ಚಿಕ್ಕಮಗಳೂರು | ನಕ್ಸಲ್ ಪೀಡಿತ ಗ್ರಾಮಗಳ ಅಭಿವೃದ್ಧಿಗೆ ತಲುಪದ ಅನುದಾನ; ಮುಜೇಕಾನ್ ಗ್ರಾಮಸ್ಥರ ಆರೋಪ

ಚಿಕ್ಕಮಗಳೂರು: ರಾಜ್ಯ ಸರಕಾರ ನಕ್ಸಲ್ ಪ್ಯಾಕೇಜ್ ನಡಿಯಲ್ಲಿ ಈ ಬಾರಿ ಜಿಲ್ಲೆಗೆ 7.12ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದು, ಈ ಅನುದಾನ ನಕ್ಸಲ್ ಪೀಡಿತ ಗ್ರಾಮಗಳಿಗೆ ತಲುಪುತ್ತಿಲ್ಲ. ಈ ಅನುದಾನದಡಿ ಕಾಮಗಾರಿ ಕೈಗೊಳ್ಳಲು ಆಯ್ಕೆ ಮಾಡಿರುವ ಗ್ರಾಮಗಳ ಪೈಕಿ ನಕ್ಸಲ್ ಚಳವಳಿಯಲ್ಲಿ ಭಾಗವಹಿಸಿದ್ದ ಮೂವರು ಮಹಿಳೆಯರ ಸ್ವಗ್ರಾಮವಾದ ಮುಜೇಕಾನ್ ಅನ್ನು ಕೈಬಿಡಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಶನಿವಾರ ಈ ಸಂಬಂಧ ಕಳಸ ತಹಶೀಲ್ದಾರ್ ಶಾರದಾ ಮೂಲಕ ರಾಜ್ಯ ಸರಕಾರ ಮತ್ತು ಜಿಲ್ಲಾಡಳಿತಕ್ಕೆ ಮನವಿ ಪತ್ರ ಸಲ್ಲಿಸಿರುವ ಮುಜೇಕಾನ್ ಗ್ರಾಮದ ನಿವಾಸಿಗಳು, ರಾಜ್ಯ ಸರಕಾರ ನಕ್ಸಲ್ ಪೀಡಿತ ಗ್ರಾಮಗಳ ಅಭಿವೃದ್ಧಿಗೆ ಬಿಡುಗಡೆ ಮಾಡಿರುವ ಅನುದಾನದಡಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಮುಜೇಕಾನ್ ಸೇರಿದಂತೆ ಕಳಕೋಡು, ಕಾರ್ಲೆ, ಈಚಲುಹೊಳೆಯಂತಹ ನೈಜ ನಕ್ಸಲ್ ಪೀಡಿತ ಗ್ರಾಮಗಳನನು ಪಟ್ಟಿಗೆ ಸೇರಿಸಬೇಕು. ಈ ಅನುದಾನದಲ್ಲಿ ರಸ್ತೆ, ವಿದ್ಯುತ್, ಆಶ್ರಯಮನೆ, ಅಂಗನವಾಡಿ ಕೇಂದ್ರ, ಶಾಲೆಯಂತಹ ಮೂಲಭೂತ ಸೌಕರ್ಯಗಳಂತಹ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ಒತ್ತಾಯಿಸಿದ್ದಾರೆ.
