ರಾಜ್ಯದಲ್ಲಿ ಕಡ್ಡಾಯ ವೈದ್ಯಕೀಯ ಸೇವೆ ಅನುಷ್ಠಾನ

ಚಿಕ್ಕಮಗಳೂರು: ರಾಜ್ಯದಲ್ಲಿ ನೆನೆಗುದಿಗೆ ಬಿದ್ದಿದ್ದ ಕಡ್ಡಾಯ ವೈದ್ಯಕೀಯ ಸೇವೆಯನ್ನು ಅನುಷ್ಠಾನಗೊಳಿಸಲಾಗಿದ್ದು, ರಾಜ್ಯದಲ್ಲಿ 1850 ಎಂಬಿಬಿಎಸ್ ವೈದ್ಯರನ್ನು ನೇಮಕ ಮಾಡಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ದಿನೇಶ್ ಗುಂಡೂರಾವ್ ಅವರು ತಿಳಿಸಿದರು.
ತರೀಕೆರೆ ತಾಲೂಕಿನ ಲಕ್ಕವಳ್ಳಿ ಗ್ರಾಮದಲ್ಲಿ ಸೋಮವಾರ 30 ಹಾಸಿಗೆಗಳ ಸಮುದಾಯ ಆರೋಗ್ಯ ಕೇಂದ್ರದ ನೂತನ ಕಟ್ಟಡ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈಗಾಗಲೇ ಕಡ್ಡಾಯ ವೈದ್ಯಕೀಯ ಸೇವೆ ಜಾರಿಯಲ್ಲಿದ್ದರೂ ಸಮರ್ಪಕವಾಗಿ ಅನುಷ್ಠಾನವಾಗಿರಲಿಲ್ಲ. ಸದನದಲ್ಲಿ ಈ ಬಗ್ಗೆ ಚರ್ಚಿಸಿ ಕಾನೂನಾತ್ಮಕವಾಗಿ ಇದ್ದ ತೊಡಕುಗಳಿಗೆ ತಿದ್ದುಪಡಿ ತರುವ ಮೂಲಕ ವ್ಯವಸ್ಥೆ ಸರಿಪಡಿಸಲಾಗಿದೆ. ಅಂತೆಯೇ ಖಾಲಿ ಇರುವ ಹುದ್ದೆಗಳಿಗೆ ವೈದ್ಯರನ್ನು ನಿಯೋಜನೆ ಮಾಡಲಾಗಿದೆ ಎಂದು ಹೇಳಿದರು.
ಕಟ್ಟಡ ನಿರ್ಮಾಣವಾದರೆ ಸಾಲದು, ಅಗತ್ಯವಾಗಿ ಅದಕ್ಕೆ ಬೇಕಾಗಿರುವ ಅಗತ್ಯ ಸಲಕರಣೆಗಳು, ವೈದ್ಯರು, ತಾಂತ್ರಿಕ ಸಿಬ್ಬಂದಿ ಹಾಗೂ ಇತರ ವೈದ್ಯಕೀಯ ಸಿಬ್ಬಂದಿಯ ಅವಶ್ಯಕತೆ ಇದ್ದು, ಇಲಾಖೆಯಿಂದ ಸಾಧ್ಯವಾಗುವ ಎಲ್ಲ ಕ್ರಮ ಕೈಗೊಂಡು ಹುದ್ದೆಗಳನ್ನು ಭರ್ತಿ ಮಾಡುವ ಕಾರ್ಯ ಕೈಗೊಳ್ಳಲಾಗುವುದು. ಈಗಾಗಲೇ ಸಾಕಷ್ಟು ಉಪಕರಣಗಳನ್ನು ಒದಗಿಸಲು ಮಂಜೂರಾತಿ ನೀಡಲಾಗಿದೆ. ಹೆಚ್ಚುವರಿಯಾಗಿ ಅಗತ್ಯವಿರುವ ಉಪಕರಣಗಳನ್ನು ಒದಗಿಸಲು ಹಣಕಾಸಿನ ವ್ಯವಸ್ಥೆಯನ್ನು ಶೀಘ್ರದಲ್ಲೇ ಕಲ್ಪಿಸುವುದಾಗಿ ತಿಳಿಸಿದರು. ಇದರ ಜೊತೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಪಂಚಾಯಿತಿಯಿಂದ ಅಗತ್ಯ ಅನುದಾನ ಒದಗಿಸಲು ಅವಕಾಶವಿದ್ದು, ಈ ಬಗ್ಗೆ ಗಮನ ಹರಿಸುವಂತೆ ಸೂಚಿಸಿದರು.
