CHIKKAMAGALURU | ಮಗಳನ್ನೇ ವೇಶ್ಯಾವಾಟಿಕೆಗೆ ತಳ್ಳಿದ ಆರೋಪ: ತಂದೆ, ಅಜ್ಜಿ ಸಹಿತ ಹಲವರ ಬಂಧನ

ಸಾಂದರ್ಭಿಕ ಚಿತ್ರ | PC : freepik.com
ಚಿಕ್ಕಮಗಳೂರು: ತಂದೆಯೇ ಹಣದ ಆಸೆಗೆ ಅಪ್ರಾಪ್ತ ವಯಸ್ಸಿನ ಮಗಳನ್ನು ವೇಶ್ಯಾವಾಟಿಕೆಗೆ ತಳ್ಳಲು ಯತ್ನಿಸಿದ ಅಮಾನವೀಯ ಘಟನೆ ಕಡೂರು ತಾಲೂಕಿನ ಬೀರೂರು ಹೋಬಳಿಯ ಗ್ರಾಮವೊಂದರಲ್ಲಿ ನಡೆದಿರುವುದು ವರದಿಯಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ಸಂತ್ರಸ್ತೆಯ ತಂದೆ, ಅಜ್ಜಿ, ದ.ಕ. ಜಿಲ್ಲೆ ಮೂಲದ ಭರತ್ ಶೆಟ್ಟಿ ಎಂಬಾತನ ಸಹಿತ ಪ್ರಮುಖ ಆರೋಪಿಗಳನ್ನು ಬೀರೂರು ಠಾಣಾ ಪೊಲೀಸರು ಬಂಧಿಸಿದ್ದಾರೆ.
ತಾಯಿಯಿಲ್ಲದ 16 ವರ್ಷದ ಬಾಲಕಿಯನ್ನು ತಂದೆ ಹಾಗೂ ಅಜ್ಜಿ ಸೇರಿ ಹಣಕ್ಕಾಗಿ ವೇಶ್ಯಾವಾಟಿಕೆಗೆ ಬಳಸಿಕೊಂಡಿರುವ ಆರೋಪ ಕೇಳಿಬಂದಿದೆ.
ಆರೋಪಿ ಭರತ್ ಶೆಟ್ಟಿ ಬಾಲಕಿಯನ್ನು ಮಂಗಳೂರಿಗೆ ಕರೆದೊಯ್ದಿದ್ದು, ಅಲ್ಲಿ ಆರು ದಿನಗಳ ಕಾಲ 10ಕ್ಕೂ ಹೆಚ್ಚು ಜನರಿಂದ ಬಾಲಕಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾಳೆ ಎಂದು ಆರೋಪಿಸಲಾಗಿದೆ.
ಮುಟ್ಟಾಗಿರುವ ಅವಧಿಯಲ್ಲೂ ಬಾಲಕಿಯನ್ನು ಬಲವಂತವಾಗಿ ಲೈಂಗಿಕ ಕೃತ್ಯಕ್ಕೆ ಒಳಪಡಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಮಂಗಳೂರಿನಿಂದ ಊರಿಗೆ ಮರಳಿದ ಬಳಿಕ ನೊಂದ ಬಾಲಕಿ ತನ್ನ ಚಿಕ್ಕಪ್ಪನಿಗೆ ಹಾಗೂ ಅತ್ತೆಗೆ ವಿಷಯ ತಿಳಿಸಿದ್ದು, ಅವರ ಮೂಲಕ ಬೀರೂರು ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.







