ಶ್ರೀ ಗುರು ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದಲ್ಲಿ ಶಾಂತಿಯುತವಾಗಿ ನಡೆದ ʼಝಿಯಾರತ್ʼ

ಚಿಕ್ಕಮಗಳೂರು: ಜಿಲ್ಲೆಯ ಹಝರತ್ ದಾದಾ ಹಯಾತ್ ಮೀರ್ ಖಲಂದರ್ ಶ್ರೀ ಗುರು ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದ ಗುಹೆಯ ದ್ವಾರದಲ್ಲಿರುವ ಕಲಿಮಾ ತಯ್ಯಿಬಾದ ಝಿಯಾರತ್ ಕಾರ್ಯಕ್ರಮವನ್ನು ಶುಕ್ರವಾರ ಧಾರ್ಮಿಕ ಸಂಪ್ರದಾಯಗಳಿಗೆ ಅನುಗುಣವಾಗಿ ಹಾಗೂ ಕಾನೂನು ಮತ್ತು ಆಡಳಿತಕ್ಕೆ ಸಂಪೂರ್ಣ ಗೌರವ ನೀಡಿ ನಡೆಸಲಾಯಿತು ಎಂದು ಸೈಯದ್ ಬುಡೆನ್ ಶಾ ಖಾದ್ರಿ ವಂಶಸ್ಥರಾದ ಸೈಯದ್ ಫಕ್ರುದ್ದೀನ್ ಶಾ ಖಾದ್ರಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಗುಹೆಯ ಬೆಳ್ಳಿ ಚಿಲ್ಲಾ ಬಾಗಿಲಿನಲ್ಲಿರುವ ಕಲಿಮಾ ತಯ್ಯಿಬಾದ ಝಿಯಾರತ್ ಧಾರ್ಮಿಕ ಆಚರಣೆ ಸಂದರ್ಭ ಗುಹೆ ಪ್ರವೇಶದ ಮೆಟ್ಟಿಲುಗಳ ಮೇಲ್ಭಾಗದಲ್ಲಿರುವ ಮತ್ತೊಂದು ಕಲಿಮಾ ತಯ್ಯಿಬಾ ಲಿಪಿ ಮಣ್ಣಿನಿಂದ ಮುಚ್ಚಲ್ಪಟ್ಟಿರುವುದು ಗಮನಕ್ಕೆ ಬಂದಿದ್ದು, ಈ ವಿಷಯದ ಪರಿಶೀಲನೆ ಹಾಗೂ ಅಗತ್ಯ ಕ್ರಮಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ಅಧಿಕೃತವಾಗಿ ತರಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಕಾರ್ಯಕ್ರಮದ ಸಂಪೂರ್ಣ ಪ್ರಕ್ರಿಯೆ ಶಾಂತಿಪೂರ್ಣವಾಗಿ ನಡೆದಿದ್ದು, ಸಾಮರಸ್ಯ ಮತ್ತು ಧಾರ್ಮಿಕ ಭಾವನೆಗಳ ಗೌರವ ಕಾಪಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಝಿಯಾರತ್ ಕಾರ್ಯಕ್ರಮದಲ್ಲಿ ಬಾಬಾ ಬುಡನ್ ವಂಶಸ್ಥರಾದ ಸೈಯದ್ ಇಕ್ಬಾಲ್ ಪಾಶಾ ಖಾದ್ರಿ, ಸೈಯದ್ ಜುನೈದ್ ಶಾ ಖಾದ್ರಿ ಹಾಗೂ ಸೈಯದ್ ಸಕ್ಲೈನ್ ಪಾಶಾ ಖಾದ್ರಿ (ತೌಖೀರ್), ಬಾಬಾ ಬುಡನ್ ದರ್ಗಾ ಹೆರಿಟೇಜ್ ಅಸೋಸಿಯೇಷನ್ ಸದಸ್ಯರಾದ ಜುನೈದ್ ಪಾಶಾ, ಜಮೀಲ್ ಖಾನ್, ಸಮೀರ್, ತನ್ವೀರ್ ಅಹ್ಮದ್, ಮಕ್ಸೂದ್ ರಜ್ವಿ ಹಾಗೂ ತೌಸೀಫ್, ಮುಖಂಡರಾದ ಮುಬಾರಕ್, ಅಜ್ನಾನ್, ಜೀಲಾನ್, ಗೌಸ್ ಮುನೀರ್ ಸೇರಿದಂತೆ ಅನೇಕ ನಾಯಕರು ಹಾಗೂ ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.







