Chikkamagaluru | ಅವಿವಾಹಿತೆಗೆ ಹುಟ್ಟಿದ ಶಿಶು ಅನುಮನಾಸ್ಪದವಾಗಿ ಮೃತ್ಯು: ಕುಟುಂಬಸ್ಥರಿಂದಲೇ ಕೊಲೆ ಶಂಕೆ

ಸಾಂದರ್ಭಿಕ ಚಿತ್ರ
ಚಿಕ್ಕಮಗಳೂರು: ಅವಿವಾಹಿತೆಯಾಗಿದ್ದ ಯುವತಿಯೋರ್ವಳು ಜನ್ಮ ನೀಡಿದ್ದ ನವಜಾತ ಶಿಶು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ತರೀಕೆರೆ ತಾಲೂಕಿನ ಬಾವಿಕೆರೆ ಗ್ರಾಮದಲ್ಲಿ ತಡವಾಗಿ ವರದಿಯಾಗಿದೆ.
ಜ.4ರಂದು ಈ ಘಟನೆ ನಡೆದಿದೆ ಎನ್ನಲಾಗಿದ್ದು, ಮನೆಯಲ್ಲಿ ಯುವತಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಆಸ್ಪತ್ರೆಗೆ ಹೋದರೆ ವಿಷಯ ಸುತ್ತಮುತ್ತಲ ಜನರಿಗೆ ತಿಳಿಯುತ್ತದೆ ಎಂಬ ಕಾರಣಕ್ಕೆ ಯುವತಿಯ ತಂದೆ-ತಾಯಿ ಮತ್ತು ಅಜ್ಜಿಯ ಸಹಾಯದಿಂದ ಮನೆಯಲ್ಲಿ ಹೆರಿಗೆ ಮಾಡಿಸಿಕೊಳ್ಳಲಾಗಿದೆ ಎನ್ನಲಾಗಿದೆ.
ಮಗು ಹುಟ್ಟಿದ ತಕ್ಷಣ ಸಮಾಜದ ಗೌರವಕ್ಕೆ ಅಂಜಿ ಮಗುವನ್ನು ಕೊಂದು ಬಳಿಕ ರಕ್ತಸಿಕ್ತ ಮಗುವನ್ನು ಬ್ಯಾಗ್ನಲ್ಲಿ ತುಂಬಿಕೊಂಡು ಹೋಗಿ ನಿರ್ಜನ ಪ್ರದೇಶದಲ್ಲಿನ ತಿಪ್ಪೆಯಲ್ಲಿ ಗುಂಡಿ ತೆಗೆದು ಹೂತು ಹಾಕಲಾಗಿದೆ ಎಂದು ಶಂಕಿಸಲಾಗಿದೆ.
ಈ ಬಗ್ಗೆ ತರೀಕೆರೆ ಪೊಲೀಸ್ ಠಾಣೆಯಲ್ಲಿ ಅನುಮನಾಸ್ಪದ ಸಾವು ಪ್ರಕರಣ ದಾಖಲಾಗಿದ್ದು, ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಸ್ಥಳದಲ್ಲಿ ಸಿಕ್ಕ ಸಾಕ್ಷ್ಯಗಳನ್ನು ಕಳಿಸಲಾಗಿದೆ. ಈ ಸಂಬಂಧ ಪೊಲೀಸ್ ತನಿಖೆ ಮುಂದುವರಿದಿದೆ.





