ಚಿಕ್ಕಮಗಳೂರಿನಲ್ಲಿ ಬೃಹತ್ ರೈತ ಸಮಾವೇಶ
ರಾಜಕಾರಣ ಬದಿಗೊತ್ತಿ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕಿದೆ: ಸಂಸದ ಕೋಟ ಶ್ರೀನಿವಾಸ ಪೂಜಾರಿ

ಚಿಕ್ಕಮಗಳೂರು : ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಮೂಲಕ ಜನರನ್ನು ತೊಂದರೆಯಿಂದ ಮುಕ್ತಿಗೊಳಿಸಿ, ಜನಜೀವನ ರಕ್ಷಣೆಗೆ ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಆಗಬೇಕಾಗಿರುವ ಕೆಲಸಗಳನ್ನು ಪ್ರಾಮಾಣಿಕ ನಿರ್ವಹಿಸುತ್ತೇನೆ. ಜನರ ನೆಮ್ಮದಿ ಬದುಕಿಗಾಗಿ ಜನಪ್ರತಿನಿಧಿಗಳು ರಾಜಕಾರಣ ಬದಿಗೊತ್ತಿ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಜಿಲ್ಲಾ ನಾಗರಿಕ ಮತ್ತು ರೈತ ಹೋರಾಟ ಸಮಿತಿ, ಕರ್ನಾಟಕ ಬೆಳೆಗಾರರ ಒಕ್ಕೂಟ, ಶೃಂಗೇರಿ ಮಲೆನಾಡು ನಾಗರಿಕ ರೈತ ಹಿತರಕ್ಷಣಾ ಸಮಿತಿ ಹಾಗೂ ಜಿಲ್ಲೆಯ ಎಲ್ಲ ರಾಜಕೀಯ ಪಕ್ಷಗಳು, ಸಂಘಸಂಸ್ಥೆಗಳು, ಕನ್ನಡ ಪರ ಸಂಘಟನೆಗಳು, ದಲಿತ, ರೈತ ಪರ ಸಂಘಟನೆಗಳ ಸಹಯೋಗದಲ್ಲಿ ರೈತ ಮತ್ತು ಅರಣ್ಯ ಇಲಾಖೆ ಸಂಘರ್ಷ ತಪ್ಪಿಸಿ, ಮಲೆನಾಡಿನ ಜನಜೀವನ ಉಳಿಸುವಂತೆ ಒತ್ತಾಯಿಸಿ ನಗರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬೃಹತ್ ರೈತ ಸಮಾವೇಶದಲ್ಲಿ ಅವರು ಮಾತನಾಡಿದರು.
ಜನರಿಂದ ಆಯ್ಕೆಯಾಗಿರುವ ಜನಪ್ರತಿನಿಧಿಗಳಾದ ನಾವು ರಾಜಕಾರಣವನ್ನು ಬದಿಗೊತ್ತಿ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕಿದೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರದಿಂದ ಆಗಬೇಕಾದ ಕೆಲಸವನ್ನು ಜಿಲ್ಲೆಯ ಐದು ಮಂದಿ ಶಾಸಕರೊಂದಿಗೆ ಸಮನ್ವಯತೆ ಸಾಧಿಸಿ ಜಿಲ್ಲೆಯ ಸಮಸ್ಯೆ ನಿವಾರಣೆಗೆ ಸಂಬಂಧಿಸಿದ ಕೇಂದ್ರ ಸಚಿವರನ್ನು ಭೇಟಿ ಮಾಡಿಸುತ್ತೇನೆ, ಸಾಧ್ಯವಾದರೆ ನಿಯೋಗವನ್ನು ಕರೆದೊಯ್ಯುವುದಾಗಿ ತಿಳಿಸಿದರು.
ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ, ಜನ ಜೀವನದ ಬದುಕಿನ ಹೋರಾಟ ಯಶಸ್ವಿಯಾಗಬೇಕು. ಈ ನಿಟ್ಟಿನಲ್ಲಿ ಬೇಡಿಕೆಗಳ ಗುರಿಯನ್ನು ಮುಟ್ಟಬೇಕು. ಬೇಡಿಕೆಗಳು ಬಹಳ ವರ್ಷಗಳದ್ದು, ಇವುಗಳಿಗೆ ಪರಿಹಾರ ದೊರಕಿಸಲು ಹಲವಾರು ಸಂಘಟನೆಗಳು, ಜನಪ್ರತಿನಿಧಿಗಳು ಪ್ರಯತ್ನಿಸಿದ್ದಾರೆ. ಮೇಲ್ಮಟ್ಟದ ಅಧಿಕಾರಿಗಳ ಮನಸ್ಸಿನಲ್ಲಿ ಚಿಕ್ಕಮಗಳೂರು ಎಂದರೆ ಸಿರಿವಂತರ ಜಿಲ್ಲೆ ಎನ್ನುವ ಭಾವನೆ ಇದೆ. ಆದರೆ ಇಲ್ಲಿ ಶೇ.90ರಷ್ಟು ಸಮಸ್ಯೆಗಳು ಬಡವರದ್ದಾಗಿವೆ. ಸಮಸ್ಯೆಗಳ ನಿವಾರಣೆಗೆ 2 ಬಾರಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ. ರಾಜ್ಯಮಟ್ಟದಲ್ಲಿ ಅರಣ್ಯ ಸಚಿವರು ಹಿರಿಯ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಜನಸಾಮಾನ್ಯರ ಸಮಸ್ಯೆಯನ್ನು ಮನದಟ್ಟು ಮಾಡಿಕೊಟ್ಟಿದ್ದೇನೆ ಎಂದರು.
ವಿಧಾನಪರಿಷತ್ ಉಪಸಭಾಪತಿ ಎಂ.ಕೆ.ಪ್ರಾಣೇಶ್ ಮಾತನಾಡಿ, ಜಿಲ್ಲೆಯಲ್ಲಿ ಅರಣ್ಯ ಅಧಿಕಾರಿಗಳು ಡೀಮ್ಡ್ ಎಂಬ ಗುಮ್ಮವನ್ನು ರೈತರಿಗೆ ತೋರಿಸಿ ಹೆದರಿಸುತ್ತಿದ್ದಾರೆ. ಈ ಹಿಂದೆ ನ್ಯಾಯಾಲಯದ ಆದೇಶ ಮುಂದಿಟ್ಟುಕೊಂಡು ತೆರವು ಕಾರ್ಯಕ್ಕೆ ಮುಂದಾದಾಗ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪನವರ ಮೂಲಕ ತಡೆಹಿಡಿಯಲಾಗಿತ್ತು. ಜಿಲ್ಲೆಯ ಅರಣ್ಯ, ಕಂದಾಯ ಭೂಮಿ ಸಮಸ್ಯೆಗಳ ಬಗ್ಗೆ ಜಿಲ್ಲೆಯ ಎಲ್ಲ ಶಾಸಕರು ವಿಧಾನ ಪರಿಷತ್‌ನಲ್ಲಿ ಪ್ರಾಮಾಣಿಕವಾಗಿ ಧ್ವನಿ ಎತ್ತಿದ್ದಾರೆ. ಕಂದಾಯ ಅರಣ್ಯ ಭೂಮಿ ಸಮಸ್ಯೆ ಮತ್ತು ಮಾನವ-ಪ್ರಾಣಿ ಸಂಘರ್ಷ ಜಿಲ್ಲೆಯ ಗಂಭೀರ ಸಮಸ್ಯೆಯಾಗಿದೆ. ಇದಕ್ಕೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಪರಿಹಾರ ಒದಗಿಸಬೇಕಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ರಾಜಕಾರಣ ಬದಿಗೊತ್ತಿ ಕೆಲಸ ಮಾಡುತ್ತೇವೆ ಎಂದರು.
ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ಡೀಮ್ಡ್ ಅರಣ್ಯ ಎನ್ನುವುದು ಅರಣ್ಯವಲ್ಲ, ಹೈಕೋರ್ಟ್‌ನ ವಿಭಾಗೀಯ ಪೀಠ ಇದನ್ನು ಹೇಳಿದೆ, ಅರಣ್ಯ ಸಂರಕ್ಷಣಾ ಕಾಯ್ದೆಯಲ್ಲಿ ಪರಿಭಾವಿತ ಅರಣ್ಯದ ಪ್ರಸ್ತಾಪವಿಲ್ಲ, ಇದು ಅಧಿಕಾರಿಗಳು ಸೃಷ್ಟಿಸಿದ ಪದವಾಗಿದೆ. ಡೀಮ್ಡ್ ಅರಣ್ಯ ವ್ಯಾಪ್ತಿಯಲ್ಲಿರುವ ನಿವೇಶನ, ಜಮೀನುಗಳ ಮಂಜೂರಾತಿಗೆ ಸರಕಾರದ ಮಧ್ಯ ಪ್ರವೇಶವೂ ಬೇಡ, ಜಿಲ್ಲಾಧಿಕಾರಿಗಳೇ ಈ ಸಮಸ್ಯೆಯನ್ನು ಬಗೆಹರಿಸಬಹುದು ಎಂದು ತಿಳಿಸಿದರು.