ಇಂದು ಆರೋಗ್ಯ ಮತ್ತು ಶಿಕ್ಷಣ ವ್ಯವಸ್ಥೆ ಸಮರ್ಪಕವಾಗಿದ್ದರೆ ಮಾತ್ರ ಉತ್ತಮ ಸಮಾಜ ನಿರ್ಮಿಸಲು ಸಾಧ್ಯ. ಇಂದು ಪ್ರತಿಯೊಬ್ಬರಲ್ಲೂ ಆರೋಗ್ಯದ ಬಗ್ಗೆ ಚಿಂತನೆ ಹೆಚ್ಚಾಗಿದೆ. ಯಾವುದೇ ಕುಟುಂಬದ ಆಧಾರಸ್ತಂಭವಾಗಿರುವ ವ್ಯಕ್ತಿಗೆ ಆರೋಗ್ಯ ಸಮಸ್ಯೆಯಾದಲ್ಲಿ ಇಡೀ ಕುಟುಂಬವೇ ಅದರ ಪರಿಣಾಮ ಎದುರಿಸಬೇಕಾಗುತ್ತದೆ. ಜೊತೆಗೆ ಚಿಕಿತ್ಸಾ ವೆಚ್ಚವೂ ದುಬಾರಿಯಾಗಿರುವುದರಿಂದ ಆ ಬಗೆಗಿನ ಭಯ ಜನರಲ್ಲಿ ಆವರಿಸುವುದು ಸಹಜ. ಈ ನಿಟ್ಟಿನಲ್ಲಿ ಜನರಿಗೆ ಸಾಧ್ಯವಾದಷ್ಟು ಹಂತದಲ್ಲಿ ಉಚಿತವಾಗಿಯೇ ಆರೋಗ್ಯ ಸೇವೆಯನ್ನು ಕಲ್ಪಿಸಲು ಒಂದು ಕಡೆ ಸರ್ಕಾರ ಪ್ರಯತ್ನ ನಡೆಸುತ್ತಿದೆ. ಎಲ್ಲವನ್ನೂ ಸರ್ಕಾರದಿಂದ ಪೂರೈಸಲು ಸಾಧ್ಯವಾಗದು. ಕೆಲವೊಮ್ಮೆ ಖಾಸಗಿ ವ್ಯವಸ್ಥೆಯನ್ನು ಅವಲಂಬಿಸುವ ಪರಿಸ್ಥಿತಿ ಇರಬಹುದು. ವೈದ್ಯರ ಕೊರತೆ ನೀಗುವುದರ ಜೊತೆಗೆ ಅಗತ್ಯ ಔಷಧಗಳು ದೊರೆಯುವಂತಾಗಬೇಕು. ಈ ಕೊರತೆ ನೀಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ. ಆಯಾ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಈ ಬಗ್ಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಎಂದರು.
ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ಆರಂಭಿಸಿ ತಾಲ್ಲೂಕು ಆಸ್ಪತ್ರೆಗಳವರೆಗೆ ಔಷಧಗಳ ಲಭ್ಯತೆ ಬಗ್ಗೆ ಗಮನ ಹರಿಸಲಾಗುತ್ತಿದೆ. ಸರ್ಕಾರದಿಂದ ಔಷಧಿ ಪೂರೈಕೆಯಾಗದೇ ಇದ್ದಲ್ಲಿ ಇಲಾಖೆಯ ಹಣದಲ್ಲಿ ಖರೀದಿಸಿ ರೋಗಿಗಳಿಗೆ ಒದಗಿಸಲು ಸೂಚನೆ ನೀಡಿರುವುದಾಗಿ ಹೇಳಿದರು.
