ಚಿಕ್ಕಮಗಳೂರು | ಪತ್ನಿಯನ್ನು ಕೊಲೆಗೈದು ಕೊಳವೆಬಾವಿಯಲ್ಲಿ ಹೂತಿಟ್ಟ ಪ್ರಕರಣ: ಪತಿ, ಅತ್ತೆ, ಮಾವನ ಬಂಧನ

ಭಾರತಿ- ವಿಜಯ್
ಚಿಕ್ಕಮಗಳೂರು: ಪತ್ನಿಯನ್ನು ಕೊಲೆಗೈದು ಮೃತದೇಹವನ್ನು ಕೊಳವೆಬಾವಿಯಲ್ಲಿ ಹೂತಿಟ್ಟ ಪ್ರಕರಣವೊಂದು ಕಡೂರು ತಾಲೂಕಿನ ಆಲಘಟ್ಟ ಗ್ರಾಮದಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.
ಕಡೂರು ತಾಲೂಕಿನ ಆಲಘಟ್ಟ ಗ್ರಾಮ ನಿವಾಸಿ ಭಾರತಿ(28) ಕೊಲೆಯಾದವರು. ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಾದ ಭಾರತಿಯವರ ಪತಿ ವಿಜಯ್, ಅತ್ತೆ ತಾಯಮ್ಮ, ಮಾವ ಗೋವಿಂದಪ್ಪನನ್ನು ಕಡೂರು ಪೊಲೀಸರು ಬಂಧಿಸಿದ್ದಾರೆ.
ಘಟನೆ: ಸುಮಾರು ಒಂದೂವರೆ ತಿಂಗಳ ಹಿಂದೆ ತನ್ನ ಪತ್ನಿ ಭಾರತಿ ನಾಪತ್ತೆಯಾಗಿರುವುದಾಗಿ ವಿಜಯ್ ಕಡೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಈ ಬಗ್ಗೆ ತನಿಖೆ ಮಾಡಿದ ಪೊಲೀಸರು ದೂರುದಾರನೇ ಪತ್ನಿಯನ್ನು ಕೊಲೆಗೈದಿರುವುದನ್ನು ಪತ್ತೆಹಚ್ಚುವಲ್ಲಿ ಸಫಲರಾಗಿದ್ದಾರೆ.
ಒಂದೂವರೆ ತಿಂಗಳ ಹಿಂದೆ ಪತಿ-ಪತ್ನಿ ಮಧ್ಯೆ ಜಗಳ ನಡೆದು, ಆರೋಪಿ ವಿಜಯ್ ಪತ್ನಿ ಭಾರತಿಯ ಮೇಲೆ ಹಲ್ಲೆ ನಡೆಸಿದ್ದಾನೆ. ಇದರಿಂದ ಭಾರತಿ ಮೃತಪಟ್ಟಿದ್ದಾರೆನ್ನಲಾಗಿದೆ. ಬಳಿಕ ಮೃತದೇಹವನ್ನು ತಮ್ಮ ತೋಟದಲ್ಲಿರುವ ನಿರುಪಯುಕ್ತ ಕೊಳವೆಬಾವಿಯೊಳಗೆ ಹಾಕಿ ಮುಚ್ಚಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ವಿಜಯ್, ಆತನ ತಂದೆ ಗೋವಿಂದಪ್ಪ ಮತ್ತು ತಾಯಿ ತಾಯಮ್ಮಳನ್ನು ಪೊಲೀಸರು ಬಂಧಿಸಿದ್ದು, ತನಿಖೆ ಮುಂದುವರಿದಿದೆ.