ಶಾಸಕಿ ನಯನ ಮೋಟಮ್ಮ ಮಾತನಾಡಿ, ಕ್ಷೇತ್ರದಲ್ಲಿ ಜನರ ಸಮಸ್ಯೆ ನಿವಾರಣೆಗೆ ಶಕ್ತಿಮೀರಿ ಶ್ರಮಿಸುತ್ತಿದ್ದೇನೆ. ಬಡವರ ಕೆಲಸ ಮಾಡಿದರೆ ಒಂದು ವರ್ಗ ನಾವು ಮತ ಹಾಕಿಲ್ಲವೇ ಎನ್ನುತ್ತಾರೆ. ಇವರ ಪರವಾಗಿ ಕೆಲಸ ಮಾಡಿದರೆ ಬಡವರಾದ ನಾವು ಮತಹಾಕಿಲ್ಲವೇ ಏನು ಉಳ್ಳವರ ಪರವಾಗಿಯೇ ಕೆಲಸಮಾಡುತ್ತೀರಿ ಹೀಗೆ ಮುಂದುವರಿದರೆ ಮುಂದಿನ ಚುನಾವಣೆಯಲ್ಲಿ ಬುದ್ದಿಕಲಿಸುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಹೇಳಿದರು.
ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ಯಾವುದೇ ಮಾನದಂಡ ಪಾಲಿಸದೆ ಅರಣ್ಯ ಇಲಾಖೆ ಕೆಲವು ಅಧಿಕಾರಿಗಳು ನೋಟಿಫಿಕೇಶನ್ ಹೊರಡಿಸುತ್ತಿದ್ದಾರೆ. ಅರಣ್ಯ ಸಂರಕ್ಷಣಾ ಕಾಯ್ದೆ ಹೆಸರಿನಲ್ಲಿ ರೈತರು, ಬಡವರ ಮೇಲೆ ಮರಣ ಶಾಸನ ಬರೆಯಲಾಗುತ್ತಿದೆ. ಅರಣ್ಯ ಕಾಯ್ದೆಗೂ ಏಕೆ ತಿದ್ದುಪಡಿ ತರಬಾರದು ಎಂದು ಪ್ರಶ್ನಿಸಿದರು.
ಜಂಟಿ ಸರ್ವೇಯ ಮೂಲಕ ಕಂದಾಯ ಮತ್ತು ಅರಣ್ಯ ಪ್ರತ್ಯೇಕಿಸಬೇಕು. ಸಮಸ್ಯೆ ಇತ್ಯರ್ಥವಾಗುವವರೆಗೆ ಒತ್ತುವರಿಯನ್ನು ತೆರವುಗೊಳಿಸಬಾರದು. ಡೀಮ್ಡ್ ಅರಣ್ಯವನ್ನು ಕಂದಾಯ ಇಲಾಖೆಗೆ ವಾಪಸ್ ಪಡೆಯುವ ತೀರ್ಮಾನವನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಶಾಸಕ ಜಿ.ಎಚ್.ಶ್ರೀನಿವಾಸ ಮಾತನಾಡಿ, ತುಂಗಾ,ಭದ್ರಾನದಿ ಮುಳುಗಡೆಯಿಂದ ನಿರಾಶ್ರಿತರಿಗೆ ತರೀಕೆರೆ ತಾಲೂಕಿನಲ್ಲಿ ಜಮೀನು ನೀಡಲಾಗಿದೆ. ಆ ಜಮೀನು ಈಗ ಅರಣ್ಯ ಇಲಾಖೆ ಸೇರಿದೆ ಎಂದು ಅಧಿಕಾರಿ ಗಳು ಹೇಳುತ್ತಾರೆ.ಸಮಸ್ಯೆ ನಿವಾರಣೆಗೆ ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆಂದು ಹೇಳಿದರು.
ಜಿಲ್ಲಾ ನಾಗರಿಕ ಮತ್ತು ರೈತ ಹೋರಾಟ ಸಮಿತಿ ಅಧ್ಯಕ್ಷ ಎಸ್.ವಿಜಯಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಅರಣ್ಯ ಇಲಾಖೆಯಿಂದ ಜನರಿಗೆ ಆಗುತ್ತಿರುವ ತೊಂದರೆಯನ್ನು ಜನಪ್ರತಿನಿಧಿಗಳಿಗೆ ಮನವರಿಕೆ ಮಾಡಿಕೊಟ್ಟರು.