ಈ ನಡುವೆ ತಜ್ಞ ವೈದ್ಯರ ನೇಮಕ ವಿಚಾರ ಈಗಾಗಲೇ ನ್ಯಾಯಾಲಯದಲ್ಲಿದೆ. ಹಿಂದಿನ ವರ್ಷ ನೀಡಿದ್ದ ತಡೆಯಾಜ್ಞೆಯನ್ನು ತೆರವುಗೊಳಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ನ್ಯಾಯಾಲಯದಲ್ಲಿ ಈ ಪ್ರಕರಣಕ್ಕೆ ಪರಿಹಾರ ದೊರೆಯಲಿದ್ದು, ಆ ಹುದ್ದೆಗಳಿಗೆ ಕೂಡ ನೇಮಕ ಮಾಡಿ ಕಡ್ಡಾಯ ವೈದ್ಯಕೀಯ ಸೇವೆಯ ವ್ಯಾಪ್ತಿಗೆ ಒಳಪಡಿಸಲಿರುವುದಾಗಿ ತಿಳಿಸಿದರು.
ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಶಾಸಕ ಜಿ.ಎಚ್.ಶ್ರೀನಿವಾಸ್ , ಇಲ್ಲಿ ಸಮುದಾಯ ಆರೋಗ್ಯ ಕೇಂದ್ರ ನಿರ್ಮಾಣವಾದ ಮೇಲೆ ಪೂರ್ಣ ಪ್ರಮಾಣದಲ್ಲಿ ನುರಿತ ವೈದ್ಯರನ್ನು ನೇಮಿಸಿ ಜನರಿಗೆ ಅನುಕೂಲವಾಗುವಂತೆ ಮಾಡಲಾಗಿದೆ. ಒಟ್ಟು 9 ಕೋಟಿ ರೂ. ವೆಚ್ಚದಲ್ಲಿ ಸಮುದಾಯ ಆರೋಗ್ಯ ಕೇಂದ್ರದ ಕಟ್ಟಡವನ್ನು ನಿರ್ಮಿಸಲಾಗಿದ್ದು ಈ ಕಟ್ಟಡದಲ್ಲಿ ಪ್ರಯೋಗಾಲಯ, ಬೆಡ್‍ಗಳು, ತಜ್ಞ ವೈದ್ಯರಿಗೆ ಸಂಬಂಧಿಸಿದ ಮೂರು ವಾರ್ಡ್‍ಗಳಿವೆ. ಜೊತೆಗೆ ಒಳರೋಗಿಗಳ ವಿಭಾಗವೂ ಇರಲಿದೆ. ಜನರು ಇದರ ಸದುಪಯೋಗ ಪಡೆಯುವಂತೆ ತಿಳಿಸಿದರು.
ಇಂಧನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಲಕ್ಕವಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಅಬ್ದುಲ್ ರೆಹಮಾನ್, ಉಪಾಧ್ಯಕ್ಷರಾದ ಜಿ.ಭವಾನಿ, ಮೈಸೂರು ವಿಭಾಗೀಯ ಜಂಟಿ ನಿರ್ದೇಶಕರಾದ ಡಾ.ಬಿ.ಮಲ್ಲಿಕಾ, ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್. ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹೆಚ್.ಎಸ್.ಕೀರ್ತನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಮ್ ಅಮಟೆ, ಅಪರ ಜಿಲ್ಲಾಧಿಕಾರಿ ನಾರಾಯಣ ರಡ್ಡಿ ಕನಕರಡ್ಡಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅಶ್ವತ್ಥಬಾಬು, ಆರೋಗ್ಯ ಇಲಾಖೆಯ ಸಹ ನಿರ್ದೇಶಕರಾದ ಜಿಲ್ಲಾ ನೋಡಲ್ ಅಧಿಕಾರಿ ಡಾ.ಚಂದ್ರಿಕಾ, ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.







