ನೀತಿ ಸಂಹಿತೆ ಉಲ್ಲಂಘನೆ ಆರೋಪ | ನಟ ಪ್ರಕಾಶ್ ರಾಜ್, ಜಿಗ್ನೇಶ್ ಮೇವಾನಿ ಸೇರಿ 18 ಮಂದಿ ಮೇಲಿನ ಪ್ರಕರಣ ಹಿಂಪಡೆದ ಸರಕಾರ

ಪ್ರಕಾಶ್ ರಾಜ್ \ ಜಿಗ್ನೇಶ್ ಮೇವಾನಿ
ಚಿಕ್ಕಮಗಳೂರು: ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದ ಆರೋಪ ಸಂಬಂಧ 2018ರಲ್ಲಿ ಸಂವಿಧಾನ ಉಳಿವಿಗಾಗಿ ಕರ್ನಾಟಕ ಸಂಘಟನೆ ಮುಖಂಡರು, ನಟ ಪ್ರಕಾಶ್ ರಾಜ್ ಹಾಗೂ ಗುಜರಾತ್ನ ಶಾಸಕ ಜಿಗ್ನೇಶ್ ಮೇವಾನಿ ಸೇರಿದಂತೆ 18 ಜನರ ಮೇಲೆ ಚುನಾವಣಾಧಿಕಾರಿಗಳು ಇಲ್ಲಿನ ನಗರ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದ ಪ್ರಕರಣವನ್ನು ರಾಜ್ಯ ಸರಕಾರ ಹಿಂಪಡೆದಿದೆ.
2018ರ ಕರ್ನಾಟಕ ವಿಧಾನಸಭೆ ಚುನಾವಣೆ ಸಂದರ್ಭ ಮೇ.3ರಂದು ಚಿಕ್ಕಮಗಳೂರು ನಗರದ ಅಂಡೆಛತ್ರ ಎಂಬಲ್ಲಿ ಸಂವಿಧಾನ ಉಳಿವಿಗಾಗಿ ಕರ್ನಾಟಕ ಸಂಘಟನೆ ವತಿಯಿಂದ ಜಾಗೃತಿ ಸಮಾವೇಶ ಕಾರ್ಯಕ್ರಮವೊಂದನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದ ವೇದಿಕೆಯಲ್ಲಿ ನಟ ಪ್ರಕಾಶ್ ರಾಜ್, ಗುಜರಾತ್ನ ಶಾಸಕ ಜಿಗ್ನೇಶ್ ಮೇವಾನಿ, ಚಿಂತಕ ಕಲ್ಕುಳಿ ವಿಠಲ್ ಹೆಗ್ಡೆ ಹಾಗೂ ಸಂಘಟನೆಯ ಮುಖಂಡ ಕೆ.ಎಲ್.ಅಶೋಕ್, ಗೌಸ್ ಮೋಹಿದ್ದೀನ್ ಹಾಗೂ ಮುಖಂಡರಾದ ಕೃಷ್ಣಮೂರ್ತಿ, ಗೌಸ್ ಮುನೀರ್, ವಸಂತ್ ಕುಮಾರ್, ವಕೀಲ ಪರಮೇಶ್ವರ್, ಮಹೇಶ್, ಪುಟ್ಟಸ್ವಾಮಿ, ವಸಂತ್ ಕುಮಾರ್, ಯೂಸೂಫ್ ಹಾಜಿ, ಉಮೇಶ್, ಯಲಗುಡಿಗೆ ಹೊನ್ನಪ್ಪ, ಇರ್ಷಾದ್ ಅಹ್ಮದ್, ಹಸನಬ್ಬ ಹಾಗೂ ರೈತ ಮುಖಂಡ ಕೆ.ಕೆ.ಕೃಷ್ಣೇಗೌಡ ಮತ್ತಿತರರು ಉಪಸ್ಥಿತರಿದ್ದರು.
ಅಂದು ಮಧ್ಯಾಹ್ನ 3ಕ್ಕೆ ಕಾರ್ಯಕ್ರಮ ಆರಂಭವಾಗಿದ್ದು, ಸಂಜೆ 4ರ ಸಮಯದಲ್ಲಿ ಚುನಾವಣಾ ಕರ್ತವ್ಯದಲ್ಲಿದ್ದ ನಗರಸಭೆ ಪೌರಾಯುಕ್ತೆ ತುಷಾರಮಣಿ ನೇತೃತ್ವದ ಪ್ಲೈಯಿಂಗ್ ಸ್ಕ್ವಾಡ್ ತಂಡವು ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿತ್ತು. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಕಾರ್ಯಕ್ರಮ ಹಾಗೂ ಧ್ವನಿವರ್ಧಕ ಬಳಕೆಗೆ ಅನುಮತಿ ಪಡೆದಿಲ್ಲ, ಅಲ್ಲದೇ ಅಕ್ರಮವಾಗಿ ಸಭೆ ನಡೆಸಿ ವಾಹನ, ಜನಸಂಚಾರಕ್ಕೆ ಅಡ್ಡಿ ಪಡಿಸಲಾಗಿದೆ ಎಂದು ಆರೋಪಿಸಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯ ಪ್ರಕರಣವನ್ನು ನಗರ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದರು.
ಚುನಾವಣಾಧಿಕಾರಿಗಳ ದೂರಿನ ಮೇರೆಗೆ ನಟ ಪ್ರಕಾಶ್ ರಾಜ್, ಶಾಸಕ ಜಿಗ್ನೇಶ್ ಮೇವಾನಿ, ಕಲ್ಕುಳಿ ವಿಠಲ್ ಹೆಗ್ಡೆ, ಕೆ.ಎಲ್.ಅಶೋಕ್, ಗೌಸ್ಮೊಹಿದ್ದೀನ್ ಸೇರಿದಂತೆ 18 ಮಂದಿ ಮೇಲೆ ಪೊಲೀಸರು ದೂರು ದಾಖಲಿಸಿಕೊಂಡಿದ್ದರು. 2018ರ ಈ ಪ್ರಕರಣವನ್ನು ರಾಜ್ಯ ಸರಕಾರ ಹಿಂಪಡೆದಿದ್ದು, ಇದರಿಂದಾಗಿ ಹೋರಾಟಗಾರರು, ಪ್ರಗತಿಪರ ಚಿಂತಕರು ನಿರಾಳರಾಗಿದ್ದಾರೆ.







