ಕುದುರೆಮುಖ ಪೊಲೀಸರ ದೌರ್ಜನ್ಯ ಆರೋಪ; ಡೆತ್ನೋಟ್ ಬರೆದಿಟ್ಟು ದಲಿತ ಯುವಕ ಆತ್ಮಹತ್ಯೆ

ನಾಗೇಶ್
ಚಿಕ್ಕಮಗಳೂರು, ಆ.13 : ‘ಪೊಲೀಸರು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ, ನನಗೆ ನ್ಯಾಯ ಕೊಡಿಸಿ’ ಎಂದು ಮರಣ ಪತ್ರ ಬರೆದಿಟ್ಟು ದಲಿತ ಯುವಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕಳಸ ತಾಲೂಕಿನ ಸಂಸೆ ಗ್ರಾಮದಲ್ಲಿ ವರದಿಯಾಗಿದೆ.
ಸಂಸೆ ಗ್ರಾಮದಲ್ಲಿ ಪೊಲೀಸ್ ಕಾನ್ಸ್ಟೇಬಲ್ ಸಿದ್ದೇಶ್ ಎಂಬಾತ ತನ್ನ ಮೇಲೆ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿದ್ದಾರೆ ಎಂದು ಜು.18ರಂದು ದೂರು ನೀಡಿದ್ದ ಪರಿಶಿಷ್ಟ ಜಾತಿಯ ನಾಗೇಶ್ ಎಂಬವರು ಸಂಸೆ ಗ್ರಾಮದ ಬಸ್ತಿಗದ್ದೆಯ ತನ್ನ ಮನೆಯ ಪಕ್ಕದ ನೆಂಟರ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಕುದುರೆಮುಖ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ಸಿದ್ದೇಶ್ ಮತ್ತು ಸ್ಥಳೀಯ ಮೇಲ್ವರ್ಗದ ಇಬ್ಬರು ತನ್ನ ಮೇಲೆ ಹಲ್ಲೆ ಮಾಡಿದ್ದಾರೆಂದು ಆರೋಪಿಸಿ ನಾಗೇಶ್ ಜಾತಿ ನಿಂದನೆ ಮತ್ತು ಹಲ್ಲೆ ಬಗ್ಗೆ ಕುದುರೆಮುಖ ಪೊಲೀಸ್ ಠಾಣೆ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಜು.18ರಂದು ದೂರು ನೀಡಿದ್ದರು. ಅಲ್ಲದೆ, ನಾಗೇಶ್ ಒಂದು ವಾರ ಚಿಕ್ಕಮಗಳೂರು ನಗರದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.
ಇದೇ ದೂರಿನ ಬೆನ್ನಲ್ಲೇ ನಾಗೇಶ್ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಿ ಕುದುರೆಮುಖ ಪೊಲೀಸರು ನಾಗೇಶ್ ವಿರುದ್ಧವೂ ಪ್ರಕರಣ ದಾಖಲಿಸಿ ಆಟೊ ಮತ್ತು ಅಡಿಕೆಗೆ ಔಷಧ ಸಿಂಪಡಿಸುವ ಯಂತ್ರವನ್ನು ವಶಪಡಿಸಿಕೊಂಡಿದ್ದರು. ನಾಗೇಶ್ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಪಡೆದುಕೊಂಡಿದ್ದರು. ಆದರೆ, ತನ್ನ ಆಟೊ ಬಿಡಿಸಿಕೊಳ್ಳಲಾರದೆ, ದುಡಿಮೆಯೂ ಇಲ್ಲದೆ, ಆಟೊ ಸಾಲದ ಕಂತನ್ನೂ ಕಟ್ಟಲಾರದೆ ಆರ್ಥಿಕ ಸಂಕಷ್ಟದಿಂದ ಕಂಗಾಲಾಗಿದ್ದರು ಎಂದು ಕುಟುಂಬದವರು ತಿಳಿಸಿದ್ದಾರೆ. ಪೊಲೀಸರ ಜೊತೆಗೆ ಜಟಾಪಟಿ ನಂತರ ನಾಗೇಶ್ ತನ್ನ ಫೋನ್ ಕರೆಯನ್ನೂ ಸ್ವೀಕರಿಸುತ್ತಿರಲಿಲ್ಲ. ಪೊಲೀಸರ ಬಗ್ಗೆ ಹೆದರಿಕೊಂಡಿದ್ದರು ಎಂದು ಮೃತನ ಪತ್ನಿ ತಿಳಿಸಿದ್ದಾರೆ.
ನಾಗೇಶ್ ಆತ್ಮಹತ್ಯೆಗೆ ಮೊದಲು ಬರೆದಿರುವ ಡೆತ್ನೋಟ್ನಲ್ಲಿ, ತನ್ನ ಮೇಲೆ ಪೊಲೀಸ್ ಸಿಬ್ಬಂದಿಯ ದೌರ್ಜನ್ಯ ಮತ್ತು ಕುದುರೆಮುಖ ಠಾಣಾಧಿಕಾರಿಯೂ ಈ ಪ್ರಕರಣದಲ್ಲಿ ಭಾಗಿ ಆಗಿರುವ ಬಗ್ಗೆ ಪ್ರಸ್ತಾವಿಸಿದ್ದಾರೆ. ಅಲ್ಲದೆ, ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಗಬೇಕು, ತನ್ನ ಕುಟುಂಬಕ್ಕೆ ನ್ಯಾಯ ಕೊಡಿಸಬೇಕೆಂದು ಆಗ್ರಹಿಸಿದ್ದಾರೆ.
