ಚಿಕ್ಕಮಗಳೂರು | ನಾಪತ್ತೆಯಾಗಿದ್ದ ಫಾರೆಸ್ಟ್ ಗಾರ್ಡ್ 10 ದಿನಗಳ ಬಳಿಕ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ; ಕೊಲೆ ಶಂಕೆ

ಶರತ್(33)
ಚಿಕ್ಕಮಗಳೂರು : ಕಳೆದ 10 ದಿನಗಳ ಹಿಂದೆ ನಾಪತ್ತೆಯಾಗಿದ್ದ ಫಾರೆಸ್ಟ್ ಗಾರ್ಡ್ ಶುಕ್ರವಾರ ಬೆತ್ತಲೆ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಮೃತ ಫಾರೆಸ್ಟ್ ಗಾರ್ಡ್ ಅನ್ನು ಮಡಿಕೇರಿ ಮೂಲದ ಶರತ್(33) ಎಂದು ಗುರುತಿಸಲಾಗಿದೆ. ಸಖರಾಯಪಟ್ಟಣ ವ್ಯಾಪ್ತಿಯ ನೀಲಗಿರಿ ಪ್ಲಾಂಟೇಶನ್ನಿಂದ 5 ಕಿ.ಮೀ. ದೂರದಲ್ಲಿ ಮೃತದೇಹ ಪತ್ತೆಯಾಗಿದೆ.
ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣ ಹೋಬಳಿ ವ್ಯಾಪ್ತಿಯಲ್ಲಿರುವ ನೀಲಗಿರಿ ಪ್ಲಾಂಟೇಶನ್ನಲ್ಲಿ ಕೆಎಫ್ಡಿಸಿ ವಿಭಾಗದ ಫಾರೆಸ್ಟ್ ಗಾರ್ಡ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಶರತ್ ಜೂ.24ರಂದು ನೀಲಗಿರಿ ಪ್ಲಾಂಟೇಶನ್ನಲ್ಲಿ ಕೆಲಸಕ್ಕೆ ತೆರಳಿದ್ದ ವೇಳೆ ನಾಪತ್ತೆಯಾಗಿದ್ದರು. ಕೊಡಗು ಜಿಲ್ಲೆಯ ಕಾಲೂರು ನಿವಾಸಿಯಾಗಿರುವ ಶರತ್ ಕಳೆದ ನಾಲ್ಕು ತಿಂಗಳ ಹಿಂದೆ ದ.ಕ.ಜಿಲ್ಲೆಯ ಸುಳ್ಯದ ಕೆಎಫ್ಡಿಸಿ ವಿಭಾಗದಿಂದ ಸಖರಾಯಪಟ್ಟಣ ಅರಣ್ಯ ವಲಯದಲ್ಲಿರುವ ನೀಲಗಿರಿ ಪ್ಲಾಂಟೇಶನ್ನಲ್ಲಿರುವ ನರ್ಸರಿ ನೋಡಿಕೊಳ್ಳುವ ಕೆಲಸ ಮಾಡುತ್ತಿದ್ದರು. ಶರತ್ ನಾಪತ್ತೆ ಸಂಬಂಧ ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು, ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿ ಶರತ್ಗಾಗಿ ಹುಡುಕಾಟ ಆರಂಭಿಸಿದ್ದರೂ ಶರತ್ ಸುಳಿವು ಸಿಕ್ಕಿರಲಿಲ್ಲ ಎನ್ನಲಾಗಿದೆ.
ಶುಕ್ರವಾರ ಹಾಸನ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಚಿಕ್ಕಮಗಳೂರು, ಕಡೂರು ಅರಣ್ಯ ಇಲಾಖೆ ಸಿಬ್ಬಂದಿ ಜಂಟಿಯಾಗಿ ಶರತ್ಗಾಗಿ ಹುಡುಕಾಟ ಆರಂಭಿಸಿದ್ದ ವೇಳೆ ಶರತ್ನ ಬೈಕ್, ಬಟ್ಟೆ, ಪರ್ಸ್ ಮೊದಲು ಪತ್ತೆಯಾಗಿದ್ದು, ಎಲ್ಲವೂ ಬೇರೆ ಬೇರೆ ಸ್ಥಳದಲ್ಲಿ ಸಿಕ್ಕಿದ್ದವು. ಶರತ್ ಅವರ ಮೊಬೈಲ್ ಪ್ಲಾಂಟೇಶನ್ನಿಂದ 20 ಕಿ.ಮೀ. ದೂರದಲ್ಲಿ ಪತ್ತೆಯಾಗಿತ್ತು. ಶುಕ್ರವಾರ ಮಧ್ಯಾಹ್ನದ ವೇಳೆ ನೀಲಗಿರಿ ಪ್ಲಾಂಟೇಶನ್ನಿಂದ 5 ಕಿ.ಮೀ. ದೂರದಲ್ಲಿ ಶರತ್ ಮೃತದೇಹ ಪತ್ತೆಯಾಗಿದೆ.
ಶರತ್ ಮೃತ ದೇಹ, ಬೈಕ್, ಮೊಬೈಲ್, ಬಟ್ಟೆ, ಪರ್ಸ್ ಬೇರೆ ಬೇರೆ ಸ್ಥಳಗಳಲ್ಲಿ ಪತ್ತೆಯಾಗಿರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದ್ದು, ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಸಖರಾಯಪಟ್ಟಣ ಪೊಲೀಸರು ತನಿಖೆ ಆರಂಭಿಸಿದ್ದು, ಶರತ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ.