ಭಾರೀ ಗಾಳಿ-ಮಳೆ: ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಬಿದ್ದ ಕಲ್ಲು, ಮರ; ಸಂಚಾರ ಅಸ್ತವ್ಯಸ್ತ

ಕೊಟ್ಟಿಗೆಹಾರ: ದಕ್ಷಿಣ ಕನ್ನಡ ಹಾಗೂ ಚಿಕ್ಕಮಗಳೂರು ಸಂಪರ್ಕ ಕಲ್ಪಿಸುವ ಚಾರ್ಮಾಡಿ ಘಾಟಿಯಲ್ಲಿ ಭಾರೀ ಗಾಳಿ ಮಳೆಗೆ ರಸ್ತೆಗೆ ಕಲ್ಲು ಮರ ಅಡ್ಡಲಾಗಿ ಬಿದ್ದಿದ್ದು, ಅರ್ಧಗಂಟೆಗೂ ಹೆಚ್ಚುಕಾಲ ಸಂಚಾರಕ್ಕೆ ಅಡ್ಡಿಯಾಗಿತ್ತು.
ನಿತ್ಯ ಸಾವಿರಾರು ವಾಹನಗಳು ಈ ದಾರಿಯಾಗಿ ಸಂಚರಿಸುತ್ತಿದ್ದು, ಗುಡ್ಡದ ಮೇಲ್ಭಾಗದಿಂದ ಕಲ್ಲುಗಳು ಬೀಳುವ ಕೆಲವೇ ಕ್ಷಣಗಳ ಮುಂಚೆ ಪ್ರವಾಸಿಗರ ಕಾರೊಂದು ಅಪಾಯದಿಂದ ಪಾರಾಗಿದೆ. ಮಳೆಯ ನಡುವೆ ವಾಹನ ಸವಾರರು ಮತ್ತು ಪ್ರವಾಸಿಗರು ತೀವ್ರ ಪರದಾಟ ನಡೆಸಿದರು.
ಚಾರ್ಮಾಡಿ ಘಾಟಿ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು, ಇದೇ ರೀತಿ ಮಳೆ ಮುಂದುವರಿದರೆ ಬರೆ ಹಾಗೂ ಬಂಡೆಗಳು ಕುಸಿಯುವ ಸಾಧ್ಯತೆ ಇದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಸಮಾಜ ಸೇವಕ ಆರೀಫ್ ಸೇರಿದಂತೆ ಸ್ಥಳೀಯರು ಕಲ್ಲು ಮತ್ತು ಮರ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
Next Story




