ಚಿಕ್ಕಮಗಳೂರು ಜಿಲ್ಲಾ ಮಹಿಳಾ ಸಾಹಿತ್ಯ ಸಮ್ಮೇಳನ
ಮಹಿಳೆಯರ ಸುರಕ್ಷತೆ ಮತ್ತು ಗೌರವದ ವಿಚಾರದಲ್ಲಿ ಸಮಾಜ ಇನ್ನಷ್ಟು ಜಾಗೃತರಾಗಬೇಕಿದೆ : ಮೋಟಮ್ಮ

ಮೂಡಿಗೆರೆ : ಸಮಾಜದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ನಿರಂತರವಾಗಿ ನಡೆಯುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಇಂದಿಗೂ ಸಾಧ್ಯವಾಗಿಲ್ಲ. ಮಹಿಳೆಯರ ಸುರಕ್ಷತೆ ಮತ್ತು ಗೌರವದ ವಿಚಾರದಲ್ಲಿ ಸಮಾಜ ಇನ್ನಷ್ಟು ಜಾಗೃತರಾಗಬೇಕಿದೆ. ಇಂತಹ ಘಟನೆಗಳ ಬಗ್ಗೆ ದೇಶದ ಪ್ರಧಾನಿ ಸೇರಿದಂತೆ ಜನಪ್ರತಿನಿಧಿಗಳು ಗಂಭೀರವಾಗಿ ಧ್ವನಿ ಎತ್ತಬೇಕೆಂದು ಮಾಜಿ ಸಚಿವೆ ಮೋಟಮ್ಮ ಕರೆ ನೀಡಿದ್ದಾರೆ.
ಜಿಲ್ಲಾ ಕಸಾಪ ಮಹಿಳಾ ಘಟಕದ ವತಿಯಿಂದ ಪಟ್ಟಣದ ಅಡ್ಯಂತಾಯ ರಂಗಮಂದಿರದ ಎಂ.ಕೆ.ಇಂದಿರಾ ವೇದಿಕೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಚಿಕ್ಕಮಗಳೂರು ಜಿಲ್ಲಾ ಎರಡನೇ ಮಹಿಳಾ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯ ಸರಕಾರದ ಆಡಳಿತದಲ್ಲಿ 33 ಪುರುಷರು ಮಂತ್ರಿಗಳಾಗಿದ್ದು, ಮಹಿಳೆಯರನ್ನು ಸಂಪೂರ್ಣ ಕಡೆಗಣಿಸಲಾಗಿದೆ. ಇದನ್ನು ಮಹಿಳೆಯರು ಪ್ರಶ್ನಿಸದಿದ್ದರೆ ನಮ್ಮ ಹಕ್ಕು ಪಡೆಯಲು ಸಾಧ್ಯವಾಗುವುದಿಲ್ಲ ಎಂದರು.
ಮಹಿಳೆಯರು ತಮ್ಮ ಮೇಲಿನ ದೌರ್ಜನ್ಯವನ್ನು ಸಹಿಸಿಕೊಂಡು ಮೌನವಾಗಿರದೆ, ಅನ್ಯಾಯದ ವಿರುದ್ಧ ಧೈರ್ಯವಾಗಿ ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಮಹಿಳೆಯರು ಸಂಘಟಿತರಾಗಿ ಪರಸ್ಪರ ಬೆಂಬಲ ನೀಡುವುದರ ಮೂಲಕ ತಮ್ಮ ಮನೋಬಲವನ್ನು ಹೆಚ್ಚಿಸಿಕೊಳ್ಳಬೇಕು. ಯಾವುದೇ ರೀತಿಯ ದೌರ್ಜನ್ಯ ನಡೆದರೂ ಅದನ್ನು ಖಂಡಿಸಿ, ಕಾನೂನುಬದ್ಧವಾಗಿ ನ್ಯಾಯಕ್ಕಾಗಿ ಹೋರಾಡುವ ಸಂಕಲ್ಪ ಮಾಡಬೇಕು. ಮಹಿಳೆಯರ ಮೇಲಿನ ದೌರ್ಜನ್ಯವನ್ನು ತಡೆಗಟ್ಟುವುದು ಕೇವಲ ಮಹಿಳೆಯರ ಜವಾಬ್ದಾರಿಯಲ್ಲ. ಇಡೀ ಸಮಾಜದ ಜವಾಬ್ದಾರಿಯಾಗಿದೆ ಎಂದು ಸಲಹೆ ನೀಡಿದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ನಿರ್ಮಲಾ ಮಂಚೇಗೌಡ ಮಾತನಾಡಿದರು.
ಇದಕ್ಕೂ ಮುನ್ನ ರಾಷ್ಟ್ರಧ್ವಜಾರೋಹಣವನ್ನು ಮಾಜಿ ಸಚಿವೆ ಮೋಟಮ್ಮ, ಪರಿಷತ್ತಿನ ಧ್ವಜಾರೋಹಣವನ್ನು ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್, ನಾಡ ಧ್ವಜಾರೋಹಣವನ್ನು ಕಸಾಪ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ನಿರ್ಮಲಾ ಮಂಚೇಗೌಡ ನೆರವೇರಿಸಿದರು. ಬಳಿಕ ಪಟ್ಟಣದ ಪ್ರಮುಖ ರಸ್ತೆಯಲ್ಲಿ ಸಮ್ಮೇಳನಾಧ್ಯಕ್ಷೆ ಭಾಗ್ಯ ಲಕ್ಷ್ಮಣ್‌ಗೌಡ ಅವರ ಮೆರವಣಿಗೆ ನಡೆಯಿತು.
ಕಾರ್ಯಕ್ರಮದಲ್ಲಿ ಸಮ್ಮೇಳನಾಧ್ಯಕ್ಷರ ಭಾಷಣ ನುಡಿಯನ್ನು ಡಾ.ಜೆ.ಪಿ.ಕೃಷ್ಣೇಗೌಡ ಬಿಡುಗಡೆಗೊಳಿಸಿದರು. ವಿವಿಧ ಸಂಘ ಸಂಸ್ಥೆ ಮುಖಂಡರು ಸಮ್ಮೇಳನಾಧ್ಯಕ್ಷರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಸಾಹಿತಿ ಹಳೆಕೋಟೆ ರಮೇಶ್, ಡಾ.ಸಿ.ಎಂ.ಸುಲೋಚನಾ, ಕಸಾಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಎಸ್.ವೆಂಕಟೇಶ್, ತಾಲೂಕು ಅಧ್ಯಕ್ಷ ಡಿ.ಕೆ.ಲಕ್ಷ್ಮಣ್‌ಗೌಡ, ಕಾರ್ಯದರ್ಶಿ ಸುಚಿತ್ರ ಪ್ರಸನ್ನ, ಮಹಿಳಾ ಘಟಕದ ತಾಲೂಕು ಅಧ್ಯಕ್ಷೆ ರೇಖಾ ರವಿರಾಜ್, ಸುನಿತಾ ಕಿರಣ್ ತರೀಕೆರೆ, ಲತಾ ರಾಜಶೇಖರ್ ಕಡೂರು, ಡಾ.ಜೆ.ಕೆ.ಕೃಷ್ಣೇಗೌಡ, ಅಶ್ವಿನಿ ಸಂತೋಷ್, ವಿಜಯಲಕ್ಷ್ಮೀ, ವಿದ್ಯಾರಾಜು ಹಾಗೂ ಮತ್ತಿತರರಿದ್ದರು.






