ಚಿಕ್ಕಮಗಳೂರು | ಹಿಂದೂ ಸಮಾಜೋತ್ಸವ: ಆಯೋಜಕರು, ಭಾಷಣಕಾರರಿಗೆ ಪೊಲೀಸ್ ನೋಟಿಸ್

ಸಾಂದರ್ಭಿಕ ಚಿತ್ರ | PC : PTI
ಚಿಕ್ಕಮಗಳೂರು: ಹಿಂದೂ ಸಮಾಜೋತ್ಸವ ಕಾರ್ಯಕ್ರಮದ ಆಯೋಜಕರು ಹಾಗೂ ಭಾಷಣಕಾರರಿಗೆ ಪೊಲೀಸರು ನೋಟಿಸ್ ಜಾರಿಗೊಳಿಸಿರುವ ಬಗ್ಗೆ ವರದಿಯಾಗಿದೆ.
ಕಾರ್ಯಕ್ರಮದ ಆಯೋಜಕರು ಮತ್ತು ಭಾಷಣಕಾರರಿಗೆ ನೋಟಿಸ್ ನೀಡಲಾಗಿದ್ದು, ದಿಕ್ಸೂಚಿ ಭಾಷಣಕಾರ ವಿಕಾಸ್ ಪುತ್ತೂರು ಅವರಿಗೆ ವಿಶೇಷವಾಗಿ ನೋಟಿಸ್ ನೀಡಲಾಗಿದೆ ಎಂದು ತಿಳಿದುಬಂದಿದೆ.
ಶನಿವಾರ ತರೀಕೆರೆಯಲ್ಲಿ ನಡೆದ ಹಿಂದೂ ಸಮಾಜೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ, ಭಾಷಣದ ವೇಳೆ ಎಚ್ಚರಿಕೆ ವಹಿಸುವಂತೆ ಪೊಲೀಸರು ಸೂಚಿಸಿದ್ದಾರೆ. ದ್ವೇಷ ಭಾಷಣ ತಡೆ ಕಾಯ್ದೆ–2025ರ ಯಾವುದೇ ವಿಧಾನದ ಉಲ್ಲಂಘನೆ ಆಗದಂತೆ ಮಾತನಾಡಬೇಕು ಎಂದು ನೋಟಿಸ್ನಲ್ಲಿ ಸ್ಪಷ್ಟಪಡಿಸಲಾಗಿದೆ.
ಬೇರೆ ಸಮುದಾಯಗಳ ಭಾವನೆಗೆ ಧಕ್ಕೆ ಉಂಟಾಗದಂತೆ ಭಾಷಣ ಮಾಡಬೇಕು. ಯಾವುದೇ ಸಮುದಾಯ ಅಥವಾ ಗುಂಪಿನ ವಿರುದ್ಧ ದ್ವೇಷ, ವೈಷಮ್ಯ ಅಥವಾ ಹಿಂಸೆಗೆ ಪ್ರಚೋದನೆ ಉಂಟಾಗುವಂತಹ ಮಾತುಗಳನ್ನು ಆಡಬಾರದು. ಮೆರವಣಿಗೆಯ ವೇಳೆ ವಾಹನಗಳ ಸುಗಮ ಸಂಚಾರಕ್ಕೆ ಯಾವುದೇ ರೀತಿಯ ತೊಂದರೆ ಉಂಟಾಗದಂತೆ ಕ್ರಮ ವಹಿಸಬೇಕು ಎಂದು ಸೂಚಿಸಲಾಗಿದೆ. ದ್ವೇಷ ಭಾಷಣ ಮಸೂದೆ–2025ರ ಕಾಯ್ದೆ ಉಲ್ಲಂಘನೆಯಾದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.