ನಾಗೇಶ್ರ ಮೃತದೇಹವನ್ನು ಕಳಸ ಸಮುದಾಯ ಆರೋಗ್ಯ ಕೇಂದ್ರಕ್ಕೆ ತರಲಾಗಿದ್ದು, ಅಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಪಡಿಸಲಾಗಿತ್ತು. ಈ ವೇಳೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಯಕುಮಾರ್, ಕೊಪ್ಪ ಡಿವೈಎಸ್ಪಿ ಬಾಲಾಜಿ ಸಿಂಗ್ ಉಪಸ್ಥಿತರಿದ್ದರು.
ತಪ್ಪಿತಸ್ಥರ ಬಂಧನಕ್ಕೆ ಆಗ್ರಹಿಸಿ ಮೃತದೇಹವಿಟ್ಟು ಧರಣಿ :
ದಲಿತ ಯುವಕ ನಾಗೇಶ್ ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ತಿಳಿಯುತ್ತಿದ್ದಂತೆ ದಲಿತ, ಪ್ರಗತಿಪರ ಸಂಘಟನೆಗಳ ಮುಖಂಡರು ಕಳಸ ಪಟ್ಟಣದ ಸಮುದಾಯದ ಆರೋಗ್ಯ ಕೇಂದ್ರದ ಬಳಿ ಪೊಲೀಸರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು.
ದಲಿತ ಯುವಕನ ಮೇಲೆ ಕುದುರೆಮುಖ ಪೊಲೀಸ್ ಠಾಣೆ ಪೇದೆ ಸಿದ್ದೇಶ್ ಎಂಬಾತ ಹಲ್ಲೆ ನಡೆಸಿದ್ದಾನೆ, ಜಾತಿ ನಿಂದನೆಯನ್ನೂ ಮಾಡಿದ್ದಾನೆ. ಈ ಬಗ್ಗೆ ದೂರು ನೀಡಿದರೂ ಪೊಲೀಸರು ನಾಗೇಶ್ ಮೇಲೆಯೇ ಕೇಸ್ ದಾಖಲಿಸಿ ಆತ ನೀಡಿದ್ದ ದೂರು ಹಿಂಪಡೆಯಲು ಬೆದರಿಕೆಯೊಡ್ಡಿದ್ದಾರೆ. ಆರೋಪಿಯಾಗಿರುವ ಪೇದೆಯನ್ನು ರಕ್ಷಣೆ ಮಾಡುವ ಉದ್ದೇಶದಿಂದ ಪೊಲೀಸ್ ಇಲಾಖೆ ನಾಗೇಶ್ ವಿರುದ್ಧವೇ ದೂರು ದಾಖಲಿಸಿ ದೌರ್ಜನ್ಯ ಎಸಗಿದೆ ಎಂದು ಮುಖಂಡರು ಆರೋಪಿಸಿದರು. ಈ ವೇಳೆ ಪೊಲೀಸರು ಮತ್ತು ಮುಖಂಡರ ನಡುವೆ ಮಾತಿನ ಚಕಮಕಿ ನಡೆಯಿತು.
ಪೊಲೀಸ್ ಕಾನ್ಸ್ಟೇಬಲ್ ಸಿದ್ದೇಶ್ ಮತ್ತು ಸಬ್ ಇನ್ಸ್ಪೆಕ್ಟರ್ ಅವರನ್ನು ಕೂಡಲೇ ಬಂಧಿಸಬೇಕು. ಅಲ್ಲಿಯವರೆಗೂ ಮರಣೋತ್ತರ ಪರೀಕ್ಷೆ ನಡೆಸಬಾರದು ಎಂದು ಆಗ್ರಹಿಸಿ ನಾಗೇಶ್ ಬಂಧುಗಳು ಸ್ಥಳದಲ್ಲಿ ಕೆಲ ಹೊತ್ತು ಧರಣಿ ನಡೆಸಿದರು.
ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿ ಮಹಿಳಾ ನಾಯಕಿ ಆಶಾ ಸಂತೋಷ್, ಸಂತೋಷ್ ಮತ್ತಿತರರಿದ್ದರು.
50 ಲಕ್ಷ ರೂ. ಪರಿಹಾರಕ್ಕೆ ಆಗ್ರಹ
ನಾಗೇಶ್ ಸಾವಿಗೆ ಕಾರಣರಾದ ಕಾನ್ಸ್ಟೇಬಲ್ ಸಿದ್ದೇಶ ಮತ್ತು ಸುಳ್ಳು ದೂರು ದಾಖಲು ಮಾಡಿದ ಕುದುರೆಮುಖ ಸಬ್ ಇನ್ಸ್ಪೆಕ್ಟರ್ ಅವರನ್ನು ಸೇವೆಯಿಂದ ವಜಾ ಮಾಡಬೇಕು. ನಾಗೇಶ್ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ಕೊಡಬೇಕು ಎಂದು ದಲಿತ ಮುಖಂಡ ಅಂಗಡಿ ಚಂದ್ರು ಆಗ್ರಹಿಸಿದರು.
ನಾಗೇಶ್ ಸಾವಿನಿಂದ ನಮಗೂ ನೋವಾಗಿದೆ. ಆತನ ಒಂದು ತಿಂಗಳ ಮಗು ಮತ್ತು ಆತನ ಪತ್ನಿ ಬಗ್ಗೆ ನಮಗೂ ಸಹಾನುಭೂತಿ ಇದೆ. ತಪ್ಪಿತಸ್ಥರ ವಿರುದ್ಧ ದೂರು ದಾಖಲಿಸಿ ನಿಷ್ಪಕ್ಷ ಕ್ರಮ ತೆಗೆದುಕೊಳ್ಳಲಾಗುತ್ತದೆ.
ಜಯ ಕುಮಾರ್, ಎಎಸ್ಪಿ







