ಎದೆ ಸೀಳಿದರೆ ಮೂರು ಅಕ್ಷರ ಬರಲ್ಲ, ಮುಲ್ಲಾನಿಗೂ NEET ಪರೀಕ್ಷೆಗೂ ಏನು ಸಂಬಂಧ : ಸಿ.ಟಿ.ರವಿ ಆಕ್ಷೇಪಾರ್ಹ ಹೇಳಿಕೆ

ಚಿಕ್ಕಮಗಳೂರು : ʼಮುಲ್ಲಾನಿಗೂ ನೀಟ್ ಪರೀಕ್ಷೆಗೂ ಏನು ಸಂಬಂಧ. ಎದೆ ಸೀಳಿದರೆ ಮೂರು ಅಕ್ಷರ ಬರಲ್ಲʼ ಎಂದು ವಿಧಾನ ಪರಿಷತ್ ಬಿಜೆಪಿ ಸದಸ್ಯ ಸಿ.ಟಿ.ರವಿ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ.
ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಧರ್ಮೇಂದ್ರ ಪ್ರಧಾನ್ ಹಟಾವೋ ಅಂತೆ, ಮೋದಿ ರಾಜೀನಾಮೆ ನೀಡಬೇಕಂತೆ. ತುಕ್ಡೆ ಗ್ಯಾಂಗ್‍ಗಳು ಬಂದು ಮಾತನಾಡುತ್ತಾರೆ. ನಕಲಿ ಎನ್‍ಜಿಓಗಳಿಂದ ಅಕ್ರಮವಾಗಿ ಹಣ ಬರುತ್ತಿರುವುದನ್ನು ನಿಲ್ಲಿಸುವ ಕಾಯ್ದೆ ತರಲಾಗುತ್ತಿದೆ. ಭಯದಿಂದ ಮಾತನಾಡುತ್ತಿದ್ದಾರೆ, ಹೊರತು ವಿದ್ಯಾರ್ಥಿಗಳ ಬಗ್ಗೆ ಇರುವ ಕಳಕಳಿಯಿಂದಲ್ಲ ಎಂದು ಹೇಳಿದರು.
ಕಾಕ್ರೋಚ್ ಜನತಾ ಪಕ್ಷವಾಗಲಿ, ಕಾಂಗ್ರೆಸ್ ಹೋರಾಟವಾಗಲಿ, ಶಿಕ್ಷಣ ಸುಧಾರಣೆಗಾಗಿ ಅಲ್ಲ. ಪ್ರಧಾನಮಂತ್ರಿಯನ್ನು ಗುರಿಯಾಗಿಸಿಕೊಂಡು ಹೋರಾಟ ಮಾಡಲಾಗುತ್ತಿದೆ. ಅವರ ಹೋರಾಟದಲ್ಲಿ ಸ್ಥಿರ ಸರಕಾರವನ್ನು ಅಸ್ಥಿರಗೊಳಿಸುವ ಸಂಚು ರೂಪಿಸಿ ವಿದ್ಯಾರ್ಥಿಗಳ ಮೂಲಕ ದಂಗೆ ಎಬ್ಬಿಸುವ ಷಡ್ಯಂತರ ನಡೆಯುತ್ತಿದೆ ಎಂದು ಆರೋಪಿಸಿದರು.
