ಕಾಂಗ್ರೆಸ್ ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ: ಕೆ.ಎಲ್. ಅಶೋಕ್

ಕೆ.ಎಲ್. ಅಶೋಕ್
ಚಿಕ್ಕಮಗಳೂರು: ಜಿಲ್ಲೆಯ ಎನ್. ಆರ್. ಪುರ ತಾಲೂಕಿನ ಮುತ್ತಿನಕೊಪ್ಪ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ ಆರ್ ಅಂಬೇಡ್ಕರ್ ರವರ ಪ್ರತಿಮೆ ಸ್ಥಾಪಿಸಲು ಸ್ಥಳವಾಕಾಶಕ್ಕಾಗಿ ಅನುಮತಿ ಕೋರಿ ಆರು ತಿಂಗಳು ಕಳೆದರೂ ಸಂಬಂಧಿಸಿದ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆಂದು ಕರ್ನಾಟಕ ಜನಶಕ್ತಿ ರಾಜ್ಯ ಮುಖಂಡ ಕೆ.ಎಲ್. ಅಶೋಕ್ ಆರೋಪಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲ್ಲೂಕು ಮಟ್ಟದ ಹಿರಿಯ ಮೇಲಾಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶಾಸಕರಿಗೆ ಈ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸೂಕ್ತ ಸ್ಥಳವಕಾಶವನ್ನು ಗುರುತಿಸಿಕೊಟ್ಟು, ಡಾ.ಬಿ. ಆರ್ ಅಂಬೇಡ್ಕರ್ ರವರ ಗೌರವಾರ್ಥವಾಗಿ ಪ್ರತಿಮೆಯನ್ನು ಸ್ಥಾಪಿಸಲು ಸ್ಥಳವಾಕಾಶ ಮಾಡಿ ಕೊಡಿ ಎಂದು ಮನವಿ ಮಾಡಿ ಆರು ತಿಂಗಳು ಕಳೆದಿದೆ. ಆದರೆ, ಇಲ್ಲಿಯವರೆಗೂ ಜಾಗವನ್ನು ಗುರುತಿಸಿಲ್ಲ ಎಂದು ಅವರು ಹೇಳಿದರು.
ಭ್ರಷ್ಟಾಚಾರ ಹಾದಿಯಲ್ಲಿ ಕಾಂಗ್ರೆಸ್ ಕೂಡ ನಡೆಯುತ್ತಿದೆ:
ಶೃಂಗೇರಿ ಕ್ಷೇತ್ರದ ಕಾಂಗ್ರೆಸ್ ಆಡಳಿತದಲ್ಲಿ ವಿಪರೀತ ಭ್ರಷ್ಟಾಚಾರ ಕಂಡು ಬರುತ್ತಿದ್ದು, ಅಭಿವೃದ್ಧಿ ಮರೀಚಿಕೆಯಾಗಿದೆ. ಬಿಜೆಪಿಯ ಭ್ರಷ್ಟಾಚಾರ ನೋಡಿ ಜನ ಕಾಂಗ್ರೆಸ್ಗೆ ಅಧಿಕಾರ ನೀಡಿದ್ದಾರೆ. ಈಗ ಕಾಂಗ್ರೆಸ್ ಕೂಡ ಅದೇ ಹಾದಿಯಲ್ಲಿದೆ. ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಕ್ಷೇತ್ರದಲ್ಲಿ ಶಾಸಕರು ಹಾಗೂ ಅವರ ಹಿಂಬಾಲಕರು ಎಲ್ಲರೂ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಕೆ.ಎಲ್. ಅಶೋಕ್ ಆರೋಪಿಸಿದ್ದಾರೆ.
ಅಂಬೇಡ್ಕರ್ ಪ್ರತಿಮೆ ಸ್ಥಾಪಿಸುವ ಕುರಿತು ಗಂಭೀರವಾಗಿ ಪರಿಗಣಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ. ಅಲ್ಲದೆ ಹಾಗಲಗಂಚಿಗೆ ಸಂಪರ್ಕ ಕಲ್ಪಿಸುವ ರಸ್ತೆ ಡಾಂಬರೀಕರಣ ಆಶ್ವಾಸನೆ ನೀಡಿ ಆರು ತಿಂಗಳು ಕಳೆದರೂ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಮುಂದಿನ ದಿನಗಳಲ್ಲಿ ಶಾಸಕ ಟಿ.ಡಿ.ರಾಜೇಗೌಡರ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಕೆ. ಎಲ್. ಆಶೋಕ್ ಎಚ್ಚರಿಕೆ ನೀಡಿದ್ದಾರೆ.







