ಚಿಕ್ಕಮಗಳೂರು | ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಪುಂಡಾಟ: ನಾಲ್ವರು ಪ್ರವಾಸಿಗರ ಬಂಧನ

ಚಿಕ್ಕಮಗಳೂರು, ಜು.14: ಚಾರ್ಮಾಡಿ ಘಾಟ್ ಹೆದ್ದಾರಿಯಲ್ಲಿ ಮದ್ಯಪಾನ ಮಾಡಿದ್ದ ಪ್ರವಾಸಿ ಯುವಕರ ಗುಂಪು ವಾಹನವೊಂದಕ್ಕೆ ತಮ್ಮ ವಾಹನವನ್ನು ಢಿಕ್ಕಿಯಾಗಿಸಿದ್ದಲ್ಲದೆ, ಸ್ಥಳೀಯರ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ.
ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಬಣಕಲ್ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು ಮೂಲದ ವಿಜಯ್, ಸತ್ಯ, ಶಿವು ಮತ್ತು ಪುನೀತ್ ಕುಮಾರ್ ಬಂಧಿತ ಆರೋಪಿಗಳು.
ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದ ಚಾರ್ಮಾಡಿ ಘಾಟಿ ಆರಂಭದಲ್ಲಿನ ತೇಜಸ್ವಿ ಪ್ರತಿಷ್ಠಾನದ ಸಮೀಪ ಈ ಘಟನೆ ನಡೆದಿದೆ. ಚಾರ್ಮಾಡಿ ಘಾಟಿ ಕಡೆಯಿಂದ ಬಂದ ಪಾನಮತ್ತರಾಗಿದ್ದ ಪ್ರವಾಸಿಗರು ಚಾಲನೆ ಮಾಡುತ್ತಿದ್ದ ಕಾರು ನಿಂತಿದ್ದ ಕಾರೊಂದಕ್ಕೆ ಢಿಕ್ಕಿ ಹೊಡೆದಿದೆ. ಇದರಿಂದ ನಿಲ್ಲಿಸಿದ್ದ ಕಾರಿನಲ್ಲಿದ್ದ ಇಬ್ಬರಿಗೆ ಗಾಯಗಳಾಗಿವೆ. ಸುದ್ದಿ ತಿಳಿದು ಸ್ಥಳದಲ್ಲಿದ್ದ ಸ್ಥಳೀಯರು ಆ್ಯಂಬುಲೆನ್ಸ್ ಕರೆಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಮುಂದಾಗಿದ್ದರು. ಇದೇಳೆ ಪಾನಮತ್ತರಾಗಿದ್ದ ಕಾರಿನಲ್ಲಿದ್ದ ಪ್ರವಾಸಿಗರನ್ನು ಸ್ಥಳೀಯರು ಪ್ರಶ್ನಿಸಿದ್ದಾರೆ.
ಇದರಿಂದ ಕೋಪಗೊಂಡ ಪ್ರವಾಸಿಗರ ಗುಂಪು ಪೊಲೀಸರ ಎದುರೇ ಸ್ಥಳೀಯರು ಮತ್ತು ಆ್ಯಂಬುಲೆನ್ಸ್ ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದ ಆಂಬ್ಯುಲೆನ್ಸ್ ಚಾಲಕ ಆರಿಫ್ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಬಳಿಕ ಪೊಲೀಸರು ನಾಲ್ವರು ಆರೋಪಿಗಳನ್ನು ಬಣಕಲ್ ಪೊಲೀಸರು ಬಂಧಿಸಿದ್ದು, ಪ್ರಕರಣ ದಾಖಲಿಸಿದ್ದಾರೆ.
ಆರಿಫ್ ಚಾರ್ಮಾಡಿ ಘಾಟಿಯಲ್ಲಿ ಯಾವುದೇ ಅಪಘಾತ ಸಂಭವಿಸಿದರೂ ತಕ್ಷಣ ಸ್ಥಳಕ್ಕೆ ಧಾವಿಸಿ ನೆರವಿಗೆ ನಿಲ್ಲುವುದು ಸಾಮಾನ್ಯ. ಪ್ರಪಾತಕ್ಕೆ ಬಿದ್ದ ವಾಹನಗಳನ್ನು ಮೇಲೆತ್ತಲು, ಮೃತದೇಹಗಳನ್ನು ಮೇಲೆತ್ತಲು ಸಹಕರಿಸುತ್ತಾರೆ. ಅವರ ಮೇಲೆಯೇ ಹಲ್ಲೆ ನಡೆದಿರುವುದು ಬೇಸರದ ಸಂಗತಿ ಎಂದು ಸ್ಥಳೀಯರು ಹೇಳಿದರು.