ಈ ವೇಳೆ ಮಾತನಾಡಿದ ನಿವಾಸಿಗಳು, ರಾಜ್ಯ ಸರಕಾರ ಈ ಬಾರಿ ನಕ್ಸಲ್ ಪೀಡಿತ ಜಿಲ್ಲೆಯ ಮೂರು ತಾಲೂಕುಗಳಾದ ಕಳಸ, ಕೊಪ್ಪ ಹಾಗೂ ಶೃಂಗೇರಿ ತಾಲೂಕು ವ್ಯಾಪ್ತಿಯಲ್ಲಿರುವ ಹಲವಾರು ನಕ್ಸಲ್ ಪೀಡಿತ ಗ್ರಾಮಗಳ ಅಭಿವೃದ್ಧಿಗೆ 7.12ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ ಎಂದು ಜಿಲ್ಲಾಡಳಿತ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ. ಅದರಂತೆ ಈ ನಕ್ಸಲ್ ಪ್ಯಾಕೇಜ್ನಡಿಯಲ್ಲಿ ಮೂರು ತಾಲೂಕುಗಳ ಹಲವು ನಕ್ಸಲ್ ಪೀಡಿತ ಗ್ರಾಮಗಳ ಅಭಿವೃದ್ಧಿಗೆ ಪಟ್ಟಿ ಸಿದ್ಧಪಡಿಸಲಾಗಿದೆ. ಆದರೆ, ನಕ್ಸಲ್ ಪೀಡಿತ ಗ್ರಾಮವಾದ ಮುಜೇಕಾನ್ ಅನ್ನು ಈ ಪಟ್ಟಿಯಲ್ಲಿ ಸೇರಿಸದೆ ಅನ್ಯಾಯ ಮಾಡಲಾಗಿದೆ. ನಕ್ಸಲ್ ಪೀಡಿತ ಈ ಗ್ರಾಮ ಇಂದಿಗೂ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ ಎಂದು ಅಳಲು ತೋಡಿಕೊಂಡರು.
ಮುಜೇಕಾನ್ ಗ್ರಾಮದವರೇ ಆದ ಯಶೋಧಾ, ಕನ್ಯಾಕುಮಾರಿ ಹಾಗೂ ಸಾವಿತ್ರಿ ಎಂಬವರು ಈ ಹಿಂದೆ ನಕ್ಸಲ್ ಚಳವಳಿ ಸೇರಿದ್ದರು. 2003ರಲ್ಲಿ ಕಾರ್ಕಳದ ಈದು ಗ್ರಾಮದಲ್ಲಿ ನಡೆದ ಎನ್ಕೌಂಟರ್ನಲ್ಲಿ ಯಶೋಧಾ ಅವರಿಗೆ ಗುಂಡೇಟು ತಗಲಿ ಗಾಯಗೊಂಡಿದ್ದರು. ಸದ್ಯ ಅವರು ಮುಖ್ಯವಾಹಿನಿಗೆ ಬಂದಿದ್ದಾರೆ. ಇದೇ ಗ್ರಾಮದವರಾದ ಕನ್ಯಾಕುಮಾರಿ ಅವರು 2017ರಲ್ಲಿ ಮುಖ್ಯವಾಹಿನಿಗೆ ಬಂದಿದ್ದರೆ, ಸಾವಿತ್ರಿ ಅವರು ಕೇರಳದ ಜೈಲಿನಲ್ಲಿದ್ದಾರೆ. ಮಲೆನಾಡಿನ ಕುಗ್ರಾಮಗಳಿಗೆ ಮೂಲಸೌಕರ್ಯ ಇಲ್ಲದಿರುವುದು, ಒಕ್ಕಲೆಬ್ಬಿಸುವಿಕೆಯಂತಹ ಜನವಿರೋಧಿ ಯೋಜನೆಗಳ ವಿರುದ್ಧ ಹೋರಾಡಲು ಇವರು ಅಂದು ನಕ್ಸಲ್ ಚಳವಳಿ ಬೆಂಬಲಿಸಿದ್ದರು.