ಈ ವೇಳೆ ಸಮಿತಿ ಮುಖಂಡರಾದ ಕೆ.ಕೆ.ರಘು, ಮೈಲಿಮನೆ ಪೂರ್ಣೇಶ್, ಬೆಳೆಗಾರ ಸಂಘಟನೆ ಮೂಡಿಗೆರೆ ತಾಲೂಕು ಅಧ್ಯಕ್ಷ ಬಾಲಕೃಷ್ಣ,ಕೆರೆಮಕ್ಕಿ ಮಹೇಶ್, ಬೆನಕ ರವಿಕುಮಾರ್, ನಾಗೇಶ್, ರಂಜಿತ್, ಈಶ್ವರ್ ಕೆ.ಜಿ.ಎಫ್., ಅಧ್ಯಕ್ಷ ಕಳಸೆ ಶಿವಣ್ಣ, ಮಾಜಿ ಅಧ್ಯಕ್ಷ ಬಿ.ಸಿ.ಜಯರಾಮ್, ವಿವಿಧ ಪಕ್ಷ ಮತ್ತು ಸಂಘಟನೆ ಮುಖಂಡರಾದ ಎಚ್.ಎಚ್.ದೇವರಾಜ್, ಗಾಯತ್ರಿ ಶಾಂತೇಗೌಡ, ಎಂ.ಎಲ್.ಮೂರ್ತಿ, ಜೆ.ಪಿ.ಕೃಷ್ಣೇಗೌಡ, ಡಿ.ಎಲ್.ವಿಜಯಕುಮಾರ್, ಟಿ.ರಾಜಶೇಖರ್, ಕೆ.ಟಿ.ರಾಧಾಕೃಷ್ಣ, ಪಿ.ಸಿ.ರಾಜೇಗೌಡ, ದೊಡ್ಡಯ್ಯ, ರೇಖಾ ಹುಲಿಯಪ್ಪಗೌಡ, ರೀನಾ ಸುಜೇಂದ್ರ ಉಪಸ್ಥಿತರಿದ್ದರು.
ಅರಣ್ಯ ಇಲಾಖೆಗೆ ಸೆಕ್ಷನ್ 4(1), ಸೆಕ್ಷನ್ 17ನ್ನು ಮರುಪರಿಶೀಲಿಸಲು ಒತ್ತಾಯಿಸಲಾಗಿದೆ. ಎ ಬ್ಲಾಕ್, ಬಿ ಬ್ಲಾಕ್‌ಗೆ ಸಂಬಂಧಿಸಿದ ಸಮಸ್ಯೆಗಳ ಪರಿಹಾರಕ್ಕೆ ಅಧಿಕಾರಿಗಳಿಗೆ ಸಲಹೆ ನೀಡಲಾಗಿದೆ. ಡಿಸಿಎಫ್ ಬಳಿ ಇರುವ ಕಡತಗಳನ್ನು ಹಿಂಪಡೆಯಬೇಕಾಗಿದೆ. ಸಮಸ್ಯೆಗೆ ಪರಿಹಾರ ಕಂಡುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಜನರು ಅರಣ್ಯಾಧಿಕಾರಿ ಮತ್ತು ಜನಪ್ರತಿನಿಧಿಗಳ ವಿರುದ್ಧ ಹೋರಾಟ ನಡೆಸಲಿದ್ದಾರೆ.
-ಎಚ್.ಡಿ. ತಮ್ಮಯ್ಯ, ಶಾಸಕ
ಒತ್ತುವರಿಗೆ ಸಂಬಂಧಿಸಿದಂತೆ ಈಗಾಗಲೇ ರೈತರಿಗೆ ನೀಡಿರುವ ನೋಟಿಸನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಾಪಸ್ ಪಡೆಯಬೇಕು. ನೋಟಿಸ್ ನೀಡುವ ಕುರಿತು ಜನಪ್ರತಿನಿಧಿಗಳೊಂದಿಗೆ ಮಾತನಾಡಿಲ್ಲ. ಇದು ಪ್ರಜಾಪ್ರಭುತ್ವ ವ್ಯವಸ್ಥೆ ಸರ್ವಾಧಿಕಾರವಲ್ಲ. ರೈತರ ಸಮಸ್ಯೆಯನ್ನು ವಿಧಾನಪರಿಷತ್‌ನಲ್ಲಿ ಪ್ರಸ್ತಾಪಿಸುತ್ತೇನೆ.
-ಸಿ.ಟಿ.ರವಿ, ವಿಪ ಸದಸ್ಯ