ವಿಧಾನ ಪರಿಷತ್ ಚುನಾವಣೆಗೆ ನಾಮನಿರ್ದೇಶಿತ ಸದಸ್ಯರ ಮತದಾನ ಪ್ರಶ್ನಿಸಿ ಗಾಯತ್ರಿ ಶಾಂತೇಗೌಡ ಅರ್ಜಿ
ಮರು ಮತ ಎಣಿಕೆಗೆ ಸುಪ್ರೀಂ ಆದೇಶ

ಚಿಕ್ಕಮಗಳೂರು : ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ಆಯ್ಕೆಯಾಗಿರುವ ಬಿಜೆಪಿಯ ಎಂ.ಕೆ.ಪ್ರಾಣೇಶ್ ಅವರ ಸದಸ್ಯತ್ವ ನಾಮ ನಿರ್ದೇಶಿತ ಸದಸ್ಯರ ಮತದಾನದ ಹಕ್ಕಿನ ಮೇಲೆ ನಿರ್ಧಾರವಾಗಲಿದ್ದು, ಎಲ್ಲರಲ್ಲಿ ಕುತೂಹಲ ಕೆರಳಿಸಿದೆ. ಸದ್ಯ ಪ್ರಕರಣ ನ್ಯಾಯಾಲಯದಲ್ಲಿದ್ದು, ನ್ಯಾಯಾಲಯದ ಆದೇಶವನ್ನು ಎದುರು ನೋಡುತ್ತಿದ್ದಾರೆ.
ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ 2021ರ ಡಿ.10ರಂದು ಚುನಾವಣೆ ನಡೆದಿತ್ತು. ಡಿ.14ರಂದು ಫಲಿತಾಂಶ ಬಂದಿದ್ದು, 2,410 ಮತಗಳಲ್ಲಿ 39 ಮತಗಳು ತಿರಸ್ಕತಗೊಂಡಿದ್ದರೆ, 2,371 ಮತಗಳು ಸಿಂಧುವಾಗಿತ್ತು. ಎಂ.ಕೆ.ಪ್ರಾಣೇಶ್ 1,188 ಮತಗಳನ್ನು ಪಡೆದಿದ್ದರೆ, ಪ್ರತಿಸ್ಫರ್ಧಿಯಾಗಿದ್ದ ಕಾಂಗ್ರೆಸ್‌ನ ಎ.ವಿ.ಗಾಯತ್ರಿ ಶಾಂತೇಗೌಡ 1,182 ಮತಗಳನ್ನು ಪಡೆದಿದ್ದರು. ಎಂ.ಕೆ.ಪ್ರಾಣೇಶ್ 6 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು.
ಚುನಾವಣೆಯಲ್ಲಿ 12 ಜನ ಸರಕಾರದ ನಾಮನಿರ್ದೇಶಿತ ಸದಸ್ಯರು ಮತದಾನ ಮಾಡಿದ್ದರು. ನಾಮನಿರ್ದೇಶಿತ ಸದಸ್ಯರು ಮತದಾನ ಮಾಡಲು ಅವಕಾಶವಿಲ್ಲವೆಂದು ಅಂದು ಕಾಂಗ್ರೆಸ್ ಕಾರ್ಯಕರ್ತರು ಮತ ಎಣಿಕೆ ಕೇಂದ್ರದ ಆವರಣದಲ್ಲಿ ಧರಣಿ ನಡೆಸಿ ಮರು ಮತ ಎಣಿಕೆಗೆ ಆಗ್ರಹಿಸಿದ್ದರು. ಆದರೆ, ಇದಕ್ಕೆ ಚುನಾವಣಾಧಿಕಾರಿ ಅವಕಾಶ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಎ.ವಿ.ಗಾಯತ್ರಿ ಶಾಂತೇಗೌಡ ಅವರು ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದರು. ಈ ಪ್ರಕರಣವನ್ನು ಇತ್ತೀಚೆಗೆ ವಿಚಾರಣೆಗೆ ಕೈಗೆತ್ತಿಕೊಂಡಿದ್ದ ನ್ಯಾಯಾಲಯ ಮರು ಎಣಿಕೆ ಮಾಡುವಂತೆ ಆದೇಶಿಸಿತ್ತು.
ಮಾ.4ರೊಳಗೆ ಮುಚ್ಚಿದ ಲಕೋಟೆಯಲ್ಲಿ ವರದಿ ಸಲ್ಲಿಕೆಗೆ ಆದೇಶ: ಹೈಕೋರ್ಟ್ ಆದೇಶವನ್ನು ಪುರಸ್ಕರಿಸದಂತೆ ಎಂ.ಕೆ.ಪ್ರಾಣೇಶ್ ಅವರು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಸುಪ್ರೀಂ ಕೋರ್ಟ್ ಸದ್ಯ ಹೈಕೋಟ್ ಆದೇಶವನ್ನು ಎತ್ತಿ ಹಿಡಿದಿದ್ದು, ನಾಮನಿರ್ದೇಶಿತ ಸದಸ್ಯರ ಮತಗಳನ್ನು ಪ್ರತ್ಯೇಕಿಸಿ ಮರು ಮತ ಎಣಿಕೆ ಮಾಡುವಂತೆ ಆದೇಶಿಸಿದೆ. ಮಾ.4ರೊಳಗೆ ಎಣಿಕೆ ಕಾರ್ಯ ಪೂರ್ಣಗೊಳಿಸಿ ಶೀಲ್ಡ್ ಮಾಡಿದ ಲಕೋಟೆಯಲ್ಲಿ ವರದಿ ನೀಡುವಂತೆ ಸೂಚಿಸಿದೆ.
