"ಕೇಸರಿ ಶಾಲು ಹಾಕಿಕೊಂಡಿರುವುದು ನನ್ನ ಧರ್ಮಕ್ಕಾಗಿ": ಮುತಾಲಿಕ್ ಜೊತೆ ವೇದಿಕೆ ಹಂಚಿಕೊಂಡ ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮ
ಚರ್ಚೆಗೆ ಗ್ರಾಸವಾದ ಶಾಸಕಿಯ ಪಕ್ಷಾಂತರ ಕುರಿತ ಹೇಳಿಕೆ

ಮೂಡಿಗೆರೆ: ಮಂಗಳವಾರ ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ಸಾರ್ವಜನಿಕ ಶ್ರೀ ಹಿಂದೂ ಮಹಾಸಭಾ ಗಣಪತಿ ಸೇವಾ ಸಮಿತಿ ವತಿಯಿಂದ ನಡೆದ ಲಾಂಛನ ಬಿಡುಗಡೆ ಸಮಾರಂಭದಲ್ಲಿ ಪ್ರಮೋದ್ ಮುತಾಲಿಕ್ ಜೊತೆ ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮ ವೇದಿಕೆ ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ, ಕೇಸರಿ ಶಾಲು ಹಾಕಿಕೊಂಡಿರುವುದು ಗಣಪತಿಗಾಗಿ, ನನ್ನ ಧರ್ಮಕ್ಕಾಗಿ. ನನ್ನ ಜೊತೆ ನನ್ನ ಪಕ್ಷದ ಕಾರ್ಯಕರ್ತರೂ ಬಂದಿದ್ದಾರೆ. ಹಿಂದೂವಾಗಿ, ದಲಿತೆಯಾಗಿ, ಮಹಿಳೆಯಾಗಿ ನನ್ನನ್ನು ದೇವರು ಇಲ್ಲಿ ಹುಟ್ಟಿಸಿದ್ದಾನೆ. ನಾನು ಆ ಅಸ್ತಿತ್ವದಲ್ಲಿ ಇಲ್ಲಿಗೆ ಬಂದಿದ್ದೇನೆ. ಶಾಸಕಿಯಾಗಿ ಪಕ್ಷವನ್ನು ಪ್ರತಿನಿಧಿಸುವುದು ಆಮೇಲೆ. ಈಗ ನಾನು ಗಣಪತಿ ಸಮಿತಿ ಕಾರ್ಯಾಧ್ಯಕ್ಷೆಯಾಗಿ ಇಲ್ಲಿ ಬಂದಿದ್ದೇನೆ. ನಾನು ಕಾಂಗ್ರೆಸ್ ನಲ್ಲೇ ಇರುತ್ತೇನೋ, ಬಿಜೆಪಿ, ಬಿಎಸ್ಪಿ, ಎಸ್ಡಿಪಿಐ ಸೇರುತ್ತೇನೋ ಎಂಬುದನ್ನು 3 ವರ್ಷಗಳ ಬಳಿಕ ನೋಡೋಣ ಎಂದು ಪ್ರತಿಕ್ರಿಯಿಸಿದರು.
ಇದು ಸಾರ್ವಜನಿಕ ಗಣಪತಿ ಉತ್ಸವವಾಗಿದ್ದರಿಂದ ತನ್ನನ್ನು ಒಂದು ಪಕ್ಷಕ್ಕೆ ಸೀಮಿತವಾಗಿ ನೋಡಬೇಡಿ. ಮುಂಬೈನ ‘ಲಾಲ್ಬಾಗ್ ಕಾ ರಾಜ’ ರೀತಿಯಲ್ಲಿ ಇಲ್ಲಿಯೂ ಅದ್ದೂರಿಯಾಗಿ ಗಣಪತಿ ಉತ್ಸವ ಆಚರಿಸಲು ಮುಂದಾಗೋಣ ಎಂದು ಕರೆ ನೀಡಿದರು.
