ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಮನೆ ಮೇಲೆ ಲೋಕಾಯುಕ್ತ ದಾಳಿ; ಪರಿಶೀಲನೆ

ಟಿ.ಡಿ.ರಾಜೇಗೌಡ
ಚಿಕ್ಕಮಗಳೂರು: ಅಕ್ರಮವಾಗಿ ಆಸ್ತಿ ಗಳಿಸಿರುವ ಆರೋಪದ ಮೇರೆಗೆ ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡ ಮನೆ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿರುವ ಘಟನೆ ಮಂಗಳವಾರ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆ ಖಾಂಡ್ಯ ಹೋಬಳಿ ವ್ಯಾಪ್ತಿಯ ಬಾಸಾಪುರ ಗ್ರಾಮದಲ್ಲಿರುವ ಶಾಸಕ ರಾಜೇಗೌಡ ಮನೆ ಮೇಲೆ ದಾಳಿ ನಡೆದಿದ್ದು, ಕೊಪ್ಪ ಪಟ್ಟಣದ ನಿವಾಸಿ ದಿನೇಶ್ ಎಂಬವರು ಸಲ್ಲಿಸಿದ್ದ ದೂರಿನ ಮೇರೆಗೆ ಈ ದಾಳಿ ನಡೆಸಲಾಗಿದೆ. ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಇತ್ತೀಚೆಗೆ ನ್ಯಾಯಾಲಯ ನೀಡಿದ್ದ ನಿರ್ದೇಶನದ ಮೇರೆಗೆ ಲೋಕಾಯುಕ್ತ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದರು. ಶಾಸಕ ರಾಜೇಗೌಡ, ಪತ್ನಿ ಪುಷ್ಪಲತಾ, ಪುತ್ರ ರಾಜ್ದೇವ್ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಎಫ್ಐಆರ್ ದಾಖಲಾದ ಬೆನ್ನಲ್ಲೇ ಈ ದಾಳಿ ನಡೆದಿದೆ.
ಖಾಂಡ್ಯ ಹೋಬಳಿಯ ಬಾಸಾಪುರ ಗ್ರಾಮದಲ್ಲಿರುವ ರಾಜೇಗೌಡ ಮನೆ ಹಾಗೂ ಬೆಂಗಳೂರಿನಲ್ಲಿರುವ ರಾಜೇಗೌಡ ಸಂಬಂಧಿಗಳ ಮನೆ ಹಾಗೂ ಫಾರಂ ಹೌಸ್ ಮೇಲೆ ಮಂಗಳವಾರ ದಾಳಿ ನಡೆಸಿ ಅಕ್ರಮ ಆಸ್ತಿಗಳಿಕೆ ಸಂಬಂಧ ದಾಖಲೆಗಳ ಪರಿಶೀಲನೆಯನ್ನು ಚಿಕ್ಕಮಗಳೂರಿನ ಲೋಕಾಯುಕ್ತ ಪೊಲೀಸರು ನಡೆಸಿದ್ದಾರೆ.
ಅಕ್ರಮ ಆಸ್ತಿ ಗಳಿಕೆ ಸಂಬಂಧ ದಿನೇಶ್ ಅವರ ಖಾಸಗಿ ದೂರು ಆಧರಿಸಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತನಿಖೆಗೆ ಆದೇಶಿಸಿತ್ತು. ರಾಜೇಗೌಡ ಅವರು 2 ಬಾರಿ ಶಾಸಕರಾಗಿದ್ದು, ಚುನಾವಣಾ ಆಯೋಗಕ್ಕೆ ತಮ್ಮ ಆಸ್ತಿ ಸಂಬಂಧ ಅಫಿಡವಿಟ್ನಲ್ಲಿ ಆಸ್ತಿಯನ್ನು ಘೋಷಣೆ ಮಾಡಿಲ್ಲ, ಅಧಿಕಾರ ದುರುಪಯೋಗಪಡಿಸಿಕೊಂಡು ಆದಾಯ ತೆರಿಗೆ ಪಾವತಿಯಲ್ಲಿ ಸರಕಾರಕ್ಕೆ ವಂಚನೆ ಮಾಡಿದ್ದಾರೆ ಎಂದು ದಿನೇಶ್ ಅವರು ತಮ್ಮ ದೂರಿನಲ್ಲಿ ಆರೋಪಿಸಿದ್ದರು.







