ಚಾರ್ಮಾಡಿ ಘಾಟ್ ನಲ್ಲಿ ರಸ್ತೆ ಅಪಘಾತ: ಬಸ್ಸಿನಡಿಗೆ ಬಿದ್ದು ಬೆಂಗಳೂರಿನ ಯುವಕ ಮೃತ್ಯು

ಮೂಡಿಗೆರೆ: ಬೈಕ್ ಅಪಘಾತಕ್ಕೀಡಾಗಿ ರಸ್ತೆಗೆ ಬಿದ್ದ ಯುವಕನೋರ್ವನ ಮೇಲೆ ಬಸ್ ಹರಿದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ ನ ಅಲೆಖಾನ್ ಸಮೀಪ ರವಿವಾರ ಸಂಭವಿಸಿದೆ.
ಮೃತರನ್ನು ಬೈಕ್ ಸಹಸವಾರ ಚಿರಾಗ್(24) ಎಂದು ಗುರುತಿಸಲಾಗಿದೆ. ಬೈಕ್ ಚಲಾಯಿಸುತ್ತಿದ್ದ ಯಶಸ್ ಎಂಬವರು ಪ್ರಾಣಪಾಯದಿಂದ ಪಾರಾಗಿದ್ದಾರೆ. ಸ್ನೇಹಿತರಾಗಿರುವ ಇವರಿಬ್ಬರು ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳೆಂದು ತಿಳಿದುಬಂದಿದೆ.
ಬೆಂಗಳೂರಿನಿಂದ ಚಾರ್ಮಾಡಿ ಘಾಟ್ ನ ಪ್ರಕೃತಿ ಸೌಂದರ್ಯ ಹಾಗೂ ವ್ಯೂ ಪಾಯಿಂಟ್ ಸಂದರ್ಶಿಸಲು ಚಿರಾಗ್ ಮತ್ತು ಯಶಸ್ ಬೈಕ್ ನಲ್ಲಿ ಆಗಮಿಸಿದ್ದರು. ಚಾರ್ಮಾಡಿ ಘಾಟ್ ನ ಅಲೆಖಾನ್ ಸಮೀಪ ವಾಹನವೊಂದನ್ನು ಓವರ್ ಟೇಕ್ ಮಾಡುವ ಭರದಲ್ಲಿ ನಿಯಂತ್ರಣ ತಪ್ಪಿದ ಬೈಕ್ ರಸ್ತೆಯ ತಡೆಗೋಡೆಗೆ ತಾಗಿದೆ ಎನ್ನಲಾಗಿದೆ. ಪರಿಣಾಮ ಬೈಕಿನ ಹಿಂಬದಿ ಸವಾರರಾಗಿದ್ದ ಚಿರಾಗ್ ರಸ್ತೆಗೆ ಎಸೆಯಲ್ಪಟ್ಟಿದ್ದಾರೆ. ಇದೇ ಸಂದರ್ಭದಲ್ಲಿ ಕಡೂರಿನಿಂದ ಧರ್ಮಸ್ಥಳದತ್ತ ತೆರಳುತ್ತಿದ್ದ ಬಸ್ ನ ಹಿಂಬದಿ ಚಕ್ರ ಅವರ ತಲೆಯ ಮೇಲೆ ಹರಿದಿದೆ. ಪರಿಣಾಮ ಹೆಲ್ಮೆಟ್ ಧರಿಸಿದ್ದರೂ ತಲೆಗೆ ಗಂಭೀರ ಗಾಯಗಳಾಗಿವೆ. ಆಸ್ಪತ್ರೆಗೆ ಕರೆದೊಯ್ಯುವ ದಾರಿಮಧ್ಯೆ ಚಿರಾಗ್ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಬಣಕಲ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.




