ಕಡೂರು ಶಾಸಕ ಕೆ.ಎಸ್.ಆನಂದ್ಗೆ ಇನ್ಸ್ಟಾಗ್ರಾಮ್ನಲ್ಲಿ ಬೆದರಿಕೆ ಆರೋಪ; ಇಬ್ಬರ ವಿರುದ್ಧ ಪ್ರಕರಣ ದಾಖಲು

ಕೆ.ಎಸ್.ಆನಂದ್
ಕಡೂರು : ಶಾಸಕ ಕೆ.ಎಸ್.ಆನಂದ್ ಅವರ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯ ಪೋಸ್ಟ್ಗೆ ಅಸಭ್ಯ ಪದಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿದ ಆರೋಪದಡಿ ಇಬ್ಬರು ಇನ್ಸ್ಟಾಗ್ರಾಮ್ ಖಾತೆದಾರರ ವಿರುದ್ಧ ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜು. 25ರಂದು ಶಾಸಕ ಕೆ.ಎಸ್. ಆನಂದ್ ಅವರು ಶೈಕ್ಷಣಿಕ ವಿಚಾರ ಹಾಗೂ ವಿದ್ಯಾರ್ಥಿಗಳ ಹೋರಾಟಕ್ಕೆ ಸಂಬಂಧಿಸಿದ ಪೋಸ್ಟ್ ಅನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದರು. ಈ ಪೋಸ್ಟ್ಗೆ ಜುಲೈ 26 ಮತ್ತು 27ರಂದು svt_ravi_ka10 ಹಾಗೂ basavaraj1829 ಹೆಸರಿನ ಇನ್ಸ್ಟಾಗ್ರಾಮ್ ಖಾತೆಗಳಿಂದ ಅಸಭ್ಯ ಪದ ಬಳಸಿ ನಿಂದಿಸಿ, ಬೆದರಿಕೆ ಹಾಕುವ ರೀತಿಯ ಕಾಮೆಂಟ್ಗಳನ್ನು ಮಾಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಕಾಮೆಂಟ್ಗಳನ್ನು ಗಮನಿಸಿದ ಕಾಂಗ್ರೆಸ್ ಮುಖಂಡ ಹಾಗೂ ಕಾರ್ಯಕರ್ತ ಸಚಿನ್ ಕೆ.ಎಂ. ಅವರು ಕಡೂರು ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
ದೂರಿನ ಆಧಾರದ ಮೇಲೆ ಪ್ರಕರಣದ ಗಂಭೀರತೆಯನ್ನು ಪರಿಶೀಲಿಸಿದ ಪೊಲೀಸರು, ಘನ ನ್ಯಾಯಾಲಯದ ಪೂರ್ವಾನುಮತಿ ಪಡೆದು ಇಬ್ಬರು ಖಾತೆದಾರರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.




