ಚಿಕ್ಕಮಗಳೂರು ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ವರ್ಗಾವಣೆ

ಎನ್.ಎಂ.ನಾಗರಾಜ್
ಚಿಕ್ಕಮಗಳೂರು: ರಾಜ್ಯ ಸರಕಾರವು ಐಎಎಸ್ ಅಧಿಕಾರಿಗಳ ವರ್ಗಾವಣೆಯ ಮಹತ್ವದ ಅದೇಶ ಹೊರಡಿಸಿದ್ದು, ಜಿಲ್ಲಾಡಳಿತದ ಸಾರಥಿ ಬದಲಾಗಿದ್ದಾರೆ. ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಭನ್ವರ್ಸಿಂಗ್ ಮೀನಾ ಅವರನ್ನು ನೇಮಿಸಿ ಸರಕಾರ ಆದೇಶಿಸಿದೆ.
ಜಿಲ್ಲೆಯ ಹಾಲಿ ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ಅವರಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಬೆಂಗಳೂರಿನ ಕರ್ನಾಟಕ ರಾಜ್ಯ ಏಡ್ಸ್ ತಡೆಗಟ್ಟುವಿಕೆ ಸೊಸೈಟಿಯ ಒಂಬುಡ್ಸ್ಮನ್ ಹುದ್ದೆಗೆ ವರ್ಗಾವಣೆ ಮಾಡಲಾಗಿದ್ದು, ಡಿಪಿಎಆರ್ ಈ ಕುರಿತು ಅಧಿಕೃತ ಅಧಿಸೂಚನೆ ಹೊರಡಿಸಿದೆ.
ಕಳೆದ ಜನವರಿ ತಿಂಗಳಷ್ಟೇ ಮೀನಾ ನಾಗರಾಜ್ ಅವರಿಂದ ತೆರವಾದ ಸ್ಥಾನಕ್ಕೆ ಹೊಸ ಡಿಸಿಯಾಗಿ ಅಧಿಕಾರ ವಹಿಸಿಕೊಂಡಿದ್ದ 2016ರ ಬ್ಯಾಚ್ನ ಐಎಎಸ್ ಅಧಿಕಾರಿ ಎನ್.ಎಂ.ನಾಗರಾಜ್ ಅವರ ಈ ದಿಢೀರ್ ವರ್ಗಾವಣೆಯು ಚರ್ಚೆಗಳಿಗೆ ವೇದಿಕೆ ಒದಗಿಸಿದೆ.
ಇನ್ನು ತೆರವಾದ ಚಿಕ್ಕಮಗಳೂರು ಜಿಲ್ಲಾಧಿಕಾರಿ ಹುದ್ದೆಗೆ ನೂತನ ಸಾರಥಿಯಾಗಿ ಭನ್ವರ್ ಸಿಂಗ್ ಮೀನಾ ಅವರನ್ನು ನೇಮಕ ಮಾಡಲಾಗಿದೆ. ಸದ್ಯ ಕಲಬುರಗಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ (ಸಿಇಒ) ಕಾರ್ಯನಿರ್ವಹಿಸುತ್ತಿರುವ 2017ರ ಬ್ಯಾಚ್ನ ಐಎಎಸ್ ಅಧಿಕಾರಿ ಭನ್ವರ್ ಸಿಂಗ್ ಮೀನಾ ಅವರಿಗೆ ತಕ್ಷಣವೇ ಚಿಕ್ಕಮಗಳೂರಿನ ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಳ್ಳುವಂತೆ ಸರಕಾರ ಸೂಚನೆ ನೀಡಿದೆ.






