ಚಿಕ್ಕಮಗಳೂರು | ಬಡಾ ಮಕಾನ್-ನಲ್ಲೂರು ಮಠದ ಜಾಗ ವಿವಾದ; ವಿವಾದಿತ ಪ್ರದೇಶದಲ್ಲಿದ್ದ ಕಟ್ಟಡಗಳ ಏಕಾಏಕಿ ತೆರವು
ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ, ಸ್ಥಳದಲ್ಲಿ ಬಿಗಿ ಬಂದೋಬಸ್ತ್

ಚಿಕ್ಕಮಗಳೂರು : ನಗರದ ಹನುಮಂತಪ್ಪ ವೃತ್ತ ಸಮೀಪದಲ್ಲಿರುವ ಬಡಾ ಮಕಾನ್ ಹಾಗೂ ನಲ್ಲೂರು ಮಠ ಜಾಗ ವಿವಾದಕ್ಕೆ ಸಂಬಂಧಿಸಿದಂತೆ ಮಂಗಳವಾರ ಬೆಳಗ್ಗೆ 42 ಅಡಿ ವಿವಾದಿತ ಪ್ರದೇಶದಲ್ಲಿದ್ದ ಕಟ್ಟಡಗಳನ್ನು ತೆರವುಗೊಳಿಸಲಾಗಿದ್ದು, ಇದು ಎರಡು ಗುಂಪುಗಳ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ.
ತಾಲೂಕು ಕಚೇರಿ ಮುಂಭಾಗದ ಬಡಾ ಮಕಾನ್ ಹಾಗೂ ನಲ್ಲೂರು ಮಠದ ಜಾಗದ ಕುರಿತು ಅನೇಕ ವರ್ಷಗಳಿಂದ ವಿವಾದ ನಡೆಯುತ್ತಿದೆ. ಆದರೆ, ಏಕಾಏಕಿ ವಕ್ಫ್ ಮಂಡಳಿ ಅಧಿಕಾರಿಗಳ ಸಮ್ಮುಖದಲ್ಲಿ ಜಾಮೀಯಾ ಮಸೀದಿ ಕಮಿಟಿಯವರು ಬಡಾ ಮಕಾನ್ ಸಮೀಪದ ವಿವಾದಿತ ಸ್ಥಳದಲ್ಲಿದ್ದ ಕಟ್ಟಡಗಳನ್ನು ಜೆಸಿಬಿ ಬಳಸಿ ತೆರವುಗೊಳಿಸಿದ್ದಾರೆ ಎನ್ನಲಾಗಿದೆ.
ತೆರವು ಕಾರ್ಯಾಚರಣೆ ವಿಚಾರ ತಿಳಿಯುತ್ತಿದ್ದಂತೆ ನೆಲ್ಲೂರು ಮಠದವರು ಸ್ಥಳಕ್ಕೆ ಆಗಮಿಸಿ ವಿರೋಧ ವ್ಯಕ್ತಪಡಿಸಿದ್ದಾರೆ. ಈ ವೇಳೆ ಬಡಾ ಮಕಾನ್ ಕಮಿಟಿ ಸದಸ್ಯರು ಮತ್ತು ನಲ್ಲೂರು ಮಠದ ಕುಟುಂಬಸ್ಥರ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ಪೊಲೀಸರು ತೆರವು ಕಾರ್ಯಾಚರಣೆ ನಿಲ್ಲಿಸಿ ಗುಂಪನ್ನು ಚದುರಿಸಿದ್ದಾರೆ ಎಂದು ತಿಳಿದುಬಂದಿದೆ.
ಈ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಎಸ್ಪಿ ಡಾ. ವಿಕ್ರಮ್ ಅಮಟೆ, ಅಪರ ಜಿಲ್ಲಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ, ನಗರಸಭಾಧ್ಯಕ್ಷೆ ಸುಜಾತ ಶಿವಕುಮಾರ್ ನೇತೃತ್ವದಲ್ಲಿ ಎರಡು ಸಮುದಾಯದ ಮುಖಂಡರ ಸಭೆ ನಡೆಸಿದರು.
ತೆರವು ಕಾರ್ಯಾಚರಣೆ ನಡೆಸಿದ ಸ್ಥಳದಲ್ಲಿ ಕೆಎಸ್‌ಆರ್‌ಪಿ ತುಕಡಿ ನಿಯೋಜಿಸಲಾಗಿದ್ದು ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ನಗರಕ್ಕೆ ಆಗಮಿಸಿದ ಪಶ್ಚಿಮ ವಲಯದ ಐಜಿಪಿ ಅಮಿತ್‌ಸಿಂಗ್ ಘಟನೆಗೆ ಸಂಬಂಧಿಸಿದಂತೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು ವಿವಾದಿತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.