ಚಿಕ್ಕಮಗಳೂರು: 77ನೇ ಗಣರಾಜ್ಯೋತ್ಸವದ ಆಕರ್ಷಣೆಯಾದ ಫಲಪುಷ್ಪ ಪ್ರದರ್ಶನ

ಚಿಕ್ಕಮಗಳೂರು: 77ನೇ ಗಣರಾಜ್ಯೋತ್ಸವದ ಅಂಗವಾಗಿ ಜಿಲ್ಲಾಡಳಿತ, ಜಿಪಂ ಹಾಗೂ ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ನಗರದ ಜಿಲ್ಲಾ ಆಟದ ಮೈದಾನದಲ್ಲಿ ಆಯೋಜಿಸಿರುವ ಚೈತ್ರೋತ್ಸವ ಹೆಸರಿನ ಫಲಪುಷ್ಪ ಪ್ರದರ್ಶನ ನಗರದ ಸಾರ್ವಜನಿಕರು, ಶಾಲಾ ಕಾಲೇಜು ಮಕ್ಕಳ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾಗಿದೆ. ವಿವಿಧ ಬಗೆಯ ಹೂವುಗಳು, ಸಿರಿಧಾನ್ಯ, ತರಕಾರಿ, ಹಣ್ಣುಗಳಲ್ಲಿ ಮೂಡಿರುವ ಕಲೆ, ಸಾಹಿತ್ಯ, ಕ್ರೀಡೆ, ರಾಜಕೀಯ ಕ್ಷೇತ್ರಗಳಲ್ಲಿ ಅಪೂರ್ವ ಸಾಧನೆ ಮಾಡಿರುವ ಗಣ್ಯರು, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್, ಕುವೆಂಪು, ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ಕಲಾಕೃತಿಗಳು ಹಾಗೂ ಸಾವಿರಾರು ಬಗೆಯ ಸಸ್ಯ ರಾಶಿ, ಕೀಟ ಲೋಕ, ಅಕ್ವೇರಿಯಂ ಸಾರ್ವಜನಿಕರನ್ನು ಮಂತ್ರಮುಗ್ಧಗೊಳಿಸುತ್ತಿವೆ.
ನಗರದ ಸುಭಾಶ್ಚಂದ್ರಭೋಸ್ ಜಿಲ್ಲಾ ಆಟದ ಮೈದಾನದಲ್ಲಿ ಆಯೋಜಿಸಿರುವ ಫಲಪುಷ್ಪ ಪ್ರದರ್ಶನ 77ನೇ ಗಣರಾಜ್ಯೋತ್ಸವದ ಆಕರ್ಷಣೆಯಾಗಿದ್ದು, ರವಿವಾರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್, ವಿಪ ಉಪಸಭಾಪತಿ ಪ್ರಾಣೇಶ್, ಶಾಸಕ ತಮ್ಮಯ್ಯ, ವಿಪ ಸದಸ್ಯರಾದ ಭೋಜೇಗೌಡ, ಸಿ.ಟಿ.ರವಿ ಚೈತ್ರೋತ್ಸವ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಿದ್ದು, ಸುಮಾರು 1 ಎಕರೆ ಪ್ರದೇಶದಲ್ಲಿ ಜಗತ್ತಿನ ವಿವಿಧ ದೇಶಗಳ ಸಸ್ಯ ಪ್ರಪಂಚ, ಹೂವು, ಹಣ್ಣುಗಳು, ತರಕಾರಿ ಸಿರಿಧಾನ್ಯಗಳಿಂದ ಮಾಡಿರುವ ಅತ್ಯಾಕರ್ಷಕ ಕಲಾಕೃತಿಗಳು, ಕಲಾವಿದರ ಕೈಚಳಕಕ್ಕೆ ಸಾರ್ವಜನಿಕರು ಬೇಸ್ ಎನ್ನುತ್ತಿದ್ದಾರೆ.
