ಕೊಪ್ಪ ತಾಲೂಕಿನಲ್ಲಿ 243 ಮತದಾರರ ಹೆಸರು ಅಳಿಸಲು ಯತ್ನ: ಫಾರಂ-7ರಲ್ಲಿ ಬಿಜೆಪಿ ಮುಖಂಡರಿಂದ ಅರ್ಜಿ ಸಲ್ಲಿಕೆ; ಆರೋಪ

ಸಾಂದರ್ಭಿಕ ಚಿತ್ರ | Photo credit : PTI
ಚಿಕ್ಕಮಗಳೂರು : ಜಿಲ್ಲೆಯ ಶೃಂಗೇರಿ ವಿಧಾನಸಭಾ ಕ್ಷೇತ್ರದ ಕೊಪ್ಪ ತಾಲೂಕಿನಲ್ಲಿ ಕರಡು ಮತದಾರರ ಪಟ್ಟಿಯಲ್ಲಿ ಹೆಸರಿರುವ ಹಾಲಿ 243 ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಲು ಬಿಜೆಪಿ ಮುಖಂಡರು ಕೊಪ್ಪ ತಾಲೂಕು ಕಚೇರಿಯ ಚುನಾವಣಾಧಿಕಾರಿಗೆ ಫಾರಂ-7ರಲ್ಲಿ ಅರ್ಜಿ ಸಲ್ಲಿಸಿರುವುದು ಬೆಳಕಿಗೆ ಬಂದಿದೆ.
ಹೀಗೆ ಮತದಾರರ ಪಟ್ಟಿಯಿಂದ ಹೆಸರು ತೆಗದು ಹಾಕಲು ಫಾರಂ-7ರಲ್ಲಿ ಅರ್ಜಿ ಹೆಸರಿಸಲಾಗಿರುವ 243 ಮತದಾರರು ಮುಸ್ಲಿಮ್ ಮತ್ತು ಕ್ರೈಸ್ತ ಸಮುದಾಯಕ್ಕೆ ಸೇರಿದ್ದು, ಇದು ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಅಲ್ಲದೆ ಉದ್ದೇಶಪೂರ್ವಕವಾಗಿ ಈ ಸಮುದಾಯದವರ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಡಲು ಬಿಜೆಪಿಯವರು ಸಂಚು ಮಾಡಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.
ಬಿಜೆಪಿ ತಾಲೂಕು ಮುಖಂಡರಾದ ಎಚ್.ಕೆ.ದಿನೇಶ್, ಅರ್ಜುನ್, ಹಾಲಪ್ಪ, ಕಾರ್ತಿಕ್ ಹಾಗೂ ಬ್ರಿಜೇಶ್ ಎಂಬವರು ಫಾರಂ-7ರಲ್ಲಿ ಆಕ್ಷೇಪದೊಂದಿಗೆ ಅರ್ಜಿ ಸಲ್ಲಿಸಿದ್ದು, ಕೊಪ್ಪ ತಾಲೂಕಿನ ವಿವಿಧ ಬೂತ್ಗಳ ಮತದಾರರಾಗಿರುವ 243 ಮಂದಿ ಮತದಾರರ ಹೆಸರುಗಳನ್ನು ಕರಡು ಪಟ್ಟಿಯಿಂದ ಹೆಸರು ತೆಗೆದು ಹಾಕುವಂತೆ ಅರ್ಜಿ ಸಲ್ಲಿಸಿದ್ದಾರೆ. ಆಕ್ಷೇಪದಲ್ಲಿ ಬೇರೆಡೆ ಮತದಾನಕ್ಕೆ ನೋಂದಾಯಿಸಿಕೊಂಡಿದ್ದಾರೆ, ವಾಸ ಇರುವುದಿಲ್ಲ ಎಂಬ ಕಾರಣ ನೀಡಿದ್ದಾರೆ.
ಆದರೆ, ಅಸಲಿಗೆ ಮತದಾರರ ಪಟ್ಟಿಯಿಂದ ಕೈಬಿಡಲು ಫಾರಂ-7ರಲ್ಲಿ ಅರ್ಜಿ ಸಲ್ಲಿಸಿರುವ 243 ಮಂದಿಯೂ ಸಂಬಂಧಿಸಿದ ಬೂತ್ಗಳ ವ್ಯಾಪ್ತಿಯಲ್ಲೇ ವಾಸವಾಗಿದ್ದು, ಪ್ರತೀ ಚುನಾವಣೆಗಳಲ್ಲೂ ಮತದಾನ ಮಾಡುತ್ತಾ ಬಂದಿದ್ದಾರೆ. ಸದ್ಯ ತಮ್ಮ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡಲು ಫಾರಂ-7ರಲ್ಲಿ ಬಿಜೆಪಿ ಮುಖಂಡರು ಅರ್ಜಿ ಸಲ್ಲಿಸಿರುವುದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ಬಿಎಲ್ಒ ಹೆಸರೂ ಅಳಿಸಲು ಯತ್ನ!: ಜಯಪುರ ಗ್ರಾಪಂ ವ್ಯಾಪ್ತಿಯ ಕಟ್ಟೆಮನೆ ಬೂತಿನ ಬಿಎಲ್ಒ ವಝೀರ್ ಖಾನ್ ಮತ್ತು ಅವರ ಕುಟುಂಬದ ಸದಸ್ಯರ ಮತಗಳನ್ನು ಜಯಪುರ ಪೇಟೆ ಮತಗಟ್ಟೆ ಸಂಖ್ಯೆ 154 ರಿಂದ ವಜಾ ಮಾಡಲು ಬಿಜೆಪಿ ಮುಖಂಡರು ಅರ್ಜಿ ಸಲ್ಲಿಸಿದ್ದಾರೆ. ವಝೀರ್ ಖಾನ್ ಅವರ ಕುಟುಂಬದ ಸದಸ್ಯರು ಕಳೆದ ಐದು ತಲೆಮಾರಿನಿಂದ ಜಯಪುರ ಪೇಟೆಯಲ್ಲೇ ವಾಸವಾಗಿದ್ದರೂ ಈ ಮತಗಟ್ಟೆಯಿಂದ ಇವರ ಕುಟುಂಬದ ಸದಸ್ಯರ ಹೆಸರುಗಳನ್ನು ವಜಾ ಮಾಡಬೇಕೆಂದು ಅರ್ಜಿ ಸಲ್ಲಿಸಲಾಗಿದೆ.