ಅದರಂತೆ ಜಿಲ್ಲಾಡಳಿತವೂ ಸಿದ್ಧತೆಗಳನ್ನು ಮಾಡಿಕೊಂಡಿದೆ. ಫೆ.28ರಂದು ಮತ ಎಣಿಕೆ ಕಾರ್ಯ ನಡೆಯಲಿದ್ದು, ಮುಚ್ಚಿದ ಲಕೋಟೆಯಲ್ಲಿ ಮರು ಮತ ಎಣಿಕೆ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕಿದೆ.
ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಆಯ್ಕೆಯಾಗುವ ಚುನಾವಣೆಯಲ್ಲಿ ಶೃಂಗೇರಿ, ಕೊಪ್ಪ, ನರಸಿಂಹರಾಜಪುರ, ಮೂಡಿಗೆರೆ ಪಟ್ಟಣ ಪಂಚಾಯತ್ ಸರಕಾರದಿಂದ ನಾಮನಿರ್ದೇಶಿತ ಸದಸ್ಯರು ಮತ ಚಲಾಯಿಸಿದ್ದರು. ಆರು ಮತಗಳಿಂದ ಸೋಲು ಕಂಡ ಗಾಯತ್ರಿ ಶಾಂತೇಗೌಡ ನಾಮ ನಿರ್ದೇಶಿತ ಸದಸ್ಯರು ಮತದಾನ ಮಾಡಲು ಅವಕಾಶವಿಲ್ಲವೆಂದು ನ್ಯಾಯಾಲಯದ ಕದ ತಟ್ಟಿದ್ದರು.
ಇದೇ ವೇಳೆ ಪ್ರಾಣೇಶ್ ಅವರು ಸುಪ್ರೀಂ ಕೋರ್ಟ್‌ನಲ್ಲಿ ಸರಕಾರದಿಂದ ನಾಮನಿರ್ದೇಶಿತರಾದ ಸದಸ್ಯರಿಗೆ ಮತದಾನದ ಹಕ್ಕು ಇದೆಯೇ, ಇಲ್ಲವೇ ಎಂದು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದು, ಸದ್ಯ ಆ ಅರ್ಜಿ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇದೆ. ನ್ಯಾಯಾಲಯ ಒಂದು ವೇಳೆ ನಾಮ ನಿರ್ದೇಶಿತ ಸದಸ್ಯರಿಗೆ ಮತ ಹಾಕಲು ಅವಕಾಶವಿದೆ ಎಂದು ಆದೇಶ ನೀಡಿದರೆ ಎಂ.ಕೆ.ಪ್ರಾಣೇಶ್ ವಿ.ಪ. ಸದಸ್ಯ ಸ್ಥಾನದಲ್ಲಿ ಇನ್ನೂ ಮೂರು ವರ್ಷಗಳ ಕಾಲ ಮುಂದುವರಿಯಲಿದ್ದಾರೆ. ನಾಮ ನಿರ್ದೇಶಿತ ಸಮಸ್ಯರಿಗೆ ಮತದಾನ ಮಾಡಲು ಅವಕಾಶವಿಲ್ಲ ಎಂದಾದರೆ ಎ.ವಿ.ಗಾಯತ್ರಿ ಶಾಂತೇಗೌಡರು ವಿಪ ಸದಸ್ಯರಾಗಿ ಆಯ್ಕೆಯಾಗಲಿದ್ದಾರೆ. ನಾಮ ನಿರ್ದೇಶಿತ ಸದಸ್ಯರ ಮತದಾನದ ಹಕ್ಕಿನ ಮೇಲೆ ಇಬ್ಬರ ಭವಿಷ್ಯ ನಿಂತಿದ್ದು, ಎಲ್ಲರ ಚಿತ್ತ ಮರು ಮತ ಎಣಿಕೆಯತ್ತ ನೆಟ್ಟಿದೆ.
ಈ ನಡುವೆ ಮರು ಮತ ಎಣಿಕೆಯನ್ನು ಅತ್ಯಂತ ಗೌಪ್ಯವಾಗಿ ನಡೆಸಬೇಕಿರುವುದರಿಂದ ಜಿಲ್ಲಾಡಳಿತ ರಾಜ್ಯ ಚುನಾವಣಾ ಆಯೋಗದ ನಿರ್ದೇಶನಕ್ಕಾಗಿ ಕಾದು ಕುಳಿತಿದೆ. ಚುನಾವಣಾ ಆಯೋಗದಿಂದ ಇದುವರೆಗೂ ಜಿಲ್ಲಾಡಳಿತಕ್ಕೆ ಯಾವುದೇ ನಿರ್ದೇಶನ ಬಂದಿಲ್ಲ ಎಂದು ಜಿಲ್ಲಾಧಿಕಾರಿ ಕಚೇರಿಯ ಚುನಾವಣಾ ಶಾಖೆಯ ಅಧಿಕಾರಿಗಳು ‘ವಾರ್ತಾಭಾರತಿ’ಗೆ ತಿಳಿಸಿದ್ದಾರೆ.







