Chikkamagaluru | ವಾಲ್ಮೀಕಿ ಸಮುದಾಯದ 5 ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ: ಆರೋಪ

ಚಿಕ್ಕಮಗಳೂರು : ಯಳ್ಳಂಬಳಸೆ ಗ್ರಾಮದಲ್ಲಿ ವಾಲ್ಮೀಕಿ ಸಮುದಾಯದ 5 ಕುಟುಂಬಗಳಿಗೆ ಅದೇ ಸಮುದಾಯದವರಿಂದ ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ನೊಂದ ಕುಟುಂಬದ ಹೋರಾಟಗಾರ್ತಿ ಗೀತಾದೇವಿ ಒತ್ತಾಯಿಸಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಳ್ಳಂಬಳಸೆ ಗ್ರಾಮದ ವಾಲ್ಮೀಕಿ ಸಮುದಾಯಕ್ಕೆ ಸೇರಿದ 35 ಕುಟುಂಬಗಳು ಒಟ್ಟಾಗಿ ಸೇರಿ ಅದೇ ಸಮುದಾಯದ 5 ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ ಹಾಕಿದೆ. ಈ ಕುಟುಂಬಗಳ ಜೊತೆ ಯಾರೂ ಮಾತನಾಡಬಾರದು, ಯಾವುದೇ ಶುಭ ಸಮಾರಂಭಗಳಿಗೆ ಕರೆಯಬಾರದು ಹಾಗೂ ಸಾರ್ವಜನಿಕವಾಗಿ ಒಂಟಿ ಮಾಡಲು ಫರ್ಮಾನು ಹೊರಡಿಸಿದ್ದಾರೆ ಎಂದರು.
ನಮ್ಮ ವಾಲ್ಮೀಕಿ ಸಮಾಜದವರು ಗ್ರಾಮ ದೇವತೆ ಹಳದಮ್ಮ ದೇವಿಯ ಜಾತ್ರೆ ನೆರವೇರಿಸುತ್ತಿದ್ದೇವೆ. 2024ರಲ್ಲಿ ಕುರುಬ ಸಮಾಜ ಮತ್ತು ಉಪ್ಪಾರ ಸಮಾಜದ ಹುಡುಗರು ಗಲಾಟೆ ಮಾಡಿದ್ದರು. ಅದನ್ನು ನೋಡಿ ನಮ್ಮ ವಾಲ್ಮೀಕಿ ಸಮಾಜದವರು ದೇವರನ್ನು ಅಲ್ಲಿಯೇ ಬಿಟ್ಟು ಬಂದರು. ಮುಂದಿನ ದಿನ ನಮ್ಮವರಿಗೂ ಗಲಾಟೆ ಮಾಡುತ್ತಾರೆ ಎಂದು ತಿಳಿದು, ನಮ್ಮ ಸಮಾಜದವರು ಯಾರೂ ದೇವರ ಕಾರ್ಯಕ್ಕೆ ಹೋಗಲಿಲ್ಲ ಎಂದು ಹೇಳಿದರು.
ಎರಡು ವರ್ಷಗಳ ನಂತರ ನಾವು ಗ್ರಾಮ ದೇವತೆಯ ಕಮಿಟಿಯ ಬಳಿ ಹೋಗಿ 5 ಕುಟುಂಬದವರು ದೇವರ ಕೆಲಸ ಮಾಡುವುದಾಗಿ ತಿಳಿಸಿದ್ದೆವು. ಈ ವಿಚಾರ ತಿಳಿದು ನಮ್ಮ ವಾಲ್ಮೀಕಿ ಸಮಾಜದವರು ಜೂ.29ರಂದು ಪಂಚಾಯತಿ ಕರೆದಿದ್ದರು. ಅಲ್ಲಿ ಎಲ್ಲರೂ ಸೇರಿ ನೀವು ದೇವರ ಕಾರ್ಯ ಮಾಡಲು ಒಬ್ಬೊಬ್ಬರೇ ಹೋಗುತ್ತಿದ್ದೀರಾ, ಅಲ್ಲಿ ನಮಗೆ ಬೆಲೆ ಇಲ್ಲ, ಅಲ್ಲಿಗೆ ಹೋದವರಿಗೆ ಬಹಿಷ್ಕಾರ ಹಾಕುತ್ತೇವೆ ಎಂದು ಹೇಳಿದ್ದರು. ಅದಕ್ಕೆ ನಾವು, ಅಲ್ಲಿಯೂ ದೇವರ ಕೆಲಸ ಮಾಡುತ್ತೇವೆ, ಇಲ್ಲಿಯೂ ದೇವರ ಕಾರ್ಯ ನಡೆಸುತ್ತೇವೆ ಎಂದು ತಿಳಿಸಿದ್ದೆವು. ಹಳದಮ್ಮ ದೇವಿಯ ಮೊದಲನೇ ಕಾರ್ಯ ಕೆಂಡ ಹಾಯುವುದು. ಅದರಲ್ಲಿ ನಾವು ಭಾಗಿಯಾಗಿ ಕಾರ್ಯ ನಡೆಸಿದ್ದೆವು ಎಂದು ತಿಳಿಸಿದರು.
