ಕಾಫಿ ಬೆಳೆಗಾರರಿಗೆ ಮಾರಕವಾಗಿರುವ ಸರ್ಫೇಸಿ ಕಾಯ್ದೆ ಬದಲಾವಣೆಗೆ ಪ್ರಯತ್ನ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಭರವಸೆ

ಚಿಕ್ಕಮಗಳೂರು: ಕಾಫಿ ಬೆಳೆಗಾರರಿಗೆ ಅನಾನುಕೂಲವಾಗಿರುವ ಕೇಂದ್ರದ ಸರ್ಫೇಸಿ ಕಾಯ್ದೆ ಬದಲಾವಣೆಗೆ ಪ್ರಧಾನಿ ಹಾಗೂ ಹಣಕಾಸು ಸಚಿವರ ಗಮನ ಸೆಳೆದು ಕಾಫಿ ಬೆಳೆಗಾರರ ರಕ್ಷಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.
ಕಾಫಿ ಮಂಡಳಿ, ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ, ಕೇಂದ್ರೀಯ ಕಾಫಿ ಸಂಶೋಧನಾ ಸಂಸ್ಥೆ ವತಿಯಿಂದ ಸೋಮವಾರ ಬಾಳೆಹೊನ್ನೂರಿನ ಕೇಂದ್ರೀಯ ಕಾಫಿ ಸಂಶೋಧನಾ ಸಂಸ್ಥೆ(ಸಿ.ಸಿ.ಆರ್.ಐ.)ಯಲ್ಲಿ ನಡೆದ ಶತಮಾನೋತ್ಸವ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಕಾಫಿ ಬೆಳೆಗಾರರನ್ನು ಈ ಕಾಯ್ದೆಯಿಂದ ರಕ್ಷಣೆ ಮಾಡುವಂತೆ ಹಲವರು ಬೇಡಿಕೆ ಇಟ್ಟಿದ್ದಾರೆ. ಸಾಲ ಬಾಕಿ ಉಳಿಸಿಕೊಂಡ ರೈತರ ತೋಟಗಳು ಹರಾಜು ಹಾಕುವ ಕರಾಳ ಕಾಯ್ದೆ ಇದಾಗಿದೆ ಎಂಬ ಅಭಿಪ್ರಾಯ ಬೆಳೆಗಾರರಲ್ಲಿದೆ. ಕಾಫಿ ಬೆಳೆಗಾರರಿಗೆ ಉರುಳಾಗಿರುವ ಈ ಕಾಯ್ದೆ ಬದಲಾವಣೆಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಇದರ ಜೊತೆ ಬೆಳೆಗಾರರಿಗೆ ಶೇ.3ರ ಬಡ್ಡಿ ದರದಲ್ಲಿ ಸಾಲ ನೀಡುವಂತೆ ಕೋರಲಾಗಿದೆ. ಕಾಫಿ ಮಂಡಳಿ ಅಧ್ಯಕ್ಷರ ಜೊತೆ ಬೆಳೆಗಾರ ಪ್ರಮುಖರು ಆಗಮಿಸಿದರೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿಸಿ ಬೆಳೆಗಾರರ ಹಿತ ಕಾಯಲಾಗುವುದು ಎಂದು ಭರವಸೆ ನೀಡಿದರು.
ಅರಣ್ಯ ಇಲಾಖೆಯ ಕೆಲ ಕಾಯ್ದೆ, ನಿಯಮಗಳಿಂದ ಕಾಫಿ ಬೆಳೆ ವಿಸ್ತರಣೆ ಕಡಿಮೆಯಾಗುತ್ತಿದೆ. ಇದಕ್ಕೆ ನ್ಯಾಯಾಲಯದ ಕೆಲ ತೀರ್ಪುಗಳು ಸಹ ಕಾರಣವಾಗಿವೆ. ಅರಣ್ಯ ಇಲಾಖೆಯೊಂದಿಗಿನ ವಿವಾದಗಳ ಪರಿಹಾರಕ್ಕೆ ಕೇಂದ್ರ ಸರಕಾರದ ಮಟ್ಟದಲ್ಲಿ ಸಾಧ್ಯವಾದ ಕ್ರಮ ಜರುಗಿಸಲಾಗುವುದು ಎಂದರು.
