ಡಿ.1ರಿಂದ 5 : ಐ.ಡಿ.ಪೀಠಕ್ಕೆ ಯಾತ್ರಾರ್ಥಿ-ಪ್ರವಾಸಿಗರ ಭೇಟಿಗೆ ತಾತ್ಕಾಲಿಕ ನಿರ್ಬಂಧ

ಚಿಕ್ಕಮಗಳೂರು : ತಾಲೂಕಿನ ಐ.ಡಿ.ಪೀಠ ಶ್ರೀ ಗುರು ದತ್ತಾತ್ರೇಯ ಬಾಬಾಬುಡಾನ್ ಸ್ವಾಮಿ ದರ್ಗಾ ಸಂಸ್ಥೆಯಲ್ಲಿ ಡಿಸೆಂಬರ್ 2 ರಿಂದ 4ರವರೆಗೆ ದತ್ತ ಜಯಂತಿ ಕಾರ್ಯಕ್ರಮ ನಡೆಯಲಿರುವುದರಿಂದ ಜಿಲ್ಲೆಯ ಪ್ರವಾಸಿ ತಾಣಗಳಾದ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಗಾಳಿಕೆರೆ ಮತ್ತು ಮಾಣಿಕ್ಯಧಾರಾ ತಾಣಗಳಿಗೆ ಮತ್ತು ಶ್ರೀ ಗುರು ದತ್ತಾತ್ರೇಯ ಬಾಬಾ ಬುಡಾನ್ ಸ್ವಾಮಿ ದರ್ಗಾ ಸಂಸ್ಥೆಗೆ ಆಗಮಿಸುವ ಪ್ರವಾಸಿಗರು, ಯಾತ್ರಾರ್ಥಿಗಳಿಗೆ ಡಿ.1ರ ಬೆಳಗ್ಗೆ 6ರಿಂದ ಡಿ.5ರ ಬೆಳಗ್ಗೆ 10 ರವರೆಗೆ ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.
ದತ್ತ ಜಯಂತಿಗೆ ಚಿಕ್ಕಮಗಳೂರು ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು, ವಾಹನಗಳ ಮುಖಾಂತರ ಶ್ರೀ ಗುರು ದತ್ತಾತ್ರೇಯ ಬಾಬಾ ಬುಡಾನ್ ಸ್ವಾಮಿ ದರ್ಗಾ ಸಂಸ್ಥೆಗೆ ಆಗಮಿಸಲಿದ್ದು, ದತ್ತಮಾಲಾಧಾರಿಗಳು, ವಿಶ್ವ ಹಿಂದೂ ಪರಿಷತ್, ಬಜರಂಗದಳ ಮುಖಂಡರು, ಕಾರ್ಯಕರ್ತರು, ಸುತ್ತಮುತ್ತಲಿನ ವ್ಯಾಪ್ತಿಯ ಸ್ಥಳೀಯರು ಹಾಗೂ ಜಮೀನುಗಳಲ್ಲಿ ಕೃಷಿ ಚಟುವಟಿಕೆ ಮಾಡುವವರು ಮತ್ತು ಮೇಲ್ಕಂಡ ಸ್ಥಳಗಳಲ್ಲಿ ಈಗಾಗಲೇ ಹೋಮ್ ಸ್ಟೇ, ರೆಸಾರ್ಟ್‌ಗಳನ್ನು ಬುಕಿಂಗ್ ಮಾಡಿಕೊಂಡವರನ್ನು ಈ ನಿರ್ಬಂಧದಿಂದ ಹೊರತುಪಡಿಸಲಾಗಿದೆ.
ಸಂಸ್ಥೆಗೆ ತೆರಳುವ ರಸ್ತೆಯು ತುಂಬಾ ಕಿರಿದಾಗಿದ್ದು ಪ್ರಸಕ್ತ ವರ್ಷದಲ್ಲಿ ಸುರಿದ ಮಳೆಯಿಂದಾಗಿ ರಸ್ತೆಗಳು ಹಾಳಾಗಿದ್ದು, ಭೂಕುಸಿತ ಉಂಟಾಗಿದೆ. ಇದರಿಂದಾಗಿ ವಾಹನ ದಟ್ಟಣೆ ಹಾಗೂ ಹೆಚ್ಚಿನ ಜನಸಂದಣಿಯಾಗಿ ಅನನುಕೂಲವಾಗುವ ಸಂಭವವಿರುವುದರಿಂದ ಹಾಗೂ ಜಿಲ್ಲಾ ಲೋಕೋಪಯೋಗಿ ಇಲಾಖೆಯ ವರದಿ ಮೇರೆಗೆ ಕೈಮರದಿಂದ ಕವಿಕಲ್‌ಗುಂಡಿ ಮೂಲಕ ಹೋಗುವ ಅತ್ತಿಗುಂಡಿ ಭಾಗಗಳಲ್ಲಿ ಅತಿಯಾದ ಮಳೆಯಿಂದಾಗಿ ರಸ್ತೆಯು ಕುಸಿದಿದೆ ಮಾತ್ರವಲ್ಲ, ರಸ್ತೆಯ ಭಾಗವು ಅತೀ ಕಿರಿದಾಗಿದ್ದು ಹಾಗೂ ಏರಿಳಿತಗಳಿಂದ ಕೂಡಿರುವುದರಿಂದ ಉದ್ದ ಚಾಸ್ಸಿ ಇರುವ ವಾಹನಗಳ ಸಂಚಾರವು ಅಪಾಯಕಾರಿಯಾಗಿದೆ.
ಈ ಹಿನ್ನೆಲೆಯಲ್ಲಿ ಕೈಮರ ಚೆಕ್‌ಪೋಸ್ಟ್‌ನಿಂದ ಶ್ರೀ ಗುರು ದತ್ತಾತ್ರೇಯ ಬಾಬಾಬುಡಾನ್ ಸ್ವಾಮಿ ದರ್ಗಾ ಸಂಸ್ಥೆಗೆ ತೆರಳುವ ರಸ್ತೆಯಲ್ಲಿ ಉದ್ದಚಾಸ್ಸಿ ವಾಹನಗಳ ಸಂಚಾರವನ್ನು (ಎರಡು ಆಕ್ಸೆಲ್‌ಗಿಂತ ಹೆಚ್ಚಿನ ಆಕ್ಸೆಲ್‌ಗಳನ್ನು ಹೊಂದಿರುವ ಲಾರಿ ಮತ್ತು ಬಸ್ಸುಗಳು) ಡಿ.1ರಿಂದ 5 ರವರೆಗೆ ನಿರ್ಬಂಧಿಸಲಾಗಿದೆ. (ಈ ಆದೇಶವು ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜಿಸಿದ ಅಧಿಕಾರಿ, ಸಿಬ್ಬಂದಿ ಉಪಯೋಗಿಸುವ ಕೆಎಸ್ಸಾರ್ಟಿಸಿ ವಾಹನಗಳು ಮತ್ತು ಅಗ್ನಿಶಾಮಕ ವಾಹನಗಳು ಮತ್ತು ಇತರ ಅಗತ್ಯ ತುರ್ತು ಸೇವೆಗಳ ವಾಹನಗಳಿಗೆ ಅನ್ವಯಿಸುವುದಿಲ್ಲ). ಸಾರ್ವಜನಿಕರು ಸಹಕರಿಸಬೇಕೆಂದು ಜಿಲ್ಲಾಡಳಿತವು ಕೋರಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.