ಅಂತರಘಟ್ಟಮ್ಮ ದೇವಸ್ಥಾನದ ಬಳಿ ಎಲ್ಲ ಸಮಾಜದವರು ಸೇರಿ ನಮ್ಮ 5 ಕುಟುಂಬದವರನ್ನು ಬಿಟ್ಟು ಪಂಚಾಯಿತಿ ನಡೆಸಿದ್ದಾರೆ. ಇದನ್ನು ಪ್ರಶ್ನಿಸಿದಾಗ, ನಿಮ್ಮನ್ನು ಯಾರು ಇಲ್ಲಿಗೆ ಕರೆದಿದ್ದವರು ಎಂದು ಪ್ರಶ್ನಿಸಿದರು. ‘ನಾವು ನಿಮ್ಮವರೇ ಅಲ್ಲವೇ’ ಎಂದು ಕೇಳಿದೆವು. ಇದಕ್ಕೆ ಸಮಾಜದವರು ಪ್ರತಿಕ್ರಿಯಿಸಿ, ‘ನಮ್ಮ ಮಾತು ಕೇಳದೆ ದೇವರ ಕಾರ್ಯ ಮಾಡಲು ಹೋಗಿದ್ದೀರಾ, ಅದಕ್ಕೆ ಬಹಿಷ್ಕಾರ ಹಾಕಿದ್ದೀವಿ ಎಂದು ತಿಳಿಸಿದರು. ಈ ವಿಚಾರವಾಗಿ ಯಗಟಿ ಪೊಲೀಸ್ ಠಾಣೆಗೆ ದೂರು ನೀಡಲು ಹೋದಾಗ ಠಾಣೆಯ ಅಧಿಕಾರಿಯೊಬ್ಬರು ನನ್ನ ಬಗ್ಗೆ ಕೀಳು ಮಟ್ಟದ ಪದ ಬಳಕೆ ಮಾಡಿ ನನ್ನನ್ನು ಅವಮಾನ ಮಾಡಿದ್ದಾರೆ.
ಈ ಬಗ್ಗೆ ಡಿಸಿ, ಎಸ್ಪಿ, ತರೀಕೆರೆ ಡಿವೈಎಸ್ಪಿ ಹಾಗೂ ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಿದ್ದೇನೆ ಎಂದು ಗೀತಾದೇವಿ ಹೇಳಿದರು.
ನಮ್ಮ 5 ಕುಟುಂಬದವರಿಗೆ ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ. ನಮ್ಮ ಊರಿನಲ್ಲಿ ಬಹಿಷ್ಕಾರದ ಪಿಡುಗು ಇರಬಾರದು. ಇದಕ್ಕೆ ಶಾಶ್ವತ ಪರಿಹಾರ ಸಿಗುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಇದೇ ವೇಳೆ ಗೀತಾದೇವಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಾಮಾಜಿಕ ಬಹಿಷ್ಕಾರ ಕುಟುಂಬದ ಸದಸ್ಯರಾದ ಲಕ್ಷ್ಮಿದೇವಿ, ಲಕ್ಷ್ಮಮ್ಮ, ಉಮಾ, ವಿನಯ್, ಗೌರಂಗ ಉಪಸ್ಥಿತರಿದ್ದರು.






