ಚಿಕ್ಕಮಗಳೂರು | ಅರ್ಚಕನಿಂದ ಯುವತಿ ಮೇಲೆ ಅತ್ಯಾಚಾರ ಆರೋಪ : ಪ್ರಕರಣ ದಾಖಲು

ಸಾಂದರ್ಭಿಕ ಚಿತ್ರ | Photo credit : PTI
ಚಿಕ್ಕಮಗಳೂರು: ತಾಲೂಕಿನ ಬಾಸ್ಕಲ್ ಸಮೀಪದ ನೆರಡಿ ಗ್ರಾಮದ ಪಂಜುರ್ಲಿ ದೈವಸ್ಥಾನದ ಅರ್ಚಕನ ವಿರುದ್ಧ ಯುವತಿಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಕೇಳಿಬಂದಿದ್ದು, ಈ ಸಂಬಂಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಲೂಕಿನ ಬಾಸ್ಕಲ್ ಸಮೀಪದ ನೆರಡಿ ಗ್ರಾಮದ ಪಂಜುರ್ಲಿ ದೈವಸ್ಥಾನದ ಅರ್ಚಕ ಶ್ರೀಧರ್ (54) ಆರೋಪಿಯಾಗಿದ್ದಾನೆ. ಪೂಜೆಯ ನೆಪದಲ್ಲಿ ನಗರದಲ್ಲಿರುವ ತನ್ನ ಬಾಡಿಗೆ ಮನೆಗೆ ಯುವತಿಯನ್ನು ಕರೆಸಿಕೊಂಡು, ವಿಷಯವನ್ನು ಯಾರಿಗಾದರೂ ತಿಳಿಸಿದರೆ ಕುಟುಂಬದವರಿಗೆ ತೊಂದರೆ ಕೊಡುವುದಾಗಿ ಬೆದರಿಕೆ ಹಾಕಿ ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿದೆ.
ಆರೋಪಿಯ ನಿರಂತರ ದೌರ್ಜನ್ಯ ಮತ್ತು ಬೆದರಿಕೆಯಿಂದಾಗಿ ಯುವತಿ ಇದೀಗ ಏಳು ತಿಂಗಳ ಗರ್ಭಿಣಿಯಾಗಿದ್ದು, ಇತ್ತೀಚೆಗೆ ಈ ವಿಷಯ ಕುಟುಂಬದವರಿಗೆ ತಿಳಿದಿದೆ. ಬಳಿಕ ಕುಟುಂಬಸ್ಥರು ಚಿಕ್ಕಮಗಳೂರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಯುವತಿಯ ದೂರಿನ ಆಧಾರದ ಮೇಲೆ ಪೊಲೀಸರು ಅರ್ಚಕ ಶ್ರೀಧರ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಆರೋಪಿ ತಲೆಮರೆಸಿಕೊಂಡಿದ್ದಾನೆ. ಆರೋಪಿಯ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿದಿದ್ದು, ಪ್ರಕರಣದ ಕುರಿತು ತನಿಖೆ ನಡೆಯುತ್ತಿದೆ.