ಸದ್ಯ ಮಲೆನಾಡಿನಲ್ಲಿ ನಕ್ಸಲ್ ಚಳವಳಿ ಇಲ್ಲ. ಇದ್ದ ನಕ್ಸಲ್ ಮುಖಂಡರು ಮುಖ್ಯವಾಹಿನಿಗೆ ಮರಳಿದ್ದಾರೆ. ರಾಜ್ಯ ಸರಕಾರದ ಮುಂದೆ ಈ ಬಾರಿ ಮುಖ್ಯವಾಹಿನಿಗೆ ಮರಳಿದವರ ಬೇಡಿಕೆಯಂತೆ ಸರಕಾರ ಮಲೆನಾಡಿನ ಮೂರು ತಾಲೂಕುಗಳ ನಕ್ಸಲ್ ಪೀಡಿತ ಗ್ರಾಮಗಳ ಅಭಿವೃದ್ಧಿಗೆ 7.12 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಈ ಅನುದಾನದಲ್ಲಿ ನಕ್ಸಲ್ ಪೀಡಿತ ಕೆಲ ಗ್ರಾಮಗಳ ಪಟ್ಟಿ ತಯಾರಿಸಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಜಿಲ್ಲಾಡಳಿತ ಮುಂದಾಗಿದೆ. ಆದರೆ, ನಕ್ಸಲ್ ಚಳವಳಿ ಬೆಂಬಲಿಸಿ ಸದ್ಯ ಮುಖ್ಯವಾಹಿನಿಗೆ ಮರಳಿರುವ ಮೂವರು ಮಹಿಳೆಯರ ಸ್ವಗ್ರಾಮವಾದ ಮುಜೇಕಾನ್ ಗ್ರಾಮವನ್ನೇ ಈ ಪಟ್ಟಿಯಿಂದ ಕೈ ಬಿಡಲಾಗಿದೆ ಎಂದು ದೂರಿದರು.
ಮುಜೇಕಾನ್ ಗ್ರಾಮ ಕುಗ್ರಾಮವಾಗಿದ್ದು, ಇಲ್ಲಿ 20ಕ್ಕೂ ಹೆಚ್ಚು ಆದಿವಾಸಿ ಕುಟುಂಬಗಳು ವಾಸವಾಗಿದೆ. ವಿದ್ಯುತ್, ನಿವೇಶನ, ಕುಡಿಯುವ ನೀರು, ರಸ್ತೆ, ಆಶ್ರಯಮನೆಯಂತಹ ಮೂಲಭೂತ ಸೌಕರ್ಯಗಳಿಂದ ಗ್ರಾಮ ವಂಚಿತವಾಗಿದೆ. ಮುಖ್ಯವಾಗಿ ಗ್ರಾಮ ಸಂಪರ್ಕಕ್ಕೆ ಸುಸಜ್ಜಿತ ರಸ್ತೆ ಇಲ್ಲವಾಗಿದ್ದು, ಕಚ್ಛಾ ರಸ್ತೆಯಲ್ಲೇ ನಿವಾಸಿಗಳು ಅಗತ್ಯ ವಸ್ತುಗಳೂ ಸೇರಿದಂತೆ ಸರಕಾರಿ ಕಚೇರಿ, ಆಸ್ಪತ್ರೆ, ಶಾಲಾ, ಕಾಲೇಜಿಗೆ 15 ಕಿ.ಮೀ. ದೂರದಲ್ಲಿರುವ ಕಳಸ ಪಟ್ಟಣಕ್ಕೆ ನಡೆದು ಹೋಗಬೇಕಿದೆ. ರಸ್ತೆ ಅವ್ಯವಸ್ಥೆಯಿಂದಾಗಿ ಬಾಡಿಗೆ ವಾಹನಗಳು ಗ್ರಾಮದತ್ತ ಬರುತ್ತಿಲ್ಲ. ಈ ಗ್ರಾಮದ ಸಮಸ್ಯೆಗಳ ಬಗ್ಗೆ ತಾಲೂಕು ಆಡಳಿತ, ಗ್ರಾಮ ಪಂಚಾಯತ್ಗೆ ಮಾಹಿತಿ ಇದ್ದರೂ ಅಭಿವೃದ್ಧಿ ಮರೀಚಿಕೆಯಾಗಿದೆ ಎಂದು ಅಳಲು ತೋಡಿಕೊಂಡರು.
