Kadur : ವಿದ್ಯುತ್ ಸ್ಪರ್ಶಿಸಿ ರೈತ ಮೃತ್ಯು

ಸಾಂದರ್ಭಿಕ ಚಿತ್ರ | Image by vectorpouch on Magnific
ಚಿಕ್ಕಮಗಳೂರು : ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ರೈತರೊಬ್ಬರು ಮೃತಪಟ್ಟಿರುವ ಘಟನೆ ಕಡೂರು ತಾಲೂಕಿನ ಆಲದಹಳ್ಳಿ ಗ್ರಾಮದಲ್ಲಿ ಬುಧವಾರ ನಡೆದಿದೆ.
ಗುರುಮೂರ್ತಿ (40) ಮೃತ ರೈತನಾಗಿದ್ದು, ಕಳೆದ ಮಂಗಳವಾರ ಸಂಜೆ ಸುರಿದ ಭಾರೀ ಮಳೆ, ಗಾಳಿಯಿಂದಾಗಿ ಗುರುಮೂರ್ತಿ ಅವರ ತೋಟದ ಮೂಲಕ ಹಾದು ಹೋಗಿದ್ದ ವಿದ್ಯುತ್ ಮಾರ್ಗದ ತಂತಿಗಳು ತುಂಡಾಗಿ ನೆಲದ ಮೇಲೆ ಬಿದ್ದಿದ್ದವು. ಬುಧವಾರ ಬೆಳಗ್ಗೆ ತೋಟಕ್ಕೆ ಹೋಗಿದ್ದ ವೇಳೆ ಗುರುಮೂರ್ತಿ ವಿದ್ಯುತ್ ತಂತಿ ತುಳಿದ ಪರಿಣಾಮ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ.
ಗುರುಮೂರ್ತಿ ಅವರ ತೋಟದ ಬಳಿ ಹಾದು ಹೋಗಿದ್ದ ವಿದ್ಯುತ್ ಮಾರ್ಗದ ಕಂಬಗಳು ಶಿಥಿಲಗೊಂಡಿದ್ದು, ಸ್ಥಳಾಂತರಕ್ಕೆ ಕುಟುಂಬಸ್ಥರು ಮೆಸ್ಕಾಂಗೆ ಅನೇಕ ಬಾರಿ ಮನವಿ ಮಾಡಿದ್ದರು, ಆದರೆ ಮೆಸ್ಕಾಂ ಅಧಿಕಾರಿ, ಸಿಬ್ಬಂದಿ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ರೈತನ ಸಾವಿಗೆ ಮೆಸ್ಕಾಂ ನಿರ್ಲಕ್ಷ್ಯವೇ ಕಾರಣ ಎಂದು ಸ್ಥಳೀಯ ರೈತರು ದೂರಿದ್ದಾರೆ.