ಉಪ ಸಭಾಪತಿ ಎಂ.ಕೆ.ಪ್ರಾಣೇಶ್ ಮಾತನಾಡಿ, ಈ ಬಾರಿ ವಿಭಿನ್ನ ರೀತಿಯಲ್ಲಿ ಗಣೇಶ ಉತ್ಸವ ಆಚರಿಸಲು ಮುಂದಾಗಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾರ್ವಜನಿಕ ಶ್ರೀ ಹಿಂದೂ ಮಹಾಸಭಾ ಗಣಪತಿ ಸೇವಾ ಸಮಿತಿ ಅಧ್ಯಕ್ಷ ಅನುಕುಮಾರ್ ವಹಿಸಿದ್ದರು. ಮುಖಂಡರಾದ ಎಂ.ಆರ್.ಜಗದೀಶ್, ಹಳಸೆ ಶಿವಣ್ಣ, ರಂಜನ್ ಅಜಿತ್ ಕುಮಾರ್, ಜವರಯ್ಯ, ಜೆ.ಎಸ್.ರಘು, ಎಚ್.ಡಿ.ರಾಮೇಗೌಡ, ವಿನೋದ್ ಕಣಚೂರು, ವಿನಯ್ ಹಳೆಕೋಟೆ, ಸುಧೀರ್, ಎಂ.ಎಸ್.ಸುಜಿತ್, ವಕೀಲ ಸಿದ್ದಯ್ಯ, ಪಟೇಲ್ ಮಂಜು, ವಿಜಯ್ ಕುಮಾರ್ ಮತ್ತಿತರರಿದ್ದರು.
ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಲಾಂಛನ ಬಿಡುಗಡೆ ಮಾಡಿದರು.
ಚರ್ಚೆಗೆ ಗ್ರಾಸವಾದ ಪಕ್ಷಾಂತರ ಕುರಿತ ಹೇಳಿಕೆ:
ಶಾಸಕಿ ನಯನಾ ಮೋಟಮ್ಮ ಅವರ ಪಕ್ಷಾಂತರದ ಕುರಿತ ಹೇಳಿಕೆ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಅಲ್ಲದೆ ಪ್ರಮೋದ್ ಮುತಾಲಿಕ್ ಕೂಡ ತಮ್ಮ ಭಾಷಣದಲ್ಲಿ ನಯನಾ ಮೋಟಮ್ಮ ಅವರನ್ನು ಹೊಗಳಿ ಮಾತನಾಡಿರುವ ವಿಚಾರ ಸ್ವತಃ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರೂ ಸೇರಿದಂತೆ ದಲಿತ, ಪ್ರಗತಿಪರರ ಕೆಂಗಣ್ಣಿಗೆ ಗುರಿಯಾಗಿದೆ. ನಯನಾ ಅವರನ್ನು ಶಾಸಕಿಯನ್ನಾಗಿ ಮಾಡಲು ಕಾಂಗ್ರೆಸ್ ಪಕ್ಷದ ಸೈದ್ಧಾಂತಿಕ ನಾಯಕರು, ಕಾರ್ಯಕರ್ತರು ಬೆವರು ಸುರಿಸಿದ್ದಾರೆ. ಇದನ್ನು ಕಡೆಗಣಿಸಿ ಸಂಘಪರಿವಾರದವರು ಒಂದು ಸಮುದಾಯ, ಪಕ್ಷದ ಪರವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದಲ್ಲದೆ ಪಕ್ಷಾಂತರದ ಮಾತುಗಳನ್ನಾಡಿರುವುದು ಪಕ್ಷದ ವರಿಷ್ಠರಿಗೆ ಮಾಡಿದ ಅಪಮಾನವಾಗಿದೆ ಎಂಬ ಟೀಕೆಗಳು ವ್ಯಾಪಕವಾಗಿ ಕೇಳಿ ಬರುತ್ತಿವೆ.