ರಾಜ್ಯ ಸರಕಾರ ಬಿಡುಗಡೆ ಮಾಡಿರುವ 7.12 ಕೋ. ರೂ. ಅನುದಾನದಡಿ ಮುಜೇಕಾನ್ ಗ್ರಾಮದಲ್ಲೂ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಬೇಕು. ಮುಖ್ಯವಾಗಿ ರಸ್ತೆ ಸಮಸ್ಯೆಯನ್ನು ಬಗೆಹರಿಸಬೇಕು. ಈ ಅನುದಾನದಡಿಯಲ್ಲಿ ಕಾಮಗಾರಿ ಕೈಗೊಳ್ಳಲು ಜಿಲ್ಲಾಡಳಿತ ತಯಾರಿಸಿರುವ ನಕ್ಸಲ್ ಪೀಡಿತ ಗ್ರಾಮಗಳ ಪಟ್ಟಿಯನ್ನು ಪರಿಷ್ಕರಿಸಬೇಕು. ಈ ಪಟ್ಟಿಯಲ್ಲಿ ಮುಜೇಕಾನ್ ಸೇರಿದಂತೆ ಕಳಸ ತಾಲೂಕಿನ ಕಾರ್ಲೆ, ಕಳಕೋಡು, ನೆಲ್ಲಿಕೋಟ, ಈಚಲುಹೊಳೆ ಗ್ರಾಮಗಳನ್ನೂ ಸೇರಿಸಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಬೇಕೆಂದು ನಿವಾಸಿಗಳು ಮನವಿ ಮಾಡಿದರು.
ಈ ಸಂದರ್ಭದಲ್ಲಿ ನಿವಾಸಿಗಳಾದ ಅನಿಲ್ ಕುಮಾರ್, ಅಪ್ಪುಗೌಡ, ಸೀತಾ, ರಾಧಮ್ಮ, ಗೌರಮ್ಮ, ಸತೀಶ್, ಕೃಷ್ಣ, ಬಾಬುಗೌಡ, ಗಿರಿಜಾ ಮತ್ತಿತರರಿದ್ದರು.
ರಾಜ್ಯ ಸರಕಾರ ನಕ್ಸಲ್ ಪೀಡಿತ ಗ್ರಾಮಗಳ ಅಭಿವೃದ್ಧಿಗೆ 7.12ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಈ ಅನುದಾನದಡಿ ಕಳಸ, ಕೊಪ್ಪ, ಶೃಂಗೇರಿ ತಾಲೂಕುಗಳ ಕೆಲ ನಕ್ಸಲ್ ಪೀಡಿತ ಗ್ರಾಮಗಳನ್ನು ಅಭಿವೃದ್ಧಿಪಡಿಸಲು ಪಟ್ಟಿ ತಯಾರಿಸಲಾಗಿದೆ. ಆದರೆ, ಮುಜೇಕಾನ್ ಗ್ರಾಮವನ್ನು ಈ ಪಟ್ಟಿಗೆ ಸೇರಿಸದೆ ಅನ್ಯಾಯ ಮಾಡಲಾಗಿದೆ. ನಮ್ಮ ಗ್ರಾಮದ ಮೂವರು ಮಹಿಳೆಯರು ನಕ್ಸಲ್ ಚಳವಳಿ ಸೇರಿದ್ದು, ಸದ್ಯ ಅವರು ಮುಖ್ಯವಾಹಿನಿಗೆ ಮರಳಿದ್ದಾರೆ. ಜಿಲ್ಲಾಡಳಿತ ಮುಜೇಕಾನ್ ಗ್ರಾಮವನ್ನು ಆದ್ಯತೆ ಮೇರೆಗೆ ಅಭಿವೃದ್ಧಿ ಪಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು.
ಅನಿಲ್ ಕುಮಾರ್, ಮುಜೇಕಾನ್ ಗ್ರಾಮಸ್ಥ







