‘ಅಡ್ಡಮತದಾನ’ ಸಂಪೂರ್ಣ ವರದಿ ಸಿದ್ಧ : ಸಿ.ಟಿ.ರವಿ

ಚಿಕ್ಕಮಗಳೂರು : ವಿಧಾನ ಪರಿಷತ್ ಚುನಾವಣೆಯಲ್ಲಿ ನಡೆದಿದೆ ಎನ್ನಲಾದ ಅಡ್ಡ ಮತದಾನಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಂಪೂರ್ಣ ವರದಿಯನ್ನು ಸಿದ್ಧಪಡಿಸಲಾಗಿದೆ. ಅದನ್ನು ಗೋಪ್ಯವಾಗಿ ಸೀಲ್ಡ್ ಕವರ್‌ನಲ್ಲಿ ಇಡಲಾಗಿದೆ ಎಂದು ಸತ್ಯಶೋಧನಾ ಸಮಿತಿ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ತಿಳಿಸಿದ್ದಾರೆ.
ಗುರುವಾರ ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯ ಬಿಜೆಪಿ ಅಧ್ಯಕ್ಷರು ದಿಲ್ಲಿ ಪ್ರವಾಸದಲ್ಲಿದ್ದು, ಶುಕ್ರವಾರ ಸಂಜೆ ಅವರು ಬೆಂಗಳೂರಿಗೆ ಮರಳಲಿದ್ದಾರೆ. ಆ ಬಳಿಕ ಸಮಿತಿ ಮೂವರು ಸದಸ್ಯರು ಅಧ್ಯಕ್ಷರನ್ನು ಭೇಟಿಯಾಗಿ ವರದಿಯನ್ನು ಹಸ್ತಾಂತರಿಸಲಿದ್ದಾರೆ ಎಂದರು.
ಈ ವರದಿ ಯಾವ ಆಧಾರದ ಮೇಲೆ, ಹೇಗೆ ಸಿದ್ಧಪಡಿಸಲಾಗಿದೆ ಎಂಬ ವಿವರಣೆ ನೀಡಿದ ಬಳಿಕ ಅದನ್ನು ಪಕ್ಷದ ಮುಖಂಡರಿಗೆ ಒಪ್ಪಿಸಲಾಗುತ್ತದೆ. ವರದಿ ಸಿದ್ಧತೆಗಾಗಿ ಹಲವು ವ್ಯಕ್ತಿಗಳೊಂದಿಗೆ ಚರ್ಚೆ ನಡೆಸಲಾಗಿದ್ದು, ಲಭ್ಯವಾದ ನಿಖರ ಮಾಹಿತಿಯನ್ನು ಆಧರಿಸಿ ವರದಿ ಸಿದ್ಧಪಡಿಸಲಾಗಿದೆ ಎಂದು ತಿಳಿಸಿದರು.
ಪಕ್ಷದ ಆಂತರಿಕ ಶಿಸ್ತಿನ ದೃಷ್ಟಿಯಿಂದ ಯಾವುದೇ ಸಂಗತಿಯನ್ನು ಸಾರ್ವಜನಿಕವಾಗಿ ಚರ್ಚಿಸಲು ಬಯಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಗೋಪ್ಯ ಮತದಾನ ಆಗಿರುವುದರಿಂದ ಕೇವಲ ಸಾಂದರ್ಭಿಕ ಸಾಕ್ಷ್ಯಗಳ ಆಧಾರದ ಮೇಲೆ ಕೆಲವರನ್ನು ಅನುಮಾನಿಸಬಹುದೇ ಹೊರತು, ಯಾರನ್ನೂ ನೇರವಾಗಿ ಆರೋಪಿ ಸ್ಥಾನದಲ್ಲಿ ನಿಲ್ಲಿಸಲು ಸಾಧ್ಯವಿಲ್ಲ ಎಂದು ಸಿ.ಟಿ.ರವಿ ಹೇಳಿದರು.
ಗೃಹಲಕ್ಷ್ಮಿ ಯೋಜನೆಯಲ್ಲಿ 250 ಕೋಟಿ ರೂ. ಅಧಿಕ ಹಗರಣ ನಡೆದಿದೆ ಎಂಬ ಆರೋಪ ಕೇಳಿ ಬಂದಿದ್ದು, ಪ್ರಕರಣವನ್ನು ತಕ್ಷಣ ಸಿಬಿಐ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದರು.
ಸರಕಾರದ ಯಾವುದೇ ತನಿಖೆಯಿಂದ ಪ್ರಕರಣದಲ್ಲಿ ನ್ಯಾಯ ಸಿಗಲು ಸಾಧ್ಯವಿಲ್ಲ. ನಕಲಿ ಖಾತೆಗಳನ್ನು ಪತ್ತೆ ಹಚ್ಚಿದ್ದು ಸರಕಾರವಲ್ಲ, ಪ್ರಕರಣವನ್ನು ಸಿಎಜಿ ಬಯಲಿಗೆಳೆದಿದೆ ಎಂದರು.
ಈ ಭ್ರಷ್ಟಾಚಾರದ ಕುರಿತು ಮುಖ್ಯಮಂತ್ರಿ ಹಾಗೂ ಮಾಜಿ ಮುಖ್ಯಮಂತ್ರಿಯವರು, ಹಿಂದಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರು ಮೌನವಹಿಸಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದು ಹೇಳಿದರು.