ವನ್ಯ ಜೀವಿಗಳು ಮತ್ತು ಮಾನವ ಸಂಘರ್ಷ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿದೆ. ಕಾಫಿ ಬೆಳೆಗಾರರು ತೋಟಗಳಿಗೆ ಹೋಗಲು ಭಯಪಡುವ ಸ್ಥಿತಿ ಕೆಲವು ಕಡೆ ಇದೆ. ನಾನು ಮುಖ್ಯಮಂತ್ರಿಯಾಗಿದ್ದಾಗ ಇದನ್ನು ತಪ್ಪಿಸಲು ರೈಲು ಹಳಿ ತಡೆಗೋಡೆ ನಿರ್ಮಿಸಲು ಚಾಲನೆ ನೀಡಿದ್ದೆ. ಈ ಯೋಜನೆ ನಿಂತು ಹೋಗಿದ್ದು, ಇದರ ಮರು ಚಾಲನೆ ನೀಡಿ ರೈತರ ಸುರಕ್ಷತೆಗೆ ಗಮನ ಹರಿಸಲಾಗುವುದು ಎಂದರು.
ಕ್ರೆಡಿಲ್ ಅಧ್ಯಕ್ಷ ಹಾಗೂ ಶಾಸಕರಾದ ಟಿ.ಡಿ.ರಾಜೇಗೌಡ ಮಾತನಾಡಿ, ಬಾಬಾಬುಡನ್ ಎಂಬ ಸಂತರು ವಿದೇಶದಿಂದ ತಂದ ಕಾಫಿ ಬೀಜ ಇಂದು ಹಲವು ಬೆಳೆಗಾರರ ಆರ್ಥಿಕ ಸ್ವಾವಲಂಬನೆಗೆ ಕಾರಣವಾಗಿ, ಉದ್ಯಮ ಸ್ವರೂಪ ಪಡೆದುಕೊಂಡಿದೆ. ಕಾಫಿ ಉದ್ಯಮ ಪ್ರಪಂಚದ ಗಮನ ಸೆಳೆಯಬೇಕಾಗಿದೆ. ಕಾಫಿ ಅಂಗಡಿಯವರು ನಡೆಸುವ ನೆಮ್ಮದಿಯ ಜೀವನವನ್ನು ಬೆಳೆಗಾರರು ಮಾಡಲಾಗುತ್ತಿಲ್ಲ. ಕಾಡು ಪ್ರಾಣಿಗಳು ಮತ್ತು ಮಾನವ ಸಂಘರ್ಷ ಕಾಫಿ ಬೆಳೆಗೆ ಸಮಸ್ಯೆಯಾಗಿ ಕಾಣುತ್ತಿದೆ. ಇದಕ್ಕೆ ಕೇಂದ್ರ ಸರ್ಕಾರ ಹೆಚ್ಚು ಪರಿಹಾರ ನೀಡಬೇಕು. ಕಾಫಿ ತೋಟದಲ್ಲಿ ಹೋಗಲು ಈಗ ಭಯವಾಗುತ್ತಿದೆ. ಹೊಸ ತಂತ್ರಜ್ಞಾನದ ಮೂಲಕ ಬೆಳೆಗಾರರಿಗೆ ತೊಂದರೆ ಆಗದಂತೆ ಕಾರ್ಯಕ್ರಮ ರೂಪಿಸಬೇಕು ಎಂದು ಒತ್ತಾಸೆ ವ್ಯಕ್ತಪಡಿಸಿದರು.
