Chikkamagaluru | ಡಿಸಿಸಿ ಬ್ಯಾಂಕ್ ಚುನಾವಣೆ; ಬಿಜೆಪಿ- ಜೆಡಿಎಸ್ ಮೈತ್ರಿ ಅಭ್ಯರ್ಥಿಗಳಿಗೆ ಗೆಲುವು; ಕಾಂಗ್ರೆಸ್‍ಗೆ ಮುಖಭಂಗ

ಚಿಕ್ಕಮಗಳೂರು : ಕುತೂಹಲ ಮೂಡಿಸಿದ್ದ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಚುನಾವಣೆಯಲ್ಲಿ ಮೈತ್ರಿ ಪಕ್ಷ ಅಭೂತಪೂರ್ವ ಗೆಲುವು ಸಾಧಿಸಿದೆ. 13 ನಿರ್ದೇಶಕರ ಸ್ಥಾನಗಳಲ್ಲಿ 11 ಬಿಜೆಪಿ ಹಾಗೂ 2 ಕ್ಷೇತ್ರಗಳಲ್ಲಿ ಜೆಡಿಎಸ್ ಗೆಲುವು ಸಾಧಿಸಿದೆ.
ಶನಿವಾರ ಬೆಳಗ್ಗೆ ಚುನಾವಣೆ ಪ್ರಕ್ರಿಯೆ ಆರಂಭವಾಗಿದ್ದು, ಸಂಜೆ 4ರ ವರೆಗೂ ಮತದಾನ ಪ್ರಕ್ರಿಯೆ ನಡೆದು 4:30ರ ಬಳಿಕ ಮತ ಎಣಿಕೆ ಕಾರ್ಯ ನಡೆಯಿತು. ಚಿಕ್ಕಮಗಳೂರು ತಾಲೂಕು ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದ ಎರಡು ಸ್ಥಾನಕ್ಕೆ ಎಂ.ಎಸ್.ನಿರಂಜನ್, ಎಸ್.ಎಲ್.ಭೋಜೇಗೌಡ, ಸಿ.ಟಿ.ರವಿ ಸ್ಫರ್ಧಿಸಿದ್ದರು. ಬಲಾಢ್ಯರು ಈ ಕ್ಷೇತ್ರದಿಂದ ಸ್ಫರ್ಧಿಸಿದ್ದರಿಂದ ಡಿಸಿಸಿ ಬ್ಯಾಂಕ್ ಚುನಾವಣೆ ಬಾರಿ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿತ್ತು. ಬಿಜೆಪಿ ಮುಖಂಡರೇ ಆಗಿದ್ದ ಎಂ.ಎಸ್.ನಿರಂಜನ್ ಈ ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿಗಳ ವಿರುದ್ಧವೇ ಸ್ಪರ್ಧಿಸಿದ್ದರಿಂದ ಈ ಕ್ಷೇತ್ರದ ಫಲಿತಾಂಶದ ಮೇಲೆ ಹೆಚ್ಚು ಕುತೂಹಲ ಮೂಡಿತ್ತು.
ಚಿಕ್ಕಮಗಳೂರು ತಾಲೂಕು ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದ ಎರಡು ಸ್ಥಾನಗಳಿಗೆ ಒಟ್ಟು 32 ಮತದಾರರಿದ್ದು, ಎಸ್.ಎಲ್.ಭೋಜೇಗೌಡ 30 ಮತಗಳನ್ನು ಪಡೆದು ಜಯಶೀಲರಾದರೇ, 27ಮತಗಳನ್ನು ಪಡೆಯುವ ಮೂಲಕ ಸಿ.ಟಿ.ರವಿ ಗೆಲುವು ಸಾಧಿಸಿದರು. ಮೈತ್ರಿ ಪಕ್ಷದ ಅಭ್ಯರ್ಥಿಗಳ ಎದುರು ಸ್ಫರ್ಧಿಸಿದ್ದ ಎಂ.ಎಸ್.ನಿರಂಜನ್ ಕೇವಲ 5 ಮತಗಳನ್ನು ಪಡೆದುಕೊಳ್ಳುವ ಮೂಲಕ ಬಲಾಢ್ಯ ಸ್ಫರ್ಧಿಗಳ ಎದುರು ಸೋಲು ಕಂಡರು. ಚಿಕ್ಕಮಗಳೂರು ತಾಲೂಕು ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದಿಂದ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಹಾಗೂ ಮಾಜಿ ಮಂತ್ರಿ, ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಸ್ಫರ್ಧಿಸಿದ್ದರಿಂದ ಈ ಚುನಾವಣೆ ಜಿದ್ದಾಜಿದ್ದಿಗೆ ಕಾರಣವಾಗಿತ್ತು.
