MLC ಪ್ರಮಾಣಕ್ಕೂ ಮುನ್ನವೇ ಮಂತ್ರಿ ಭಾಗ್ಯ: ಚಿಕ್ಕಮಗಳೂರಿನ ಗಾಯತ್ರಿ ಶಾಂತೇಗೌಡಗೆ ಒಲಿದ ಸಚಿವ ಗಿರಿ

ಚಿಕ್ಕಮಗಳೂರು : ಇತ್ತೀಚಿಗಷ್ಟೇ ಕೋರ್ಟಿನ ಮೂಲಕ ನ್ಯಾಯ ಪಡೆದು ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಗೊಂಡಿದ್ದ ಗಾಯತ್ರಿ ಶಾಂತೇಗೌಡ ಅವರಿಗೆ ಮಂತ್ರಿ ಸ್ಥಾನ ಒಲಿದಿದೆ.
ಮೂಡಿಗೆರೆ ಕ್ಷೇತ್ರದಿಂದ ಆಯ್ಕೆಯಾಗಿದ್ದ ಮೋಟಮ್ಮನವರ ಬಳಿಕ ಜಿಲ್ಲೆಯಿಂದ ಮತ್ತೊಮ್ಮೆ ಮಹಿಳೆಯೊಬ್ಬರಿಗೆ ಸಚಿವ ಸ್ಥಾನ ಸಿಕ್ಕಿದೆ.
ಕಳೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಆರು ಮತಗಳ ಅಂತರದಿಂದ ಸೋಲನ್ನಪ್ಪಿದ್ದ ಗಾಯತ್ರಿ ಶಾಂತೇಗೌಡ ನ್ಯಾಯಕೋರಿ ಸುಪ್ರೀಂ ಕೋರ್ಟಿನವರೆಗೂ ಹೋಗಿದ್ದರು. ನಾಮ ನಿರ್ದೇಶನ ಸದಸ್ಯರ ಹಕ್ಕನ್ನು ಮಾನ್ಯ ಮಾಡದಂತೆ ಕೋರಿದ್ದ ಇವರ ಅರ್ಜಿ ಪುರಸ್ಕೃತಗೊಂಡು, ಮರು ಎಣಿಕೆ ನಡೆದಾಗ 9 ಮತಗಳ ಅಂತರದಲ್ಲಿ ಜಯಗಳಿಸಿದ್ದರು.
ಸರಿಸುಮಾರು ನಾಲ್ಕೂವರೆ ವರ್ಷಗಳ ಬಳಿಕ ‘ನ್ಯಾಯ’ ಪಡೆಯುವಲ್ಲಿ ಯಶಸ್ವಿಯಾಗಿದ್ದ ಅವರಿಗೆ ಈಗ ಸಚಿವ ಸ್ಥಾನವೂ ಒಲಿದಿದೆ.
ಇತ್ತೀಚೆಗಷ್ಟೇ ಹೈಕೋರ್ಟ್ ಆದೇಶದಂತೆ ಪರಿಷತ್ ಸದಸ್ಯೆಯಾಗಿ ಆಯ್ಕೆಯಾಗಿರುವ ಗಾಯತ್ರಿ ಶಾಂತೇಗೌಡ ಅವರು, ವಿಧಾನಪರಿಷತ್ ಉಪಸಭಾಪತಿ ಪ್ರಾಣೇಶ್ ಅವರ ವಿರುದ್ಧ ಭರ್ಜರಿ 9 ಮತಗಳ ಅಂತರದಿಂದ ರೋಚಕ ಜಯ ಸಾಧಿಸಿದ್ದರು. ವಿಶೇಷವೆಂದರೆ, ಇನ್ನು ಪರಿಷತ್ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸುವ ಮೊದಲೇ ಅವರಿಗೆ ಸಚಿವ ಭಾಗ್ಯ ಒಲಿದು ಬಂದಿರುವುದು ಅವರ ರಾಜಕೀಯ ಜೀವನದ ಪ್ರಮುಖ ಮೈಲಿಗಲ್ಲಾಗಿದೆ.
ಹಾಸನ ಜಿಲ್ಲೆಯ ಅರಕಲಗೂಡಿನಲ್ಲಿ ಎಪ್ರಿಲ್ 02, 1963ರಂದು ಜನಿಸಿದ ಗಾಯತ್ರಿ ಶಾಂತೇಗೌಡ ಅವರು ಪಿಯುಸಿವರೆಗೆ ಶಿಕ್ಷಣ ಪಡೆದಿದ್ದಾರೆ. ಕುರುಬ ಸಮುದಾಯಕ್ಕೆ ಸೇರಿದ ಇವರು, ಸಕ್ರಿಯ ರಾಜಕಾರಣದಲ್ಲಿ ದೀರ್ಘ ಅನುಭವ ಹೊಂದಿದ್ದಾರೆ. ಸ್ಥಳೀಯ ಸಂಸ್ಥೆಗಳ ಕ್ಷೇತ್ರವನ್ನು ಪ್ರತಿನಿಧಿಸಿ ಮೂರು ಬಾರಿ ಪರಿಷತ್ ಚುನಾವಣೆಗೆ ಸ್ಪರ್ಧಿಸಿರುವ ಇವರು, ಎರಡು ಬಾರಿ ಜಯಗಳಿಸಿದ್ದಾರೆ. ಈ ಹಿಂದೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿಯೂ ಯಶಸ್ವಿಯಾಗಿ ಸೇವೆ ಸಲ್ಲಿಸಿದ ಅನುಭವ ಇವರಿಗಿದೆ.






