೋಟಮ್ಮ ಅವರ ಗೆಲುವಿಗೆ ಈ ಸಮುದಾಯದ ಮತದಾರರೇ ಕಾರಣ ಎಂದರೂ ತಪ್ಪಾಗಲಾರದು. ಆದರೆ, ನಯನಾ ಮೋಟಮ್ಮ ಕೋಮುವಾದಿ ಪ್ರಮೋದ್ ಮುತಾಲಿಕ್‌ನೊಂದಿಗೆ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ಖಂಡನೀಯ. ಈ ಮೂಲಕ ಅವರು ಶೋಷಿತ ಸಮುದಾಯಗಳನ್ನು ಅವಮಾನಿಸಿದ್ದಾರೆ. ಮುಂದಿನ ಚುನಾವಣೆಯಲ್ಲಿ ಅವರಿಗೆ ತಕ್ಕ ಪಾಠ ಕಲಿಸಲಾಗುವುದು ಎಂದು ದಸಂಸ ಮುಖಂಡ ಮರ್ಲೆ ಅಣ್ಣಯ್ಯ ಎಚ್ಚರಿಸಿದರು.







