ಚಿಕ್ಕಮಗಳೂರು | ಸುಟ್ಟ ಸ್ಥಿತಿಯಲ್ಲಿ ವ್ಯಕ್ತಿಯೋರ್ವನ ಮೃತದೇಹ ಪತ್ತೆ ಪ್ರಕರಣ : ಮೂವರು ಆರೋಪಿಗಳ ಬಂಧನ

ಚಿಕ್ಕಮಗಳೂರು: ಕಡೂರು ಪೊಲೀಸ್ ಠಾಣಾ ವ್ಯಾಪ್ತಿಯ ಕಂಸಾಗರ ಗೇಟ್ ಬಳಿ ವ್ಯಕ್ತಿಯೋರ್ವನನ್ನು ಹಗ್ಗದಿಂದ ಕತ್ತು ಬಿಗಿದು ಕೊಲೆ ಮಾಡಿ ಪೆಟ್ರೋಲ್‌ನಿಂದ ಸುಟ್ಟು ಹಾಕಿರುವ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಕಂಸಾಗರ ಗೇಟ್ ಬಳಿ ವ್ಯಕ್ತಿಯೋರ್ವನನ್ನು ಕೊಲೆ ಮಾಡಿ ಮೃತದೇಹ ಸುಟ್ಟು ಹಾಕಿ ಸಾಕ್ಷ್ಯ ನಾಶಕ್ಕೆ ಪ್ರಯತ್ನಿಸಿರುವುದು ಕಂಡು ಬಂದಿತ್ತು. ಈ ಕುರಿತು ಕಡೂರು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರು.
ಈ ಮಧ್ಯೆ ಕಡೂರು ನಗರದ ಕೋಟೆ ನಿವಾಸಿ ಮೀನಾಕ್ಷಮ್ಮ ಎಂಬವರು ಪತಿ ಸುಬ್ರಹ್ಮಣ್ಯ ನಾಪತ್ತೆಯಾಗಿರುವ ಬಗ್ಗೆ ದೂರು ನೀಡಿದ್ದರು.
ಎರಡು ಪ್ರಕರಣಗಳಿಗೆ ಸಂಬಂಧಿಸಿ ತನಿಖೆಗಾಗಿ ಕಡೂರು ಪೊಲೀಸ್ ಠಾಣಾ ಪಿಎಸ್ಐ ಹಾಗೂ ಸಿಬ್ಬಂದಿಗಳನ್ನೊಳಗೊಂಡ 2 ಪ್ರತ್ಯೇಕ ತಂಡ ನೇಮಕ ಮಾಡಲಾಗಿತ್ತು. ತನಿಖೆಯ ವೇಳೆ ಸುಟ್ಟು ಹಾಕಿದ ಸ್ಥಿತಿಯಲ್ಲಿ ಪತ್ತೆಯಾದ ಮೃತದೇಹ ನಾಪತ್ತೆಯಾದ ಸುಬ್ರಹ್ಮಣ್ಯ ಅವರದ್ದು ಎಂದು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಕಡೂರಿನ ಪ್ಲೇಗಿನಮ್ಮ ದೇವಸ್ಥಾನದ ಬಳಿಯ ನಿವಾಸಿಗಳಾದ ಪ್ರದೀಪ್ ಆಚಾರ್, ಸಿದ್ದೇಶ್ ಮತ್ತು ವಿಶ್ವಾಸ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.
ಮೊದಲನೇ ಆರೋಪಿ ಪ್ರದೀಪ್ ಆಚಾರ್ ಹಾಗೂ ಸುಬ್ರಹ್ಮಣ್ಯ ಅವರ ಪತ್ನಿ ನಡುವೆ ಅಕ್ರಮ ಸಂಬಂಧವಿತ್ತು. ಇದಕ್ಕೆ ಅಡ್ಡಿಯಾದ ಸುಬ್ರಹ್ಮಣ್ಯ ಅವರನ್ನು ಕೊಲೆ ಮಾಡಿ ಮೃತದೇಹವನ್ನು ಪೆಟ್ರೋಲ್ ಬಳಸಿ ಸುಟ್ಟುಹಾಕಿರುವುದು ತನಿಖೆಯಿಂದ ಬಯಲಾಗಿದೆ.