ಫಲಪುಷ್ಪ ಆವರಣ ಪ್ರವೇಶಿಸುತ್ತಿದ್ದಂತೆ ಸಸ್ಯ, ಹೂವಿನ ಎಸಳು ಹಾಗೂ ವಿವಿಧ ಬಗೆಯ ಹೂವುಗಳಿಂದ ನಿರ್ಮಿಸಿರುವ "ಐ ಲವ್ ಸಿಕೆಎಂ" ಎಂಬ ಬರಹ ಸಾರ್ವಜನಿಕರನ್ನು ಸ್ವಾಗತಿಸುತ್ತದೆ. ಪ್ರದರ್ಶನದ ಒಳಹೊಕ್ಕುತ್ತಿದ್ದಂತೆ ಸಸ್ಯ, ಹೂವು, ತರಕಾರಿ, ಹಣ್ಣು, ಸಿರಿಧಾನ್ಯಗಳಿಂದ ನಿರ್ಮಿಸಿರುವ ಆಕರ್ಷಕ ಕಲಾಕೃತಿಗಳ ಲೋಕ ಬೆರೆಗುಗೊಳಿಸುತ್ತದೆ. ಸಮಾಜಕಲ್ಯಾಣ ಇಲಾಖೆಯಿಂದ ಬಾಳೆದಿಂಡು, ಹಾಗಲಕಾಯಿ, ಬದನೆಕಾಯಿ, ಹೀರೇಕಾಯಿ, ಮೂಲಂಗಿ ಬಳಸಿ ನಿರ್ಮಿಸಿರುವ ಹಳೆಯ ಸಂಸತ್ ಭವನದ ಕಲಾಕೃತಿ, ಸಿರಿಧಾನ್ಯಗಳನ್ನೇ ಬಳಸಿ ನಿರ್ಮಿಸಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರ ನಿಂತ ಭಂಗಿಯ ಪ್ರತಿಕೃತಿಯ ಕಲಾಕೃತಿ, ಸಸ್ಯರಾಶಿಯ ಮಧ್ಯೆ ಮೂಡಿರುವ ಸಂವಿಧಾನದ ಪೂರ್ವ ಪೀಠಿಕೆ ಕಲಾಕೃತಿ ಸಂವಿಧಾನದ ಮಹತ್ವ ಸಾರುತ್ತಿವೆ.
ಬಣ್ಣಬಣ್ಣದ ಸೇವಂತಿಗೆ, ಗುಲಾಬಿ ಹೂವುಗಳಿಂದ ಪಿಯಾನೋ, ವೀಣೆ, ಗಿಟಾರ್, ತಬಲ, ಡಾಲ್ಫಿನ್‍ಗಳ ಕಲಾಕೃತಿಗಳು ಮೂಡಿಬಂದಿವೆ. ಶೃಂಗೇರಿ ತಾಲೂಕಿನ ಗಂಡಗಟ್ಟ ಸರಕಾರಿ ಶಾಲೆ ಹೂವಿನಿಂದಲೇ ನಿರ್ಮಾಣಗೊಂಡಿದೆ. ಭದ್ರಬಾಲ್ಯದಿಂದ ಸಾಧನೆ ಶಿಖರಕ್ಕೆ ಶೀರ್ಷಿಕೆಯಡಿ ಭದ್ರಬಾಲ್ಯ ಯೋಜನೆ ಅನಾವರಣಗೊಂಡಿದೆ.
ಬೋಧಿವೃಕ್ಷದ ಕೆಳಗೆ ಗೌತಮಬುದ್ಧ ಧ್ಯಾನಸ್ಥರಾಗಿದ್ದರೆ, ಇದರ ಪಕ್ಕದಲ್ಲೇ ದೇವೀರಮ್ಮ ದೇಗುಲಹೂವಿನಿಂದ ಮೂಡಿದೆ.
