ಚಿಕ್ಕಮಗಳೂರು | ಸಿ.ಟಿ.ರವಿ ಬಂಧನ ಖಂಡಿಸಿ ಬಿಜೆಪಿ ಕರೆ ನೀಡಿದ್ದ ಬಂದ್ ಗೆ ಮಿಶ್ರ ಪ್ರತಿಕ್ರಿಯೆ
ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ; ಬೈಕ್‌ಗೆ ಬೆಂಕಿ ಹಚ್ಚಿ ಆಕ್ರೋಶ

ಚಿಕ್ಕಮಗಳೂರು: ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಬಂಧನ ಖಂಡಿಸಿ ಜಿಲ್ಲಾ ಬಿಜೆಪಿ ಕರೆ ನೀಡಿದ್ದ ಚಿಕ್ಕಮಗಳೂರು ನಗರ ಸ್ವಯಂ ಪ್ರೇರಿತ ಬಂದ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ನಗರದ ಪ್ರಮುಖ ರಸ್ತೆ ಎಂ.ಜಿ. ರಸ್ತೆಯ ಕೆಲವು ಅಂಗಡಿ ಮುಂಗಟ್ಟು ಮಾಲಕರು ಸ್ವಯಂ ಪ್ರೇರಿತವಾಗಿ ವ್ಯಾಪಾರ. ವಹಿವಾಟು ಬಂದ್ ಗೊಳಿಸಿ ಬಂದ್ ಗೆ ಬೆಂಬಲ ನೀಡಿದರೆ, ಉಳಿದಂತೆ ಬಹುತೇಕ ಅಂಗಡಿ ಮುಂಗಟ್ಟು ಮಾಲಕರು ಎಂದಿನಂತೆ ವ್ಯಾಪಾರ ವಹಿವಾಟು ನಡೆಸಿದರು.
ಬೆಳಿಗ್ಗೆ ನಗರದ ಹನುಮಂತಪ್ಪ ವೃತ್ತದಲ್ಲಿ ಜಿಲ್ಲಾ ಬಿಜೆಪಿ ಮುಖಂಡರು ಪ್ರತಿಭಟನೆಗೆ ಮುಂದಾದರು. ಈ ವೇಳೆ ಪ್ರತಿಭಟನೆಯಲ್ಲಿ ಬಾಗಿಯಾಗಿದ್ದ ಮುಖಂಡರು ಮತ್ತು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದರು.
ಪೊಲೀಸರ ನಡೆಯನ್ನು ಮುಖಂಡರು ಖಂಡಿಸಿದರು. ಬಂದ್ ಪ್ರತಿಭಟನೆ ಹಿನ್ನಲೆ ನಗರದ ಹನುಮಂತಪ್ಪ ವೃತ್ತ ಸೇರಿದಂತೆ ಆಯಾ ಕಟ್ಟಿನ ಜಾಗದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು. ಪ್ರತಿಭಟನೆಗೆ ಹಾಗೂ ಬಂದ್ ಗೆ ಪೊಲೀಸ್ ಇಲಾಖೆಯಿಂದ ಪೂರ್ವಾನುಮತಿ ಪಡೆಯದ ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಸ್ ಇಲಾಖೆಯಿಂದ ಬಿಗಿ ಬಂದೋಬಸ್ತ್ ಕೈಗೊಂಡಿದ್ದು, ಅಲ್ಲಲ್ಲಿ ಟೈರ್ ಗಳಿಗೆ ಬೆಂಕಿ ಹಚ್ಚುವ ಘಟನೆಗಳು ನಡೆದಿವೆ.
ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಕಾಂಗ್ರೆಸ್ ಮುಖಂಡರು ಪ್ರತಿಭಟನೆ ನಡೆಸುವ ವೇಳೆ ಹನುಮಂತಪ್ಪ ವೃತ್ತದಿಂದ ಪ್ರತಿಭಟನೆ ಮೆರವಣಿಗೆ ಬಂದ ಬಿಜೆಪಿ ಕಾರ್ಯಕರ್ತರ ನಡುವೆ ಆಜಾದ್ ಪಾರ್ಕ್ ವೃತ್ತದಲ್ಲಿ ತಳ್ಳಾಟ ನೂಕಾಟ ನಡೆಯಿತು. ಈ ವೇಳೆ ಲಘು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿ ನಿಯಂತ್ರಿಸಿದರು.
ನಗರದ ವಿವಿಧೆಡೆಯಲ್ಲಿ ಟೈರ್ ಗೆ ಬೆಂಕಿ ಹಚ್ಚಿರುವ ಘಟನೆಗಳು ನಡೆದಿದ್ದು ಈ ವೇಳೆ ಪ್ರತಿಭಟನಾ ನಿರತರನ್ನು ವಶಕ್ಕೆ ಪಡೆಯಲಾಯಿತು. ರಾಮನಹಳ್ಳಿಯಲ್ಲಿ ಬೈಕ್ ಗೆ ಬೆಂಕಿಗೆ ಬೆಂಕಿ ಹಚ್ಚಿರುವ ಘಟನೆ ನಡೆದಿದೆ.
ಜಿಲ್ಲೆಯ ಮೂಡಿಗೆರೆ, ನರ ಸಿಂಹರಾಜಪುರ, ತರೀಕೆರೆ, ಕಡೂರು ತಾಲೂಕಿನಲ್ಲಿ ಪ್ರತಿಭಟನೆ ಕಾವೂ ಜಾಸ್ತಿ ಯಾಗಿದೆ.