ಕೊಪ್ಪ ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದ ಒಂದು ಸ್ಥಾನಕ್ಕೆ ಯು.ಎಸ್.ಪ್ರಜ್ವಲ್, ಕೆ.ಎಸ್.ರವೀಂದ್ರ ಹಾಗೂ ಬಿ.ಎಸ್.ಸತೀಶ್ ಸ್ಫರ್ಧೆ ಮಾಡಿದ್ದರು. ಯು.ಎಸ್.ಪ್ರಜ್ವಲ್ 5 ಮತ, ಕೆ.ಎಸ್.ರವೀಂದ್ರ ಶೂನ್ಯ, ಬಿ.ಎಸ್.ಸತೀಶ್ 6 ಮತಗಳನ್ನು ಪಡೆದುಕೊಳ್ಳುವ ಮೂಲಕ ಬಿ.ಎಸ್.ಸತೀಶ್ ಜಯಶೀಲರಾದರು.
ಜಿಲ್ಲೆಯ ಎಲ್ಲಾ ತಾಲೂಕು ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘದ ಒಂದು ಸ್ಥಾನಕ್ಕೆ ಕೆ.ಎಸ್.ಆನಂದ್ ಹಾಗೂ ಎಚ್.ಕೆ.ದಿನೇಶ್ ಹೊಸೂರು ಸ್ಫರ್ಧಿಸಿದ್ದು, ಕೆ.ಎಸ್.ಆನಂದ್ 3ಮತಗಳನ್ನು ಪಡೆದುಕೊಂಡರೇ, ಎಚ್.ಕೆ.ದಿನೇಶ್ ನಾಲ್ಕು ಮತಗಳನ್ನು ಪಡೆದುಕೊಳ್ಳುವ ಮೂಲಕ ಕಡೂರು ಕ್ಷೇತ್ರದ ಶಾಸಕ ಕೆ.ಎಸ್.ಆನಂದ್ ವಿರುದ್ಧ ಗೆಲುವಿನ ನಗೆ ಬೀರಿದರು.
ಜಿಲ್ಲೆಯ ಎಲ್ಲಾ ಪ್ರಾಥಮಿಕ ಕೃಷಿ ಗ್ರಾಮೀಣ ಅಭಿವೃದ್ಧಿ ಮತ್ತು ಇತರ ಕ್ಷೇತ್ರದ 1ಸ್ಥಾನಕ್ಕೆ ಮೂಡಿಗೆರೆ ಕ್ಷೇತ್ರದ ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಹಾಗೂ ಟಿ.ಎಲ್.ರಮೇಶ್ ಸ್ಫರ್ಧಿಸಿದ್ದು, ಎಂ.ಪಿ.ಕುಮಾರಸ್ವಾಮಿ 38 ಮತಗಳನ್ನು ಪಡದುಕೊಂಡರೇ, ಟಿ.ಎಲ್.ರಮೇಶ್ 56 ಮತಗಳನ್ನು ಪಡೆಯುವ ಮೂಲಕ ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಎದುರು ಗೆಲುವು ಸಾಧಿಸಿದರು. ಒಟ್ಟಾರೆ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಚುನಾವಣೆಯಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಿದರು.
ಕಾಂಗ್ರೆಸ್‍ಗೆ ಮುಖಭಂಗ:
ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಾರಂಭದಲ್ಲಿಯೇ ಸಂಪೂರ್ಣ ಕೈಚೆಲ್ಲಿದ್ದರೇ, ಜಿಲ್ಲೆಯ ಎಲ್ಲಾ ತಾಲೂಕು ವ್ಯವಸಾಯೋತ್ಪನ ಸಹಕಾರ ಸಂಘಗಳ ಒಂದು ಕ್ಷೇತ್ರದಿಂದ ಕಡೂರು ಶಾಸಕ ಕೆ.ಎಸ್.ಆನಂದ್ ಹಾಗೂ ಜಿಲ್ಲೆಯ ಎಲ್ಲಾ ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‍ಗಳು ಪಟ್ಟಣ ಸಹಕಾರ ಬ್ಯಾಂಕ್ ಹಾಗೂ ಇತರೆ ಸಹಕಾರ ಸಂಘಗಳ ಒಂದು ಕ್ಷೇತ್ರದಿಂದ ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಸ್ಫರ್ಧಿಸಿದ್ದರು. ಇಬ್ಬರು ಸೋಲು ಕಾಣುವ ಮೂಲಕ ಕಾಂಗ್ರೆಸ್ ಮುಖಭಂಗ ಅನುಭವಿಸಿದೆ. ಜಿಲ್ಲೆಯಲ್ಲಿ ಐದು ಜನ ಶಾಸಕರಿದ್ದರೂ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಕಾಂಗ್ರೆಸ್ ಮುಖಭಂಗ ಅನುಭವಿಸಿದೆ.