ಸಿರಿಧಾನ್ಯದಲ್ಲಿ ಸಾಲುಮರದ ತಿಮ್ಮಕ್ಕೆ, ಸರಸ್ವತಿ, ಬಿರ್ಸಾಮುಂಡಾ ಮೂಡಿಬಂದಿದ್ದಾರೆ. ಇತ್ತೀಚೆಗೆ ಮಹಿಳಾ ವಿಶ್ವಕಪ್ ವಿಜೇತರ ಭಾವಚಿತ್ರಗಳು ಹಣ್ಣುಗಳಲ್ಲಿ ಮೂಡಿ ಬಂದಿವೆ. ಹೂವಿನಿಂದ ಟ್ರೋಫಿಯನ್ನು ನಿರ್ಮಿಸಲಾಗಿದೆ. ಹೂವಿನಿಂದ ಮೂಡಿಬಂದಿರುವ ಕಲಾಕೃತಿಗಳನ್ನು ವೀಕ್ಷಿಸಲು ಸಾರ್ವಜನಿಕರು ಮುಗಿಬೀಳುತ್ತಿದ್ದಾರೆ.
ಕಲಾವಿದರ ಕೈಚಳಕದಲ್ಲಿ ಚಲನ ಚಿತ್ರನಟರು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರಗಳನ್ನು ಕಲ್ಲಂಗಡಿ ಹಣ್ಣುಗಳಲ್ಲಿ ಮೂಡಿಬಂದಿದ್ದಾರೆ. ಕಲ್ಲಂಗಡಿಯಲ್ಲಿ ರಾಷ್ಟ್ರಕವಿಕುವೆಂಪು, ದ.ರಾ.ಬೇಂದ್ರೆ, ಶಿವರಾಮಕಾರಂತರು, ಗಿರೀಶ್‍ಕಾರ್ನಾರ್ಡ್, ಕಂಬಾರ, ಮಾಸ್ತಿವೆಂಕಟೇಶ್ ಅಯ್ಯಂಗಾರ್, ಚಲನಚಿತ್ರ ನಟರಾದ ಡಾ.ರಾಜ್‍ಕುಮಾರ್, ವಿಷ್ಣುವರ್ಧನ್, ಅಂಬರೀಶ್, ಶಂಕರ್‍ನಾಗ್, ಪುನೀತ್‍ರಾಜ್‍ಕುಮಾರ್, ಸಂಚಾರಿ ವಿಜಯ್ ಅವರುಗಳನ್ನು ಬಿಡಿಸಲಾಗಿದೆ.
ಬಧನೆ, ಕ್ಯಾರೆಟ್,ಮೂಲಂಗಿಯಲ್ಲಿ ನವಿಲು, ಗರುಡ ಮೂಡಿದ್ದರೆ, ಸಹಿಗುಂಬಳದಲ್ಲಿ ಜಿಂಕೆ,ಮೀನು, ಹಾಗಲಕಾಯಿಯಲ್ಲಿ ಮೊಸಳೆಯನ್ನು ನಿರ್ಮಿಸಲಾಗಿದೆ. ತರಕಾರಿ ಬಳಸಿ ಅರಣ್ಯ ಇಲಾಖೆಯಿಂದ ಕೃತಕ ಆನೆಗಳನ್ನು ಸೃಷ್ಟಿಸಲಾಗಿದೆ. ಮೀನುಗಾರಿಕೆ ಇಲಾಖೆಯಿಂದ ಬಣ್ಣಬಣ್ಣದ ಮೀನುಗಳ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ನೇಕಾರರಿಂದ ನೇಯ್ದಿರುವ ರೇಷ್ಮೆ ಸೀರೆಗಳು, ಖಾದಿವಸ್ತುಗಳಿಂದ ತಯಾರಿಸಿದ ಬಟ್ಟೆಗಳ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಒಟ್ಟಾರೆಯಾಗಿ ಇಂದಿನಿಂದ ಜ 28ರವರೆಗೆ ಆಯೋಜಿಸಿರುವ ಫಲಪುಷ್ಪಗಳ ಪ್ರದರ್ಶನಕ್ಕೆ ಉತ್ತಮ ಸ್ಪಂದನೆ ದೊರೆಕುತ್ತಿದೆ. ಬಣ್ಣಬಣ್ಣಹೂವುಗಳಿಂದ ಮೂಡಿರುವ ಕಲಾಕೃತಿಗಳು ನೋಡುಗಳ ಮನ ಸೆಳೆಯುತ್ತಿವೆ.







