ಚಿಕ್ಕಮಗಳೂರು | ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಕಮೆಂಟ್ : ಯುವಕನ ಬಂಧನ

ಉಮೇಶ್ಗೌಡ
ಚಿಕ್ಕಮಗಳೂರು, ಆ.16: ಜೈನ ಧರ್ಮದ ಹೆಣ್ಣು ಮಕ್ಕಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಾಕಲಾಗಿದ್ದ ಪೋಸ್ಟ್ವೊಂದಕ್ಕೆ ಅವಹೇಳನಕಾರಿ ಕಮೆಂಟ್ ಮಾಡಿದ ಆರೋಪದ ಮೇರೆಗೆ ಜಿಲ್ಲೆಯ ಅಜ್ಜಂಪುರ ಮೂಲದ ಯುವಕನೋರ್ವನನ್ನು ಪೊಲೀಸರು ಬಂಧಿಸಿದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
ಧರ್ಮಸ್ಥಳದಲ್ಲಿ ನೂರಾರು ಮೃತದೇಹಗಳನ್ನು ಹೂತಿಟ್ಟಿದ್ದೇನೆ ಎಂಬ ಹೇಳಿಕೆ ಮತ್ತು ಆನಂತರ ನಡೆಯುತ್ತಿರುವ ಬೆಳವಣಿಗೆಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ನಲ್ಲಿ ಬಂದಿದ್ದ ಪೋಸ್ಟ್ವೊಂದಕ್ಕೆ ಅಜ್ಜಂಪುರ ತಾಲೂಕಿನ ಯುವಕ ಉಮೇಶ್ಗೌಡ ಎಂಬಾತ ಆ.2ರಂದು ಅಶ್ಲೀಲವಾಗಿ ಕಮೆಂಟ್ ಹಾಕಿದ್ದ ಎನ್ನಲಾಗಿದೆ.
ಉಮೇಶ್ಗೌಡ ತನ್ನ ಕಮೆಂಟ್ನಲ್ಲಿ ಜೈನ ಸಮುದಾಯದ ಮಹಿಳೆಯರ ಬಗ್ಗೆ ಅವಹೇಳನಕಾರಿ ಕಮೆಂಟ್ ಬರೆದಿದ್ದ ಎನ್ನಲಾಗಿದ್ದು, ಈ ಸಂಬಂಧ ಕಳಸ ತಾಲೂಕು ಮೂಲದ ಪದ್ಮರಾಜಯ್ಯ ಎಂಬವರು ಉಮೇಶ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಅಜ್ಜಂಪುರ ಮೂಲದ ಉಮೇಶ್ಗೌಡನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.