ಸಂಭ್ರಮಾಚಾರಣೆ:
ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಚುನಾವಣೆಯಲ್ಲಿ ಎಸ್.ಎಲ್.ಭೋಜೇಗೌಡ ಹಾಗೂ ಸಿ.ಟಿ.ರವಿ ಸೇರಿದಂತೆ ಮೈತ್ರಿ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಿ ದ್ದಂತೆ, ಬ್ಯಾಂಕ್ ಮುಂಭಾಗ ಜಮಾಯಿಸಿದ್ದ ಮುಖಂಡರು ಹಾಗೂ ಪದಾಧಿಕಾರಿಗಳು ಮೈತ್ರಿ ಪಕ್ಷದ ಪರ ಘೋಷಣೆಗಳನ್ನು ಕೂಗಿ ಪಟಾಕಿ ಸಿಡಿಸಿ ಹಿಸಿ ಹಂಚಿ ಸಂಭ್ರಮಿಸಿದರು. ಗೆಲುವಿನ ಹರ್ಷದಲ್ಲಿ ಮುಖಂಡರು ಮತ್ತು ಕಾರ್ಯಕರ್ತರು ಕುಣಿದು ಕುಪ್ಪಳಿಸಿದರು.
ಚುನಾವಣೆ ಹಿನ್ನಲೆ ಬೀಗಿ ಭದ್ರತೆ: ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಚುನಾವಣೆ ಹಿನ್ನಲೆಯಲ್ಲಿ ನಗರದ ರತ್ನಗಿರಿ ರಸ್ತೆಯಲ್ಲಿರುವ ಬ್ಯಾಂಕ್ ಆವರಣದ ಸುತ್ತಮುತ್ತ ನಿಷೇಧಾಜ್ಞೆಯನ್ನು ವಿಧಿಸಲಾಗಿತ್ತು. ರಸ್ತೆಯ ಎರಡು ಬದಿಗಳಲ್ಲಿ ಬ್ಯಾರಿಕೇಡ್‍ಗಳನ್ನು ಹಾಕಿ ವಾಹನ ಸಂಚಾರವನ್ನು ನಿಷೇಧಿಸಲಾಗಿತ್ತು. ಹೆಚ್ಚಿನ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು.
ಬಸ್‍ನಲ್ಲಿ ಬಂದು ಮತದಾನ ಮಾಡಿದ ಮತದಾರರು: ಚುನಾವಣೆ ಕಣದಲ್ಲಿ ಬಲಾಢ್ಯರ ಸ್ಫರ್ಧೆಯಿಂದ ಚುನಾವಣೆ ಕಣ ಜಿಲ್ಲೆಯಲ್ಲಿ ರಂಗೇರಿತ್ತು. ಮತದಾರರನ್ನು ಹಿಡಿದಿಟ್ಟುಕೊಳ್ಳುವ ನಿಟ್ಟಿನಲ್ಲಿ (ಅಡ್ಡಮತದಾನ ಭಯದಿಂದ) ಎಸ್.ಎಲ್.ಭೋಜೇಗೌಡ ಮತ್ತು ಸಿ.ಟಿ.ರವಿ ಮತದಾರರು ಮತ್ತು ಪಕ್ಷದ ಕಾರ್ಯಕರ್ತರ ಜತೆ ಧರ್ಮಸ್ಥಳ ಯಾತ್ರೆಯನ್ನು ಕೈಗೊಂಡಿದ್ದರು. ಈ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಶನಿವಾರ ಮತದಾನ ಪ್ರಕ್ರಿಯೆ ನಡೆಯುವ ವೇಳೆ ಎಸ್.ಎಲ್.ಭೋಜೇಗೌಡ ಮತ್ತು ಸಿ.ಟಿ.ರವಿ ಖುದ್ದಾಗಿ 28 ಮತದಾರರನ್ನು ಮಿನಿ ಬಸ್‍ನಲ್ಲಿ ಕರೆತಂದಿದ್ದು ವಿಶೇಷವಾಗಿತ್ತು.
ʼಅಭೂತಪೂರ್ವ ಬೆಂಬಲವನ್ನು ರೈತ ಸಮುದಾಯ ಮೈತ್ರಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಬ್ಯಾಂಕಿನ ಆಡಳಿತ ಚುಕ್ಕಾಣಿಯನ್ನು ಎನ್‍ಡಿಎ ಒಕ್ಕೂಟಕ್ಕೆ ಒಪ್ಪಿಸಿದ್ದಾರೆ. ರೈತ ಸಮುದಾಯದ ಏಳಿಗೆಗೆ ಶ್ರಮಿಸುತ್ತೇವೆʼ
-ಎಸ್.ಎಲ್.ಭೋಜೇಗೌಡ.
ʼಇದು ನಿರೀಕ್ಷಿತ ಗೆಲುವು, ಜೆಡಿಎಸ್ ಬಿಜೆಪಿ ಮೈತ್ರಿ ಪಕ್ಷವನ್ನು ಬೆಂಬಲಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ರೈತರ ಏಳಿಗೆ ಹಾಗೂ ಸರಕಾರದ ಸೌಲಭ್ಯಗಳನ್ನು ಸಮರ್ಪಕವಾಗಿ ತಲುಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಸ್ರಮಿಸುತ್ತೇವೆʼ
-ಸಿ.ಟಿ.ರವಿ.







