Chikkamagaluru | ಸಿ.ಟಿ.ರವಿ ರಸ್ತೆ ಕಾಮಗಾರಿ ವೀಕ್ಷಣೆ ವೇಳೆ ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ನಡುವೆ ಗಲಾಟೆ : ನಾಲ್ವರ ವಿರುದ್ಧ ಎಫ್‌ಐಆರ್

ಚಿಕ್ಕಮಗಳೂರು : ನಗರದ ರಾಂಪುರ ರಸ್ತೆಯಲ್ಲಿ ಎಂಎಲ್ಸಿ ಸಿ.ಟಿ.ರವಿ ರಸ್ತೆ ಕಾಮಗಾರಿ ವೀಕ್ಷಿಸಲು ತೆರಳಿದ್ದ ಸಂದರ್ಭದಲ್ಲಿ, ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು ಗಲಾಟೆ ಸಂಭವಿಸಿದ ಘಟನೆ ಗುರುವಾರ ನಡೆದಿದೆ.
ಅಭಿವೃದ್ಧಿ ವಿಚಾರವಾಗಿ ಆರಂಭವಾದ ವಾಗ್ವಾದ ತೀವ್ರಗೊಂಡು ಎರಡೂ ಪಕ್ಷಗಳ ಕಾರ್ಯಕರ್ತರು ಕೈಕೈ ಮಿಲಾಯಿಸಿಕೊಂಡಿದ್ದರು ಎನ್ನಲಾಗಿದೆ.
ಸಾರ್ವಜನಿಕರ ನೆಮ್ಮದಿಗೆ ಭಂಗ ಉಂಟಾದ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ನಗರ ಠಾಣೆ ಪೊಲೀಸರು ಸ್ವಯಂಪ್ರೇರಿತ ಸುಮೋಟೋ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಯಾವುದೇ ಪಕ್ಷದಿಂದ ಅಧಿಕೃತ ದೂರು ದಾಖಲಾಗದ ಹಿನ್ನೆಲೆಯಲ್ಲಿ ಪೊಲೀಸರು ತಾವೇ ಪ್ರಕರಣ ದಾಖಲಿಸಿಕೊಂಡಿದ್ದು, ಗಲಾಟೆಯಲ್ಲಿ ಭಾಗಿಯಾಗಿದ್ದ ಎರಡೂ ಪಕ್ಷಗಳ ನಾಲ್ವರು ಪ್ರಮುಖರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್ ಕೋಟ್ಯಾನ್, ರಾಜೇಶ್ ಹಾಗೂ ಕಾಂಗ್ರೆಸ್ ಮುಖಂಡರಾದ ಹೇಮಂತ್ ಮತ್ತು ಕೌಶಿಕ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.




