Chikkamagaluru | ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಎನ್.ಎಸ್.ಯು.ಐ. ಪ್ರತಿಭಟನೆ; ʼಕಾಕ್ರೋಚ್ʼ ಚಿತ್ರವಿರುವ ಟೀ ಶರ್ಟ್ ಧರಿಸಿ ಆಕ್ರೋಶ

ಚಿಕ್ಕಮಗಳೂರು : ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣವನ್ನು ಖಂಡಿಸಿ ಎನ್.ಎಸ್.ಯು.ಐ. ಸಂಘಟನೆಯು ಚಿಕ್ಕಮಗಳೂರು ನಗರದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದು, ಈ ವೇಳೆ ಸಂಘಟನೆಯ ಪದಾಧಿಕಾರಿಗಳು ಕಾಕ್ರೋಚ್ (ಜಿರಳೆ) ಚಿತ್ರವಿರುವ ವಿಶಿಷ್ಟ ಟೀ ಶರ್ಟ್‍ಗಳನ್ನು ಧರಿಸಿ ಆಕ್ರೋಶ ವ್ಯಕ್ತಪಡಿಸಿದರು.
ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ನಡೆದಿರುವ ಅಕ್ರಮದಿಂದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕುತ್ತು ಬಂದಿದ್ದು, ಈ ಕುರಿತು ತಕ್ಷಣವೇ ಸೂಕ್ತ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸಿ ನೊಂದ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ನಗರದ ಹನುಮಂತಪ್ಪ ವೃತ್ತದಿಂದ ಆರಂಭವಾದ ಈ ಪ್ರತಿಭಟನಾ ಮೆರವಣಿಗೆಯು ಆಜಾದ್ ಪಾರ್ಕ್ ವೃತ್ತದವರೆಗೆ ಸಾಗಿತು. ಸುಮಾರು ಒಂದೂವರೆ ಕಿಲೋಮೀಟರ್ ಉದ್ದದ ಈ ಬೃಹತ್ ಮೆರವಣಿಗೆಯಲ್ಲಿ ನೂರಾರು ಶಾಲಾ-ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡು ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಸಾಂಪ್ರದಾಯಿಕ ಪ್ರತಿಭಟನೆಗಳಿಗಿಂತ ಭಿನ್ನವಾಗಿ, ಯುವಜನತೆಯನ್ನು ಆಕರ್ಷಿಸುವ 'ಕಾಕ್ರೋಚ್ ಡ್ರೆಸ್' ಮಾದರಿಯನ್ನು ಬಳಸಿಕೊಂಡು ನಡೆಸಿದ ಈ ಪ್ರತಿಭಟನೆ ಸಾರ್ವಜನಿಕರ ಗಮನ ಸೆಳೆದಿದೆ.




