ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರೀ ಮಳೆ | ಭೂಕುಸಿತದಿಂದ ರಸ್ತೆ ಸಂಪರ್ಕ ಕಡಿತ; ಭದ್ರಾ, ತುಂಗಾ, ಹೇಮಾವತಿ ನದಿ ನೀರಿನ ಹರಿವು ಹೆಚ್ಚಳ

ಚಿಕ್ಕಮಗಳೂರು : ಕಾಫಿನಾಡಿನ ಮಲೆನಾಡು ಭಾಗದಲ್ಲಿ ಶುಕ್ರವಾರವೂ ಮಳೆ ಆರ್ಭಟಿಸಿದ್ದು, ಭಾರೀ ಮಳೆಯಿಂದಾಗಿ ಕಳಸ ತಾಲೂಕಿನ ಚೆನ್ನಡ್ಲು ಗ್ರಾಮದ ಬಳಿ ಭೂ ಕುಸಿತ ಉಂಟಾಗಿ ಹಿರೇಬೈಲು, ಇಡಕಣಿ, ಬಾಳೆಹೊಳೆ ಸಂಪರ್ಕ ಕಡಿತಗೊಂಡಿದೆ.
ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ವರುಣನ ಆರ್ಭಟ ಮತ್ತಷ್ಟು ಬಿರುಸುಗೊಂಡಿದೆ. ಜಿಲ್ಲೆಯ ಮಲೆನಾಡು ಭಾಗದ ಕಳಸ, ಮೂಡಿಗೆರೆ, ಶೃಂಗೇರಿ, ಕೊಪ್ಪ, ಎನ್.ಆರ್.ಪುರ ತಾಲೂಕುಗಳ ವ್ಯಾಪ್ತಿಯಲ್ಲಿ ಶುಕ್ರವಾರ ಬೆಳಗ್ಗೆಯಿಂದ ಸಂಜೆವರೆಗೆ ಧಾರಾಕಾರ ಮಳೆಯಾಗಿದ್ದರೆ, ಬಯಲು ಭಾಗದ ಚಿಕ್ಕಮಗಳೂರು, ಕಡೂರು, ತರೀಕೆರೆ, ಅಜ್ಜಂಪುರ ತಾಲೂಕುಗಳ ವ್ಯಾಪ್ತಿಯಲ್ಲಿ ಸಾಧಾರಣ ಮಳೆಯಾಗಿದೆ.
ಭಾರೀ ಮಳೆಯಿಂದಾಗಿ ಜಿಲ್ಲೆಯ ಕಳಸ ತಾಲೂಕಿನ ಹಿರೇಬೈಲು ಸಮೀಪದಲ್ಲಿರುವ ಚೆನ್ನಡ್ಲು ಎಂಬಲ್ಲಿ ಭೂ ಕುಸಿತ ಉಂಟಾಗಿ ಮಣ್ಣು ಹಿರೇಬೈಲು-ಬಾಳೆಹೊಳೆ ಸಂಪರ್ಕ ರಸ್ತೆ ಮೇಲೆ ಬಿದ್ದ ಪರಿಣಾಮ ಈ ಗ್ರಾಮಗಳ ನಡುವೆ ಸಂಪರ್ಕ ಕಡಿತಗೊಂಡಿದೆ.
ಉಳಿದಂತೆ ಮಲೆನಾಡು ಭಾಗದ ತಾಲೂಕುಗಳ ವ್ಯಾಪ್ತಿಯಲ್ಲಿ ಧಾರಾಕಾರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಅಲ್ಲಲ್ಲಿ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿದ ಪರಿಣಾಮ ಜನ, ವಾಹನಗಳ ಸಂಚಾರಕ್ಕೆ ತೊಂದರೆಯಾಗಿತ್ತು. ನಿರಂತರ ಮಳೆಯಿಂದಾಗಿ ಮಲೆನಾಡು ಭಾಗದಲ್ಲಿ ಕಾಫಿ, ಅಡಿಕೆ ತೋಟಗಳಲ್ಲಿ ಕೃಷಿ ಚಟುವಟಿಕೆಗೂ ಅಡಚಣೆ ಉಂಟಾಗಿದೆ. ಭಾರೀ ಮಳೆಯಿಂದಾಗಿ ಕಾಫಿ, ಅಡಿಕೆ ತೋಟಗಳಲ್ಲಿ ಕೊಳೆ ರೋಗ ಉಲ್ಬಣಗೊಳ್ಳುವಂತಾಗಿದೆ.
ಅಂಗನವಾಡಿಗೆ ರಜೆ :
ಶುಕ್ರವಾರ ಇಡೀ ದಿನ ಸುರಿದ ಭಾರೀ ಮಳೆಯಿಂದಾಗಿ ಭದ್ರಾ, ತುಂಗಾ, ಹೇಮಾವತಿ ನದಿಗಳಲ್ಲಿ ನೀರಿನ ಹರಿವಿನ ಪ್ರಮಾಣ ಮತ್ತಷ್ಟು ಹೆಚ್ಚಾಗಿದ್ದು, ಹಳ್ಳಕೊಳ್ಳಗಳೂ ತುಂಬಿ ಹರಿಯಲಾರಂಭಿಸಿವೆ. ಭಾರೀ ಮಳೆ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಸೇರಿದಂತೆ ಮಲೆನಾಡು ಭಾಗದ 6 ತಾಲೂಕುಗಳ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆಗಳಿಗೆ ಶುಕ್ರವಾರ ರಜೆ ಘೋಷಣೆ ಮಾಡಿದ್ದರೆ, ಶನಿವಾರ ಚಿಕ್ಕಮಗಳೂರು ಸೇರಿದಂತೆ ಮಲೆನಾಡು ಭಾಗದ 6 ತಾಲೂಕುಗಳ ಅಂಗನವಾಡಿ ಕೇಂದ್ರಗಳಿಗೆ ಮಾತ್ರ ರಜೆ ಘೋಷಣೆ ಮಾಡಿ ಜಿಲ್ಲಾಡಳಿತ ಆದೇಶಿಸಿದೆ.