ವಝೀರ್ ಖಾನ್ ಹಿರಿಯ ಸಹೋದರ ಪೀರ್ ಖಾನ್ (ನಝೀರ್ ಖಾನ್) ಮತ್ತು ಆರು ಜನ ಸಹೋದರರು ಪ್ರತ್ಯೇಕ ಮನೆ ಮಾಡಿಕೊಂಡು ಹಲವು ದಶಕಗಳಿಂದ ಜಯಪುರದಲ್ಲಿ ಕುಟುಂಬ ಸಮೇತ ವಾಸವಾಗಿದ್ದಾರೆ. ಪೀರ್ ಖಾನ್ ಕುಟುಂಬದ ಆರು ಮನೆಗಳ ಒಟ್ಟು 25 ಮತಗಳನ್ನು ಮತದಾರರ ಪಟ್ಟಿಯಿಂದ ಕೈ ಬಿಡಲು ಪೀರ್ ಖಾನ್ ಕುಟುಂಬದ ಪರಿಚಯಸ್ಥರೇ ಆಗಿರುವ ಹಾಲಪ್ಪ ಎಂಬವರೇ ಚುನಾವಣಾಧಿಕಾರಿಗೆ ಅರ್ಜಿ ಸಲ್ಲಿಸಿರುವುದಾಗಿ ತಿಳಿದು ಬಂದಿದೆ.
ಜಯಪುರ ಗ್ರಾಪಂ ವ್ಯಾಪ್ತಿಯ ಕೂಳೂರು ಗ್ರಾಮದ ಮಕ್ಕಿಕೊಪ್ಪ ಬೂತ್ನಲ್ಲಿ 22 ಮತದಾರರನ್ನು ಮತದಾರರ ಪಟ್ಟಿಯಿಂದ ಕೈಬಿಡಲು ಫಾರಂ-7ನಲ್ಲಿ ಬಿಜೆಪಿ ಮುಖಂಡರಿಂದ ಅರ್ಜಿ ಸಲ್ಲಿಕೆಯಾಗಿದೆ. ಅನಿಲ್ ಕುಲಾಸೋ ಎಂಬವರ ಕುಟುಂಬದ ಇಬ್ಬರು ಸದಸ್ಯರ ಹೆಸರನ್ನೂ ಕೈ ಬಿಡಲು ಫಾರಂ-7ರಲ್ಲಿ ಅರ್ಜಿ ಸಲ್ಲಿಸಲಾಗಿದೆ.
ಜಯಪುರ ಬೂತ್ ಸಂಖ್ಯೆ 154ರಲ್ಲಿ ಒಂದೇ ಕುಟುಂಬದ 25, ಕೊಪ್ಪ ಗ್ರಾಮಾಂತರದ ಬೂತ್ ಸಂಖ್ಯೆ 68ರಲ್ಲಿ 58, ಮಕ್ಕಿಕೊಪ್ಪ ಬೂತ್ ಸಂಖ್ಯೆ 183ರಲ್ಲಿ 22, ಬೂತ್ ಸಂಖ್ಯೆ 80ರಲ್ಲಿ 32 ಮತದಾರರನ್ನು ಕೈಬಿಡಲು ಅರ್ಜಿ ಸಲ್ಲಿಸಲಾಗಿದೆ. ಒಟ್ಟಾರೆ ಕೊಪ್ಪ ತಾಲೂಕಿನ 37 ಮತಗಟ್ಟೆಯ 243 ಮತಗಳನ್ನು ಕೈಬಿಡಲು ಬಿಜೆಪಿಯ ನಾಲ್ಕು ಮಂದಿಯಿಂದ ಅರ್ಜಿ ಸಲ್ಲಿಕೆಯಾಗಿದೆ. ಈ ಮತದಾರರಿಗೆ ಸದ್ಯ ಚುನಾವಣಾಧಿಕಾರಿಗಳು ನೋಟಿಸ್ ನೀಡಿದ್ದು, ಈ ಮತದಾರರು ಸಂಬಂಧಿಸಿದ ಅಧಿಕಾರಿಗಳ ಮುಂದೆ ಹಾಜರಾಗಿ ಸೂಕ್ತ ದಾಖಲಾತಿಗಳೊಂದಿಗೆ ತಮ್ಮ ಮತದಾನದ ಹಕ್ಕು ಉಳಿಸಿಕೊಳ್ಳಬೇಕಾಗಿದೆ.