ಸರ್ಫೇಸಿ ಕಾಯ್ದೆ ಕಾಫಿ ಬೆಳೆಗಾರರಿಗೆ ಮಾರಕವಾಗಿದೆ. ಕಾಫಿ ಬೆಳೆ ಪ್ರಕೃತಿ ಹಾಗೂ ಮಾರುಕಟ್ಟೆ ಬೆಲೆ ಅವಲಂಬಿಸಿದೆ. ಬೆಳೆ ನಷ್ಟದಿಂದ ರೈತರು ಕೆಲ ಸಾಲದ ಕಂತು ಕಟ್ಟದಿರಬಹುದು. ಆಗ ಈ ಕಾಯ್ದೆ ಪ್ರಕಾರ ಬಾಕಿ ಉಳಿಸಿಕೊಂಡ ಬೆಳೆಗಾರರ ತೋಟಗಳನ್ನು ಬ್ಯಾಂಕ್ ಹೆಸರಿಗೆ ಮಾಡಿಸಿಕೊಂಡು ಹರಾಜು ಮಾಡಲು ಅವಕಾಶ ಮಾಡಲಾಗಿದೆ. ಇದರಿಂದ ರೈತರನ್ನು ಮುಕ್ತ ಮಾಡಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ. ದಿನೇಶ್ ಮಾತನಾಡಿ, ಕರ್ನಾಟಕದ ಕಾಫಿ ಬೆಳೆಗಾರರ ಧ್ವನಿಯಾಗಿ ಕೇಂದ್ರ ಸಚಿವರಾದ ಎಚ್.ಡಿ. ಕುಮಾರಸ್ವಾಮಿ ಕೆಲಸ ಮಾಡುತ್ತಿದ್ದಾರೆ. ತೆಂಗಿನ ಮರದ ಜೊತೆ ಕಾಫಿ ಕೂಡ ಕಲ್ಪವೃಕ್ಷ ಆಗಲಿದೆ. ಕಾಫಿಯಿಂದ ಜೈವಿಕ ಇಂಧನ, ಬಟ್ಟೆ ಮತ್ತಿತರರ ಉಪ ಉತ್ಪನ್ನ ತಯಾರು ಮಾಡುವ ಸಂಶೋಧನೆ ಮಾಡಲಾಗುತ್ತಿದೆ. ಸಣ್ಣ ಕಾಫಿ ಬೆಳೆಗಾರರ ಅನುಕೂಲಕ್ಕಾಗಿ ಶತಮಾನೋತ್ಸವ ಕಾರ್ಯಕ್ರಮ ಮಾಡಲಾಗುತ್ತಿದೆ. ಕಾಫಿ ಮಂಡಳಿ ಈಗ ಬೆಳೆಗಾರರ ಪರವಾಗಿ ಬದಲಾಗುತ್ತಿದೆ ಎಂದರು.
ನಾಗಲ್ಯಾಂಡ್ ಕಾಫಿಯನ್ನು 10 ಸಾವಿರ ರೂ.ಗೆ ಮಾರಾಟ ಮಾಡಲಾಗುತ್ತಿದೆ. ಬೆಳೆಗಾರರು ಮಾರುಕಟ್ಟೆ ಸಾಧ್ಯತೆಗಳನ್ನು ಕಂಡುಕೊಳ್ಳಬೇಕು. ಈಗ ಬೆಳೆ ಕಡಿಮೆಯಾಗುತ್ತಿದ್ದು, ಇದರ ಅವಕಾಶ ಬೆಳೆಗಾರರು ಬಳಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಕಾಫಿ ಮಂಡಳಿ ಕಾರ್ಯದರ್ಶಿ ಕೂರ್ಮಾರಾವ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ, ಬೇಲೂರು ಶಾಸಕ ಸುರೇಶ್, ಮಾಜಿ ಸಚಿವ ಬಿ.ಬಿ.ನಿಂಗಯ್ಯ, ಸಕಲೇಶಪುರದ ಮಾಜಿ ಶಾಸಕ ವಿಶ್ವನಾಥ್, ಸುಧಾಕರಶೆಟ್ಟಿ, ಕಾಫಿ ಸಂಶೋಧನಾ ಸಂಸ್ಥೆಯ ನಿರ್ದೇಶಕ ಸೆಂಥಿಲ್‍ಕುಮಾರ್ ಮುಂತಾದವರಿದ್ದರು.