ಶಿಕ್ಷಣ ಕ್ಷೇತ್ರದ ಸುಧಾರಣೆ ತರಬೇಕು, ಭ್ರಷ್ಟಚಾರಿಗಳನ್ನು ಹೆಡೆಮುರಿಕಟ್ಟಬೇಕು ಎಂಬುದಕ್ಕೂ ನಮ್ಮ ಸ್ವಾಗತವಿದೆ. ಆದರೆ, ಈ ಹೋರಾಟದ ರೂಪುರೇಷೆ ಗಮನಿಸಿದಾಗ ಅವರಲ್ಲಿ ಸಕಾರಾತ್ಮಕವಾಗಿರುವ ಸಲಹೆಗಳು ಇವೆ ಎಂಬುದು ಗೋಚರಿಸಲಿಲ್ಲ. ಕಳೆದ 12 ದಿನಗಳಿಂದ ಸ್ಥಿರ ಸರಕಾರ ಹಾಗೂ ದೇಶಭಕ್ತ ಪ್ರಧಾನಮಂತ್ರಿಯನ್ನು ಗುರಿಯಾಗಿರಿಸಿಕೊಂಡು ದೇಶದಲ್ಲಿ ಅರಾಜಕತೆ ಸೃಷ್ಟಿಸುವ ಸಂಚು ರೂಪಿಸಿ ನೀಟ್ ಪರೀಕ್ಷೆಯಲ್ಲಿನ ಅಕ್ರಮವನ್ನು ನೆಪವಾಗಿಟ್ಟುಕೊಂಡು ಸ್ಥಿರ ಸರಕಾರವನ್ನು ಅಸ್ಥಿರಗೊಳಿಸುವ ಷಡ್ಯಂತರ ರೂಪಿಸಿದ್ದಾರೆ ಎಂದರು.
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವ್ಯಕ್ತಿತ್ವಕ್ಕೆ ರಾಹುಲ್ ಗಾಂಧಿಯವರ ಸರ್ಟಿಫಿಕೇಟ್‍ನ ಅವಶ್ಯಕತೆ ನಮಗಿಲ್ಲ. ಬೆಂಬಲದ ಅವಶ್ಯಕತೆ ಇಲ್ಲ. ಮೂರು ಬಾರಿ ಪ್ರಧಾನಮಂತ್ರಿಯಾಗಿದ್ದಾರೆ ಎಂದರೇ ಅವರ ವ್ಯಕ್ತಿತ್ವಕ್ಕೆ ದೇಶದ ಜನರು ನೀಡಿರುವ ಸರ್ಟಿಫಿಕೇಟ್ ಎಂದು ಭಾವಿಸುತ್ತೇವೆ. ಕಾಂಗ್ರೆಸ್ ಆಗಲಿ, ಎಡಪಕ್ಷಗಳು ಸರ್ಟಿಫಿಕೇಟ್ ನೀಡುವ ಅವಶ್ಯಕತೆ ಇಲ್ಲ. ನಿಮ್ಮ ವ್ಯಕ್ತಿತ್ವ ಏನು ಎನ್ನುವುದಕ್ಕೆ ದೇಶದ ಜನ ಮತಗಳ ಮೂಲಕ ಸರ್ಟಿಫಿಕೇಟ್ ನೀಡಿದ್ದಾರೆ ಎಂದು ಟೀಕಿಸಿದರು.
ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವೀಂದ್ರ ಬೆಳವಾಡಿ, ರಾಜ್ಯ ರೈತಮೋರ್ಚಾ ಪ್ರಧಾನ ಕಾರ್ಯದರ್ಶಿ ಎಚ್.ಸಿ.ಕಲ್ಮುರಡಪ್ಪ, ಬಿಜೆಪಿ ನಗರಾಧ್ಯಕ್ಷ ಪುಷ್ಪರಾಜ್, ಸಂತೋಷ್ ಕೋಟ್ಯಾನ್, ಹಿರೇಮಗಳೂರು ಪುಟ್ಟಸ್ವಾಮಿ ಮಾತನಾಡಿದರು. ಈ ಸಂದರ್ಭದಲ್ಲಿ ಮುಖಂಡರಾದ ಭವ್ಯ ಮಂಜುನಾಥ್, ಕವಿತಾಶೇಖರ್, ಕೆ.ಪಿ.ವೆಂಕಟೇಶ್, ಪ್ರೇಮ್‍ಕುಮಾರ್, ಕುಪ್ಪೇನಹಳ್ಳಿ ಸತೀಶ್ ಸೇರಿದಂತೆ ಇತರರು ಇದ್ದರು.






