ವಿಧಾನ ಪರಿಷತ್ ಸದಸ್ಯತ್ವ | ಎಂ.ಕೆ.ಪ್ರಾಣೇಶ್, ಗಾಯತ್ರಿ ಶಾಂತೇಗೌಡ ಭವಿಷ್ಯ ಇಂದು ನಿರ್ಧಾರ

ಚಿಕ್ಕಮಗಳೂರು: ಜಿಲ್ಲೆಯ ಸ್ಥಳೀಯ ಸಂಸ್ಥೆ ಗಳ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ವಿಧಾನ ಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್ ಮತ್ತು ಕಾಂಗ್ರೆಸ್ ನಿಂದ ಸ್ಪರ್ಧಿಸಿ ಪರಾಜಿತರಾದ ಅಭ್ಯರ್ಥಿ ಎ.ವಿ.ಗಾಯತ್ರಿ ಶಾಂತೇಗೌಡರ ಭವಿಷ್ಯ ಇಂದು (ಜು.31)ನಿರ್ಧಾರವಾಗಲಿದೆ.
ಚಿಕ್ಕಮಗಳೂರು ಕ್ಷೇತ್ರದಿಂದ ವಿಧಾನ ಪರಿಷತ್ ಸ್ಥಾನಕ್ಕೆ 2021ರ ಡಿಸೆಂಬರ್ ನಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಎಂ.ಕೆ.ಪ್ರಾಣೇಶ್ ಆರು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.
ಬಳಿಕ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಎ.ವಿ.ಗಾಯತ್ರಿ ಶಾಂತೇಗೌಡ ಈ ಚುನಾವಣೆಯಲ್ಲಿ ನಿಯಮ ಉಲ್ಲಂಘನೆಯಾಗಿದೆ ಎಂದು ನ್ಯಾಯಾಲಯದ ಮೆಟ್ಟಿಲೇರಿದ್ದರು. ಮೂರು ಸ್ಥಳೀಯ ಪಟ್ಟಣ ಪಂಚಾಯತ್ ಗಳ 12 ನಾಮನಿರ್ದೇಶಿತ ಸದಸ್ಯರು ಈ ಚುನಾವಣೆಯಲ್ಲಿ ಮತದಾನ ಮಾಡಿದ್ದರು. ಆದರೆ ಅವರಿಗೆ ಮತದಾನಕ್ಕೆ ಅವಕಾಶ ಇಲ್ಲ ಎಂಬುದು ಗಾಯತ್ರಿ ಶಾಂತೇಗೌಡರ ವಾದವಾಗಿತ್ತು. ಅವರ ವಾದವನ್ನು ಎತ್ತಿ ಹಿಡಿದಿದ್ದ ರಾಜ್ಯ ಹೈಕೋರ್ಟ್, ಆ 12 ಸದಸ್ಯರ ಮತಗಳನ್ನು ಪ್ರತ್ಯೇಕವಾಗಿರಿಸಿ ಮತಗಳ ಮರು ಎಣಿಕೆಗೆ ಸೂಚನೆ ನೀಡಿತ್ತು. ಅದರಂತೆ 2025ರ ಫೆಬ್ರವರಿ 28ರಂದು ಮರುಎಣಿಕೆ ನಡೆದಿದ್ದು, ಮುಚ್ಚಿದ ಲಕೋಟೆಯಲ್ಲಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ನ್ಯಾಯಾಲಯಕ್ಕೆ ವರದಿ ಕೂಡಾ ಸಲ್ಲಿಸಿದ್ದರು.
ಈ ಮಧ್ಯೆ ಮತಗಳ ಮರು ಎಣಿಕೆಗೆ ಆದೇಶಿಸಿದ್ದ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಪ್ರಾಣೇಶ್ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಅವರ ಅರ್ಜಿಯನ್ನು ವಜಾಗೊಳಿಸಿದ್ದ ಸರ್ವೋಚ್ಚ ನ್ಯಾಯಾಲಯವು ಜನವರಿ 29, 2025ರಂದು ಹೈಕೋರ್ಟ್ ನೀಡಿರುವ ತೀರ್ಪನ್ನು ಜಾರಿ ಮಾಡಲು ನಿರ್ದೇಶನ ನೀಡಿತ್ತು.
ಈ ಹಿನ್ನೆಲೆಯಲ್ಲಿ ಸುಪ್ರೀ ಕೋರ್ಟ್ ತೀರ್ಪಿ ನಂತೆ ರಾಜ್ಯ ಹೈಕೋರ್ಟ್ ನಲ್ಲಿ ಗಾಯತ್ರಿ ಶಾಂತೇಗೌಡರ ಅರ್ಜಿ ಇಂದು ವಿಚಾರಣೆಗೆ ಬರಲಿದೆ.




